ಬೆಳಗಾವಿ: ಬೆಳಗಾವಿ ಚಳಿಗಾಲದ ಅಧಿವೇಶನ ಆರಂಭಗೊಂಡಿದ್ದು, ಮೊದಲ ದಿನ ಸಂಪ್ರದಾಯದಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.
ಉಪ ಸ್ಪೀಕರ್ ಆನಂದ್ ಮಾಮನಿ, ಉತ್ತರ ಪ್ರದೇಶದ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್, ಮಾಜಿ ರಾಜ್ಯಸಭಾ ಸದಸ್ಯ ಅಬ್ದುಲ್ ಸಮದ್ ಸಿದ್ದಿಕಿ, ಮಾಜಿ ಶಾಸಕ ಜಾಫರ್ ಖಾನ್ ಹೊನ್ನಾಲಿ, ಶ್ರೀಶೈಲಪ್ಪ ಬಿದರೂರು, ಯಕ್ಷಗಾಣ ಕಲಾವಿದ ಕುಂಬ್ಲೆ ಸುಂದರರಾವ್, ಎಸ್ ಎನ್ ಪಾಟೀಲ್ ಸೇರಿದಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಡಿಸಿದ ಸಂತಾಪ ಸೂಚನೆ ನಿರ್ಣಯಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಉಪ ಸ್ಪೀಕರ್ ಆನಂದ್ ಮಾಮನಿ ಹಾಗೂ ನಮ್ಮ ಕುಟುಂಬದ ನಡುವೆ ಹಲವು ವರ್ಷಗಳ ಸಂಬಂಧ ಹಾಗೂ ಒಡನಾಟ ಇದೆ. ನಾನು ಹಾಗೂ ಮಾಮನಿ ಜೊತೆಗೆ ಬಿಜೆಪಿ ಸೇರ್ಪಡೆ ಆಗಿದ್ದೆವು. ಶಾಸಕರಾಗಿ ಎರಡು ಮೂರು ತಿಂಗಳಲ್ಲಿ ಸರ್ಕಾರದ ವ್ಯವಸ್ಥೆಯನ್ನು ತಿಳಿದುಕೊಂಡಿದ್ದರು. ಅವರು ಮಾದರಿ ಶಾಸಕಾಗಿದ್ದರು ಎಂದು ನಾನೇ ಶ್ಲಾಘನೆ ಮಾಡಿದ್ದೆ ಎಂದರು.
ನೀರಾವರಿಗೆ ಸಾಕಷ್ಟು ಒತ್ತು ಕೊಟ್ಟಿದ್ದರು. ಅವರಿಗೆ ಅನಾರೋಗ್ಯ ಇದ್ದಾಗಲೂ ಯಾರಲ್ಲೂ ಹೇಳಿಕೊಂಡಿರಲಿಲ್ಲ. ಅವರು ಅನಾರೋಗ್ಯಕ್ಕೆ ಒಳಗಾದಾಗ ಅವರನ್ನು ಸೂಕ್ತ ಚಿಕಿತ್ಸೆ ನೀಡಿ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದ್ದೆವು ಎಂದರು.
ಇನ್ನು ಉತ್ತರ ಪ್ರದೇಶದ ಮಾಜಿ ಸಿಎಂ ಮಲಾಯಂ ಸಿಂಗ್ ಯಾದವ್ ಕರ್ನಾಟಕದಲ್ಲೂ ಸಮಾಜವಾದಿ ಪಕ್ಷ ಕಟ್ಟುವ ಪ್ರಯತ್ನ ನಡೆಸಿದ್ದರು. ಬಂಗಾರಪ್ಪ ಅವರ ಮೂಲಕ ಈ ಪ್ರಯತ್ನ ನಡೆದಿತ್ತು. ತಮ್ಮ ವಿರೋಧಿ ಸಿದ್ಧಾಂತದವರನ್ನು ಗೌರವದದಿಂದ ಕಾಣುತ್ತಿದ್ದರು ಎಂದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ವಿಧಾನಸಭೆ ಉಪಾಧ್ಯಕ್ಷ ಆನಂದ್ ಮಾಮನಿ ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿ. ಜನಪರ ಹಾಗೂ ರೈತರ ಪರ ಕಾಳಜಿ ಹೊಂದಿದ್ದರು. ಅವರ ಅಕಾಲಿಕ ಮರಣ ನೋವು ತಂದಿದೆ ಎಂದರು.
ಮುಲಾಯಂ ಸಿಂಗ್ ಯಾದವ್, ದೀರ್ಘ ಕಾಲ ರಾಜಕಾರಣ ಮಾಡಿದ ಕೆಲವೇ ಕೆಲವು ರಾಜಕಾರಣಿಗಳ ಪೈಕಿ ಮುಲಾಯಂ ಸಿಂಗ್ ಯಾದವ್ ಒಬ್ಬರು. ಉತ್ತರ ಪ್ರದೇಶದಲ್ಲಿ ಜನಪ್ರಿಯ ರಾಜಕಾರಣಿಯಾಗಿದ್ದರು. ಸಾಮಾಜಿಕ ನ್ಯಾಯದ ಪರವಾಗಿದ್ದರು. ಮೀಸಲಾತಿಯ ಪರವಾಗಿದ್ದರು ಎಂದು ನೆನಪಿಸಿಕೊಂಡರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ