ಬೆಂಗಳೂರು: ಒಂದೆಡೆ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ, ಮತ್ತೊಂದೆಡೆ ಮೀಸಲಾತಿ-ಒಳಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆಗಳು, ಚುನಾವಣಾ ಸಿದ್ದತೆಯಲ್ಲಿರುವ ರಾಜಕೀಯ ಪಕ್ಷಗಳು ತೊಡಗಿಕೊಂಡಿದ್ದು, ನಾಳೆ(ಡಿಸೆಂಬರ್ 19)ಯಿಂದ ಕುಂದಾನಗರಿ ಬೆಳಗಾವಿ ಸುವರ್ಣ ಸೌಧದಲ್ಲಿ ಹತ್ತು ದಿನಗಳ ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನ ಆರಂಭವಾಗಲಿದೆ.
ಡಿಸೆಂಬರ್ 19ರಿಂದ 30 ರವರೆಗೆ ಅಧಿವೇಶನ ನಡೆಯಲಿದ್ದು, ಈ ಸಂದರ್ಭದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆಯಾಗಲಿದೆ. ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಬಜೆಟ್ ಅಧಿವೇಶನ ಕೇವಲ ನೆಪ ಮಾತ್ರ ನಡೆಯುವುದರಿಂದ ಬಹುತೇಕ ಈ ಅಧಿವೇಶನ ರಾಜಕೀಯ ಚಟುವಟಿಕೆಗಳಿಂದಾಗಿ ಮಹತ್ವ ಪಡೆದುಕೊಳ್ಳಲಿದೆ.
ಆಡಳಿತರೂಢ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮತ್ತು ಹಗರಣಗಳು, ಮತದಾರರ ಮಾಹಿತಿ ಕಳ್ಳತನ, ಗಡಿ ವಿವಾದ, ಸರ್ಕಾರದ ವೈಫಲ್ಯಗಳು, ಕೋಮು ಗಲಭೆ, ಬಾಂಬ್ ಸ್ಫೋಟ, ಕಾನೂನು ಸುವ್ಯವಸ್ಥೆ, ಕಬ್ಬಿಗೆ ಬೆಂಬಲ ಬೆಲೆ, ಲಾಭದಾಯಕ ಬೆಲೆ(ಎಫ್‌ಆರ್‌ಪಿ) ಹೆಚ್ಚಳ ಸೇರಿದಂತೆ ಇತರೆ ರೈತರ ಬೇಡಿಕೆಗಳು ಸೇರಿದಂತೆ ಮುಂತಾದ ವಿಷಯಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಆಡಳಿತ ಪಕ್ಷದವರನ್ನು ತರಾಟೆಗೆ ತೆಗೆದುಕೊಳ್ಳಲು ಸಿದ್ದವಾಗಿವೆ.
62 ಪ್ರತಿಭಟನೆ-ಧರಣಿ ನಡೆಯಲಿವೆ
ವಿಧಾನಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸುವರ್ಣಸೌಧದ ಸುತ್ತಮುತ್ತ ಜನವರಿ 11ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. 4931 ಪೊಲೀಸರ ನಿಯೋಜಿಸಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, ಡಿವೈಎಸ್ಪಿಗಳು, ಸರ್ಕಲ್ ಪೊಲೀಸ್ ಇನ್‌ಸ್ಪೆಕ್ಟರ್‌ಗಳು, ಪಿಎಸ್‌ಐ ಸೇರಿದಂತೆ ಹಲವು ವಿಭಾಗದ ಪೊಲೀಸ್ ಸಿಬ್ಬಂದಿಗಳು ಭದ್ರತೆಯ ಉಸ್ತುವಾರಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಭದ್ರತೆ ಪರಿಶೀಲನೆ ನಡೆಸಿದ್ದಾರೆ. ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿರುವ ಅವರು, 450ಕ್ಕೂ ಅಧಿಕ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ನಗರ ಹಾಗೂ ಗಡಿಭಾಗಗಳಲ್ಲಿ ಒಟ್ಟು 26 ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ಅಧಿವೇಶನದ ವೇಳೆ 62 ಪ್ರತಿಭಟನೆ, ಧರಣಿ, ಮುಷ್ಕರಗಳು ನಡೆಯಲಿವೆ. ಈ ಸಂಬಂಧ ಈವರೆಗೆ 9 ಮನವಿಗಳು ಬಂದಿವೆ ಎಂದು ಹೇಳಿದರು.
ಭದ್ರತೆಗಾಗಿ ಜಿಲ್ಲೆ ಹಾಗೂ ನೆರೆ ಜಿಲ್ಲೆಗಳಿಂದ ಪೊಲೀಸರನ್ನು ಕರೆಸಲಾಗಿದೆ. ನಗರದ ಆಯಕಟ್ಟಿನ ಸ್ಥಳಗಳು, ಸೂಕ್ಷ್ಮ ಪ್ರದೇಶಗಳು, ಗ್ರಾಮೀಣ ಭಾಗ, ಸುವರ್ಣ ವಿಧಾನಸೌಧದ ಆವರಣ, ಪ್ರತಿಭಟನಾ ಸ್ಥಳಗಳು, ಸೌಧದ ಸುತ್ತಲಿನ ಗ್ರಾಮಗಳಿಗೆ ಆದ್ಯತೆ ಮೇರೆಗೆ ಸಿಬ್ಬಂದಿಗಳನ್ನು ನಿಯೋಜಿಸಲು ಪೊಲೀಸ್ ಇಲಾಖೆ ಸಿದ್ದತೆ ಮಾಡಿಕೊಂಡಿದೆ.