ಮೂಲ : ನಿಖಿಲ್ ಕಾರಿಯಪ್ಪ, ನ್ಯೂಸ್ ಕ್ಲಿಕ್ ಏಪ್ರಿಲ್ 28,
ಅನುವಾದ : ಟಿ.ಸುರೇಂದ್ರ ರಾವ್
ಮಾನ್ಯ ಪ್ರಧಾನ ಮಂತ್ರಿ ಮೋದಿಯವರ ‘ಸ್ಮಾರ್ಟ್ ಸಿಟಿ’ ಯೋಜನೆಗೆ ಆಯ್ಕೆಯಾಗಿ ಎಂಟು ವರ್ಷಗಳ ನಂತರ ಆ ಬೆಳಗಾವಿ ‘ಮಹಾನಗರ’ದಲ್ಲಿ ವಾರದ ಏಳೂ ದಿನಗಳು ಇಪ್ಪತ್ತುನಾಲ್ಕು ಗಂಟೆಗಳೂ ಕುಡಿಯುವ ನೀರು ಪೂರೈಕೆಯಾಗುತ್ತಿರುವುದು ಒಟ್ಟು 58 ವಾರ್ಡುಗಳಲ್ಲಿ ಕೇವಲ 10 ವಾರ್ಡುಗಳಲ್ಲಿ ಮಾತ್ರ. ಅಂದರೆ ಉಳಿದ 48 ವಾರ್ಡುಗಳಲ್ಲಿ ನಾಲ್ಕು ದಿನಗಳಿಗೊಂದು ಬಾರಿ ಮಾತ್ರವೇ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಅಲ್ಲಿಯ ನಾಗರಿಕರ ಮಾತುಗಳನ್ನು ನಂಬುವುದಾದರೆ ಈ ವರ್ಷ ಕುಡಿಯುವ ನೀರಿಗಾಗಿ ಹತ್ತು ದಿನಗಳ ದೀರ್ಘಕಾಲ ಕಾಯಬೇಕಾದ ದುಃಸ್ಥಿತಿ ಬಂದೊದಗಿದೆ.
ಕರ್ನಾಟಕದಲ್ಲೀಗ ವಿಧಾನಸಭಾ ಚುನಾವಣೆಗಳ ಸಮಯ. ಪಕ್ಷಗಳು ತಮ್ಮ ಸಾಧನೆಗಳ ಪಟ್ಟಿಯನ್ನು ನೀಡುತ್ತಾ ನಮಗೇ ಮತ ನೀಡಿ ಎಂದು ಮತದಾರರನ್ನು ಗೋಗರೆಯುವ ದೃಶ್ಯಗಳು ಸರ್ವೇಸಾಮಾನ್ಯವಾಗಿವೆ. ಅದರಲ್ಲಿ “ಸ್ಮಾರ್ಟ್ ಸಿಟಿ ಯೋಜನೆಗಳು – ಸುಂದರ ನಗರ ನಿರ್ಮಾಣ ಯೋಜನೆ” ಪ್ರಮುಖ ಸ್ಥಾನ ಪಡೆಯುತ್ತವೆ. ಅಂತಹ ಒಂದು ಸುಂದರ ನಗರ ನಿರ್ಮಾಣ ಯೋಜನೆ ಬೆಳಗಾವಿ ನಗರದ್ದು.
ಐದು ವರ್ಷಗಳಲ್ಲಿ ನಗರವನ್ನು ಆಧುನಿಕ ಮಹಾನಗರವನ್ನಾಗಿ ಮಾರ್ಪಾಟು ಮಾಡುವುದೇ ‘ಸುಂದರ ನಗರ ನಿರ್ಮಾಣ ಯೋಜನೆ’ಯ ಮುಖ್ಯ ಉದ್ದೇಶ. ಬೆಳಗಾವಿ ಪಟ್ಟಣವನ್ನು ಸುಂದರ ಮಹಾನಗರವನ್ನಾಗಿ ಮಾರ್ಪಡಿಸುವ ಭರಾಟೆಯಲ್ಲಿ ಅಲ್ಲಿಯ ಜನರು ಈಗ ಕುಡಿಯುವ ನೀರಿಗಾಗಿ ಹತ್ತು ದಿನಗಳ ಕಾಲ ಕಾಯಬೇಕಾದ ಪರಿಸ್ಥಿತಿ ಉದ್ಭವವಾಗಿದೆ.
ಮಾನ್ಯ ಪ್ರಧಾನ ಮಂತ್ರಿ ಮೋದಿಯವರ ‘ಸ್ಮಾರ್ಟ್ ಸಿಟಿ’ ಯೋಜನೆಗೆ ಆಯ್ಕೆಯಾಗಿ ಎಂಟು ವರ್ಷಗಳ ನಂತರ ಆ ಬೆಳಗಾವಿ ‘ಮಹಾನಗರ’ದಲ್ಲಿ ವಾರದ ಏಳೂ ದಿನಗಳು ಇಪ್ಪತ್ತುನಾಲ್ಕು ಗಂಟೆಗಳೂ ಕುಡಿಯುವ ನೀರು ಪೂರೈಕೆಯಾಗುತ್ತಿರುವುದು ಒಟ್ಟು 58 ವಾರ್ಡುಗಳಲ್ಲಿ ಕೇವಲ 10 ವಾರ್ಡುಗಳಲ್ಲಿ ಮಾತ್ರ. ಅಂದರೆ ಉಳಿದ 48 ವಾರ್ಡುಗಳಲ್ಲಿ ನಾಲ್ಕು ದಿನಗಳಿಗೊಂದು ಬಾರಿ ಮಾತ್ರವೇ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಅಲ್ಲಿಯ ನಾಗರಿಕರ ಮಾತುಗಳನ್ನು ನಂಬುವುದಾದರೆ ಈ ವರ್ಷ ಕುಡಿಯುವ ನೀರಿಗಾಗಿ ಹತ್ತು ದಿನಗಳ ದೀರ್ಘಕಾಲ ಕಾಯಬೇಕಾದ ದುಃಸ್ಥಿತಿ ಬಂದೊದಗಿದೆ. ಅದಕ್ಕೆ ಬಹು ಮುಖ್ಯ ಕಾರಣ – ನೀರಿನ ಪೈಪುಗಳು ತುಕ್ಕುಹಿಡಿದು ಎಲ್ಲಾ ಕಡೆಗಳಲ್ಲೂ ಸೋರುತ್ತಿವೆ. ಹಾಗಾಗಿ, ಅದನ್ನು ನಂಬಿಕೊಂಡು ಕುಡಿಯುವ ನೀರಿಗಾಗಿ ಕಾಯಲು ಸಾಧ್ಯವಿಲ್ಲ.
12 ವರ್ಷಗಳ ಹಿಂದೆ, ಅಂದರೆ 2021 ರಲ್ಲಿ ಈ 48 ವಾರ್ಡುಗಳಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ ಕೆಲಸದ ಗುತ್ತಿಗೆಯನ್ನು ಲಾರ್ಸೆನ್ ಅಂಡ್ ಟೂಬ್ರೋ (ಎಲ್ ಅಂಡ್ ಟಿ) ಕಂಪನಿ ಪಡೆದುಕೊಂಡಿತು. ರೂ.804 ಕೋಟಿಯ ಈ ಯೋಜನೆಯ ಪ್ರಕಾರ ತುಕ್ಕುಹಿಡಿದ ಪೈಪುಗಳನ್ನು ಪೂರ್ಣ ಕಳಚಿಹಾಕಿ ಹೊಸದನ್ನು ಜೋಡಿಸಬೇಕು. ಈ ಕಾರ್ಯಾಚರಣೆ ಹಾಗೂ ನಿರ್ವಹಣೆಯನ್ನು 12 ವರ್ಷಗಳ ಕಾಲ ಕಂಪನಿಯು ನೋಡಿಕೊಳ್ಳಬೇಕು. ಒಂದು ಲಕ್ಷ ಮನೆಗಳಿಗೆ ಮೀಟರುಗಳನ್ನು ಒದಗಿಸುವ ಕೆಲಸವನ್ನೂ ಅದು ಒಳಗೊಂಡಿರುತ್ತದೆ. ಈ ಯೋಜನೆಗೆ ವಿಶ್ವ ಬ್ಯಾಂಕ್‌ನಿಂದ ಹಣ ಪಡೆಯಲಾಗಿದೆ.
ಹಲವಾರು ವರ್ಷಗಳಿಂದ ಇರುವ ಈ ನೀರಿನ ಸಮಸ್ಯೆಗಳಿಂದಾಗಿ ಬೆಳಗಾವಿಯ ನಿವಾಸಿಗಳು ಹತಾಶರಾಗಿದ್ದಾರೆ. ಆದರೆ ಅಲ್ಲಿ ಈ ಸಮಸ್ಯೆಯ ಪರಿಹಾರಕ್ಕಾಗಿ ಯಾವುದೇ ದೊಡ್ಡ ಪ್ರಮಾಣದ ಚಳವಳಿ ನಡೆಯಲಿಲ್ಲ. ಅದರ ಬದಲು, ನಾಗರಿಕ ಕಾರ್ಯಕರ್ತರು ಈ ಕುರಿತು ಕೆಲಸ ಮಾಡುತ್ತಿದ್ದಾರೆ.
ಕಿರಣ್ ನಿಪ್ಪಾಣಿಕರ್ ಎಂಬ 45 ವರ್ಷದ ಕಾರ್ಯಕರ್ತ ಹಾಗೂ ಉದ್ಯಮಿಯೊಬ್ಬರು ಕೊನೇ ಪಕ್ಷ ಎರಡು ಸಂಘಟನೆಗಳನ್ನು ಶುರು ಮಾಡಿದ್ದಾರೆ. ನಗರದ ಬಾವಿಗಳನ್ನು ಪುನಶ್ಚೇತನಗೊಳಿಸುವ ಕಾರ್ಯ ಮಾಡುತ್ತಾರೆ ಅವರು. ಈಗಾಗಲೇ ಎರಡು ಬಾವಿಗಳನ್ನು ತಮ್ಮದೇ ಖರ್ಚಿನಲ್ಲಿ ಪುನಶ್ಚೇತನಗೊಳಿಸಿದ್ದಾರೆ. ಅವರ ಪ್ರಕಾರ: “ನೀರಿನ ಸಮಸ್ಯೆ ಶುರುವಾಗಿದ್ದು 2015 ರಲ್ಲಿ. ಆಗ ಬೆಳಗಾವಿಯಲ್ಲಿ ಬರಗಾಲ ಇತ್ತು. ಆಗಿನಿಂದ ಅಂತರ್ಜಲದ ಮಟ್ಟ ಬಹಳ ಕೆಳಗೆ ಹೋಗಿತ್ತು. ನಗರಗಳ ಮೂಲಸೌಕರ್ಯ ಯೋಜನೆಗಳು ಅಂತರ್ಜಲದ ಮಟ್ಟದ ಮೇಲೆ ದುಷ್ಪರಿಣಾಮ ಬೀರಿತ್ತು. ಮಳೆ ನೀರು ಸಂಗ್ರಹ ಮಾಡುವ ವ್ಯವಸ್ಥೆ ಕೂಡ ಇರಲಿಲ್ಲ. ಬಿದ್ದ ಮಳೆಯಷ್ಟೂ ಚರಂಡಿಯಲ್ಲಿ ಹರಿದುಹೋಗುತ್ತಿತ್ತು. ಅಂತಿಮವಾಗಿ, ಕೊಳವೆ ಬಾವಿಗಳ ಅತಿಯಾದ ಬಳಕೆಯು ಈ ನೀರಿನ ಬರಕ್ಕೆ ಕಾರಣವಾಗಿದೆ.”
ಬೆಳಗಾವಿ ನಗರಕ್ಕೆ ಕುಡಿಯುವ ನೀರು ಎರಡು ಪ್ರಮುಖ ಜಲ ಮೂಲಗಳಿಂದ ಬರಬೇಕು – ಒಂದು ರಕ್ಕಸಕೊಪ್ಪ ಮತ್ತೊಂದು ಹಿಡ್ಕಲ್ ಜಲಾಶಯ. ಮಳೆಯ ಕೊರತೆಯುಂಟಾದಾಗ ಸಹಜವಾಗಿಯೇ ನೀರು ಶುದ್ಧೀಕರರಣ ಘಟಕಕ್ಕೆ ಹರಿದುಹೋಗುವ ನೀರಿನ ಪ್ರಮಾಣ ಕಡಿಮೆಯಾಗುತ್ತದೆ ಮತ್ತು ಅದರ ಪರಿಣಾಮವಾಗಿ ಬೆಳಗಾವಿಯ ಮನೆಗಳಿಗೆ ಹರಿಯುವ ನೀರು ಬಹಳ ಕಡಿಮೆಯಾಯಿತು. 2015 ರಲ್ಲಿ ನಗರದ ಎರಡು ಜಲಾಶಯಗಳನ್ನು ನಿಪ್ಪಾಣಿಕರ್ ತಮ್ಮ ಸ್ವಂತ ಖರ್ಚಿನಲ್ಲಿಯೇ, ಎರಡು ಲಕ್ಷ ರೂಪಾಯಿಗಳನ್ನು ವ್ಯಯಮಾಡಿ ಪುನಶ್ಚೇತನಗೊಳಿಸಿದರು.
ಎಲ್ ಅಂಡ್ ಟಿ ಯೋಜನೆಯಡಿಯಲ್ಲಿ ಹಳೆ ಪೈಪುಗಳನ್ನು ತೆಗೆದು ಹಾಕಿ ಅದರ ಬದಲಿಗೆ ಹೆಚ್ಚು ಬಾಳಿಕೆ ಬರುವ ಪೊಲಿಥೀನ್ (ಹೆಚ್.ಡಿ.ಪಿ.ಇ.) ಪೈಪುಗಳನ್ನು ಜೋಡಿಸಲು ಆ ಕಂಪನಿಗೆ ರೂ.804 ಕೋಟಿ ಯ ಆದೇಶವನ್ನು 2021ರಲ್ಲಿ ನೀಡಲಾಯಿತು. ಅದರಲ್ಲಿ ಸರಿಸುಮಾರು ಶೇಕಡಾ 72 ರಷ್ಟನ್ನು ಬಂಡವಾಳ ವೆಚ್ಚಕ್ಕೆ ಬಳಸಿ ಉಳಿದ ರೂ.233 ಕೋಟಿಯನ್ನು ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಬಳಸಬೇಕು. ಒಟ್ಟು 12 ವರ್ಷಗಳಲ್ಲಿ ಮೊದಲ 5 ವರ್ಷಗಳಲ್ಲಿ ಮೂಲಸೌಕರ್ಯ ನಿರ್ಮಾಣ ಮತ್ತು ನಂತರದ ಏಳು ವರ್ಷಗಳಲ್ಲಿ ನಿರ್ವಹಣೆ.
ಈ ಹೊಸ ಯೋಜನೆಗೆ ಸುಮಾರು 900 ಕಿ.ಮೀ.ಗಳ ಹೆಚ್.ಡಿ.ಪಿ.ಇ. ಪೈಪುಗಳನ್ನು ಭೂಮಿಯ ಒಳಗಡೆ ಜೋಡಿಸುವ ಬಹು ದೊಡ್ಡ ಕಾರ್ಯಾಚರಣೆಯ ನಂತರ 16 ಮೇಲ್ಮಟ್ಟದ ಟ್ಯಾಂಕುಗಳನ್ನು ನೀರು ಶೇಖರಣೆಗೆ ಮತ್ತು ಇನ್ನೊಂದು ಹೊಸ ನೀರು ಶುದ್ಧೀಕರಣ ಘಟಕವನ್ನು ನಿರ್ಮಿಸಬೇಕಾಗಿದೆ. ಈ ಯೋಜನೆ ಯಶಸ್ವಿಯಾದರೆ ಬೆಳಗಾವಿ ಜನರ ಕುಡಿಯುವ ನೀರಿನ ಬವಣೆಗೆ ಕೊನೆ ಹಾಡಬಹುದು.
ಆದರೆ, ಈ ಮಧ್ಯೆ, ಅಗತ್ಯ ಸೇವೆಗಳ ಖಾಸಗೀಕರಣವು ಕೊಳಚೆ ಪ್ರದೇಶಗಳ ಹಾಗೂ ಕೆಳಮಟ್ಟದ ಆದಾಯ ಹೊಂದಿರುವ ಕುಟುಂಬಗಳಿಗೆ ಬಹು ದೊಡ್ಡ ಕಂಟಕ ತಂದೊಡ್ಡುವ ಸಾಧ್ಯತೆ ಇದೆ. ವಿಪರೀತ ಅನಿಯಂತ್ರಿತ ಶುಲ್ಕವು ಆ ವಿಭಾಗದ ಕುಟುಂಬಗಳನ್ನು ವಾರದ ಏಳು ದಿನಗಳೂ ದಿನದ ಇಪ್ಪತ್ತುನಾಲ್ಕು ಗಂಟೆಯೂ ನೀರಿನ ಪೂರೈಕೆಯ ಸೌಲಭ್ಯದಿಂದ ದೂರ ಇಡುವ ಸಾಧ್ಯತೆ ಇದೆ.
ಅಲ್ಲಿಯ ಸ್ಥಳೀಯರ ಪ್ರಕಾರ ಈ 24*7 ನೀರು ಪೂರೈಕೆಯು ಜಲಸಂರಕ್ಷಣೆಯ ಅನುಕೂಲವನ್ನು ಒದಗಿಸುತ್ತದೆ. ಏಕೆಂದರೆ ಈಗ, ವಾರಕ್ಕೊಂದಾವರ್ತಿ ನೀರು ಬರುವಾಗ ನಿವಾಸಿಗಳು ತಮ್ಮ ಅಗತ್ಯಕ್ಕಿಂತ ಹೆಚ್ಚು ಕುಡಿಯುವ ನೀರನ್ನು ದೊಡ್ಡ ದೊಡ್ಡ ಡ್ರಮ್ಮುಗಳಲ್ಲಿ ಶೇಖರಿಸಿಡುತ್ತಾರೆ. ಮುಂದಿನ ವಾರ ನೀರು ಬಂದಾಗ ಡ್ರಮ್ಮುಗಳಲ್ಲಿರುವ ಹಳೆಯ ನೀರನ್ನು ಚರಂಡಿಗೆ ಸುರಿಯುತ್ತಾರೆ. ಇದು ನೀರಿನ ಬರವಿರುವ ಇಂತಹ ನಗರಕ್ಕೆ ಒಂದು ದೊಡ್ಡ ಶಾಪವೇ ಆಗಿ ಪರಿಣಮಿಸುತ್ತಿದೆ.
ವಿಧಾನಸಭೆ ಚುನಾವಣೆ
ಇಂತಹ ಬೆಳಗಾವಿ ನಗರದಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಿವೆ – ಬೆಳಗಾವಿ ಉತ್ತರ ಮತ್ತು ಬೆಳಗಾವಿ ದಕ್ಷಿಣ. ಪತ್ರಕರ್ತರೂ ಹಾಗೂ ಮಾಜಿ ಬಿಜೆಪಿ ಜಿಲ್ಲಾ ಅಧ್ಯಕ್ಷರೂ ಆಗಿರುವ 45 ವಯಸ್ಸಿನ ರಾಜಕುಮಾರ್ ತೋಪಣ್ಣವರ್ ಪ್ರಕಾರ ಬೆಳಗಾವಿ ನಗರದಲ್ಲಿ ನಾಗರಿಕ ಸಂಸ್ಥೆಗಳ ನಡುವೆ ಪರಸ್ಪರ ಹೊಂದಾಣಿಕೆ ಇಲ್ಲ. ಈಗ ಅವರು ಬೆಳಗಾಂ ಉತ್ತರ ಕ್ಷೇತ್ರಕ್ಕೆ ಎಎಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ತಾವು ಬಿಜೆಪಿಯನ್ನು ತೊರೆದು ಎಎಪಿ ಏಕೆ ಸೇರಿದೆ ಎಂದು ಹೇಳುತ್ತಾ ‘ಬಿಜೆಪಿ-ಆರ್‌ಎಸ್‌ಎಸ್ ಸಂಘಟನೆಯೊಳಗೆ ಲಿಂಗಾಯತರ ಬಗ್ಗೆ ದ್ವೇಷವಿರುವುದನ್ನು ಅರಿತು’ ಹೊರಬಂದೆ ಎಂದರು ತೋಪಣ್ಣವರ್.
ಅವರು ಹೇಳುತ್ತಾರೆ: “ಲೋಕೋಪಯೋಗಿ ಇಲಾಖೆ, ಬೆಳಗಾಂ ಸ್ಮಾರ್ಟ್ ಸಿಟಿ ಪ್ರಾಜೆಕ್ಟ್, ನಗರ ಮುನಿಸಿಪಲ್ ಕಾರ್ಪೊರೇಷನ್ ಮತ್ತು ಬೆಳಗಾಂ ನಗರಾಭಿವೃದ್ಧಿ ಪ್ರಾಧಿಕಾರ ಎಂಬ ಈ ನಾಲ್ಕು ಸಂಸ್ಥೆಗಳು ಬೆಳಗಾಂನಲ್ಲಿ ರಸ್ತೆ ನಿರ್ಮಾಣ ಮಾಡುತ್ತವೆ. ಅವು ಕರ್ನಾಟಕ ನಗರ ನೀರು ಸರಬರಾಜು ಮತ್ತು ಚರಂಡಿ ಮಂಡಳಿಯೊಂದಿಗೆ ಸಮನ್ವಯ ಹೊಂದಿಲ್ಲ. ತೀರ ಇತ್ತೀಚೆಗೆ ಸ್ಮಾರ್ಟ್ ಸಿಟಿ ನಿಧಿಯನ್ನು ಬಳಸಿ ಬೆಳಗಾಂನ ಹಲವಾರು ರಸ್ತೆಗಳನ್ನು ನಿರ್ಮಾಣ ಮಾಡಿದ್ದಾರೆ. 1,000 ಕೋಟಿಯ ನಿಧಿಯಲ್ಲಿ ಸುಮಾರು ರೂ.600 ಕೋಟಿಯಷ್ಟು ಹಣವನ್ನು ರಸ್ತೆ ನಿರ್ಮಿಸಲು ವೆಚ್ಚಮಾಡಿದ್ದಾರೆ. ಇದು ಮೂರ್ಖತನದ ವೆಚ್ಚವಾಗಿದೆ. ಏಕೆಂದರೆ ನೀರು ಪೂರೈಕೆಗಾಗಿ ಹೊಸ ಪೈಪುಗಳನ್ನು ಎಲ್ ಅಂಡ್ ಟಿ ಯವರು ಅಳವಡಿಸುವಾಗ ಈ ರಸ್ತೆಗಳನ್ನೆಲ್ಲಾ ಕಿತ್ತುಹಾಕಬೇಕಾಗುತ್ತದೆ.”
ಈ ತೋಪಣ್ಣವರ್ ‘ಕನ್ನಡಮ್ಮ’ ಎಂಬ ಒಂದು ಕನ್ನಡ ಪತ್ರಿಕೆ ಮತ್ತು ಕೆಎನ್‌ಎನ್ ಸಿಟಿ ನ್ಯೂಸ್ ಎಂಬ ಟಿವಿ ಸುದ್ದಿ ಚಾನಲನ್ನು ನಡೆಸುತ್ತಾರೆ. ಬೆಳಗಾಂ ಉತ್ತರ ಕ್ಷೇತ್ರದಲ್ಲಿ ತಮ್ಮ ಹಳೆಯ ಪಕ್ಷಕ್ಕೆ ಸವಾಲು ಹಾಕಲು ಸಿದ್ಧತೆ ನಡೆಸಿದ್ದಾರೆ ಅವರು. ಕಾಂಗ್ರೆಸ್ ಪಕ್ಷದಿಂದ ಅಸೀಫ್ ಸೇಟ್ ಅವರನ್ನು ಅಭ್ಯಥಿಯನ್ನಾಗಿ ಮಾಡಲಾಗಿದೆ. ಬಿಜೆಪಿಯು ಡಾ.ರವಿ ಪಾಟೀಲ್ ಎಂಬ ಲಿಂಗಾಯತ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಈ ರವಿ ಪಾಟೀಲ್ ವಿರುದ್ಧ ದೇವಸ್ಥಾನದೊಳಗೆ ಪ್ರಚಾರ ಮಾಡಿದ್ದಾರೆ ಎಂಬ ದೂರಿನ ಜತೆ ಇನ್ನೂ ಹಲವಾರು ಚುನಾವಣಾ ಸಂಹಿತೆಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ದೂರನ್ನು ತೋಪಣ್ಣವರ್ ದಾಖಲಿಸಿದ್ದಾರೆ. ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂ.ಇ.ಎಸ್)ಯ ಅಮರ್ ಯಲ್ಲೂರಕರ ಸಹ ಕಣದಲ್ಲಿದ್ದಾರೆ.
ಗಡಿ ಜಿಲ್ಲೆಯಾದ್ದರಿಂದ ಮರಾಠಿ ಮತ್ತು ಕನ್ನಡ ಎರಡೂ ಭಾಷಿಕ ಜನರಿದ್ದಾರೆ. ಲಿಂಗಾಯತರು, ಮರಾಠಾ ಮತ್ತು ಮುಸ್ಲಿಮರು ಅಭ್ಯರ್ಥಿಯ ಭವಿಷ್ಯ ನಿರ್ಧರಿಸುತ್ತಾರೆ. ತೀರಾ ನಿಕಟ ಸ್ಪರ್ಧೆಯಿದ್ದು ಎಂ.ಇ.ಎಸ್ ಬಿಜೆಪಿ ಗೆ ತೊಡಕುಂಟು ಮಾಡಬಹುದು ಎಂದು ಜನ ಹೇಳ್ತಾರೆ. ಬೆಳಗಾವಿ ದಕ್ಷಿಣದ ರಮಾಕಾಂತ್ ಕೊಂಡುಸ್ಕರ್ ಮರಾಠಿ ಹೆಮ್ಮೆ ಮತ್ತು ಹಿಂದುತ್ವ ಎರಡನ್ನೂ ಇಟ್ಟುಕೊಂಡು ಪ್ರಚಾರ ಮಾಡುತ್ತಿದ್ದಾರೆ. ಇದು ಈಗ ಶಾಸಕರಾಗಿರುವ ಬಿಜೆಪಿ ಅಬ‍್ಯರ್ಥಿ ಅಭಯ್ ಪಾಟೀಲ್ ಗೆ ಅವಕಾಶ ತಪ್ಪಿಸಬಹುದೆಂದು ಕೆಲವರ ಅಭಿಪ್ರಾಯ. ಆದರೂ ಅವರೇ ಆಯ್ಕೆಯಾಗಬಹುದು ಎಂದು ಹಲವರ ಅಬಭಿಪ್ರಾಯ.
ಬೆಳಗಾವಿ ಉತ್ತರದ ಬಿಜೆಪಿ ಅಭ್ಯರ್ಥಿ ಇನ್ನೂ ಹೆಚ್ಚಿನ ಸವಾಲೆದುರಿಸುತ್ತಿದ್ದಾರೆ. “ಕಾಂಗ್ರೆಸ್ ನ ಅಸಿಫ್ ಸೈತ್ ಗೆ ಮೇಲುಗೈ ಇದೆ. ಮುಸ್ಲಿಂ ಸಮುದಾಯದ ಓಟು ಪೂರ್ತಿ ಅವರಿಗೆ ಬರುತ್ತದೆ. ಎಂ.ಇ.ಎಸ್ ಬಹುಪಾಲು ಮರಾಠಿ ಮತ ಪಡೆಯುತ್ತದೆ. ತೋಪಣ್ಣವರ್ ಲಿಂಗಾಯತ ಬಹುಪಾಲು ಮತ ಪಡೆಯುತ್ತಾರೆ, ಆದರೆ ಕುಡಿಯುವ ನೀರಿನ ಅಭಾವವಾಗಲಿ, ಶಿಕ್ಷಣದ ಸಮಸ್ಯೆಗಳಾಗಲಿ, ಅಥವಾ ಅಪರಾಧ ಹೆಚ್ಚಳವಾಗಲಿ – ಇಂತಹ ಜನರನ್ನು ಬಾಧಿಸುವ ಸಮಸ್ಯೆಗಳ ಕುರಿತು ಯಾವ ಅಭ್ಯರ್ಥಿ ಮಾತನಾಡುತ್ತಿಲ್ಲ. ನಮ್ಮ ಮಕ್ಕಳ ಕುರಿತಾದರೂ ನಾವು ಯೋಚಿಸುತ್ತಿದ್ದೇವೆಯೇ? ಇತ್ತೀಚೆಗೆ 9ನೆಯ ಕ್ಲಾಸಿನ ಹುಡುಗಿಯೊಬ್ಬಳ ಮೇಲೆ ಅವಳ ಸಹಪಾಠಿ ಹುಡುಗ ಅತ್ಯಾಚಾರವೆಸಗಿದ. ಹುಡುಗ ಪ್ರಭಾವಿ ಕುಟುಂಬದವನಾದ್ದರಿಂದ ಇಬ್ಬರನ್ನೂ ಶಾಲೆಯಿಂದ ಹೊರ ಕಳಿಸಲಾಯಿತು. ಯಾರೂ ಈ ಕುರಿತು ಸೊಲ್ಲೆತ್ತಲಿಲ್ಲ. ಈಗ ಜನರಲ್ಲಿ ಬಹಳ ನಿರ್ಲಕ್ಷವಿದೆ.” ಎನ್ನುತ್ತಾರೆ ಕಿರಣ್ ನಿಪ್ಪಾಣಿಕರ್.