ಬೆಳಗಾವಿ ಲೋಕಸಭಾ ಉಪ ಚುನಾವಣೆ: ಅಕ್ರಮ ನಗದು, ಮದ್ಯ ವಶ

ಬೆಳಗಾವಿ: ‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡ ತಂಡವು ಅಕ್ರಮವಾಗಿ ಸಾಗಿಸುತ್ತಿದ್ದ ಹಣ ಅಥವಾ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ. ʻಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ರೂ. 62.55 ಲಕ್ಷ ನಗದನ್ನು ಚೆಕ್‌ಪೋಸ್ಟ್‌ಗಳಲ್ಲಿ ವಶಪಡಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ತಿಳಿಸಿದರು.

‘ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ 27 ಚೆಕ್‌ಪೋಸ್ಟ್‌ಗಳಲ್ಲಿ ಈವರೆಗೆ ವಶಪಡಿಸಿಕೊಂಡ ನಗದಿನಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಪೊಲೀಸ್ ಮತ್ತಿತರ ತಂಡಗಳಿಂದ, ಪ್ರಸ್ತುತಪಡಿಸಿದ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ರೂ. 19.83 ಲಕ್ಷವನ್ನು ಸಂಬಂಧಪಟ್ಟವರಿಗೆ ವಾಪಸ್ ಕೊಡಲಾಗಿದೆ. ಇನ್ನುಳಿದ ರೂ. 42,71,620ವನ್ನು ನಿಯಮಾವಳಿ ಪ್ರಕಾರ ಹೆಚ್ಚಿನ ತನಿಖೆಗಾಗಿ ಆದಾಯ ತೆರಿಗೆ ಇಲಾಖೆಗೆ ಒಪ್ಪಿಸಲಾಗಿದೆ’ ಎಂದು ಡಾ. ಕೆ. ಹರೀಶ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

4,020 ಲೀಟರ್ ಮದ್ಯ ವಶ

‘ರೂ. 11.25 ಲಕ್ಷ ಮೌಲ್ಯದ 4,020 ಲೀಟರ್ ನಷ್ಟು ಮದ್ಯವನ್ನು ವಿವಿದೆಡೆ ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟಾರೆ ರೂ 42.26 ಲಕ್ಷ ಮೌಲ್ಯದ ಒಟ್ಟು 16 ದ್ವಿಚಕ್ರವಾಹನಗಳು, 1 ಕಂಟೇನರ್, 1 ಕ್ಯಾಂಟರ್, 4 ಕಾರು‌ ಹಾಗೂ ಒಂದು ಜೀಪು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಇಲಾಖೆಯವರು ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ 128 ಪ್ರಕರಣಗಳು ವರದಿಯಾಗಿವೆ’ ಎಂದು ತಿಳಿಸಿದ್ದಾರೆ.

‘ಉಪ ಚುನಾವಣೆ ಸಂದರ್ಭದಲ್ಲಿ ‌ಅಕ್ರಮ ಹಣ ಮತ್ತು ಮದ್ಯ‌ ಸಾಗಣೆ ತಡೆಗಟ್ಟಲು ಹಾಗೂ ಇನ್ನಿತರ ಚುನಾವಣಾ ಅಕ್ರಮಗಳನ್ನು ಪತ್ತೆ ಮಾಡಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ದೂರುಗಳು ಬಂದ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಕ್ರಮ ವಹಿಸಲು ಅನುಕೂಲ ಆಗುವಂತೆ 27 ಎಫ್.ಎಸ್.ಟಿ. ತಂಡಗಳು ಕಾರ್ಯನಿರ್ವಹಿಸುತ್ತಿವೆ. ಪ್ರಚಾರ ಸಭೆಗಳು, ರ‍್ಯಾಲಿ ಇನ್ನಿತರೆ ಚಟುವಟಿಕೆಗಳ ಮೇಲೆ ನಿಗಾ ವಹಿಸಲು 48 ವಿ.ಎಸ್.ಟಿ. ತಂಡಗಳು ಚುನಾವಣಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ’ ಎಂದು ಮಾಹಿತಿ ನೀಡಿದರು.

‘ಚುನಾವಣಾ ಅಕ್ರಮಗಳ ಕುರಿತು ಸಾರ್ವಜನಿಕರಿಂದ ನೇರವಾಗಿ ದೂರು ಅಥವಾ ಮಾಹಿತಿ ಸ್ವೀಕರಿಸಲು ಸಿ–ವಿಜಿಲ್, ದೂರು ನಿರ್ವಹಣಾ ಕೋಶ ಹಾಗೂ ಮಾದರಿ ನೀತಿಸಂಹಿತೆ ನಿಯಂತ್ರಣ ಕೊಠಡಿ ಸ್ಥಾಪನೆ ಮೊದಲಾದ ಕ್ರಮ ವಹಿಸಲಾಗಿದೆ’ ಎಂದು ತಿಳಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *