ಬೆಳಗಾವಿ: ನಗರದ ಅನಗೋಳದ ನಿವಾಸಿ ಸರಸ್ವತಿ ಅದೃಶ್ಯಪ್ಪ ಹಂಪಣ್ಣವರ ಮಹಿಳೆಯು ತನ್ನ ಮೂವರು ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಮುಂದಾದ ಘಟನೆ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ನಡೆದಿದೆ.
ಜೀವನ ನಿರ್ವಹಣೆ ಮಾಡುವುದು ತೀರ ಕಷ್ಟವಾಗಿದ್ದು, ಬದುಕಲು ಸಾಧ್ಯವಿಲ್ಲವೆಂದು ನಿರ್ಧರಿಸಿದ ಸರಸ್ವತಿ ಅದೃಶ್ಯಪ್ಪ ಹಂಪಣ್ಣವರ(40), ತನ್ನ ಮೂವರು ಮಕ್ಕಳಾದ ಸೃಷ್ಟಿ (14), ಸಾಕ್ಷಿ (8) ಹಾಗೂ ಸಾನ್ವಿ(3)ಯೊಂದಿಗೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆಗಮಿಸಿದ್ದು ತನ್ನ ಮೂವರು ಹೆಣ್ಣುಮಕ್ಕಳಿಗೆ ಪಿನೈಲ್ ಕುಡಿಸಿ ತಾವೂ ಕುಡಿದು ಆತ್ಮಹತ್ಯೆಗೆ ಯತ್ನಿಸಿದರು.
ಇದನ್ನು ಓದಿ: ಸಾಲಗಾರರ ಕಾಟ : ಒಂದೇ ಕುಟುಂಬದ 9 ಮಂದಿ ಆತ್ಮಹತ್ಯೆ
ಕೈತುಂಬ ಸಾಲ ಮಾಡಿಕೊಂಡಿದ್ದ ಅದೃಶ್ಯಪ್ಪ 15 ದಿನಗಳ ಹಿಂದೆಯೇ ತನ್ನ ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳನ್ನು ಬಿಟ್ಟು ಹೋಗಿದ್ದರು. ಒಂದೆಡೆ ಸಾಲಗಾರರ ಕಿರುಕುಳ, ಮಕ್ಕಳಿಗೆ ಊಟಕ್ಕೂ ಗತಿ ಇಲ್ಲದ ಸ್ಥಿತಿ. ದಿನನಿತ್ಯದ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದರಿಂದ ಬೇಸರಗೊಂಡ ಸರಸ್ವತಿ ಜೀವನ ನಿರ್ವಹಣೆಗೆ ಸಹಾಯ ಕೋರಿ ತನ್ನ ಮಕ್ಕಳ ಜೊತೆಗೆ ಜಿಲ್ಲಾಧಿಕಾರಿಯನ್ನು ಭೇಟಿಯಾಗಲು ಕಚೇರಿಗೆ ಆಗಮಿಸಿದ್ದರು.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಮ್ಮ ಕರ್ತವ್ಯ ನಿಮಿತ್ತ ಕಚೇರಿಯಿಂದ ಹೊರಗಿದ್ದರು. ಕಚೇರಿ ಆವರಣದಲ್ಲಿ ಮಹಿಳೆ ಕಾದು ಕುಳಿತರು. ಆಗ ಮಕ್ಕಳು ಅಸ್ವಸ್ಥರಾಗಿ, ವಾಂತಿ ಮಾಡಿಕೊಂಡಿದ್ದಾರೆ. ಕಚೇರಿ ಸಿಬ್ಬಂದಿ ಮಕ್ಕಳಿಗೆ ನೀರು ಕೊಟ್ಟು ಉಪಚರಿಸಲು ಮುಂದಾದರು.
ಈ ವೇಳೆ ಮಹಿಳೆಯನ್ನು ಕಚೇರಿ ಸಿಬ್ಬಂದಿಗಳು ವಿಚಾರಿಸಿದ್ದಾರೆ. ಆಗ ಜ್ಯೂಸ್ ಎಂದು ನನ್ನ ತಾಯಿ ಏನೋ ಕುಡಿಸಿದ್ದಾಳೆಂದು ಹಿರಿಯ ಪುತ್ರಿ ಸೃಷ್ಟಿ ಹೇಳಿಕೆ ನೀಡಿದ್ದಾಳೆ. ಇದಾದ ಮೇಲೆ ಸರಸ್ವತಿ ಹಾಗೂ ಮೂವರು ಮಕ್ಕಳು ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದಾರೆ. ತಕ್ಷಣವೇ ಅಲ್ಲಿನ ಸಿಬ್ಬಂದಿಗಳು ಪೊಲೀಸರ ನೆರವು ಪಡೆದು ಜಿಲ್ಲಾಸ್ಪತ್ರೆಗೆ ಅವರನ್ನು ರವಾನಿಸಿದ್ದಾರೆ.
ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರು ಮಹಿಳೆಯಿಂದ ಹೇಳಿಕೆ ಪಡೆದಿದ್ದಾರೆ. ‘ಅಸ್ವಸ್ಥರಾಗಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ’ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ