ಮುನೀರ್ ಕಾಟಿಪಳ್ಳ
ಇದು ಅಭಿವೃದ್ದಿ ಹೆಸರಿನಲ್ಲಿ ಬಂದಿರುವ ಕೈಗಾರಿಕೆಗಳು ಒದಗಿಸುತ್ತಿರುವ ದುಡಿಮೆಯ ಅವಕಾಶ. ಸ್ಥಳೀಯರನ್ನು ನೇಮಿಸಿಕೊಂಡರೆ ಈ ರೀತಿ ಶೋಷಣೆ ಸಾಧ್ಯವಿಲ್ಲ ಎಂದು, ದೂರದ ಜಿಲ್ಲೆ, ರಾಜ್ಯಗಳಿಂದ ಗುತ್ತಿಗೆದಾರರೆಂಬ ಏಜೆಂಟರ ಮೂಲಕ ಅಗ್ಗದ ಕಾರ್ಮಿಕರನ್ನು ಕರೆ ತಂದು ಯಂತ್ರದಂತೆ ದುಡಿಸುವುದು, ಲಾಭವನ್ನು ಗುಡ್ಡೆ ಹಾಕಿ ಕೊಳ್ಳುವುದೇ ಇಂದಿನ ಉದ್ಯಮ ನೀತಿಯಾಗಿದೆ. ಇದು ಪತಂಜಲಿ ಫುಡ್ಸ್ ಒಂದರ ಕತೆಯಲ್ಲ, ಮಂಗಳೂರಿನ ಬಹುತೇಕ ಕೈಗಾರಿಕೆಗಳಲ್ಲಿ ನಡೆಯುತ್ತಿರುವುದು ಇದೇ ರೀತಿಯ ಆಧುನಿಕ ಜೀತ.
ಪಲ್ಗುಣಿ ನದಿ, ಅದರ ಉಪ ನದಿ ತೋಕೂರು ಹಳ್ಳ ಅಂದರೆ ಮಂಗಳೂರು ಕೈಗಾರಿಕಾ ವಲಯದ ವಿವಿಧ ಘಟಕಗಳಿಗೆ ತಮ್ಮ ಮಾಲಿನ್ಯ ವಿಸರ್ಜನೆಗೆ ದರ್ಮಾರ್ಥ ಚರಂಡಿ ಇದ್ದ ಹಾಗೆ. ಮೊನ್ನೆ ಪತಂಜಲಿ ಫುಡ್ಸ್ ಸಿಕ್ಕಿಬಿದ್ದಿದ್ದರೆ, ಈಗ ವಿವಿಧ ಕಂಪೆನಿಗಳು ಮಾಲಿನ್ಯದ ಹರಿಸುವ ಕೊಳವೆಗಳು ಪತ್ತೆಯಾಗುತ್ತಿವೆ. ಜೊತೆಗೆ ತೋಕೂರು ಹಳ್ಳದಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಕಾಂಡ್ಲಾವನವನ್ನು ಮಣ್ಣು ತುಂಬಿಸಿ ಅತಿಕ್ರಮಿಸುತ್ತಿರುವ ಬಲಾಢ್ಯ ಕುಳಗಳು ಇನ್ನೊಂದೆಡೆ. ಈ ಕುರಿತು ಹೋರಾಟ ಸಮಿತಿ ಪದಾಧಿಕಾರಿಗಳ ಜೊತೆ ಇಂದು ಮುಸ್ಸಂಜೆ ಪರಿಶೀಲನೆ ನಡೆಸುತ್ತಿರುವಾಗ ಪತಂಜಲಿ ಫುಡ್ಸ್ ಕಡೆಯಿಂದ ನೂರಕ್ಕೂ ಹೆಚ್ಚು ಯುವ ಮಹಿಳಾ ಕಾರ್ಮಿಕರ ದಂಡು ಕೆಲಸ ಮುಗಿಸಿ ಗುಂಪಾಗಿ ಹೊರಬಂದು ನಾವಿದ್ದ ಕಡೆಯಿಂದ ಅವರ ವಸತಿ ಕಡೆಗೆ ಸಾಗತೊಡಗಿತು. ಕಾರ್ಮಿಕರ ಪರವಾಗಿ ತೊಡಗಿಸಿಕೊಂಡಿರುವ ಪಕ್ಷ/ಸಂಘಟನೆಯ ಕಾರ್ಯಕರ್ತನಾಗಿ ಸಹಜ ಕುತೂಹಲದಿಂದ ಅವರನ್ನು ತಡೆದು ಮಾತಿಗೆಳೆದೆ..
ಬಹುತೇಕ ಹೆಣ್ಣುಮಕ್ಕಳು ಜಾರ್ಖಂಡ್ ರಾಜ್ಯದವರಾದರೆ, ಒಂದಿಷ್ಟು ಯುವತಿಯರು ಕೊಪ್ಪಳ ಜಿಲ್ಲೆಯವರು. ಕೆಲವರು ಏಳೆಂಟು ವರ್ಷಗಳಿಂದ ಇಲ್ಲಿ ದುಡಿಯುತ್ತಿದ್ದಾರೆ. ಜಾರ್ಖಂಡ್ ರಾಜ್ಯದ ಮಹಿಳಾ ಕಾರ್ಮಿಕರಿಗೆ 8 ರಿಂದ 10 ಸಾವಿರ ರೂಪಾಯಿ ವೇತನವಾದರೆ, ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕದ ಯುವತಿಯರಿಗೆ 10 ರಿಂದ 14 ಸಾವಿರ ರೂಪಾಯಿ ಸಂಬಳ ದೊರಕುತ್ತದೆ.
ಈ ವೇತನಕ್ಕೆ ಅವರು ಬೆಳಿಗ್ಗೆ 7 ರಿಂದ ಮುಸ್ಸಂಜೆ 7 ಗಂಟೆಯವರಗೆ, ಅಂದರೆ ಸರಿಯಾಗಿ 12 ತಾಸು ದುಡಿಯಬೇಕು. ಯಾವ ಓವರ್ ಟೈಮು ವೇತನವೂ ಇಲ್ಲ. ಮಧ್ಯಾಹ್ನ ಇವರೇ ಕಟ್ಟಿಕೊಂಡು ಬಂದ ಬುತ್ತಿ ಬಿಟ್ಟರೆ, ಮಧ್ಯೆ ಕಂಪೆನಿ ಕಡೆಯಿಂದ ಈ ಗುತ್ತಿಗೆ ಕಾರ್ಮಿಕರಿಗೆ ಒಂದು ಕಪ್ ಟೀ, ಕಾಫಿಯೂ ಕೊಡುವುದಿಲ್ಲ. ಮುಂಜಾನೆ ಸೂರ್ಯ ಹುಟ್ಟುವ ಮುನ್ನ ಗಡಿಬಿಡಿಯಿಂದ ಬೇಯಿಸಿ ಆರು ಗಂಟೆಗೆ ಬುತ್ತಿ ಕಟ್ಟಿಕೊಂಡು ನಡೆಯುತ್ತಾ ಎರಡು ಕಿ ಮೀ ದೂರದ ಕಂಪೆನಿಯನ್ನು 7 ಗಂಟೆಗೆ ಮುಂಚಿತವಾಗಿ ತಲುಪಬೇಕು. ಆ ಮೇಲೆ ಮಧ್ಯಾಹ್ನದ ಬುತ್ತಿ ಬಿಟ್ಟರೆ ಹೊಟ್ಟೆಗೆ ಬೇರೇನೂ ಇಲ್ಲ. ಮುಸ್ಸಂಜೆ 7 ಗಂಟೆಗೆ ಕೆಲಸ ಮುಗಿಸಿ ಲಗುಬೇಗೆನೆ ವಸತಿ ಸೇರಿ ಏನಾದರು ಬೇಯಿಸಿ ರಾತ್ರಿಯ ಊಟ ಮಾಡಬೇಕು. ಇದು ಈ ಯುವ ಮಹಿಳಾ ಕಾರ್ಮಿಕರ ದಿನಚರಿ.
ಇದನ್ನೂ ಓದಿ:ದುಡಿಮೆಯ ಅವಧಿ 12 ಗಂಟೆಗೆ ಏರಿಕೆ: ಕಾರ್ಮಿಕರನ್ನು ಗುಲಾಮಗಿರಿಗೆ ನೂಕುವ ಯತ್ನ!
ನನಗಂತೂ ಇವರ ಕತೆ ಕೇಳಿ ಖೇದವಾಯಿತು. ದೂರದ ಊರುಗಳಿಂದ ಬಂದಿರುವ ಈ ಯುವತಿಯರು ಇದೇ ಸೌಭಾಗ್ಯ ಎಂಬಂತೆ ನಿರ್ಲಿಪ್ತತೆಯನ್ನು ರೂಢಿಸಿಕೊಂಡಿದ್ದಾರೆ. ಬದುಕಿನಲ್ಲಿ ಯಾವ ಮನೋರಂಜನೆಗೂ ಅವಕಾಶ ಇಲ್ಲದೆ, ಕತ್ತೆಯಂತೆ ಇಡೀ ದಿನದ ದುಡಿಮೆ, ದುಡಿಮೆ ಮುಗಿಸಿ ನಿದ್ರೆ, ಮುಂಜಾನೆ ಎದ್ದು ಮತ್ತೆ ದುಡಿಮೆ. ಇದು ಅಭಿವೃದ್ದಿ ಹೆಸರಿನಲ್ಲಿ ಬಂದಿರುವ ಕೈಗಾರಿಕೆಗಳು ಒದಗಿಸುತ್ತಿರುವ ದುಡಿಮೆಯ ಅವಕಾಶ. ಸ್ಥಳೀಯರನ್ನು ನೇಮಿಸಿಕೊಂಡರೆ ಈ ರೀತಿ ಶೋಷಣೆ ಸಾಧ್ಯವಿಲ್ಲ ಎಂದು, ದೂರದ ಜಿಲ್ಲೆ, ರಾಜ್ಯಗಳಿಂದ ಗುತ್ತಿಗೆದಾರರೆಂಬ ಏಜೆಂಟರ ಮೂಲಕ ಅಗ್ಗದ ಕಾರ್ಮಿಕರನ್ನು ಕರೆ ತಂದು ಯಂತ್ರದಂತೆ ದುಡಿಸುವುದು, ಲಾಭವನ್ನು ಗುಡ್ಡೆ ಹಾಕಿ ಕೊಳ್ಳುವುದೇ ಇಂದಿನ ಉದ್ಯಮ ನೀತಿಯಾಗಿದೆ. ಇದು ಪತಂಜಲಿ ಫುಡ್ಸ್ ಒಂದರ ಕತೆಯಲ್ಲ, ಮಂಗಳೂರಿನ ಬಹುತೇಕ ಕೈಗಾರಿಕೆಗಳಲ್ಲಿ ನಡೆಯುತ್ತಿರುವುದು ಇದೇ ರೀತಿಯ ಆಧುನಿಕ ಜೀತ.
ಇದನ್ನೆಲ್ಲಾ ಖುದ್ದು ಪರಿಶೀಲಿಸಬೇಕಾದ ಕಾರ್ಮಿಕ ಇಲಾಖೆ ಇತ್ತ ತಿರುಗಿ ಕೂಡ ನೋಡುವುದಿಲ್ಲ. ಜನಪ್ರತಿನಿಧಿಗಳಿಗಂತೂ ಇಂತಹದ್ದೊಂದು “ಜಗತ್ತು” ಇದೇ ಎಂಬುದೇ ಅರಿವಿಲ್ಲ. ಇಲ್ಲಿನ ರಾಜಕೀಯ ಪಕ್ಷಗಳು ಬಿಡಿ, ಧರ್ಮ, ಜಾತಿ, ಹಣದ ಲೆಕ್ಕಾಚಾರದ ಆಚೆಗಿನ ರಾಜಕೀಯವೇ ಅವರಿಗೆ ತಿಳಿದಿಲ್ಲ. ತುಳುನಾಡಿನ ಯುವ ಸಮೂಹವಂತೂ, ತಮ್ಮದೇ ಉದ್ಯೋಗ ಅವಕಾಶ ಕಸಿದು, ದೂರದೂರಿನ ಯುವಕ, ಯುವತಿಯರನ್ನು ತಂದು ಜೀತದ ದುಡಿಮೆ ಮಾಡಿಸುವುದರ ವಿರುದ್ದ ಸಿಡಿದೇಳಬೇಕು, ಶೋಷಣೆ, ವಂಚನೆಯನ್ನು ಸಹಿಸಬಾರದು ಎಂಬ ಪ್ರಜ್ಞೆಯೇ ಇಲ್ಲದಂತೆ ಬದುಕುತ್ತಿದ್ದಾರೆ.
ಇಂದು ಈ ಯವ ಮಹಿಳಾ ಕಾರ್ಮಿಕರ (ದಶಕದಿಂದ ಕೇಳುತ್ತಾ, ನೋಡುತ್ತಾ, ಆಗಾಗ ಧ್ವನಿ ಎತ್ತುತ್ತಾ ಇದ್ದೇವೆ. ಕೆಲವೊಮ್ಮೆ ಜೀತದ ದುಡಿಮೆಯ ವೇತನವೂ ಕೊಡದೆ ಹೊರದಬ್ಬಿದ ಪ್ರಸಂಗ ಗಮನಕ್ಕೆ ಬಂದಾಗ ಮಧ್ಯ ಪ್ರವೇಶಿಸಿದ್ದೇವೆ) ಕತೆ ಕೇಳಿ ಖೇದವಾಯ್ತು. ಕಾರ್ಮಿಕ ವರ್ಗದ ಪಕ್ಷ, ಯೂನಿಯನ್ ನ ಪ್ರತಿನಿಧಿಯಾಗಿದ್ದೂ ಏನೂ ಮಾಡಲಾಗದಿರುವ ಅಸಹಾಯಕತೆಗೆ ನಮ್ಮ ಕುರಿತೇ ನನಗೆ ನಾಚಿಕೆಯೆನಿಸಿತು. ನಮ್ಮ ಸಮಾಜಕ್ಕೆ ಈ ಕುರಿತು ಪ್ರತಿರೋಧ ಒಡ್ಡಬೇಕು ಎಂಬ ಅರಿವು ಮೂಡುವುದು ಯಾವಾಗ ?
ಇದನ್ನೂ ಓದಿ : ಬೃಹತ್ ಕೈಗಾರಿಕೆ ಅಕ್ರಮಗಳಿಂದ ಪರಿಸರ ಹಾನಿ; ಮಾಲಿನ್ಯ ನಿಯಂತ್ರಣ ಮಂಡಳಿಯ ಅಣಕು ಶವಯಾತ್ರೆ