ಬೀದಿಮಣ್ಣಿನ ಮಿಂಚು; ಸಫ್ದರ್ ಹಾಷ್ಮಿ- ಎರಡು ಪುಸ್ತಕ, ಹಲವು ಸಾಧ್ಯತೆ

 

ಇದೇ 2020, ಜನವರಿ ತಿಂಗಳಲ್ಲಿ ಮೊದಲು ಓದಿದ ಪುಸ್ತಕ ಡಾ. ಮಾದವಿ ಭಂಡಾರಿಯವರು ಅನುವಾದಿಸಿದ ಸಫ್ದರ್ ಹಾಷ್ಮಿಯವರ ಬೀದಿ ನಾಟಕಗಳ ಸಂಗ್ರಹ “ಯೇ ದಿಲ್ ಮಾಂಗೆ ಮೋರ್”. ಇದನ್ನು ಓದಿ ಮುಗಿಸುವ ಹೊತ್ತಿಗೆ ಅದೇ ಭಾನುವಾರದ ಪ್ರಜಾವಾಣಿ ಪುರವಣಿಯಲ್ಲಿ ಪ್ರಕಟವಾದ ಹಾಷ್ಮಿ ನೆನಪಿನದೊಂದು ಲೇಖನ. ಇದಕ್ಕೆ ಅಂಟಿಕೊಂಡ ಇನ್ನೊಂದು ಕೊಂಡಿ ಫೆಲೋಷಿಪ್ ಬರವಣಿಗೆಯಲ್ಲಿ ಬರೆಯುತ್ತಿರುವ ಬೀದಿನಾಟಕಗಳ ಕುರಿತಾದ ಒಂದು ಅಧ್ಯಾಯ. ಹೀಗೆ ಈ ವರ್ಷದ ಓದು ಆರಂಭವಾಗಿದ್ದೇ ಬೀದಿನಾಟಕಗಳಿಂದ. ಸಮುದಾಯವು ರೀಲಾಂಚ್ ಆಗುತ್ತಿರುವ ಮತ್ತು “ಹಲ್ಲಾ ಬೋಲ್” ಬಿಡುಗಡೆಯಾಗಲಿರುವ ಸಮಯದಲ್ಲಿ  ಇವೆಲ್ಲ ತುರ್ತುಗಳೂ ಮೇಳೈಸಿ ಮತ್ತೆಮತ್ತೆ ಓದಿದ  ಪುಸ್ತಕಗಳಲ್ಲಿ ನಾನು ಗಮನಿಸಿದ ಕೆಲವು ಅಂಶಗಳನ್ನು ಇಲ್ಲಿ ಟಿಪ್ಪಣಿ ಮಾಡುತ್ತಿದ್ದೇನೆ.

ಬೀದಿನಾಟಕವೆಂಬುದು ಸಂಪೂರ್ಣವಾಗಿ ಆಧುನಿಕವೆಂಬುದು ಕೆಲವು ಅರ್ಥದಲ್ಲಿ ಸರಿ. ಜನಮೂಲವಾದ, ಜನಪರವಾದ ಮತ್ತೂ ಹಲವು ಕಲಾಪ್ರಕಾರಗಳು ಜಾನಪದದ ಮೂಲಕ ಚಾಲ್ತಿಯಲ್ಲಿದ್ದವು. ರಾಜರ ವಿರುದ್ಧ ಬಂಡಾಯವೆದ್ದಾಗಲೋ, ಯುದ್ಧಸಂದರ್ಭದಲ್ಲಿ  ಸಂದೇಶ ಸಾರುವಾಗಲೋ, ಬೀದಿಗಳಲ್ಲಿ ಸಂಗೀತ, ಅಭಿನಯಗಳ ಮೂಲಕ, ಸಮಸಮಾಜದ ಕನಸಿನ ಜನಸಾಮಾನ್ಯರ ಮೂಲಕ ಕಲೆ ವ್ಯಕ್ತವಾಗುತ್ತಿತ್ತು. ಹಾಗೆ ಸಮಸ್ಯೆಗಳತ್ತ ಗಮನ ಸೆಳೆಯಲು, ಪ್ರಭುತ್ವದ ವೈಫಲ್ಯಗಳನ್ನು ಗೇಲಿ ಮಾಡಲು, ಅಲಕ್ಷಿತ- ದಮನಿತರ ದನಿಯಾಗಿ ಆಧುನಿಕ ಪ್ರಜಾಪ್ರಭುತ್ವದಲ್ಲಿ ಬೀದಿಕಲೆಗಳು ಬೆಳೆದುಬಂದ ಸಂದರ್ಭದಲ್ಲಿ ಎದ್ದು ಕಾಣುವ ಹೆಸರು “ಜನಂ” ತಂಡದ್ದು. ದನಿಯಡಗಿಸುವ ಯಾವ ಅವಕಾಶವನ್ನೂ ಬಿಡದ ಪ್ರಭುತ್ವವು ನಿರ್ದಯವಾಗಿ ನಡೆದುಕೊಂಡ ಸನ್ನಿವೇಶಗಳೆಲ್ಲವೂ ಒಂದಿಲ್ಲೊಂದು ಚಳವಳಿಗೆ, ಹೊಸ ಅರಿವಿನ ಹುಟ್ಟಿಗೆ ಕಾರಣವಾಗಿರುವ ಇತಿಹಾಸವನ್ನೂ ಅರಿತೂ ಕೂಡಾ ಅಂದಿನ “ಹಲ್ಲಾ ಬೋಲ್” ಪ್ರದರ್ಶನದ ದಿನದಂದು ಇನ್ನಿಲ್ಲವಾದ ಸಫ್ದರ್ ಹಷ್ಮಿ ಇಂದು ಮತ್ತೆಮತ್ತೆ ನೆನಪಾಗುತ್ತಿದ್ದಾರೆ. ಈಗಷ್ಟೇ ನಾಸಿರುದ್ದಿನ್ ಷಾ ಬಿಡುಗಡೆಗೊಳಿಸಿದ ಅದೇ ಹೆಸರಿನ ಹಷ್ಟಿ ಸಾವು ಬದುಕಿನ ಕಥನ ಒಂದು ಅಪೂರ್ವ ದಾಖಲೆಯಂಥ ಪುಸ್ತಕ. ನಿಜಕ್ಕೂ ಕನ್ನಡಕ್ಕೆ ಹಷ್ಮಿ ಬಂದಿರುವುದು ಇದು ಎರಡನೆಯ ಬಾರಿ. ಮೊದಲನೆಯ ಬಾರಿ ಅವರ ನಾಟಕಗಳ ಕನ್ನಡೀಕರಣ “ಯೆ ದಿಲ್ ಮಾಂಗೇ ಮೋರ್” ಮೂಲಕ. ಈ ಎರಡೂ ಪುಸ್ತಕಗಳನ್ನು ಒಟ್ಟಿಗೆ ಓದುವುದೊಂದು ಅಪೂರ್ವ ಅನುಭವ.

‘ಹಲ್ಲಾ ಬೋಲ್’ ಪುಸ್ತಕ

“ಹಲ್ಲಾ ಬೋಲ್ – ಸಫ್ದರ್ ಹಷ್ಮಿ ಸಾವು ಮತ್ತು ಬದುಕು” ಈಗಷ್ಟೇ ಬಿಡುಗಡೆಗೊಳ್ಳುತ್ತಿರುವ ಮುನ್ನಾದಿನ ಕೈಸೇರಿದ ಗಳಿಗೆಯಿಂದಲೂ ಮತ್ತೆಮತ್ತೆ ಓದಿಸಿಕೊಂಡು ಹೋಯಿತು. ಈ ಪುಸ್ತಕಕ್ಕೆ ಐತಿಹಾಸಿಕ ಮಹತ್ವವಿದೆಯೆಂದರೆ ಉತ್ಪ್ರೇಕ್ಷೆಯಲ್ಲ. ಬೀದಿನಾಟಕಗಳ ದಾಖಲೆ ಶುರುವಾಗುವುದೇ ದೆಹಲಿಯಲ್ಲಿ. “ಜನಂ” ಎಂಬ ತಂಡದೊಂದಿಗೆ. ಇತರ ತಂಡಗಳೂ, ಬೀದಿನಾಟಕ ಪ್ರಯೋಗಗಳೂ ಇರಲಿಲ್ಲವೆಂದಲ್ಲ. ಆದರೆ ತುಂಬ ಅರ್ಪಣಾ ಮನೋಭಾವದಿಂದ, ಹೊಸತನದಿಂದ ಕೂಡಿದ ಮತ್ತು ಜನಪರವಾದ ನಿಲುವುಗಳಿಂದ “ಜನಂ” ನ ಕಲಾವಿದರು ಅಚ್ಚಳಿಯದ ಛಾಪೊಂದನ್ನು ಲಗತ್ತಿಸಿಕೊಂಡವರು. ಹಲ್ಲಾಬೋಲ್ ಪುಸ್ತಕ ಪ್ರಸ್ತುತವಾಗುವುದು ಅದರಲ್ಲಿ ದಾಖಲಾಗಿರುವ ಅಮೂಲ್ಯ ಫೋಟೋಗಳಿಂದಲೂ ಹೌದು

ಹಲ್ಲಾಬೋಲ್ ನ ಮೊದಲ ಅಧ್ಯಾಯಗಳು ಹೃದಯಂಗಮವಾಗಿವೆ. ಸಾವನ್ನು ಹತ್ತಿರದಿಂದ ಕಂಡ ಜೆಎನ್ ಯು ವಿದ್ಯಾರ್ಥಿಯೂ ಆಗಿದ್ದ ಸುಧನ್ವ ದೇಶಪಾಂಡೆ ಹೇಳುವ ಸತ್ಯಕಥಾನಕ ಕಣ್ಣಿಗೆ ಕಟ್ಟುವಂತಿದೆ. ನಂತರದ್ದು ಜನಂ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡಿದ ತನ್ಮೂಲಕ ಸಫ್ದರ್ ಹಷ್ಮಿಯವರನ್ನು ತಾತ್ವಿಕವಾಗಿ ಉಳಿಸಿದ, ಯಶಸ್ವಿಯಾದ ಕಥೆ. ಮಲಯಶ್ರೀಯವರ ಧೈರ್ಯ, ತಾಳ್ಮೆ, ಮುನ್ನೋಟಗಳ ಕುರಿತ ದಾಖಲೆ. ಶೀರ್ಷಿಕೆಯಲ್ಲಿ ಹೇಳಿದಂತೆ ಸಾವಿನಿಂದ ಆರಂಭವಾಗಿ ನಂತರ ಬದುಕಿನತ್ತ ಸಾಗುವ, ಅಳಿದ ಮೇಲೂ ಉಳಿಯಲು ಯತ್ನಿಸುವ ಬದ್ಧತೆಯೊಂದರ ಪ್ರಶ್ನೆಯನ್ನಿಟ್ಟುಕೊಂಡು ಎಲ್ಲ ಪಕ್ಷರಾಜಕೀಯ ಮೀರಿದ ಮನುಷ್ಯತ್ವದ ಹುಡುಕಾಟದಲ್ಲಿರುವಂತೆ ಕಾಣುವ ಬರಹ. ಎಲ್ಲ ಕಲಾವಿದರಂತೆ ಹಷ್ಮಿಯೂ ಕಲೆಯಲ್ಲಿ ಉಳಿದವರು, ಎಲ್ಲ ನಾಟಕಕಾರರಂತೆ ತಮ್ಮ ನಾಟಕಗಳಲ್ಲಿ ಉಳಿದು ಮುಂದುವರಿದಿರುವವರು. ಹಾಗಾಗಿಯೇ ಅವರ ನಾಟಕಗಳ ಅನುವಾದ “ಯೆ ದಿಲ್ ಮಾಂಗೇ ಮೋರ್” ನೆನಪಾಗಿ ಓದಿಸಿಕೊಂಡ ಪರಿಣಾಮವೇ ಅವರ ಏಳು ನಾಟಕಗಳ ಕುರಿತ ಟಿಪ್ಪಣಿ.

ಯೆ ದಿಲ್ ಮಾಂಗೇ ಮೋರ್

ಜನಂ ಬೀದಿ ನಾಟಕಗಳ ಪ್ರದರ್ಶನಗಳಲ್ಲಿ ಗಂಭೀರವಾಗಿ ತೊಡಗಿಸಿಕೊಂಡಾಗ ಅದರ ಎದುರಿಗಿದ್ದದ್ದು ಆಧುನಿಕ ಭಾರತದ ಜ್ವಲಂತ ಸಮಸ್ಯೆಗಳೇ. ಅದರಲ್ಲಿ ಮಹಿಳೆಯರು, ಕಾರ್ಮಿಕರು, ದಲಿತರು, ಬಡತನದ ರೇಖೆಗಿಂತ ಕೆಳಗಿದ್ದವರು ಹೀಗೆ. ಬೀದಿ ನಾಟಕದ ಪ್ರದರ್ಶನಗಳ ರೂಪುರೇಷೆಯೇ ಬೇರೆಯಿದ್ದುದರಿಂದ ತಂಡದ ಸದಸ್ಯರುಗಳು ನಾಟಕಗಳ ಪಠ್ಯ ಚೌಕಟ್ಟನ್ನು ನಿರ್ಧರಿಸಿಕೊಳ್ಳಬೇಕಿತ್ತು. ಹಾಗೆ ಒಟ್ಟಿಗೆ ಕುಳಿತು ಚರ್ಚಿಸಿದ ಸಂದರ್ಭಗಳಲ್ಲಿ ಹುಟ್ಟಿದ ನಾಟಕಗಳು ಸಂಖ್ಯೆಯಲ್ಲಿ ಕಡಿಮೆಯಾದರೂ ಸಶಕ್ತವಾದ, ಆಳರಸರನ್ನು ನೇರವಾಗಿ ಚುಚ್ಚಿ ರೊಚ್ಚಿಗೆಬ್ಬಿಸಿದ ಕೃತಿಗಳೇ ಆಗಿದ್ದವು.ನಾಟಕ ನಡೆಯುತ್ತಿದೆ ಎಂದರೆ ಅಲ್ಲೊಂದು ಬಿಸಿಬಿಸಿ ವಾತಾವರಣವೇ ಸೃಷ್ಟಿಯಾಗಿಬಿಡುತ್ತಿತ್ತು. ಹಾಗೆ ಹಷ್ಮಿಯವರಿಂದ ಬರೆಸಿಕೊಂಡ ನಾಟಕಗಳಲ್ಲಿ ಏಳು ನಾಟಕಗಳನ್ನು ಸಂಪಾದಿಸಿರುವ ಶ್ರೀಪಾದ ಭಟ್ ಮತ್ತು ವಿಟ್ಠಲ್ ಭಂಡಾರಿ ಇನ್ನೂ ಕೆಲನಾಟಕಗಳನ್ನು ಕನ್ನಡಕ್ಕೆ ತರುವ ಉದ್ದೇಶವನ್ನೂ ಸಂಪಾದಕೀಯದಲ್ಲಿ ಹೇಳಿಕೊಂಡಿರುವುದು ಹಷ್ಮಿ ಕನ್ನಡಪಯಣ ಇನ್ನೂ ಮುಂದುವರಿಯಲಿರುವುದನ್ನು ಸೂಚಿಸುತ್ತಿದೆ. ಈ ಏಳೂ ನಾಟಕಗಳನ್ನು ಕುರಿತ ಪರಿಚಯವನ್ನಷ್ಟೇ ಇಲ್ಲಿ ಕೊಡುತ್ತಿರುವೆ.

  1. “ಪಲಟೂ”- 18ನೆಯ ಶತಮಾನದ ಸಂತಕವಿ. ಈತ ಬರೆದಿರುವ ಕೆಲವು ಗೀತೆಗಳನ್ನು ಬಳಸಿಕೊಂಡು, ಆತನ ಬದುಕು ಮತ್ತು ಬರಹವನ್ನು ಹೇಳುವ ಕೃತಿ “ಎಲ್ಲೆಲ್ಲೂ ನೀನೇ, ಅಣುರೇಣು ತೃಣಕಾಷ್ಠ”. ಸತ್ಯಕ್ಕಿಂಥ ಮುಖ್ಯವಾದದು ಸತ್ಯದ ಹುಡುಕಾಟ ಎಂದು ಆರಂಭವಾಗುವ ನಾಟಕ ಹೆಂಗಸೆಂದರೆ ಭೂಮಿಯ ಮೊದಲಜ್ವಾಲೆ ಎನ್ನುತ್ತಾ ಮುಂದುವರಿಯುತ್ತದೆ. ಹೆಣ್ಣಿನ ಬಗೆಗಿನ ನಾನಾ ಅತಿರೇಕಗಳ ಸಂದರ್ಭದಲ್ಲಿ ಅವಳನ್ನು ಸಹಜರೀತಿಯ, ಬದುಕಿನ ಅಗತ್ಯಗಳನ್ನು ಪೂರೈಸುವ ಪ್ರಕೃತಿಯ ಪ್ರತಿರೂಪದಂತೆ ಕಾಣುವ ಸನ್ನಿವೇಶದಲ್ಲೇ ಅತಿಕ್ರಮಣದಿಂದ ಹೆದರಿದ ಭಯಭೀತ ಪಾತ್ರವೊಂದರ ಪ್ರವೇಶದಿಂದ ವಾತಾವರಣ ಇದ್ದಕ್ಕಿದ್ದಂತೆ ಬದಲಾಗುತ್ತದೆ.ಅಲ್ಲಿಂದ ತೆರೆದುಕೊಳ್ಳುವುದು ಮುಸಲರ ಮೇಲಿನ ಅಸಹನೆ, ಪಲಟೂದಾಸರ ಬಹುಷ್ಕಾರ, ತಮ್ಮ ಬೆಳೆಯನ್ನು ಮಾರುವ ಸ್ವಾತಂತ್ರ್ಯವೂ ಇಲ್ಲದ ರೈತರ ಅಸಹಾಯಕತೆ, ಸಂಸ್ಕೃತಿ ನಾಗರಿಕತೆಗಳ ನಾಶದ ಕುರಿತು ಹತಾಶನಾಗಿ ಒರಲುವ ಹಿರಿಯ ಜೊತೆಗೆ ಒಳಿತಾವುದೋ ಅದು ಉಳಿಯಲಿ ಎಂದು ಆಶಿಸುವ ಮಹಿಳೆ ಹೀಗೆ. ಕಾಜಿ, ಮಹಂತ, ಕೊತ್ವಾಲ,ಉಪಾಧ್ಯಾಯ, ಫತೇಹ ಎಲ್ಲರಿಗೂ ಅಂತಿಮವಾಗಿ ಬೇಕಾದದ್ದು ಸತ್ಯವೇ. ಆದರೂ ಯಾಕಾಗಿ ಸತ್ಯವು ಬೇರೆಬೇರೆಯಾಗಿಯೇ ಕಾಣುತ್ತದೆ ಎಂಬ ಗೊಂದಲವೇ ಅನೇಕ ಬಾರಿ ಭಿನ್ನಾಭಿಪ್ರಾಯಕ್ಕೂ, ಏಕಭಿಪ್ರಾಯಕ್ಕೂ ಕಾರಣವಾಗುವ ವಿಪರ್ಯಾಸದೊಂದಿಗೆ ಸತ್ಯದ ಕುರಿತ ಗೀತೆಯೊಂದಿಗೆ ನಾಟಕ ಮುಕ್ತಾಯಗೊಳ್ಳುತ್ತದೆ. ಸತ್ಯದ ಹಾದಿಯೊಂದು ತೆರೆದುಕೊಳ್ಳುವಲ್ಲಿಯೇ ಮನುಷ್ಯನ ಇತಿಹಾಸವಿದೆ ಎಂಬ ಸಂದೇಶ ಬೀದಿಯಲ್ಲಿ ಮಾತ್ರವೇ ಅನಾವರಣಗೊಳ್ಳಬಲ್ಲುದೇ ಹೊರತು ಮಹಲುಗಳಲ್ಲಿ ಅಲ್ಲವೆಂದೂ ಅನಿಸುತ್ತದೆ.
  2. ಭೇಷ್! ನನ್ನ ದೇಶದ ವೀರಯೋಧರೆ

ಭಗತ್ ಸಿಂಗ್ ಸುಖದೇವ ರಾಜಗುರು ಮತ್ತವರ ಹುತಾತ್ಮ ಬಳಗದ ಸುತ್ತ ತಿರುಗುವ ಕಥೆಯಿದು. ಚರಿತ್ರೆಯನ್ನು ಮನಬಂದಂತೆ ತಿರುಚುವ ಸಾಧ್ಯತೆಯ ನಡುವೆ ಬೈರಾಗಿ ಹೇಳುವ “ಈ ಪ್ರತಿಮೆಯ ಸ್ಥಿತಿ ನನ್ನ ದೇಶದ ಸ್ಥಿತಿಯಂತೆಯೇ ಆಗಿಹೋಗಿದೆ” ಎಂಬ ಮಾತು ಪ್ರತಿಮೆಗಳಾಗಿ ನಿಂತಿರುವ ಚೇತನಗಳೂ ವಿಪರ್ಯಾಸದ ಗೂಡುಗಳಾಗಿರುವ, ಅಸಹನೆಗೆ ಗುರಿಯಾಗಿರುವ ಸನ್ನಿವೇಶದಿಂದಾರಂಬಿಸಿ ಅರಿವಿನ ಕ್ಷಿತಿಜ ಸಂಕುಚಿತವಾಗುತ್ತಿರುವುದನ್ನು ಹೇಳಿದಂತೆ ಭಾಸವಾಗುತ್ತದೆ. ಒಂದೆಡೆ ತ್ರಿಶೂಲಗಳು, ಸ್ಟೆನ್ ಗನ್ ಗಳು, ಮತ್ತೊಂದೆಡೆ ಸತ್ಯವನ್ನು ಒಪ್ಪಿಕೊಳ್ಳಲೇ ಒಲ್ಲದ ಬೌದ್ಧಿಕ ಹತಾರಗಳು ಸಾಮಾನ್ಯ ಬದುಕನ್ನು ನರಕವಾಗಿಸುವ ಪರಿ ದಿಗಿಲು ಹುಟ್ಟಿಸುತ್ತದೆ. ನಡುವೆ ಸುಳಿವ ಭಗತ್ ಸಿಂಗ್ ಜಲಿಯನ್ ವಾಲಾಬಾಗ್ ನ ಹಿಡಿಮಣ್ಣನ್ನು ಮನೆಗೆ ತರುವ, ಅವನ ಅಕ್ಕ ಅಮರಜೀತ್ ಅದರ ಬಗ್ಗೆ ಪ್ರಶ್ನಿಸುವ ಹಿನ್ನೆಲೆಯ ಜೊತೆಯಲ್ಲಿ ಮೊಳಗುವ ಎಲ್ಲ ದೇಶಪ್ರೇಮಿ ಹೋರಾಟಗಾರ ವೀರರ ಹೆಸರುಗಳು ಒಮ್ಮೆ ನರನಾಡಿಗಳು ರೋಮಾಂಚನಗೊಳ್ಳುವಂತೆ ಮಾಡುತ್ತವೆ.ಕಾಕೋರಿ ದುರಂತದಲ್ಲಿ ಗಲ್ಲಿಗೇರಿಸಲಾದ ರಾಮಪ್ರಸಾದ್ ಬಿಸ್ಮಿಲ್ಲಾ, ಅಶ್ಫಾಕ್ ಉಲ್ಲಾ, ರೋಷನ್ ಸಿಂಗ್, ರಾಜೇಂದ್ರನಾಥ ಲಾಹಡಿಯವರ ಅಮರ ನೆನಪಿನಲ್ಲಿ ನರಳುವ ಭಗತ್ ಸಿಂಗ್ ತನ್ನ ಸಂಗಾತಿಗಳ ಜೊತೆಗೂಡಿ ಕಿವುಡರಿಗೆ ಕೇಳಿಸುವಂತೆ ಮಾಡುವ ಪ್ರಯತ್ನದಲ್ಲಿ ಹುತಾತ್ಮನಾಗುವ ಕಥೆಯೊಂದಿಗೆ ಕೊನೆಗೊಳ್ಳುವ ಈ ನಾಟಕ ಮನಸನ್ನು ಆರ್ದ್ರಗೊಳಿಸುವಷ್ಟು  ಸಶಕ್ತವಾದದು. ಬಟುಕೇಶ್ವರದತ್, ಸುಖದೇವ್, ಭಗತ್ ಸಿಂಗ್ ರ ಅನ್ಯಾಯದ ಸಾವು ಹಷ್ಮಿಯವರನ್ನು ಕಾಡಿದಂತೆ ಪ್ರೇಕ್ಷಕರನ್ನೂ ಮತ್ತೆಮತ್ತೆ ಕಾಡುತ್ತದೆ.

3.  “ಭಯೋತ್ಪಾದನೆಯ ನೆಪದಲ್ಲಿ” ಯಾನೆ ನನ್ನ ಫೋಟೋ – ಅಮೆರಿಕಾ, ಇಂಗ್ಲೆಂಡ್ ಮತ್ತು ತಾಲೀಬಾನ್ ಗಳು ಪಾತ್ರಧಾರಿಗಳಾದ ಇಂಟರ್ ನ್ಯಾಷನಲ್ ದೊಂಬರಾಟದ ಕಥೆಯನ್ನು ಹೇಳಲು ಹಷ್ಮಿ ದೊಂಬರಾಟದ ಶೈಲಿಯನ್ನು ಬಳಸಿಕೊಂಡಿದ್ದಾರೆ. ಇದು ಆಶಯದಲ್ಲಿ ಅತ್ಯುನ್ನತವಾದ ಅತ್ಯಂತ ಮೊನಚಾದ ನಾಟಕ. ಜಾಗತೀಕರಣದ ವಿರುದ್ಧ ನೇರ ಧಾಳಿಗಿಳಿವ ಹಷ್ಮಿ ವ್ಯಂಗ್ಯಭರಿತ ಭಾಷೆಯೊಂದಿಗೆ ಸಿನಿಮಾ ಹಾಡುಗಳ ಬಳಕೆಯೊಡನೆ ಚುರುಕು ಮುಟ್ಟಿಸುವ ಸಂಭಾಷಣೆಗಳಲ್ಲಿ ಚಿಕಿತ್ಸಕಪ್ರಯತ್ನ ನಡೆಸಿದ್ದಾರೆ. ಈ ಸಂದರ್ಭದಲ್ಲಿ ದೊಂಬರಾಟದ ಹುಡುಗ ಮತ್ತು ಅವನ ಗುರು ಎಲ್ಲ ತಿಳಿದೂ ತಿಳಿಯದಂತೆ ನಟಿಸಬೇಕಾದ ಜನಸಾಮಾನ್ಯರ ಅಸಹಾಯಕತೆಯ ರೂಪಕಗಳಂತೆ ಒದಗುತ್ತಾರೆ. ಪೋಟೋ, ತೆಹಲ್ಕಾ, ಲಾಡೆನ್,ಪಬ್ಲಿಕ್ ರಕ್ತ, ಬ್ಲಾಕ್ ಕಮಾಂಡೋ ಎಲ್ಲವೂ ಬಂದುಹೋಗುವ ಹರಿತ ಸಂಭಾಷಣೆಯಲ್ಲಿ ಪೋಲೀಸನ ಎಂಟ್ರಿಯೊಂದಿಗೆ ಸನ್ನಿವೇಶ ಇನ್ನೂ ಬಿಸಿಯೇರುತ್ತದೆ.ಏಕೆಂದರೆ ಜನವಾದವನ್ನು ಚೂರುಚೂರು ಮಾಡುವ ಕೊಡಲಿಯೂ, ಪ್ರಜಾಪ್ರಭೂತ್ವವನ್ನು ಕೊಯ್ಯುವ ಗರಗಸವೂ ಆದ ಪೋಟೋ ಕೂಡಾ ಇಲ್ಲಿ ಒಂದು ಪಾತ್ರ. ವಿನಾಕಾರಣ ದೊಂಬರವನೂ ಪೋಟೋದಡಿಯಲ್ಲಿ ಬಂಧಿತನಾಗುವುದು ಗುರುವನ್ನು ಕಂಗಾಲು ಮಾಡುತ್ತದೆ.ಭಯೋತ್ಪಾನೆಯ ಹೆಸರಲ್ಲಿ ಅಮಾಯಕರನ್ನೂ ಬಲಿಯಾಗಿಸುವ ಪ್ರಭುತ್ವವನ್ನು ಹಷ್ಮಿ ಪ್ರೇಕ್ಷಕರ ಪ್ರಜ್ಞೆಯನ್ನು ಸಾಣೆಹಿಡಿದು ಶತೃವೆಂದರೆ ಯಾರೆಂದು ಗುರುತಿಸುವ ಎಚ್ಚರವನ್ನು ಮೂಡಿಸುತ್ತಾರೆ.

  1. ಗುರುಗಳೇ, ಯೇ ದಿಲ್ ಮಾಂಗೇ ಮೋರ್- ಇನ್ನೂ ತಿದ್ದಲಾಗುತ್ತಿದೆಯೆಂದು ಹೇಳಲಾದ ಸ್ಕ್ರಿಪ್ಟ್ ಇದು. ಉರಿಯುತ್ತಿರುವ ನಗರದಲ್ಲೊಂದು ಪ್ರವಾಸ ಹಾಡುತ್ತಾ ಪ್ಲಕಾರ್ಡ ಹಿಡಿದ ಕಲಾವಿದರು ನೇರವಾಗಿ ಗಲಭೆಗಳನ್ನು ಕುರಿತ ನೋಟವನ್ನು ಒದಗಿಸುತ್ತಾರೆ. ಚೀರುವ ಮರಗಳ, ಅಳುವ ನದಿಗಳ ನಗರದಲ್ಲಿ ಕೋಮು ಗಲಭೆಯೊಂದಿಗೆ ಕಥೆ ಆರಂಭ. ಬುದ್ಧಿಬಲಿ, ಬಾಹುಬಲಿಯರ ಬೆಂಬಲದೊಂದಿಗೆ ಗೋಲ್ ಗಂಗೋಲ ಗುರುವಿನದೊಂದೇ ಭೀಷ್ಮಪ್ರತಿಜ್ಞೆ- “ಏಕ ಸಂಸ್ಕೃತಿ” ಅದನ್ನು ಸಾಧಿಸಲು ಬಾಂಬು, ಬಂದೂಕು, ಪಟಾಕಿ ಏನೆಲ್ಲಾ ಹತಾರಗಳು! ಕತ್ತೇ ನೀನು ಎಂದರೆ ಥ್ಯಾಂಕ್ಯೂ ಎನ್ನು ಮನೋಭಾವದ ಗುಲಾಮಗಿರಿ! ನೇರವಾಗಿ ಎದೆಗೇ ಗುರಿಯಿಟ್ಟಂಥ ಭಾಷೆ ಈ ನಾಟಕದ್ದು. ಗಾಢವಾದ ವಿಷಾದ, ಕೆಡುಕನ್ನು ತಡೆಯಲಾರದ ಹತಾಶೆ, ರೊಚ್ಚು ಜೊತೆಗೆ ವಾಸ್ತವಕ್ಕಿರುವ ಘೋರಸತ್ಯದ ಬೆಂಬಲ ಆದರೂ ಸೋಲೊಪ್ಪಿಕೊಳ್ಳಬೇಕಾದ ಅನಿವಾರ್ಯತೆ ಇವೆಲ್ಲದರ ಪ್ರತಿಬಿಂಬ ಈ ನಾಟಕ. ಕೆಡುಕನ್ನೇ ಮತ್ತೆಮತ್ತೆ ಬಯಸುವ ದಿಲ್ ಸಕಾರಾತ್ಮಕವಾಗಿ ಯೋಚಿಸುವ ದಾರಿಗೆ ಅಡ್ಡಲಾಗಿ ನಿಂತಿರುವಾಗ ಆಶಾವಾದವಾದರೂ ಎಲ್ಲೆಂಬ ಪ್ರಶ್ನೆಯೊಂದು ಉಳಿದುಹೋಗುತ್ತದೆ.
  2. ಕಾರ್ಮಿಕನೊಬ್ಬನ ಸಹಜ ಸಾವು – “ನಾವು ಕಂಡೆಮ್ ಮಷೀನುಗಳು, ನಾವು ಇಲ್ಲಪ್ಪ ನಾವು ಅಲ್ಲಪ್ಪ” ಎಂಬ ಐರನಿಯೊಂದಿಗೆ ಆರಂಭವಾಗುವ ಈ ನಾಟಕ ಪುಪ್ಪಸವನ್ನು ಕರಗಿಸಿಬಿಡುವ ರಾಸಾಯನಿಕ ಕಾರ್ಖಾನೆಗಳ ಸುತ್ತ ತಿರುಗುವ ಅಪಾಯಕಾರಿ ತಿರುಗಣಿಯನ್ನು ಪತ್ತೆ ಹಚ್ಚುತ್ತದೆ.ಅಷ್ಟಕ್ಕೂ ಓಪನ್ ಸೀಕ್ರೆಟ್ ಎನ್ನಬಹುದಾದ ಅಪಾಯಗಳನ್ನು ಕಾರ್ಮಿಕರು ಎದುರಿಸುತ್ತಿದ್ದಾರೆ, ಕಾಳಜಿ ಮಾಡವವರು ಯಾರು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಗ್ಯಾಸ್, ಅದನ್ನು ಎದುರಿಸಲು ಬೇಕಾದ ಮಾಸ್ಕ್ ಇಲ್ಲ. ಸುಡುವ ಕರುಳು, ಮುರುಟಿಹೋದ ಕೈಗಳು, ಉರಿಯುವ ಕಂಗಳು- ವಿಷಮ ಪರಿಸ್ಥಿತಿಯಲ್ಲಿಯೂ ದುಡಿವ ಜೀವಗಳಿಗೆ ನೂರುನೋವು. ಹೋರಾಟದ ದುರ್ಗಮಹಾದಿ. ರಜನಿಯ ಸ್ವಾಭೀಮಾನ, ಪೆನ್ಸಿಲಿನಿಂದ ಬರೆದ ಕಾಗದ ಪತ್ರಗಳು, ನಡುವೆ ನಡೆದ ಧರಣಿಗಳು, ಹಳೆಯ ಮೆಷಿನುಗಳ ನಡುವೆಯೇ ಕೆಲಸ- ಈ ವಿಷವರ್ತುಲದಲ್ಲಿ ಎಲ್ಲರೂ ಅಭಿಮನ್ಯುಗಳೇ. ಒಳಹೋಗುವುದಷ್ಟೇ ದಾರಿ, ಹಿಂದಿರುಗಿ ಬರಲೊಂದು ಎಳೆ ಬೆಳಕಿನ ಕಿರಣ ಕಾಣದು! ರೋನಿಟೋನಿಯ ಗನ್ ನಿಂದಾಲೇ ಆಗಿದ್ದರೂ ಸುರೇಶನದು ಸಹಜಸಾವು ಎನ್ನುವ ವ್ಯವಸ್ಥೆ. ಅತ್ಯಾಚಾರಗಳು ಕೊನೆಗೊಳ್ಳಲಿ, ಬಂಡವಾಳಷಾಹಿ ಮಣ್ಣುಮುಕ್ಕಲೆಂಬ ಆಶಯದೊಂದಿಗೆ ಈ ನಾಟಕದ ಅಂತ್ಯ ದುರಂತವೋ ದೌರ್ಭಾಗ್ಯವೋ ತಿಳಿಯದ ವಿಷಾದವೊಂದು ಆವರಿಸುತ್ತದೆ.
  3. ಕತ್ತೆಪುರಾಣ- ತುಂಬ ಸ್ವಾರಸ್ಯವಾದ , ಲವಲವಿಕೆಯ ನಾಟಕ ಇದು. ನಗಿಸುತ್ತಾ ವಾಸ್ತವದ ಅರಿವು ಮೂಡಿಸುವ ತಂತ್ರಗಾರಿಕೆಯ ಬಳಕೆ ನಾಟಕದ ವೇಗಕ್ಕೆ ಹೇಳಿಮಾಡಿಸಿದಂತಿದೆ. ಯಾರೂ ನಗಬಾರದೆಂದು ಡಂಗೂರ ಸಾರಲಾಯ್ತು. ಅದನ್ನು ಕೇಳಿಯೇ ಎಲ್ಲರೂ ನಕ್ಕರು. ಕತ್ತೆ, ಗಧಾಧರ, ಮಂತ್ರಿ, ಮಂತ್ರಿಣಿಯರು, ತಂತ್ರ, ಮಂತ್ರ, ಧರ್ಮ. ರಾಷ್ಟ್ರ, ಮುಕುಟ ಹೀಗೇ ಸಾಗುವ ಕಥೆ ಸಣ್ಣ ತಲೆಯನ್ನು ದೊಡ್ಡದಾಗಿಸುವ ಅಮೆರಿಕಾದ ಸಾಧನಗಳನ್ನು ಕುರಿತು ವ್ಯಂಗ್ಯಭರಿತ ಹಾಸ್ಯವನ್ನು ಸೃಷ್ಟಿಸುತ್ತದೆ.ಕವಿತೆ, ರಾಜದರ್ಬಾರಿನ ಮಧ್ಯೆ ಗಲಭೆ, ಅಶಾಂತಜೀವನ, ಮುರಿದ ಮನಸುಗಳು ಹೀಗೆ ಸಾಂಕೇತಿಕ ಅಂಶಗಳನ್ನೂ ಅಪರೋಕ್ಷ ಸಂಗತಿಗಳನ್ನೂ ಒಟ್ಟಿಗೆ ಹೇಳೂತ್ತಾ ಹೋಗುವ ತಂತ್ರಗಾರಿಕೆ ಹಷ್ಮಿಯವರದು. ಆಶಾವಾದವೇ ಈ ನಾಟಕದ ಕೊನೆಯಲ್ಲಿಯೂ ಈ ನಾಟಕದ ಗೆಲ್ಲುವುದು.
  4. ಅಜಿತ್ ಅನ್ವರ್ ಆಂಟನಿ- ಈ ನಾಟಕ ಬರೆಯಲ್ಪಟ್ಟಿದ್ದೇ ಭಯೋತ್ಪಾದನಾ ವಿರೋಧಿ ದಿನಾಚರಣೆ ಅಂಗವಾಗಿ. ಹಾಗಾಗಿ ಸಹಜವಾಗಿ ಶಾಂತಿಪರವಾದ ಕಥೆಯನ್ನೊಳಗೊಂಡಿರುವಂಥಾ ಚೌಕಟ್ಟು. ಅಮ್ಮನಿಗಾಗಿ ದುಡಿದ ಹಣವನ್ನು ಹಿಡಿದಿಡುವ ಪೋಲೀಸು, ಕಫ್ರ್ಯೂ ಹೇರಲ್ಪಟ್ಟ ನಗರದಲ್ಲಿ ಊಟಕ್ಕೆ ದುಡಿಮೆಯಿಲ್ಲದ ಕುಟುಂಬಗಳು, ಅದರ ನಡುವೆಯೇ ದೊಂಬರಾಟವಾಡಿ ಊಟ ಸಂಪಾದಿಸಿಕೊಳ್ಳಲು ಪ್ರಯತ್ನಿಸುವವರು, ಮಾನಸಿಕವಾಗಿ ಕುಗ್ಗಿ ಹೋಗಿರುವ ಅನ್ವರ್, ವಿಶಾಲ ಮನೋಭಾವದ ಮೇಡಂ ಮತ್ತು ಅನ್ವರನ ಗೆಳೆಯರು,ಭಯೋತ್ಪಾದಕರಿಗೆ ಜಾತಿಯಿಲ್ಲ, ಻ವರು ಭಯೋತ್ಪಾದಕರು ಮಾತ್ರವೆಂಬ ಸಂದೇಶ ಈ ನಾಟಕದ್ದು. ಅಮರ್ ಅಕ್ಬರ್ ಹಿಂದಿ ಸಿನಿಮಾದ ದಟ್ಟಛಾಯೆಯಲ್ಲಿಯೇ ಬೆಳೆಯುವ ಕಥೆಯಲ್ಲಿ ಅದೇ ಸಿನಿಮಾದ ಹಾಡಟುಗಳನ್ನು ಯಥೇಚ್ಛ ಬಳಸಲಾಗಿದೆ. ಕೊನೆಗೆ ಎಲ್ಲರೊಂದಾಗುವ ಶುಭಗಳಿಗೆಯಲ್ಲಿಯೂ ಸಿನಿಮಾ ಹಾಡು.ಇಲ್ಲಿ ಅನುವಾದಕಿ ಸ್ವಾತಂತ್ರ್ಯ ವಹಿಸಿ ಜೈ ಭಾರತ ಜನನಿಯ ತನುಜಾತೆ ಹಾಡನ್ನು ಬಳಸಿರುವುದು ಅಂತ್ಯದ ಸೊಗಸನ್ನು ಹೆಚ್ಚಿಸಿದೆ.

ಈ ಏಳೂ ಕಥೆಗಳನ್ನು ಕನ್ನಡಕ್ಕೆ ತಂದ ಡಾ. ಮಾಧವಿ ಭಂಡಾರಿಯವರು ಹಿಂದಿ ಕನ್ನಡ ಭಾಷಾಬಾಂಧವ್ಯದ ಕೊಂಡಿಯಾಗಿರುವವರು. ಹಿಂದಿಯ ಅನೇಕ ಪ್ರಮುಖ ಗದ್ಯಗಳನ್ನು ಅನುವಾದಿಸಿದ್ದಾರೆ. 25ಕ್ಕೂ ಹೆಚ್ಚು ನಾಟಕಗಳಲ್ಲಿ. ಟಿವಿವಾಹಿನಿಗಳಲ್ಲಿ ಅಭಿನಯಿಸಿದ್ದಾರೆ. ಇವೆಲ್ಲ ಮೇಳೈಸಿ ಸಫ್ದರ್ ಹಷ್ಮಿ ನಾಟಕಗಳನ್ನು ಶ್ರದ್ಧೆ, ಬದ್ಧತೆಗಳಿಂದ ಅನುವಾದಿಸಿರುವುದು ಕಂಡು ಬರುತ್ತದೆ. ಈ ಕೃತಿಯ ಸಂಪಾದಕರ ಮಾತುಗಳು, ಮುನ್ನುಡಿಯು ಬೀದಿನಾಟಕಗಳ ಕುರಿತು ಗರಿಷ್ಠ ಮಾಹಿತಿ ನೀಡುವಂಥದ್ದು. ಸಮುದಾಯದಲ್ಲಿ, ಪ್ರಗತಿಪರ ರಂಗಭೂಮಿಯ ಕೃಷಿಯಲ್ಲಿ ತೊಡಗಿಸಿಕೊಂಡಿರುವಂಥಾ ಸೃಜನಶೀಲ ಮನಸುಗಳು ತಮಗೆ ಒಗ್ಗುವಂಥಾ, ನಿರೀಕ್ಷಿಸಿದಂಥಾ ಬದ್ಧತೆಯಿಂದ ಈ ಪುಸ್ತಕ ಹೊರತಂದಿದ್ದಾರೆ. ಇಷ್ಟಕ್ಕೂ ಸಾವೆಂಬುದು ಅಂತ್ಯವಲ್ಲ, ಹೊಸತೊಂದರ ಆರಂಭ ಎಂಬ ಮಾತು ಎಷ್ಟು ಸಲ ಹೇಳಿಕೊಂಡರೂ ಕ್ಲೀಷೆಯೆನಿಸದ ಸತ್ಯ ತಾನೇ?!

– ಸುಧಾ ಚಿದಾನಂದಗೌಡ

ಹಗರಿಬೊಮ್ಮನಹಳ್ಳಿ 

 

Donate Janashakthi Media

Leave a Reply

Your email address will not be published. Required fields are marked *