ಬೀದಿ ಪ್ರತಿಭಟನೆಯ ಭಾಷೆಯೊಂದೇ ಬಿಜೆಪಿಗೆ ಅರ್ಥವಾಗುತ್ತದೆ: ಅಧೀರ್ ರಂಜನ್ ಚೌಧರಿ

  • ಪರಿಶೀಲನೆಗೆ ಒಳಪಡಿಸುವಂತೆ ಕೋರಿದ ನಮ್ಮ ಸದಸ್ಯರನ್ನು ಅಮಾನತುಗೊಳಿಸಿದರು:  ಅಧೀರ್ ರಂಜನ್ ಚೌಧರಿ

ಕೋಲ್ಕತ್ತ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಬೀದಿ ಪ್ರತಿಭಟನೆಯ ಭಾಷೆಯನ್ನು ಮಾತ್ರ ಅರ್ಥಮಾಡಿಕೊಳ್ಳುತ್ತದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಅಧೀರ್ ರಂಜನ್ ಚೌಧರಿ ಶನಿವಾರ ಹೇಳಿದ್ದಾರೆ.

ಸಂಸತ್ತಿನ ಸ್ಥಾಯಿ ಸಮಿತಿ ಮೂಲಕ ಕಾಯ್ದೆಯನ್ನು ಹೆಚ್ಚಿನ ಸಮಾಲೋಚನೆ ಮತ್ತು ಪರಿಶೀಲನೆ ನಡೆಸುವಂತೆ ಕಾಂಗ್ರೆಸ್‌ ಮನವಿ ಮಾಡಿತ್ತು. ಆದರೆ ಮನವಿಯನ್ನು ತಿರಸ್ಕರಿಸಲಾಯಿತು. ಬಳಿಕ ಕಾಯ್ದೆಯನ್ನು ವಿರೋಧಿಸಿದ ಸಂಸದರನ್ನು ಸಂಸತ್ತಿನಿಂದಲೇ ಅಮಾನತುಗೊಳಿಸಲಾಯಿತು ಎಂದು ಕಿಡಿಕಾರಿದ್ದಾರೆ.

ರೈತ ವಿರೋಧಿ ಮಸೂದೆಗಳನ್ನು ಕಾಂಗ್ರೆಸ್ ವಿರೋಧಿಸಿದಾಗ, ಕಾಂಗ್ರೆಸ್ ರೈತರ ಹಿತಾಸಕ್ತಿಗೆ ಧಕ್ಕೆ ತರುತ್ತಿದೆ ಎಂದು ಬಿಜೆಪಿ ಆರೋಪಿಸಿತು. ಲೋಕಸಭೆಯಲ್ಲಿ ಮಸೂದೆಗಳನ್ನು ಅಂಗೀಕರಿಸುವ ಮುನ್ನ ಕಾಯ್ದೆಯನ್ನು ಪರಿಶೀಲನೆಗೆ ಒಳಪಡಿಸುವಂತೆ ಕೋರಿದಾಗ ಸಂಸತ್ತಿನಲ್ಲಿ ನಮ್ಮ ಸದಸ್ಯರನ್ನು ಅಮಾನತುಗೊಳಿಸಿದರು ಎಂದು ಚೌಧರಿ ಸರಣಿ ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ಸದ್ಯದ ಕೇಂದ್ರ ಸರ್ಕಾರವು, ಬೀದಿಯಲ್ಲಿ ಪ್ರತಿಭಟನೆ ನಡೆಸುವ ಭಾಷೆಯನ್ನು ಮಾತ್ರ ಅರ್ಥಮಾಡಿಕೊಳ್ಳುತ್ತದೆ. ಈಗ ಅದೇ ಸರ್ಕಾರ ಪ್ರತಿಭಟನಾಕಾರರೊಂದಿಗೆ ಚರ್ಚೆಗೆ ಹೆಚ್ಚಿಗೆ ಉತ್ಸುಕವಾಗಿದೆ ಎಂದು ತಿಳಿಸಿದ್ದಾರೆ.

ಹೊಸ ಕೃಷಿ ಕಾನೂನುಗಳ ಕುರಿತು ಐದನೇ ಸುತ್ತಿನ ಮಾತುಕತೆಗಾಗಿ ರೈತರು ಶನಿವಾರ ಕೇಂದ್ರ ಸಚಿವರನ್ನು ಭೇಟಿಯಾಗಲಿದ್ದಾರೆ. ಪ್ರತಿಭಟನಾನಿರತ ರೈತ ಸಂಘಟನೆಗಳೊಂದಿಗಿನ ನಿರ್ಣಾಯಕ ಸಭೆಗೂ ಮುನ್ನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೇಂದ್ರ ಸಚಿವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ರೈತ ಸಂಘಟನೆಗಳೊಂದಿಗೆ ಪ್ರಸ್ತಾಪಿಸುವ ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ಅವರೊಂದಿಗಿನ ಸಭೆಯಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ರೈಲ್ವೆ ಸಚಿವ ಪಿಯೂಷ್ ಗೋಯಲ್ ಉಪಸ್ಥಿತರಿದ್ದರು. ಸರ್ಕಾರ ಮತ್ತು ರೈತ ಸಂಘಟನೆಗಳೊಂದಿಗಿನ ನಡುವಿನ ನಾಲ್ಕನೇ ಸುತ್ತಿನ ಮಾತುಕತೆಯು ಹೊಸ ಕೃಷಿ ಕಾನೂನುಗಳ ಮೇಲಿನ ಬಿಕ್ಕಟ್ಟನ್ನು ಕೊನೆಗೊಳಿಸಲು ವಿಫಲವಾಗಿದೆ.

Donate Janashakthi Media

Leave a Reply

Your email address will not be published. Required fields are marked *