ಬಂಟ್ವಾಳ: ಬೀಡಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ದೇಶಾದ್ಯಂತ ಪ್ರತಿಭಟನೆಯ ಭಾಗವಾಗಿ ಇಂದು (ಮಾರ್ಚ್ 27) ಬಿಸಿ ರಸ್ತೆಯಲ್ಲಿರುವ ತಾಲೂಕು ಕಚೇರಿಯೆದುರು ಬೀಡಿ ಕಾರ್ಮಿಕರು ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಆಕ್ರೋಶಭರಿತ ಘೋಷಣೆಗಳನ್ನು ಕೂಗಿದರು. ಬಳಿಕ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಬೀಡಿ ಕಾರ್ಮಿಕರ ಸಂಘಟನೆಯ ರಾಜ್ಯಾಧ್ಯಕ್ಷ ಜೆ ಬಾಲಕೃಷ್ಣ ಶೆಟ್ಟಿ, ದೇಶಾದ್ಯಂತ ಸುಮಾರು 65 ಲಕ್ಷ ಕಾರ್ಮಿಕರು ಬೀಡಿ ಉದ್ಯಮವನ್ನು ನಂಬಿ ಬದುಕುತ್ತಿದ್ದು, ಪರೋಕ್ಷವಾಗಿ 3 ಕೋಟಿಯಷ್ಟು ಕಾರ್ಮಿಕರು ಜೀವನ ನಡೆಸುತ್ತಿದ್ದಾರೆ. ಆದರೆ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳಿಂದ ಬೀಡಿ ಉದ್ಯಮ ತೀರಾ ಸಂಕಷ್ಟದಲ್ಲಿದ್ದು, ಕಾರ್ಮಿಕರ ಬದುಕು ಡೋಲಾಯಮಾನವಾಗಿದೆ. ಕನಿಷ್ಟ ಕೂಲಿ, ತುಟ್ಟಿ ಭತ್ಯೆ ಹೆಚ್ಚಳ, ಪರ್ಯಾಯ ಉದ್ಯೋಗ ಸೇರಿದಂತೆ ಹಲವು ಬೇಡಿಕೆಗಳನ್ನು ಸರಕಾರಗಳ ಮುಂದಿಟ್ಟರೂ ಸರಕಾರಗಳು ದಿವ್ಯ ಮೌನ ವಹಿಸಿದೆ ಎಂದು ದೂರಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡುತ್ತಾ, ಬಾಯಿ ಬಿಟ್ಟರೆ ಅಭಿವೃದ್ಧಿಯ ಮಂತ್ರ ಜಪಿಸುವ ಡಬ್ಬಲ್ ಇಂಜಿನ್ ಸರಕಾರಗಳು ಬೀಡಿ ಕಾರ್ಮಿಕರ ಏಳಿಗೆಗಾಗಿ ಕಿಂಚಿತ್ತೂ ಗಮನ ನೀಡಿಲ್ಲ, ಮಾತ್ರವಲ್ಲದೆ ವಿಧಾನಸಭೆ ಸಂಸತ್ತಿನಲ್ಲಿ ಶಾಸಕ ಸಂಸದರು ಒಂದು ಶಬ್ದನೂ ಮಾತನಾಡಿಲ್ಲ ಎಂದು ಹೇಳಿದರು.
ಬಂಟ್ವಾಳ ತಾಲೂಕು ಸಿಐಟಿಯು ನಾಯಕರಾದ ಉದಯ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರೆ, ಜಯಂತಿ ಬಿ ಶೆಟ್ಟಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ಪ್ರತಿಭಟನೆಯ ಬಳಿಕ ತಹಶೀಲ್ದಾರ್ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಅರ್ಪಿಸಲಾಯಿತು.
ಹೋರಾಟದ ನೇತೃತ್ವವನ್ನು ಸಿಐಟಿಯು ಜಿಲ್ಲಾ ನಾಯಕರಾದ ಜಯಲಕ್ಷ್ಮಿ, ಬೀಡಿ ಕಾರ್ಮಿಕರ ಮುಖಂಡರಾದ ಲೋಲಾಕ್ಷಿ ಬಂಟ್ವಾಳ, ಗಿರಿಜಾ, ವಿಮಲ, ಸರಸ್ವತಿ, ಸಿಐಟಿಯು ನಾಯಕರಾದ ಚಂದ್ರ ಪೂಜಾರಿ, ಜನಾರ್ಧನ ಕುಲಾಲ್ ಮುಂತಾದವರು ವಹಿಸಿದ್ದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ