ಬೇಡಿಕೆ ಈಡೇರುವವರೆಗೂ ಕದಲುವುದಿಲ್ಲವೆಂದು ಅಂಗನವಾಡಿ ನೌಕರರ ಧರಣಿ ಆರಂಭ…

ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವೆ ಖಾಯಂ ಮಾಡಬೇಕು, ರೂ. 31 ಸಾವಿರ ವೇತನ ನಿಗದಪಡಿಸಬೇಕು, ಮಿನಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಬೇಕು, ಗ್ರಾಚ್ಯುಟಿ ಹಣ, ಪೆನ್ಷನ್ ಜಾರಿ ಮಾಡಬೇಕು, ಇ.ಎಸ್.ಐ. ಸೌಲಭ್ಯ ಜಾರಿ ಮಾಡಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕೆಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು) ಪ್ರತಿಭಟನೆಗೆ ಇಳಿದಿದ್ದಾರೆ.

ಇದನ್ನು ಓದಿ: 2023 ಜನವರಿ 23 ರಿಂದ ಅಂಗನವಾಡಿ ನೌಕರರ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ: ಈ ಮುಷ್ಕರ ಯಾಕೆ?

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಯನ್ನು ಮತ್ತು ಅವರ ಕೆಲಸವನ್ನು ಖಾಯಂ ಮಾಡಬೇಕು ಅಂದರೆ ತಮಗೆ ಕೆಲಸದ ಭದ್ರತೆ ಬೇಕು ಎಂದು ಆಗ್ರಹಿಸುತ್ತಿದ್ದಾರೆ. ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಶೇಷಾದ್ರಿ ರಸ್ತೆಯಲ್ಲಿ ಮೌರ್ಯ ವೃತ್ತದಿಂದ ಸ್ವಾತಂತ್ರ್ಯ ಉದ್ಯಾನವನದವರೆಗೂ ಒಂದು ಬದಿಯ ರಸ್ತೆಯಲ್ಲಿ ಧರಣಿ ಆರಂಭಿಸಿದ್ದಾರೆ. 30 ಸಾವಿರಕ್ಕೂ ಹೆಚ್ಚು ಅಂಗನವಾಡಿ ನೌಕರರು ಧರಣಿಯಲ್ಲಿ ಭಾಗಿಯಾಗಿದ್ದು, ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ.

ಕಳೆದ ಮೂರ್ನಾಲ್ಕು ದಶಕದಿಂದ ಯಾವುದೇ ಸವಲತ್ತುಗಳಿಲ್ಲದೆ ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರು ರಾಜ್ಯದ ಮೂಲೆಮೂಲೆಗಳಿಂದ ಆಗಮಿಸಿ ಪ್ರತಿಭಟನಾ ಪ್ರದರ್ಶನ ಮೂಲಕ ಬೇಡಿಕೆಗಳು ಈಡೇರುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಇದನ್ನು ಓದಿ: ಅಂಗನವಾಡಿಯಲ್ಲಿಯೇ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸಿ : ಅಂಗನವಾಡಿ ನೌಕರರ ಆಗ್ರಹ

ಕೇಂದ್ರ ಸರ್ಕಾರ ನೂತನ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)-2020ನ್ನು ಜಾರಿಗೆ ತಂದಿದೆ, ಈ ನೀತಿ ರಾಜ್ಯದಲ್ಲಿ ಜಾರಿಯಾಗುವ ಬಗ್ಗೆ ರಾಜ್ಯ ಸರ್ಕಾರ ಸಂಬಂಧಿಸಿದ ಸಂಘಟನೆಗಳೊಂದಿಗೆ ಚರ್ಚಿಸಲಿಲ್ಲ. ಶಿಕ್ಷಣ ನೀತಿ ಅಧಿಕೃತವಾಗಿ ಜಾರಿಯಾದರೆ, 62,580 ಅಂಗನವಾಡಿ ಕೇಂದ್ರಗಳು ಮತ್ತು 3,331 ಮಿನಿ ಅಂಗನವಾಡಿ ಕೇಂದ್ರಗಳು ಸಂಪೂರ್ಣ ದುರ್ಬಲಗೊಳ್ಳುವ ಪರಿಸ್ಥಿತಿಗೆ ಬರಲಿದೆ. ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕೆಂದು ಸಿಐಟಿಯು ಸಂಘಟನೆಯ ಆಗ್ರಹವಾಗಿದೆ.

ರಾಜ್ಯ ಸರ್ಕಾರ 4,204 ಹೊಸ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಲು ಮುಂದಾಗಿದ್ದು, ಈಗಾಗಲೇ ಇರುವ 3,331 ಮಿನಿ ಅಂಗನವಾಡಿ ಕೇಂದ್ರಗಳನ್ನು ಪೂರ್ಣ ಕೇಂದ್ರಗಳಾಗಿ ಪರಿವರ್ತಿಸಬೇಕು. ಒಬ್ಬರ ಮೇಲೆಯೇ ಕಾರ್ಯಕರ್ತೆ, ಸಹಾಯಕಿ ಎರಡು ಕೆಲಸದ ಹೊರೆ ನಿಲ್ಲಬೇಕು ಎಂಬುದು ಪ್ರತಿಭಟನೆಕಾರರ ಬೇಡಿಕೆಯಾಗಿದೆ.

 

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಂದ ಸಮಗ್ರ ಶಿಶು ಅಭಿವೃದ್ಧಿ (ಐಸಿಡಿಎಸ್‌) ಯೋಜನೆಗೆ ಸಂಬಂಧಪಡದ ಇತರೆ ಇಲಾಖೆಗಳ ಕೆಲಸಗಳನ್ನೂ ಮಾಡಿಸಲಾಗುತ್ತದೆ. ಐಸಿಡಿಎಸ್‌  ಮಾರ್ಗದರ್ಶಿ ಸೂಚಿ ಪ್ರಕಾರ, ಇರುವ 6 ಸೇವೆಗಳಿಗೆ ಮಾತ್ರ ಅಂಗನವಾಡಿ ನೌಕರರನ್ನು ಬಳಸಬೇಕು. ಅದನ್ನು ಬಿಟ್ಟು ಯೋಜನೇತರ ಕೆಲಸಗಳನ್ನು ನೌಕರರಿಂದ ಮಾಡಿಸಲಾಗುತ್ತಿದೆ. ಇದು ಹೊರೆಯಾಗಿದ್ದು, ಇವುಗಳನ್ನು ಕೈಬಿಟ್ಟು, ಐಸಿಡಿಎಸ್ ಗೆ ಯೋಜನೆಗೆ ಸಂಬಂಧಿಸಿದ ಕೆಲಸಗಳಿಗೆ ಮಾತ್ರ ಕಾರ್ಯಕರ್ತೆಯರ ಬಳಸಿಕೊಳ್ಳಬೇಕು ಆಗ್ರಹಿಸಿದರು.

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು)ದ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.‌ಸುನಂದ ಮಾತನಾಡಿ, ಪ್ರಮುಖ ಬೇಡಿಕೆಗಳೊಂದಿಗೆ, ಕಾಯಿಲೆಯಿಂದ ಬಳಲುತ್ತಿರುವ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸಂಬಳ ಸಹಿತ ರಜೆ ನೀಡಬೇಕು. ಗುಜರಾತ್‌ ಸರ್ಕಾರ ಮಾದರಿ ನಮ್ಮಲ್ಲೂ ಗ್ರಾಚ್ಯುಟಿ ಯೋಜನೆ ಜಾರಿಗೊಳಿಸಬೇಕು. ರಾಜ್ಯದಲ್ಲಿ 65,950 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಅದರಲ್ಲಿ 20 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಮಾತ್ರ ಎಲ್‌ಕೆಜಿ, ಯುಕೆಜಿ ಆರಂಭವಾಗಲಿದೆ ಎಂದಿದ್ದಾರೆ. ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲೂ ಇಸಿಸಿ ಶಾಲಾ ಪೂರ್ವ ಶಿಕ್ಷಣ ಜಾರಿಯಾಗಬೇಕು ಎಂದು ಆಗ್ರಹಿಸಿದರು.   

ಇದನ್ನು ಓದಿ: ಅಂಗನವಾಡಿ ನೌಕರರಿಂದ ಪ್ರತಿ ಲೋಕಸಭಾ ಕ್ಷೇತ್ರದಲ್ಲಿ “ಜವಾಬು ಕೇಳಿ” ಅಭಿಯಾನ

ಎಲ್ಲಿ ನೋಡಿದರು ಕೆಂಬಾವುಟ: ಸ್ವಾತಂತ್ರ್ಯ ಉದ್ಯಾನವನ ಸುತ್ತ ಎಲ್ಲಿ ನೋಡಿದರೂ ಅಲ್ಲಿ ಅಂಗನವಾಡಿ ನೌಕರರು ಹಾಗೂ ಕೆಂಬಾವುಟ ರಾರಾಜಿಸುತ್ತಿದ್ದವು. ರಾಜ್ಯದ ವಿವಿದೆಡೆಗಳಿಂದ ಆಗಮಿಸಿದ 45 ಸಾವಿರಕ್ಕೂ ಹೆಚ್ಚು ಅಂಗನವಾಡಿ ನೌಕರರು  ಭಾಗವಹಿಸಿದ್ದರು. ಸರಕಾರ ಬೇಡಿಕೆ ಈಡೇರಿಸುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ ಎಂದು ನೌಕರರು ಪಟ್ಟು ಹಿಡಿದಿದ್ದಾರೆ.

ಅಂಗನವಾಡಿ ನೌಕರರ ಸಂಘಟನೆಯ ರಾಷ್ಟ್ರಾಧ್ಯಕ್ಷೆ ಎ.ಆರ್‌.ಸಿಂಧು ಪ್ರತಿಭಟನೆಗೆ ಚಾಲನೆ ನೀಡಿ ಮಾತನಾಡಿದರು. ಸಿಐಟಿಯು ರಾಷ್ಟ್ರಾಧ್ಯಕ್ಷೆ ಕೆ.ಹೇಮಲತಾ, ಪ್ರಧಾನ ಕಾರ್ಯದರ್ಶಿ ತಪನ್‌ ಸೇನ್‌, ರಾಷ್ಟ್ರೀಯ ಕಾರ್ಯದರ್ಶಿ ಕೆ.ಎನ್‌, ಉಮೇಶ್‌. ಸಿಐಟಿಯು ರಾಜ್ಯಾಧ್ಯಕ್ಷೆ ಎಸ್‌. ವರಲಕ್ಷ್ಮಿ, ಅಂಗನವಾಡಿ ನೌಕರರ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ  ಎಚ್‌ ಎಸ್‌ ಸುನಂದಾ ಮಾತನಾಡಿದರು. ಪ್ರತಿಭಟನೆಯಲ್ಲಿ ಯಮುನಾ ಗಾಂವ್ಕರ್‌, ಶಾಂತಾ ಎನ್‌.ಘಂಟೆ, ಟಿ.ಲೀಲಾವತಿ, ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಅಂಗನವಾಡಿ ನೌಕರರು ಭಾಗವಹಿಸಿದ್ದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

 

Donate Janashakthi Media

Leave a Reply

Your email address will not be published. Required fields are marked *