ಬೇಡಿಕೆಈಡೇರಿಸುವವರೆಗೂ ರಾಜ್ಯಸಭಾ ಅಧಿವೇಶನ ಬಹಿಷ್ಕಾರ: ವಿಪಕ್ಷಗಳ ನಿರ್ಧಾರ

 

ದೆಹಲಿ: 8 ಸಂಸದರ ಅಮಾನತ್ತು ಶಿಕ್ಷೆ ರದ್ದುಗೊಳಿಸುವುದು ಸೇರಿದಂತೆ ಪ್ರಮುಖ ಮೂರು ಬೇಡಿಕೆಗಳನ್ನು ಸಭಾಪತಿಗಳು ಈಡೇರಿಸುವವರೆಗೂ ರಾಜ್ಯಸಭಾ ಅಧಿವೇಶನದಿಂದ ದೂರು ಉಳಿಯುವುದಾಗಿ ಪ್ರತಿಪಕ್ಷಗಳು ನಿರ್ಧರಿಸಿವೆ.

ರಾಜ್ಯಸಭಾ ವಿರೋಧ ಪಕ್ಷದ ಮುಖಂಡ ಗುಲಾಮ್ ನಬಿ ಅಜಾದ್‌ರವರ ಈ ತೀರ್ಮಾನಕ್ಕೆ ಆಪ್, ತೃಣಮೂಲ ಕಾಂಗ್ರೆಸ್, ಸಿಪಿಎಂ ಸೇರಿದಂತೆ ಹಲವು ಪ್ರತಿಪಕ್ಷಗಳು ದನಿಗೂಡಿಸಿವೆ.

ಎಂಟು ಸಂಸದರ ಮೇಲಿನ ಒಂದು ವಾರಗಳ ಅಮಾನತ್ತು ಶಿಕ್ಷೆಯನ್ನು ರದ್ದುಗೊಳಿಸುವುದು, ರೈತರ ಬೆಳೆಗಳಿಗೆ ಸರ್ಕಾರ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಗೊಳಿಸುವುದು, ಬೆಲೆ ನಿಗದಿ ಮಾಡುವಾಗ ಎಂ.ಎಸ್. ಸ್ವಾಮಿನಾಥನ್‌ರವರ ಆಯೋಗದ ವರದಿಗಳನ್ನು ಅನುಸರಿಸುವುದು, ( ಬೆಂಬಲಬೆಲೆಗಿಂತಕಡಿಮೆ ದರಕ್ಕೆ ಯಾವುದೇ ಖಾಸಗಿ ಕಂಪನಿಗಳು ಕೊಳ್ಳಲು ಅವಕಾಶವಿರಬಾರದು) ಮತ್ತು ಸರ್ಕಾರದ  ಭಾರತೀಯ ಆಹಾರ ನಿಗಮ ನೇರವಾಗಿ ರೈತರ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಗೆ ಕೊಂಡುಕೊಳ್ಳಬೇಕು ಎಂಬ ಮೂರು ಬೇಡಿಕೆಗಳನ್ನು ವಿಪಕ್ಷಗಳು ಸರ್ಕಾರದ ಮುಂದಿಟ್ಟಿದ್ದು, ಈ ಬೇಡಿಕೆಗಳನ್ನು ಈಡೇರಿಸುವವರೆಗೂ ಸದನದಿಂದ ಹೊರಗುಳಿಯುವುದಾಗಿ ಹೇಳಿವೆ.

ಭಾನುವಾರ ವಿವಾದಾತ್ಮಕ ಕೃಷಿ ಮಸೂದೆಗಳನ್ನು ಮಂಡಿಸುವಾಗ ಪ್ರತಿಪಕ್ಷಗಳು ಹಲವು ಸದಸ್ಯರು ಗದ್ದಲವೆಬ್ಬಿಸಿದ್ದರು. ಮಸೂದೆಯ ಕರಡುಪ್ರತಿಗಳನ್ನು ಹರಿಯಲು ಮುಂದಾಗಿದ್ದರು. ಈ ಆರೋಪದ ಹಿನ್ನೆಲೆಯಲ್ಲಿ 8 ಜನ ಸಂಸದರನ್ನು  ಒಂದು ವಾರದ ಮಟ್ಟಿಗೆ ಸದನದಿಂದ ಅಮಾನತ್ತು ಮಾಡಲಾಗಿದೆ. ಇದನ್ನು ವಿರೋಧಿಸಿ ಆ 8 ಜನ ಸಂಸದರು ಸೋಮವಾರ ರಾತ್ರಿಯಿಡೀ ಸಂಸದ್ ಭವನದ ಎದುರಿನ ಹುಲ್ಲುಹಾಸಿನ ಮೇಲೆ ಕುಳಿತು ಅಹೋರಾತ್ರಿ ಧರಣಿ ನಡೆಸಿದ್ದಾರೆ.

ಮಂಗಳವಾರ ಬೆಳಗ್ಗೆಯೇ ಧರಣಿ ನಿರತರ ಬಳಿಗೆ ಟೀ ವಿತರಿಸಲು ಸ್ವತಃ ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ತೆರಳಿದ್ದರು.  ಆದರೆ ಧರಣಿ ನಿರತ ಸಂಸದರು ಟೀ ತೆಗೆದುಕೊಳ್ಳಲು ನಿರಾಕರಿಸಿ ಹರಿವಂಶ್‌ರವರನ್ನು ರೈತವಿರೋಧಿ ಎಂದು ಕರೆದಿದ್ದಾರೆ. ಇದರಿಂದ ನೊಂದುಕೊಂಡ ಉಪಸಭಾಪತಿಗಳು ಒಂದು ದಿನದ ಕಾಲ ಉಪವಾಸ ವ್ರತ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ.

ಹರಿವಂಶ್ ಬೆಂಬಲಕ್ಕೆ ನಿಂತಿರುವ ಪ್ರಧಾನಿ ಮೋದಿಯವರು “ವೈಯಕ್ತಿಕವಾಗಿ ತಮ್ಮ ಮೇಲೆ ದಾಳಿ ನಡೆಸಿದವರೆಗೆ ಟೀ ಕೊಡಲು ಮುಂದಾಗಿರುವ ಅವರ ವಿಶಾಲ ಹೃದಯದ ನಿಲುವನ್ನು ಬೆಂಬಲಿಸುತ್ತೇನೆ’ ಎಂದಿದ್ದಾರೆ.

ಉಪಸಭಾಪತಿಗಳು ರೈತವಿರೋಧಿ ಮಸೂದೆಗಳನ್ನು ಜಾರಿಗೊಳಿಸಲು ಆಡಳಿತ ಸರ್ಕಾರಕ್ಕೆ ಪ್ರಜಾಪ್ರಭುತ್ವ ವಿರೋಧಿಯಾಗಿ ಸಹಾಯ ಮಾಡಿದ್ದಾರೆ. ಮೂರು ದಿನಗಳ ಕಾಲ ಆ ಮಸೂದೆಗಳ ಬಗೆಗೆ ಚರ್ಚೆ ನಡೆಸಬೇಕೆಂದು ಮನವಿಯನ್ನು ತಳ್ಳಿಹಾಕಿದ್ದಾರೆ. ಅಲ್ಲದೇ ನೇರ ಮತದಾನಕ್ಕೆ ಒತ್ತಾಯಿಸಿದ ಪ್ರತಿಪಕ್ಷಗಳ ಮನವಿಯನ್ನು ತಿರಸ್ಕರಿಸಿ ಧ್ವನಿಮತದ ಮೂಲಕ ಮಸೂದೆ ಜಾರಿ ಮಾಡಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಇದೇ ವೇಳೆ “ನೀವು ನನ್ನನ್ನು ಅಮಾನತ್ತು ಮಾಡಬಹುದು. ಆದರೆ ನಿಶಬ್ದಗೊಳಿಸಲು ಸಾಧ್ಯವಿಲ್ಲ” ಎಂದು ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ’ಬ್ರಿಯೆನ್ ಟ್ವೀಟ್ ಮಾಡಿದ್ದಾರೆ.

ಇಂದು ಪ್ರತಿಪಕ್ಷಗಳ ಗೈರುಹಾಜರಿಯ ನಡುವೆಯೂ ಸದನ ಆರಂಭವಾಗಿದ್ದು, ಮತ್ತೊಂದು ಕೃಷಿ ಮಸೂದೆಯ ಮಂಡನೆಗೆ ಸಿದ್ಧತೆ ನಡೆದಿದೆ ಎನ್ನಲಾಗಿದೆ.

Donate Janashakthi Media

Leave a Reply

Your email address will not be published. Required fields are marked *