ಬೇಬಿ ಬೆಟ್ಟದಲ್ಲಿ ಸ್ಪೋಟಕಗಳು ಪತ್ತೆ : ಸ್ಪೋಟಕಗಳನ್ನು ಹುದುಗಿಸಿಟ್ಟಿದ್ದ ಲೂಟಿಕೋರರು

ಮಂಡ್ಯ: ಗಣಿ ಸ್ಫೋಟದಿಂದ ಕೆಆರ್‌ಎಸ್‌ ಅಸ್ತಿತ್ವಕ್ಕೆ ಅಪಾಯ ಎದುರಾಗಿದ್ದರೆ ಮತ್ತೊಂದು ಕಡೆ ಅಣೆಕಟ್ಟು ವ್ಯಾಪ್ತಿಯ ನಿರ್ಬಂಧಿತ ವಲಯದಲ್ಲಿ ನಿರಂತರವಾಗಿ ಭದ್ರತಾ ವೈಫಲ್ಯಗಳು ಮರುಕಳಿಸುತ್ತಿರುವುದು ಅಣೆಕಟ್ಟೆ ಎಷ್ಟು ಸುರಕ್ಷಿತ ಎಂಬ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನಗಳು ಮೂಡುವಂತೆ ಮಾಡುತ್ತಿವೆ.

ಹೌದು, ಗಣಿಗಾರಿಕೆಯ ಸ್ಫೋಟದಿಂದ ಕೆಆರ್‌ಎಸ್ ಜಲಾಶಯಕ್ಕೆ ಧಕ್ಕೆಯಾಗಲಿದೆ ಎಂಬ ಚರ್ಚೆ ನಡೆಯುತ್ತಿರುವಾಗಲೇ ಅಣೆಕಟ್ಟೆ ಸಮೀಪವಿರುವ ಬೇಬಿಬೆಟ್ಟದಲ್ಲಿ ಸ್ಫೋಟಕಗಳು ಪತ್ತೆಯಾಗಿರುವುದು ಆತಂಕ ಉಂಟು ಮಾಡಿದೆ.

ಶುಕ್ರವಾರ ಮಧ್ಯಾಹ್ನ ಬೇಬಿಬೆಟ್ಟದ ಸುತ್ತಮುತ್ತ ಗ್ರಾಮಸ್ಥರು ಜಾನುವಾರುಗಳನ್ನು ಮೇಯಿಸುತ್ತಿದ್ದವರ ಕಣ್ಣಿಗೆ ಸ್ಫೋಟಕಗಳು ಕಂಡಿವೆ. ಎಲೆಕ್ಟ್ರಿಕ್ ವೈರ್, ಜಿಲೆಟಿನ್ ಕಡ್ಡಿ ಹಾಗೂ ತೋಟಾಗಳು ಪತ್ತೆಯಾಗಿವೆ.

ಗಣಿಗಾರಿಕೆಯಲ್ಲಿ ಕಲ್ಲು ಸಿಡಿಸಲು ಸ್ಫೋಟಕಗಳನ್ನು ಬಳಸಲಾಗುತ್ತಿತ್ತು ಎಂಬುದು ಸಾಬೀತಾಗಿದೆ. ಅಕ್ರಮವಾಗಿ ಸ್ಫೋಟಕಗಳನ್ನು ತಂದು ಯಾರಿಗೂ ಗೊತ್ತಾಗದಂತೆ ಹುದುಗಿಸಿದ್ದಾರೆ. ಜಾನುವಾರು ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಶುಕ್ರವಾರ ಗ್ರಾಮಸ್ಥರ ಕಣ್ಣಿಗೆ ಬಿದ್ದಿವೆ.

ಎರಡು ವಾರಗಳಿಂದ ಪಾಂಡವಪುರದಲ್ಲಿ ಅಕ್ರಮಗಣಿಗಾರಿಕೆ ವಿಚಾರ ಸದ್ದು ಮಾಡುತ್ತಿದ್ದು, ಕೆ.ಅರ್.ಎಸ್ ಸುತ್ತಮುತ್ತ ನಿರಂತರವಾಗಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಅಧಿಕಾರಿಗಳ ಭೇಟಿಗೆ ಹೆದರಿದ ಅಕ್ರಮ ಗಣಿಕೋರರು ಸ್ಪೋಟಕಗಳನ್ನು ಮಣ್ಣಿನಲ್ಲಿ ಮುಚ್ಚಿಟ್ಟಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸುಮಾರು ದಿನಗಳಿಂದ ಮಣ್ಣಿನಲ್ಲಿ ಹುದುಗಿಸಿಟ್ಟಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮಳೆ ಹಾಗೂ ಮಣ್ಣಿನಿಂದ ಕೂಡಿರುವ ಜೀವಂತ ಜಿಲೆಟಿನ್ ಕಡ್ಡಿಗಳು ಮತ್ತು ತೋಟಾಗಳಾಗಿವೆ. ಈ ಸ್ಫೋಟಕಗಳು ಮಕ್ಕಳ ಕೈಗೆ ಸಿಕ್ಕಿದರೆ ದೊಡ್ಡ ಅನಾಹುತ ಸಂಭವಿಸಬಹುದು. ಇದರ ಬಗ್ಗೆ ಸಂಬಂಧಪಟ್ಟ ಪೊಲೀಸರ ನಿರ್ಲಕ್ಷ್ಯ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.

ಜಿಲ್ಲಾಡಳಿತ, ಗಣಿ ಹಾಗೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕನ್ನಂಬಾಡಿ ಅಣೆಕಟ್ಟೆಗೆ ಆಪತ್ತು ಎದುರಾಗಲಿದೆ ಎಂದು ರೈತ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ.

ಕೆಲವು ದಿನಗಳ ಹಿಂದೆ ಕೆಆರ್‌ಎಸ್‌ ಸಮೀಪದಲ್ಲೇ ಡಿಟೋನೇಟರ್‌ ಸೇರಿದಂತೆ ಸ್ಫೋಟಕ ವಸ್ತುಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಹಿಂದಿನಿಂದಲೂ ಹೊರ ರಾಜ್ಯಗಳಿಂದ ಗಣಿ ಪ್ರದೇಶಗಳಿಗೆ ಸ್ಫೋಟಕಗಳನ್ನು ಲಾರಿ ಮತ್ತಿತರ ವಾಹನಗಳಲ್ಲಿ ಸಾಗಿಸಲಾಗುತ್ತಿತ್ತು. ಅಪಾರ ಪ್ರಮಾಣದಲ್ಲಿ ಸ್ಫೋಟಕ ವಸ್ತುಗಳನ್ನು ಲಾರಿಗಳಲ್ಲಿ ಸಾಗಿಸಲಾಗುತ್ತಿದ್ದುದರ ಬಗ್ಗೆ 2018ರಲ್ಲಿ ಶ್ರೀರಂಗಪಟ್ಟಣ ಡಿವೈಎಸ್ಪಿಯಾಗಿದ್ದ ವಿಶ್ವನಾಥ್‌, ಜಿಲ್ಲಾ ಆರಕ್ಷಕ ಅಧೀಕ್ಷಕರಿಗೆ ಸಲ್ಲಿಸಿರುವ ಆರು ಪುಟಗಳ ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದರು. ಬಹುಷಃ ಈ ವರದಿ ಈಗ ಧೂಳು ಹಿಡಿದಿರಬಹುದು.

ಹೊರರಾಜ್ಯಗಳಿಂದ ಸ್ಫೋಟಕಗಳನ್ನು ವಾಹನಗಳಲ್ಲಿ ತರುತ್ತಿದ್ದಾರೆ. ಅವುಗಳನ್ನು ತಡೆಗಟ್ಟುವಲ್ಲಿ ಪೊಲೀಸರೂ ವಿಫಲರಾಗಿದ್ದಾರೆ. ಗಣಿ ಪ್ರದೇಶಗಳಲ್ಲಿ ನಿಷೇಧಿತ ಸ್ಫೋಟಕಗಳು ಬಳಕೆಯಾಗುತ್ತಿದ್ದರೂ ಜಿಲ್ಲಾಡಳಿತ ಅಥವಾ ಪೊಲೀಸ್‌ ಇಲಾಖೆಯಿಂದ ಯಾವುದೇ ಕ್ರಮಗಳು ಜಾರಿಯಾಗದಿರುವುದನ್ನು ನೋಡಿದರೆ ರಾಜಕಾರಣಿಗಳ ಹಿಡಿತದಲ್ಲಿ ಅಕ್ರಮ ಗಣಿಗಾರಿಕೆ ಬಲಾವಾಗಿದೆ ಎಂಬುದನ್ನು ತೋರಿಸುತ್ತಿದೆ.

 

Donate Janashakthi Media

Leave a Reply

Your email address will not be published. Required fields are marked *