ಭಾರತದ ಮೇಲೆ ಸಾಮ್ರಾಜ್ಯಶಾಹಿಯ ದಾದಾಗಿರಿ

ಸ್ವಾವಲಂಬನೆಗೆ ಆದ್ಯತೆ ನೀಡಿದ ನಿಯಂತ್ರಣ ನೀತಿಗಳ ಕಾಲಾವಧಿ ಭಾರತದ ಅಲಿಪ್ತ ವಿದೇಶಾಂಗ ನೀತಿಯೊಂದಿಗೆ ಮತ್ತು ಆಮೂಲಕ ಸಾಮ್ರಾಜ್ಯಶಾಹಿಯ ಬೆದರಿಕೆಯನ್ನು ಎದುರಿಸುವ ಇಚ್ಛಾಶಕ್ತಿ ಮತ್ತು ಸಾಮರ್ಥ್ಯದೊಂದಿಗೆ ತಳಕು ಹಾಕಿಕೊಂಡಿತ್ತು. ಆದರೆ, ಸ್ವಾವಲಂಬನೆಯನ್ನು ಬುಡಮೇಲು ಮಾಡುವ ಬಗ್ಗೆಯೇ ಹೆಮ್ಮೆಪಡುವ ನವ ಉದಾರವಾದಿ ಆಳ್ವಿಕೆಯು ‘ಭಾರತದಲ್ಲಿ ತಯಾರಿಕೆ ಮಾಡಿ’ ಎಂದು ವಿದೇಶಿ ಬಂಡವಾಳವನ್ನು ಆಹ್ವಾನಿಸುತ್ತದೆ. ಅಭಿವೃದ್ಧಿಶೀಲ ದೇಶವನ್ನು ಅದರ ಸ್ವಾವಲಂಬನೆಯ ಪ್ರಯತ್ನಗಳಿಂದ ದೂರ ಸರಿಯುವಂತೆ ಮಾಡುವುದನ್ನೇ ಮೂಲೋದ್ದೇಶವಾಗಿ ಹೊಂದಿರುವ ನವ ಉದಾರವಾದವನ್ನು ಒಪ್ಪಿಕೊಂಡ ದೇಶವು ತೋಳು ತಿರುಚುವ ಸಾಮ್ರಾಜ್ಯಶಾಹಿಗೆ ತನ್ನನ್ನು ತಾನೇ ಗುರಿಯಾಗಿ ಮಾಡಿಕೊಳ್ಳುತ್ತದೆ, ಸಾಮ್ರಾಜ್ಯಶಾಹಿಯ ದಾದಾಗಿರಿಗೆ ಶರಣಾಗಲು ಮುಂದಾಗುತ್ತದೆ. ನವ ಉದಾರವಾದದ ಅನುಸರಣೆಯು ದೇಶದ ಸ್ವಾತಂತ್ರ‍್ಯವನ್ನು ನಿರ್ಬಂಧಿಸಿದೆ. ಡೊನಾಲ್ಡ್ ಟ್ರಂಪ್‌ರ ದಾದಾಗಿರಿಯ ಮಂಗಾಟಗಳು ಈ ಅಂಶವನ್ನು ಧಾರಾಳವಾಗಿ ಸ್ಪಷ್ಟಪಡಿಸುತ್ತವೆ.

ಪ್ರೊ. ಪ್ರಭಾತ್ ಪಟ್ನಾಯಕ್

ಅನು: ಕೆ.ಎಂ.ನಾಗರಾಜ್

ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಭಾರತದ ಜನತೆ ಸಾಧಿಸಿದ ವಿಜಯದ 78ನೇ ವಾರ್ಷಿಕೋತ್ಸವದ ಆಚರಣೆಯ ಸಂದರ್ಭದಲ್ಲಿ, ಸಾಮ್ರಾಜ್ಯಶಾಹಿ ಅಮೆರಿಕವು ತನ್ನ ಆದೇಶವನ್ನು ಪಾಲಿಸುವಂತೆ ಭಾರತವನ್ನು ಬಹಿರಂಗವಾಗಿ ಬೆದರಿಸುತ್ತಿರುವುದು ಒಂದು ವಿಪರ್ಯಾಸವೇ ಸರಿ. ಈ ಬೆದರಿಕೆಯು ಸಾಮ್ರಾಜ್ಯಶಾಹಿಯ ಒಂದು ಲಕ್ಷಣವೂ ಹೌದು. ಹಾಗೆ ನೋಡಿದರೆ ಈ 78 ವರ್ಷಗಳ ಅವಧಿಯಲ್ಲಿ ತನ್ನ ಆದೇಶಗಳನ್ನು ಭಾರತವು ಪಾಲಿಸುವಂತೆ ಮಾಡಲು ಸಾಮ್ರಾಜ್ಯಶಾಹಿ ಅಮೆರಿಕವು ಹಲವಾರು ಪ್ರಯತ್ನ ಮಾಡಿದೆ.

ಆದರೆ, ಈ ವರೆಗೆ ಮಾಡಿದ ಪ್ರಯತ್ನಗಳು ಮತ್ತು ಈಗ ಅದು ಮಾಡುತ್ತಿರುವ ಪ್ರಯತ್ನದ ನಡುವೆ ಎರಡು ಮೂಲಭೂತ ವ್ಯತ್ಯಾಸಗಳಿವೆ: ಮೊದಲನೆಯದು, ಈಗ ಮಾಡುತ್ತಿರುವ ಪ್ರಯತ್ನವು “ನಾವು ಹೇಳುತ್ತಿರುವುದನ್ನು ನಿಮ್ಮದೇ ಒಳಿತಿಗಾಗಿ ಮಾಡಿ” ಎನ್ನುವ ನಯವಾದ ಭಾಷೆಯಲ್ಲಿಲ್ಲ; ಅದು ನೇರವಾಗಿ ಗುಂಡು ಹೊಡೆದಂತಿದೆ: “ನಮ್ಮ ಒಳಿತಿಗಾಗಿ ನಾವು ಹೇಳುತ್ತಿರುವುದನ್ನು ಮಾಡದಿದ್ದರೆ ಶಿಕ್ಷೆ ನಿಮಗೆ ತಪ್ಪಿದ್ದಲ್ಲ”. ಎರಡನೆಯ ವ್ಯತ್ಯಾಸವೆಂದರೆ, ಬೆದರಿಕೆಗಳು ಎದುರಾದಾಗ ಹಿಂದಿನ ಅವಧಿಯಲ್ಲಿ ಭಾರತ ಸರ್ಕಾರವು ಮುಲಾಜಿಲ್ಲದೆ ಸೆಟೆದು ನಿಲ್ಲುತ್ತಿತ್ತು; ಆದರೆ, ಇಂದಿನ ಭಾರತ ಸರ್ಕಾರವು ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಮಿಶ್ರ ಸಂಕೇತಗಳನ್ನು ನೀಡುತ್ತಿದೆ. ಈ ಅಂಶವನ್ನು ವಿವರವಾಗಿ ನೋಡೋಣ.

 

ಹೀಗೊಂದು ಚರಿತ್ರೆಯ

ಸುಂದರ ಬಿಸಿನೆಸ್ ಮಾಡೆಲ್

* ಮಾರುವೇಷದ ಸಾಮ್ರಾಜ್ಯಶಾಹಿ

* ಬಲವಂತದ ವ್ಯಾಪಾರ ರಾಜತಾಂತ್ರಿಕತೆ

* ಹಿಂಡಿಕೆಯ ಅರ್ಥಶಾಸ್ತ್ರ

ವ್ಯಂಗ್ಯಚಿತ್ರ: ಸಂದೀಪ ಅಧರ್ಯು

ಟೈಂಸ್ ಆಫ್ ಇಂಡಿಯ

ಸ್ವತಂತ್ರ ಭಾರತವು, ಸೋವಿಯತ್ ಒಕ್ಕೂಟವನ್ನು ಸುತ್ತುವರಿಯುವ ಉದ್ದೇಶದಿಂದ ಸಾಮ್ರಾಜ್ಯಶಾಹಿ ಅಮೆರಿಕವು ರಚಿಸಿದSEATOಮತ್ತುCENTOದಂತಹ ಯಾವುದೇ ವಿಶ್ವ ವ್ಯಾಪೀ ಮಿಲಿಟರಿ ಕೂಟಗಳಿಗೆ ಸೇರಲು ನಿರಾಕರಿಸಿತು. ಬದಲಾಗಿ ಅಲಿಪ್ತ ನೀತಿಯನ್ನು ಅನುಸರಿಸುವುದನ್ನು ಆರಿಸಿಕೊಂಡ ಪರಿಣಾಮವಾಗಿ ಭಾರತವು ಅಮೆರಿಕದ ಕೆಂಗಣ್ಣಿಗೆ ಗುರಿಯಾಯಿತು. ಅಮೆರಿಕದ ಅಂದಿನ ವಿದೇಶಾಂಗ ಕಾರ್ಯದರ್ಶಿ ಜಾನ್ ಫಾಸ್ಟರ್ ಡಲ್ಲೆಸ್ “ನೀವು ನಮ್ಮೊಂದಿಗೆ ಇಲ್ಲವೆಂದರೆ ಆಗ ನೀವು ನಮ್ಮ ವಿರುದ್ಧ” ಎಂಬ ನಿಲುವನ್ನು ಮಂಡಿಸಿದ್ದರು.

ಈ ನಿಲುವಿಗೆ ಅನುಗುಣವಾಗಿ ಅಮೆರಿಕವು ಭಾರತವನ್ನು ಹಗೆತನದಿಂದಲೇ ನಡೆಸಿಕೊಂಡಿತ್ತು. ಪಂಚವಾರ್ಷಿಕ ಯೋಜನೆಗಳ ಮೂಲಕ ಅಭಿವೃದ್ಧಿ ಸಾಧಿಸುವ ಮಹತ್ವಾಕಾಂಕ್ಷೆ ಹೊಂದಿದ್ದ ಅಂದಿನ ವರ್ಷಗಳಲ್ಲಿ ಸ್ವಾವಲಂಬನೆ, ಸಾರ್ವಜನಿಕ ವಲಯದ ನೇತೃತ್ವದಲ್ಲಿ ಭಾರೀ ಕೈಗಾರಿಕಾರಿಕೆಗಳಿಗಾಗಿ ಒಂದು ತಳಹದಿಯನ್ನು ನಿರ್ಮಿಸುವುದು ಮತ್ತು ಅರ್ಥವ್ಯವಸ್ಥೆಯ ಮೇಲೆ ಮುಂದುವರೆದ ದೇಶಗಳ ಬಂಡವಾಳಗಾರರು ಹೊಂದಿದ್ದ ಹಿಡಿತವನ್ನು ತೆಗೆದುಹಾಕುವುದಕ್ಕೆ ಒತ್ತು ನೀಡಲಾಗುತ್ತಿತ್ತು. ಅಮೆರಿಕದಿಂದಾಗಲಿ ಅಥವಾ ಅದು ನಿಯಂತ್ರಿಸುವ ವಿಶ್ವಬ್ಯಾಂಕ್‌ನಂತಹ ಸಂಸ್ಥೆಗಳಿಂದಾಗಲಿ ಯಾವುದೇ “ಅಭಿವೃದ್ಧಿ ನೆರವು” ಬರಲಿಲ್ಲ. ಭಾರತಕ್ಕೆ ಆಗಾಗ ಭೇಟಿ ನೀಡುತ್ತಿದ್ದ ಅಮೇರಿಕದ ಅನೇಕ ಆರ್ಥಿಕ “ತಜ್ಞರು” ಸ್ವಾವಲಂಬನೆಯ ಮೇಲಿನ ಈ ಆದ್ಯತೆಗೆ ಅಭಿವ್ಯಕ್ತಿ ನೀಡಿದ ಮಹಾಲನೋಬಿಸ್ ಕಾರ್ಯತಂತ್ರದ ವಿರುದ್ಧ “ಸಲಹೆ” ನೀಡಿದರು. (ಡೇನಿಯಲ್ ಮತ್ತು ಆಲಿಸ್ ಥಾರ್ನರ್ ಅವರ “Land and Labour in India”ಎಂಬ ಪುಸ್ತಕದಲ್ಲಿರುವ “Ploughing the Plan Under”ಎಂಬ ಪ್ರಬಂಧವನ್ನು ನೋಡಿ).

ಇದನ್ನೂ ಓದಿ: ಬೆಂಗಳೂರು ನಗರ ವಿವಿ ಯ ಹೆಸರು ಡಾ.ಮನಮೋಹನ್ ಸಿಂಗ್ ವಿವಿ ಎಂದು ಮರು ನಾಮಕರಣ

ಆದರೆ, ಸೋವಿಯತ್ ಒಕ್ಕೂಟದ ಅಚಲ ಬೆಂಬಲದೊಂದಿಗೆ, ಭಾರತವು ತನ್ನ ಅಲಿಪ್ತ ವಿದೇಶಾಂಗ ನೀತಿ ಮತ್ತು ಆರ್ಥಿಕ ಸ್ವಾವಲಂಬನೆಯ ನೀತಿಯನ್ನು ಮುಂದುವರೆಸಿತು ಮತ್ತು ಅರ್ಥವ್ಯವಸ್ಥೆಯ ಮೇಲೆ ಮುಂದುವರೆದ ದೇಶಗಳ ಬಂಡವಾಳಗಾರರು ಹೊಂದಿದ್ದ ಪ್ರಾಬಲ್ಯವನ್ನು ಎದುರಿಸಲು ಸಾರ್ವಜನಿಕ ವಲಯವನ್ನು ಬಳಸಿಕೊಂಡಿತು. ವಿದೇಶಿ ವಿನಿಮಯವನ್ನು ಒಂದು ತೀವ್ರ ಸ್ವರೂಪದ ಪಡಿತರಕ್ಕೆ ಒಳಪಡಿಸಬೇಕಾಗಿ ಬಂತು ಮತ್ತು ವರ್ಷಗಳ ಕಾಲ ಅದನ್ನು ಅನುಸರಿಸಿತೂ ಕೂಡ. ಡಲ್ಲೆಸ್ ಮರಣಾನಂತರ, 1950ರ ದಶಕದ ಅಂತ್ಯದ ವೇಳೆಗೆ, ತಾನು ತಳೆದ ವಿರೋಧಿ-ನಿಲುವು ನೀತಿಗಳು ಭಾರತದಂತಹ ದೇಶಗಳನ್ನು ಬಗ್ಗಿಸುವ ಬದಲು ತನಗೇ ಹಾನಿ ಮಾಡುತ್ತಿವೆ (ಮತ್ತು ಸೋವಿಯತ್ ಒಕ್ಕೂಟಕ್ಕೆ ಸಹಾಯ ಮಾಡುತ್ತಿವೆ) ಎಂಬುದನ್ನು ಅರಿತು ಹೆದರಿದ ಅಮೆರಿಕ ನಿಧಾನವಾಗಿ ತನ್ನ ನಿಲುವನ್ನು ಬದಲಿಸಿಕೊಂಡಿತು. ಐವತ್ತರ ದಶಕದ ಉತ್ತರಾರ್ಧದಲ್ಲಿ ಐಸೆನ್‌ಹೋವರ್ ಭಾರತಕ್ಕೆ ಭೇಟಿ ನೀಡಿದ ನಂತರ, ವಿಶ್ವಬ್ಯಾಂಕ್‌ನಿಂದ ಅಲ್ಪ ಸ್ವಲ್ಪ “ನೆರವು”, ಅದೂ ಕೂಡ ಮೂಲಸೌಕರ್ಯ ಯೋಜನೆಗಳಿಗಾಗಿ ಮಾತ್ರವೇ, ಬರಲಾರಂಭಿಸಿತು.

ಆನಂತರ, ಬಾಂಗ್ಲಾದೇಶ ಯುದ್ಧದ ಸಮಯದಲ್ಲಿ ಬೆಂದ ಮನೆಯಲ್ಲಿ ಗಳ ಹಿರಿಯುವ ಸ್ವಭಾವದ ಅಮೆರಿಕಕ್ಕೆ ದೊರಕಲಿದ್ದ ಸುವರ್ಣಾವಕಾಶ ಭಾರತದ ಮಧ್ಯಪ್ರವೇಶದಿಂದಾಗಿ ಕೈತಪ್ಪಿಹೋದಾಗ, ಅಮೆರಿಕ ಸರ್ಕಾರವು ಅದೆಷ್ಟು ಕೋಪಗೊಂಡಿತು ಎಂದರೆ ಭಾರತವನ್ನು ಬೆದರಿಸಲು ತನ್ನ ವಿಮಾನವಾಹಕ USS Enterpriseiನೌಕೆಯ ನೇತೃತ್ವದ ತನ್ನ ಟಾಸ್ಕ್ ಫೋರ್ಸ್ 74ನ್ನು ಅದು ಕಲ್ಲತ್ತಾದ ಸಮೀಪಕ್ಕೆ ಕಳುಹಿಸಿತು. ಅಮೆರಿಕದ ಒಣ ಬೆದರಿಕೆಗಳಿಗೆ ಸ್ವಲ್ಪವೂ ತಲೆಕೆಡಿಸಿಕೊಳ್ಳದ ಭಾರತವು ತನ್ನ ಹಾದಿಯಲ್ಲಿ ತನ್ನಷ್ಟಕ್ಕೆ ತಾನು ಸಾಗಿತು ಮತ್ತು ಬಾಂಗ್ಲಾದೇಶವು ಉದಯವಾಗುವಲ್ಲಿ ಅಪಾರ ಸಹಾಯ ಮಾಡಿತು.

 ಸಾಮ್ರಾಜ್ಯಶಾಹಿ ಪ್ರಯತ್ನ ಮಾತ್ರವಲ್ಲ

ಸಾಮ್ರಾಜ್ಯಶಾಹಿ ಅಮೆರಿಕದ ಬೆದರಿಸುವ ಚಾಳಿಯು ಕೇವಲ ಅದರ ಪ್ರಾಬಲ್ಯವನ್ನು ಸ್ಥಾಪಿಸಿಕೊಳ್ಳುವುದಕ್ಕಾಗಿ ಮಾಡುವ ಒಂದು ಸಾಧಾರಣವಾದ ಸಾಮ್ರಾಜ್ಯಶಾಹಿ ಪ್ರಯತ್ನ ಮಾತ್ರವಲ್ಲ, ಕೆಲವು ನಿರ್ದಿಷ್ಟ ಪ್ರಕರಣಗಳನ್ನು ದುರ್ಬಳಕೆ ಮಾಡಿಕೊಂಡು ಈ ದೇಶವನ್ನು ಅಮೆರಿಕದ ಕಾರ್ಯಸೂಚಿಗೆ ಹೊಂದಿಕೊಳ್ಳುವಂತೆ ಮಾಡುವ ಉದ್ದೇಶವನ್ನೂ ಹೊಂದಿದೆ. ಈ ವಿದ್ಯಮಾನವು ತೀರಾ ಹಳೆಯದು. ಇಂತಹ ಬೆದರಿಕೆಗಳನ್ನು ಸ್ವತಂತ್ರ ಭಾರತವು ಈ ಹಿಂದೆ ಯಶಸ್ವಿಯಾಗಿ ಪ್ರತಿರೋಧಿಸಿತ್ತು. ಈಗಿನ ಬೆದರಿಕೆ ಹೊಸದಲ್ಲದಿದ್ದರೂ, ದೇಶವು ನವ ಉದಾರವಾದಿ ಬಂಡವಾಳಶಾಹಿಯನ್ನು ಮತ್ತು ಆ ಮೂಲಕ ಜಾಗತೀಕರಣಗೊಂಡ ಹಣಕಾಸು ಬಂಡವಾಳದ ಪ್ರಾಬಲ್ಯವನ್ನು ಅವಲಂಬಿಸಿಕೊಂಡಿರುವ ಒಂದು ವಿಭಿನ್ನ ಸಂದರ್ಭದಲ್ಲಿ ಪ್ರಕಟಗೊಂಡಿದೆ.

ಡೊನಾಲ್ಡ್ ಟ್ರಂಪ್ ಈಗ ಒಡ್ಡಿರುವ ಬೆದರಿಕೆಯು ಭಾರತಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಈ ಬೆದರಿಕೆಯು ಎರಡು ವಿಷಯಗಳಿಗೆ ಸಂಬಂಧಿಸಿದೆ: ಮೊದಲನೆಯದು, ಸುಂಕಗಳ ಬಗ್ಗೆ. ಈ ವಿಷಯದಲ್ಲಿ ಆಗಸ್ಟ್ 1ರೊಳಗೆ ಒಂದು ದ್ವಿಪಕ್ಷೀಯ ಒಪ್ಪಂದವನ್ನು ಮಾಡಿಕೊಳ್ಳದಿದ್ದರೆ, ಯುಎಸ್ ಮಾರುಕಟ್ಟೆಯಲ್ಲಿ ಭಾರತದ ಸರಕುಗಳ ಮೇಲೆ ಶೇ. 25ರಷ್ಟು ಸುಂಕಗಳನ್ನು ವಿಧಿಸಲಾಗುತ್ತದೆ. ಎರಡನೆಯದು, ರಷ್ಯಾದ ಮೇಲೆ ಪಾಶ್ಚ್ಯಾತ್ಯ ದೇಶಗಳು ವಿಧಿಸಿರುವ ನಿರ್ಬಂಧಗಳನ್ನು ಉಲ್ಲಂಘಿಸಿ ಭಾರತವು ರಷ್ಯಾದಿಂದ ತೈಲವನ್ನು ಖರೀದಿಸುತ್ತಿರುವುದರಿಂದಾಗಿ, ಭಾರತದ ಸರಕುಗಳ ಮೇಲೆ ದಂಡ ರೂಪದ ಸುಂಕಗಳನ್ನು ವಿಧಿಸಿವ ಬೆದರಿಕೆಯನ್ನು ಅಮೆರಿಕ ಹಾಕುತ್ತಿದೆ.

ಇದರ ಜೊತೆಗೆ, ಟ್ರಂಪ್ ಬ್ರಿಕ್ಸ್ ಸಂಘಟನೆಯ ಬಗ್ಗೆ ಕೂಡ ಟೀಕೆ ಮಾಡಿದ್ದಾರೆ. ಈ ಟೀಕೆಗಳು ಭಾರತವನ್ನು ಬ್ರಿಕ್ಸ್ ಸಂಘಟನೆಯಿಂದ ಹೊರಬರುವಂತೆ ಅಥವಾ ಅದು ಸಾಧ್ಯವಾಗದಿದ್ದಲ್ಲಿ ಅಮೇರಿಕದ ಗುಪ್ತಚರನಂತೆ ವರ್ತಿಸುವಂತೆ ಸೂಚ್ಯವಾಗಿ ಹೇಳುತ್ತವೆ. ಇದು ತಕ್ಷಣದಲ್ಲಿ ಪ್ರಸ್ತುತವಾಗುವ ವಿಷಯವಲ್ಲ. ಆದರೆ, ರಷ್ಯಾದ ತೈಲವನ್ನು ಖರೀದಿಸುವ ತಕ್ಷಣದ ಮತ್ತು ಮೂಲಭೂತವಾದ ವಿಷಯದ ಬಗ್ಗೆ ಭಾರತ ಸರ್ಕಾರವು ಮೀನ-ಮೇಷ ಎಣಿಸುತ್ತಿದೆ. ವೈರುಧ್ಯಾತ್ಮಕ ಹೇಳಿಕೆಗಳನ್ನು ನೀಡುತ್ತಿದೆ. ಇದು ಸರ್ಕಾರವು ಅಮೆರಿಕವನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂಬುದನ್ನು ಸೂಚಿಸುತ್ತದೆ.

ರಷ್ಯಾದ ತೈಲವು, ಭಾರತಕ್ಕೆ ಲಭ್ಯವಿರುವ ಮತ್ತು ಯುಎಸ್-ಅನುಮೋದಿಸುವ ಯಾವುದೇ ಮೂಲದಿಂದ ದೊರಕುವುದಕ್ಕಿಂತ ಅಗ್ಗವಾಗಿರುವುದರಿಂದ, ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವಂತೆ ಭಾರತವನ್ನು ಒತ್ತಾಯಿಸುವ ಕ್ರಮವು, ತನ್ನ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಸ್ವತಃ ತಾನೇ ವರ್ತಿಸುವಂತೆ ಮಾಡುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಈ ಒತ್ತಾಯವೇಕೆ? ರಷ್ಯಾದ ಮೇಲೆ ವಿಧಿಸಿರುವ ನಿರ್ಬಂಧಗಳು, ವರ್ಣಭೇದ ನೀತಿಯನ್ನು ಅನುಸರಿಸುತ್ತಿದ್ದ ದಕ್ಷಿಣ ಆಫ್ರಿಕಾದ ವಿರುದ್ಧ ವಿಶ್ವಸಂಸ್ಥೆಯ ಆದೇಶದ ಮೇರೆಗೆ ವಿಧಿಸಿದ ರೀತಿಯ ನಿರ್ಬಂಧಗಳಂತಲ್ಲ.

ಇದನ್ನೂ ನೋಡಿ: ವಚನಾನುಭವ – 32 ಕಟ್ಟಿದ ಲಿಂಗವ ಬಿಟ್ಟು ಹೋದವರಿಗೆ ಲಟ ಲಟ ಹೊಡೆ ಎಂದು ಅಂಬಿಗರ ಚೌಡಯ್ಯ ಹೇಳಿದ್ದು ಯಾಕೆ? Janashakthi

ಇವು ತಮ್ಮ ದಾದಾಗಿರಿಯನ್ನು ಧಿಕ್ಕರಿಸುವ ಕ್ಯೂಬಾ, ಇರಾನ್ ಅಥವಾ ವೆನೆಜುವೆಲಾದಂತಹ ದೇಶಗಳ ಮೇಲೆ ಯುಎಸ್ ಮತ್ತು ಇತರ ಸಾಮ್ರಾಜ್ಯಶಾಹಿ ದೇಶಗಳು ವಿಧಿಸಿರುವ ಏಕಪಕ್ಷೀಯ ನಿರ್ಬಂಧಗಳ ರೀತಿಯವು. ಆದ್ದರಿಂದ, ದೇಶ ದೇಶಗಳನ್ನು ಅಂತಹ ನಿರ್ಬಂಧಗಳನ್ನು ಒಪ್ಪಿಕೊಳ್ಳುವಂತೆ ಬೆದರಿಸುವುದು ಸಾಮ್ರಾಜ್ಯಶಾಹಿಯ ಉದ್ದೇಶ ಈಡೇರಿಕೆಗಾಗಿ ತಮ್ಮ ಸ್ವಂತ ಹಿತಾಸಕ್ತಿಗಳಿಗೆ ವಿರುದ್ಧವಾಗಿ ತಾವೇ ವರ್ತಿಸುವಂತೆ ಮಾಡುತ್ತದೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಯಾವುದೇ ಉನ್ನತ ತತ್ವಗಳ ಸಬೂಬನ್ನೂ ಸಹ ಬಳಸದೆ, ದೇಶ ದೇಶಗಳು ಅಮೆರಿಕದ ಜೊತೆ ಹೊಂದಿಕೊಳ್ಳುವಂತೆ ಕೇಳಲಾಗುತ್ತಿದೆ ಮತ್ತು ತಮಗೆ ನಷ್ಟವನ್ನುಂಟುಮಾಡಿಕೊಳ್ಳುವ ಮೂಲಕ ಸಾಮ್ರಾಜ್ಯಶಾಹಿಯ ಹಿತಾಸಕ್ತಿಗಳನ್ನು ಪೂರೈಸುವಂತೆ ಅವರನ್ನು ಬಹಿರಂಗವಾಗಿ ಮತ್ತು ಸ್ಪಷ್ಟವಾಗಿ ಬೆದರಿಸಲಾಗುತ್ತಿದೆ.

ಚೀನಾ,ಬ್ರೆಜಿಲ್‍ನಂತೆನಿರ್ಣಾಯಕವಾಗಿ ತಿರಸ್ಕರಿಸಿಲ್ಲ, ಏಕೆ?

ಮೋದಿ ಸರ್ಕಾರ ಈ ವಿಷಯದಲ್ಲಿ ಟ್ರಂಪ್ ಅವರನ್ನು ಧೈರ್ಯವಾಗಿ ಮತ್ತು ನಿರ್ಣಾಯಕವಾಗಿ ತಿರಸ್ಕರಿಸಿಲ್ಲ, ಏಕೆ? ಚೀನಾ ದೇಶದ ಮಾತಿರಲಿ, ಬ್ರೆಜಿಲ್‌ನಂತಹ ಒಂದು ಬಂಡವಾಳಶಾಹಿ ದೇಶದ ಸರ್ಕಾರವೂ ಸಹ ಟ್ರಂಪ್‌ರನ್ನು ಧೈರ್ಯದಿಂದ ಎದುರಿಸಿದೆ. ಬ್ರೆಜಿಲ್ ಸರಕುಗಳ ಮೇಲೆ ಶೇ. 50ರಷ್ಟು ಸುಂಕವನ್ನು ಟ್ರಂಪ್ ವಿಧಿಸಿದರೆ, ಬ್ರೆಜಿಲ್ ಕೂಡ ಅಮೆರಿಕದ ಸರಕುಗಳ ಮೇಲೆ ಶೇ. 50ರಷ್ಟು ಸುಂಕವನ್ನು ವಿಧಿಸುತ್ತದೆ ಎಂದು ಅಧ್ಯಕ್ಷ ಲೂಲಾ ಘೋಷಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಮೋದಿಯವರ ಪುಕ್ಕಲತನವನ್ನು ಎತ್ತಿ ತೋರಿಸಿರುವುದು ಮತ್ತು ಅದನ್ನು ಬಾಂಗ್ಲಾದೇಶ ಯುದ್ಧದ ಸಮಯದಲ್ಲಿ ಅಮೆರಿಕದ ಅಂದಿನ ಅಧ್ಯಕ್ಷ ನಿಕ್ಸನ್ ಎದುರು ಇಂದಿರಾ ಗಾಂಧಿಯರು ತೋರಿದ ದಿಟ್ಟತನದೊಂದಿಗೆ ಹೋಲಿಕೆ ಮಾಡಿರುವುದು ಸರಿಯಾಗಿಯೇ ಇದೆ (ಇಂದಿರಾ ಅವರ ಕಣ್ಣಿನಲ್ಲಿ ಕಣ್ಣಿಟ್ಟು ಮಾತಾಡಲು ತಾನು ಹೆದರಿದ್ದಾಗಿ ನಿಕ್ಸನ್ ಒಮ್ಮೆ ಒಪ್ಪಿಕೊಂಡಿದ್ದರು).

ಆದರೆ, ಒಬ್ಬ ನಾಯಕನು/ನಾಯಕಿಯು ತೋರುವ ಧೈರ್ಯ ಅಥವಾ ಪುಕ್ಕಲತನವು ವರ್ಗ ಆಸರೆಯಿಂದ ಮುಕ್ತವಲ್ಲ. ಹಾಗೆ ನೋಡಿದರೆ, ಲೂಲಾ ಮತ್ತು ಮೋದಿ ಇವರ ನಡುವೆ ಇರುವ ವ್ಯತ್ಯಾಸವೆಂದರೆ, ಲೂಲಾ ಅವರ ಬೇರುಗಳು ಕಾರ್ಮಿಕ ವರ್ಗದಲ್ಲಿ ನೆಲೆಸಿವೆ. ಮೋದಿಯವರು ಕಾರ್ಮಿಕರ ಕೆಲವು ಮತಗಳನ್ನು ಪಡೆಯುತ್ತಾರಾದರೂ, ಮೂಲತಃ ಅವರ ಊರುಗೋಲು ದೊಡ್ಡ ಬೂರ್ಜ್ವಾ ವರ್ಗದಲ್ಲಿ ನೆಲೆಸಿದೆ. ಅದೇ ರೀತಿಯಲ್ಲಿ, ಸಾಮ್ರಾಜ್ಯಶಾಹಿ ಅಮೆರಿಕದ ಬೆದರು ತಂತ್ರಗಳ ಎದುರಾಗಿ ಭಾರತ ಅಂದು ಹೊಂದಿದ್ದ ಮತ್ತು ಇಂದು ಹೊಂದಿರುವ ನಿಲುವುಗಳ ನಡುವೆ ಇರುವ ವ್ಯತ್ಯಾಸಗಳು, ನೆಹರೂ ಅಥವಾ ಇಂದಿರಾ ಗಾಂಧಿ ಮತ್ತು ಮೋದಿ ಇವರುಗಳು ಹೊಂದಿದ ವೈಯಕ್ತಿಕ ಗುಣಲಕ್ಷಣಗಳೊಂದಿಗೆ ಸಂಬAಧ ಹೊಂದಿಲ್ಲ (ವ್ಯಕ್ತಿಗತ ಭಿನ್ನತೆಗಳನ್ನು ಖಂಡಿತವಾಗಿಯೂ ನಿರಾಕರಿಸಲಾಗದು). ಬದಲಿಗೆ, ಇದು ಅಂದಿನ ವಸಾಹತುಶಾಹಿ-ವಿರೋಧಿ ನಿಯಂತ್ರಣ ನೀತಿಗಳ ಆಳ್ವಿಕೆ ಮತ್ತು ಇಂದಿನ ನವ ಉದಾರವಾದಿ ಆಳ್ವಿಕೆ ಇವುಗಳ ನಡುವಿನ ವ್ಯತ್ಯಾಸಕ್ಕೆ ಸಂಬಂಧಪಟ್ಟದ್ದಾಗಿದೆ.

ವ್ಯಂಗ್ಯಚಿತ್ರ: ಸತೀಶ ಆಚಾರ್ಯ, ಫೇಸ್‌ಬುಕ್

ತೋಳು ತಿರುಚುವ ಪ್ರಯತ್ನಗಳಿಗೆ ಗುರಿ

ಒಂದು ದೇಶವು ಅನುಸರಿಸುವ ವಿದೇಶಾಂಗ ನೀತಿ ಮತ್ತು ಅದು ಹೊಂದಿರುವ ಆರ್ಥಿಕ ನೀತಿಗಳ ನಡುವೆ ಒಂದು ನಿಕಟ ಸಂಬಂಧವಂತೂ ಇದ್ದೇ ಇದೆ. ಸ್ವಾವಲಂಬನೆಗೆ ಆದ್ಯತೆ ನೀಡಿದ ನಿಯಂತ್ರಣ ನೀತಿಗಳ ಆಳ್ವಿಕೆಯು ಭಾರತದ ಅಲಿಪ್ತ ವಿದೇಶಾಂಗ ನೀತಿಯೊಂದಿಗೆ ಮತ್ತು ಆಮೂಲಕ ಸಾಮ್ರಾಜ್ಯಶಾಹಿ ಬೆದರಿಕೆಯನ್ನು ಎದುರಿಸುವ ಇಚ್ಛಾಶಕ್ತಿ ಮತ್ತು ಸಾಮರ್ಥ್ಯದೊಂದಿಗೆ ತಳಕು ಹಾಕಿಕೊಂಡಿತ್ತು. ಆದರೆ, ಸ್ವಾವಲಂಬನೆಯನ್ನು ಬುಡಮೇಲು ಮಾಡುವ ಬಗ್ಗೆಯೇ ಹೆಮ್ಮೆಪಡುವ ನವ ಉದಾರವಾದಿ ಆಳ್ವಿಕೆಯು ‘ಭಾರತದಲ್ಲಿ ತಯಾರಿಕೆ ಮಾಡಿ’ ಎಂದು ವಿದೇಶಿ ಬಂಡವಾಳವನ್ನು ಆಹ್ವಾನಿಸುತ್ತದೆ. ಅಭಿವೃದ್ಧಿಶೀಲ ದೇಶವನ್ನು ಅದರ ಸ್ವಾವಲಂಬನೆಯ ಪ್ರಯತ್ನಗಳಿಂದ ದೂರ ಸರಿಯುವಂತೆ ಮಾಡುವುದನ್ನೇ ಮೂಲೋದ್ದೇಶವಾಗಿ ಹೊಂದಿರುವ ನವ ಉದಾರವಾದವನ್ನು ಒಪ್ಪಿಕೊಂಡ ದೇಶವು ತೋಳು ತಿರುಚುವ ಸಾಮ್ರಾಜ್ಯಶಾಹಿಗೆ ತನ್ನನ್ನು ತಾನೇ ಅದರ ಗುರಿಯಾಗಿ ಮಾಡಿಕೊಳ್ಳುತ್ತದೆ.

ಭಾರತದಲ್ಲಿ ನವ ಉದಾರವಾದಿ ಆಳ್ವಿಕೆಯನ್ನು ಪರಿಚಯಿಸಿದಾಗ ಅದರ ಪರವಾಗಿ ಮುಂದಿಟ್ಟ ತರ್ಕವೆಂದರೆ, ಜಾಗತಿಕವಾಗಿ ಚಲನಶೀಲವಾದ ಬಂಡವಾಳವು ಒಂದು ಶಾಶ್ವತ ಹೊಸ ವ್ಯವಸ್ಥೆಯನ್ನು ಪ್ರತಿನಿಧಿಸುತ್ತದೆ. ಬಂಡವಾಳವು ಹರಿದಾಡುವ ಕಾರಣದಿಂದಾಗಿ ಚಟುವಟಿಕೆಗಳು ಮೊದಲು ನೆಲೆಗೊಂಡಿದ್ದ ಜಾಗತಿಕ ಉತ್ತರದಿಂದ ಕಡಿಮೆ-ವೇತನದ ಜಾಗತಿಕ ದಕ್ಷಿಣದ ದೇಶಗಳು ಈಗ ಚಟುವಟಿಕೆಗಳು ನೆಲೆಗೊಳ್ಳುವ ಪ್ರಾಥಮಿಕ ತಾಣಗಳಾಗಿವೆ. ಹಾಗಾಗಿ, ಉತ್ತರದಿಂದ ದಕ್ಷಿಣಕ್ಕೆ ಚಟುವಟಿಕೆಗಳ ಸ್ಥಳಾಂತರವು ದಕ್ಷಿಣದಲ್ಲಿ ಅಭಿವೃದ್ಧಿಯ ಕೊರತೆಯನ್ನು ಮತ್ತು ಬಡತನವನ್ನು ತೊಡೆದುಹಾಕುತ್ತದೆ ಎಂಬುದು ಈ ವಾದದ ತಿರುಳಾಗಿದೆ.

ಈ ವಾದದಲ್ಲಿರುವ ಸಮಸ್ಯೆಯೆಂದರೆ, ಜಾಗತಿಕ ವ್ಯವಸ್ಥೆಯ ಬಗ್ಗೆ ಏನನ್ನೂ ಶಾಶ್ವತವೆಂದು ಪರಿಗಣಿಸುವುದು ಸಾಧ್ಯವಿಲ್ಲ ಎಂಬುದು. ಸಾಮ್ರಾಜ್ಯಶಾಹಿ ರಚಿಸಿದ ವ್ಯವಸ್ಥೆಗಳು ಅದರ ಇಚ್ಛೆಯ ಮೇರೆಗೆ ಬದಲಾಗುತ್ತವೆ ಎಂಬುದು ಈಗ ಸ್ಪಷ್ಟವಾಗುತ್ತಿದೆ ಮತ್ತು ಅಸ್ತಿತ್ವದಲ್ಲಿರುವ ವ್ಯವಸ್ಥೆಯಿಂದ ಸಾಮ್ರಾಜ್ಯಶಾಹಿಯು ಹಿಂದೆ ಸರಿದಾಗ, ಅದರ ಹಿಡಿತದಲ್ಲಿ ಸಿಲುಕಿಕೊಂಡ ಭಾರತದಂತಹ ದಕ್ಷಿಣದ ದೇಶಗಳು ಅದರಿಂದ ಹೊರಬರಲು ಕಷ್ಟಪಡುತ್ತವೆ.

ಒಂದು ದೇಶವು ವ್ಯಾಪಾರ-ಅವಲಂಬಿತವಾದರೆ, ವ್ಯಾಪಾರದಲ್ಲಿ ಉಂಟಾಗುವ ಯಾವುದೇ ಅಡಚಣೆಯು ದೇಶವನ್ನು ಬಹಳವಾಗಿ ತಟ್ಟುತ್ತದೆ. ಹಾಗಾಗಿ, ತನ್ನ ಆರ್ಥಿಕ ನೀತಿಗಳಲ್ಲಿ ಮಹತ್ತರವಾದ ಮರು-ಹೊಂದಾಣಿಕೆಗಳನ್ನು ಮಾಡಿಕೊಳ್ಳಲು ಸಿದ್ಧವಿಲ್ಲದಿದ್ದರೆ, ಅದು ಸಾಮ್ರಾಜ್ಯಶಾಹಿಯು ನಿರ್ಲಜ್ಜವಾಗಿ ಬೆದರಿಸತೊಡಗಿದ ಪ್ರತಿ ಸಂದರ್ಭದಲ್ಲೂ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಆದರೆ, ಇಂತಹ ಒಂದು ಮರು-ಹೊಂದಾಣಿಕೆಯನ್ನು ನವ ಉದಾರವಾದಿ ಆಳ್ವಿಕೆಯ ಪ್ರಧಾನ ಫಲಾನುಭವಿಗಳಾದ ದೊಡ್ಡ ದೊಡ್ಡ ಬೂರ್ಜ್ವಾಗಳು ಮತ್ತು ನಗರ ಮಧ್ಯಮ ವರ್ಗದ ಮೇಲಿನ ಸ್ತರಗಳು ವಿರೋಧಿಸುತ್ತವೆ. ಆದ್ದರಿಂದ ಈ ವಿಭಾಗಗಳ ಹಿತಾಸಕ್ತಿಗಳ ಬಗ್ಗೆ ಕಾಳಜಿ ವಹಿಸುವ ಯಾವುದೇ ಸರ್ಕಾರವು ಸಾಮ್ರಾಜ್ಯಶಾಹಿಯ ದಾದಾಗಿರಿಯ ಆಗ್ರಹಗಳಿಗೆ ಮಣಿಯುತ್ತದೆ.

ಒಂದು ಉದಾಹರಣೆ ಈ ಅಂಶವನ್ನು ಸ್ಪಷ್ಟಪಡಿಸುತ್ತದೆ. ಸುಂಕ ಹೇರುವ ಟ್ರಂಪ್ ಅವರ ಬೆದರಿಕೆ ರೂಪಾಯಿಯನ್ನು ದುರ್ಬಲಗೊಳಿಸುತ್ತದೆ ಎಂಬುದು ಈಗಾಗಲೇ ಸಾಬೀತಾಗಿದೆ. ಹೆಚ್ಚಿನ ಸುಂಕಗಳು ಶುರುವಾಗುತ್ತಿದ್ದಂತೆಯೇ, ಬಂಡವಾಳವು ಹೊರಹರಿಯುವುದನ್ನು ನಿಯಂತ್ರಿಸದ ಹೊರತು ರೂಪಾಯಿಯು ಮತ್ತಷ್ಟು ಕುಸಿಯುತ್ತದೆ. ಮತ್ತು, ಅದರ ಜೊತೆಗೆ, ವಿದೇಶಿ ವಿನಿಮಯ ವಲಯವನ್ನು ನಿರ್ವಹಿಸುವುದಕ್ಕಾಗಿ ವಿದೇಶಿ ವ್ಯಾಪಾರದ ಮೇಲೆ ನಿಯಂತ್ರಣ ಹೇರಬೇಕಾಗುತ್ತದೆ. ಈ ಕ್ರಮಗಳು ಅಂತಿಮವಾಗಿ ನವ ಉದಾರವಾದಿ ಆಳ್ವಿಕೆಯಿಂದ ಹಿಂದೆ ಸರಿದು ಅದರ ಜಾಗದಲ್ಲಿ ಒಂದು ಪರ್ಯಾಯ ಆಳ್ವಿಕೆಯನ್ನು ತರಬೇಕಾಗುತ್ತದೆ. ಆದರೆ, ಜಾಗತೀಕರಣಗೊಂಡ ಹಣಕಾಸು ಬಂಡವಾಳದೊಂದಿಗೆ ಒಂದಾಗಿರುವ ದೊಡ್ಡ ಬೂರ್ಜ್ವಾಗಳು ಇದನ್ನು ಪ್ರತಿರೋಧಿಸುತ್ತಾರೆ ಮತ್ತು ಇಂತಹವರ ಹಿತಾಸಕ್ತಿಗಳಿಗೆ ಬದ್ಧವಾಗಿರುವ ಸರ್ಕಾರವು ಅಂತಹ ಯಾವುದೇ ಪರ್ಯಾಯವನ್ನು ಪರಿಗಣಿಸುವುದಿಲ್ಲ. ಬದಲಿಗೆ, ಸಾಮ್ರಾಜ್ಯಶಾಹಿಯ ದಾದಾಗಿರಿಗೆ ಶರಣಾಗಲು ಮುಂದಾಗುತ್ತದೆ.

ಸಾಮ್ರಾಜ್ಯಶಾಹಿಯಿಂದ ಸ್ವತಂತ್ರವಾಗಿ ಉಳಿಯುವುದು ಮೂಲಭೂತವಾಗಿ ನವ ಉದಾರವಾದಿ ಕಾರ್ಯತಂತ್ರವನ್ನು ಅನುಸರಿಸುವುದಕ್ಕೆ ತದ್ವಿರುದ್ಧವಾಗಿದೆ. ಈ ಅಂಶವನ್ನು ಭಾರತದ ಅರ್ಥವ್ಯವಸ್ಥೆಯು 1990ರ ದಶಕದಲ್ಲಿ ದಿಕ್ಕು ಬದಲಾಯಿಸುವುದಕ್ಕಿಂತ ಬಹಳ ಹಿಂದೆಯೇ ಅಧಿಕಾರಕ್ಕೆ ಬಂದ ಭಾರತದ ಸರ್ಕಾರಗಳು ಗುರುತಿಸಿದ್ದವು. ನವ ಉದಾರವಾದದ ಅನುಸರಣೆಯು ದೇಶದ ಸ್ವಾತಂತ್ರ‍್ಯವನ್ನು ನಿರ್ಬಂಧಿಸಿದೆ. ಡೊನಾಲ್ಡ್ ಟ್ರಂಪ್‌ರ ದಾದಾಗಿರಿಯ ಮಂಗಾಟಗಳು ಈ ಅಂಶವನ್ನು ಧಾರಾಳವಾಗಿ ಸ್ಪಷ್ಟಪಡಿಸುತ್ತವೆ.

 

 

 

ಹೌಡಿ ಮೋದಿ -ನಮಸ್ತೆ ಟ್ರಂಪ್

ಅಬ್ ಕೀ ಬಾರ್ ಟ್ರಂಪ್ ಸರ್ಕಾರ್

ಟಾರೀಫ್-ಟಾರೀಫ್-ಟಾರೀಫ್-ಟಾರೀಫ್

 

ವ್ಯಂಗ್ಯಚಿತ್ರ: ಸೌಮ್ಯದೀಪ್ ಸಿನ್ಹ, ದಿ ಹಿಂದು

Donate Janashakthi Media

Leave a Reply

Your email address will not be published. Required fields are marked *