ಬೆಂಗಳೂರು: ನಗರದ ಬಡಾವಣೆಗಳಲ್ಲಿ ಮೂಲಸೌಕರ್ಯ ಕಲ್ಪಿಸದ ಹಿನ್ನೆಲೆ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ಕ್ಕೆ ಕರ್ನಾಟಕ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ನ್ಯಾಯಾಲಯದ ಆದೇಶಗಳಿಗೆ ಬಿಡಿಎ ಅಧಿಕಾರಿಗಳು ಬೆಲೆ ಕೊಡುತ್ತಿಲ್ಲ. ಆಗಾಗ ಪ್ರಧಾನಮಂತ್ರಿ ಬಂದರೆ ರಸ್ತೆಗಳು ಸರಿಹೋಗಬಹುದು ಎಂದು ವಿಭಾಗೀಯ ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.
ನಗರಕ್ಕೆ ಪದೇ ಪದೇ ಪ್ರಧಾನ ಮಂತ್ರಿ, ರಾಷ್ಟ್ರಪತಿ ಬಂದರೆ ರಸ್ತೆಗಳು ಉತ್ತಮಗೊಳ್ಳಬಹುದು. ಜೂನ್ 20ರಂದು ಪ್ರಧಾನಿ ಮೋದಿ ಪ್ರವಾಸದ ಸಂದರ್ಭದಲ್ಲಿ 23 ಕೋಟಿ ಖರ್ಚು ಮಾಡಿ ಗುಂಡಿ ಮುಚ್ಚಿದ್ದೀರಾ. ಪ್ರತಿಬಾರಿ ಬೇರೆ ಬೇರೆ ಮಾರ್ಗವಾಗಿ ಪ್ರಧಾನಿ ಬಂದರೆ ಉತ್ತಮ. ಅವರನ್ನು ಮೆಚ್ಚಿಸಲಾದರೂ ರಸ್ತೆಗಳನ್ನು ಸರಿಪಡಿಸಬಹುದು ಎಂದು ನ್ಯಾಯಮೂರ್ತಿ ಬಿ.ವೀರಪ್ಪ, ನ್ಯಾಯಮೂರ್ತಿ ಕೆ.ಎಸ್.ಹೇಮಲೇಖಾರ ಪೀಠ ಅಭಿಪ್ರಾಯ ಪಟ್ಟಿದೆ.
ಎರಡು ವಾರದಲ್ಲಿ ಅರ್ಜಿದಾರರ ನಿವೇಶನಕ್ಕೆ ಸೌಕರ್ಯ ಒದಗಿಸಿ ಎಂದು ಬಿಡಿಎಗೆ ಕೋರ್ಟ್ ಸೂಚನೆ ನೀಡಿದೆ. ಆದರೂ ಸಹ ವಿಶ್ವೇಶ್ವರಯ್ಯ ಬಡಾವಣೆ ನಿವೇಶನಕ್ಕೆ ಸೌಕರ್ಯ ಕಲ್ಪಿಸದ ಹಿನ್ನೆಲೆ ಪಿ.ಶಾರದಮ್ಮ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ಬಿಡಿಎಗೆ ತರಾಟೆಗೆ ತೆಗೆದುಕೊಂಡಿದೆ.
ಮೋದಿ ಸಂಚರಿಸುವ ರಸ್ತೆ ಕಾಮಗಾರಿಗೆ ಬಿಬಿಎಂಪಿಯಿಂದ 23 ಕೋಟಿ ರೂ. ಖರ್ಚು
ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ದೇಶದ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಜೂನ್ 20-21ರಂದು ಆಗಮಿಸಿದ್ದರು. ಮೋದಿ ರಾಜ್ಯಕ್ಕೆ ಆಗಮಿಸುತ್ತಾರೆಂದು ಬಿಬಿಎಂಪಿ ಬೆಂಗಳೂರಿನಲ್ಲಿ ಕೆಲ ರಸ್ತೆಗಳನ್ನು ಸರಿಪಡಿಸಿದೆ. ಮೋದಿ ಸಂಚರಿಸಿದ್ದ ರಸ್ತೆಮಾರ್ಗ ಅಭಿವೃದ್ಧಿಗೆಂದು ಬಿಬಿಎಂಪಿ ಒಟ್ಟು 23 ಕೋಟಿ ರೂ. ಖರ್ಚು ಮಾಡಿದೆ.
ನಗರದ 14 ಕಿ.ಮೀ. ರಸ್ತೆ ಡಾಂಬರೀಕರಣ, ಫುಟ್‌ಪಾತ್ ಸ್ಲ್ಯಾಬ್, ಬೀದಿ ದೀಪ, ಮರಗಳ ರೆಂಬೆ ಕಡಿತ, ಚರಂಡಿ ಸ್ವಚ್ಛತೆಗೆ ಬಿಬಿಎಂಪಿ ಸುಮಾರು 23 ಕೋಟಿ ರೂ. ಖರ್ಚು ಮಾಡಿದೆ. ಮುಖ್ಯ ಆಯುಕ್ತರ ವಿವೇಚನಾ ಅನುದಾನದಡಿಯಲ್ಲಿ ಈ ಹಣ ಖರ್ಚಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ಮಾಹಿತಿ ನೀಡಿದ್ದಾರೆ.