ರಾಣೇಬೆನ್ನೂರ: ತಾಲ್ಲೂಕಿನ ಸೋಮಲಾಪುರ ಗ್ರಾಮದ ಪ್ರಶಾಂತ ಚಂದ್ರಪ್ಪ ಬಾತಪ್ಪನವರ ಎಂಬ ವಿದ್ಯಾರ್ಥಿ ರಾಣೇಬೆನ್ನೂರ ನಗರದಲ್ಲಿರುವ ದೇವಿಕಾ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ವಿಜ್ಞಾನ ವಿಭಾಗದ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು. ವಿದ್ಯಾರ್ಥಿಯು 2024-25 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಉನ್ನತ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ವಸತಿ ನಿಲಯ ಬಯಸಿ ಪ್ರವೇಶಾತಿಗಾಗಿ ಅರ್ಜಿಯನ್ನು ದಿನಾಂಕ:07.06.2024 ಸಲ್ಲಿಸಿದ್ದಾರೆ.
ವಿದ್ಯಾರ್ಥಿ ಪ್ರಶಾಂತ ಬಾತಪ್ಪನವರ ಹಿಂದಿನ ಶೈಕ್ಷಣಿಕ ವರ್ಷದಲ್ಲಿ 90% ಅಂಕಗಳನ್ನು ಗಳಿಸಿದ ಅತ್ಯುತ್ತಮ ವಿದ್ಯಾಭ್ಯಾಸದಲ್ಲಿ ತೊಡಗಿದ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರೂ ವಸತಿ ನಿಲಯ ಆಯ್ಕೆ ಪಟ್ಟಿಯಲ್ಲಿ ಆಯ್ಕೆ ಮಾಡಿಲ್ಲದಿರುವುದು ದುರಂತವೇ ಸರಿ. ವಿದ್ಯಾರ್ಥಿ ಹಾಗೂ ಪಾಲಕರು ಅರ್ಜಿ ಹಾಕಿದ ದಿನದಿಂದ ಇಲ್ಲಿಯವರೆಗೆ ಅರ್ಜಿ ಫಾರಂ ಹಿಡಿದು ಬಿಸಿಎಮ್ ಇಲಾಖೆಯ ತಾಲ್ಲೂಕ ಕಛೇರಿ ಹಾಗೂ ವಸತಿ ನಿಲಯ ಎನ್ನುತ್ತ ಅಲೆದಾಡಿದ್ದರು ಹಾಸ್ಟೆಲ್ ಸೌಲಭ್ಯ ಸಿಕ್ಕಿಲ್ಲ.
ಸಾರ್ವಜನಿಕರ ಸಂಖ್ಯೆಗೆ ಅನುಗುಣವಾಗಿ ಬಸ್ ಗಳಿಲ್ಲ ಇದ್ದ ಬಸ್ಸುಗಳು ಸರಿಯಾದ ಸಮಯಕ್ಕೆ ಬರುವುದಿಲ್ಲ ಹೀಗಿರುವಾಗ 30 ಕಿಮೀ ದೂರದಲ್ಲಿರುವ ಊರಿನಿಂದ ರಾಣೇಬೆನ್ನೂರ ನಗರಕ್ಕೆ ವಿದ್ಯಾಭ್ಯಾಸಕ್ಕಾಗಿ ಓಡಾಡುವುದೇ ದೊಡ್ಡ ಸಮಸ್ಯೆಯಗಿದೆ. ವಿದ್ಯಾರ್ಥಿಯು ಜೂನ್ ತಿಂಗಳಿಂದ ಖಾಸಗಿ ವಸತಿ ನಿಲಯದಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದು. ವಸತಿ ನಿಲಯ ಸೌಲಭ್ಯಗಳಿಂದ ವಂಚಿತರಿಗಾಗಿಯೇ ಇರುವ “ವಿದ್ಯಾಶ್ರೀ ಯೋಜನೆ ಅಡಿಯಲ್ಲಿ ವಿದ್ಯಾರ್ಥಿ ವೇತನ (ಸ್ಕಾಲರ್ಶಿಪ್) ಅರ್ಜಿ ಸಲ್ಲಿಸುವಾಗು ಹಾಸ್ಟೆಲ್ ಆಯ್ಕೆ ಆಗಿದೆ ಸ್ಕಾಲರ್ಶಿಪ್ ಅರ್ಜಿ ಹಾಕುವುದಕ್ಕೆ ಬರುವುದಿಲ್ಲ ಎಂದು ಅಧಿಕೃತವಾಗಿ ಅಂತರ್ಜಾಲದ ಸ್ಟೇಟ್ಸ್ ತೋರಿಸುತ್ತಿದೆ. ಈತ ವಸತಿ ನಿಲಯವು ಇಲ್ಲ ವಿದ್ಯಾರ್ಥಿ ವೇತನವು ಇಲ್ಲ ವೆಂದು ವಿದ್ಯಾರ್ಥಿ ಹಾಗೂ ಪಾಲಕರು ಬೇಸರದಿಂದ ಅಧಿಕಾರಿಗಳನ್ನು ವಿಚಾರಿಸಿದಾಗ ವಸತಿ ನಿಲಯ ಆಯ್ಕೆ ಆಗಿದೆ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ಹಾಗೂ ಪಾಲಕರು ವಸತಿ ನಿಲಯ ಸೌಲಭ್ಯ ಹಾಗೂ ಸ್ಕಾಲರ್ಶಿಪ್ ನಿಂದ ವಂಚನೆ ಮಾಡಿದ ಅಧಿಕಾರಿಗಳು ಮೇಲೆ ಸೂಕ್ತ ಕ್ರಮಕೈಗೊಳಬೇಕು, ಜೂನ್ ತಿಂಗಳಿಂದ ಖಾಸಗಿ ವಸತಿ ನಿಲಯಕ್ಕೆ ಸಾಲ ಮಾಡಿ ಖರ್ಚು ಮಾಡಲಾಗಿದ ವೆಚ್ಚವನ್ನು ತಪ್ಪಿತಸ್ಥ ಅಧಿಕಾರಿಗಳಿಂದ ಕೊಡಿಸಬೇಕು. ಪ್ರಸ್ತುತ ದಿನದಿಂದ ವಸತಿ ಸೌಲಭ್ಯ ನೀಡಬೇಕು ಒತ್ತಾಯಿಸಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಕ್ಷಯ್ ಶ್ರೀಧರ ಅವರಿಗೆ ಮನವಿ ಸಲ್ಲಿಸಿದ್ದಾರೆ. ಮನವಿಗೆ ಸ್ಪಂದಿಸದಿದ್ದರೆ ನ್ಯಾಯಲಯದ ಮೊರೆ ಹೋಗುತ್ತೇವೆ ಎಂದು ವಿದ್ಯಾರ್ಥಿ ಪ್ರಶಾಂತ ಬಾತಪ್ಪನವರ ಹಾಗೂ ಪಾಲಕರು ತಿಳಿಸಿದರು.
ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್ಐ) ಜಿಲ್ಲಾ ಸಮಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಬೆನ್ನಿಗೆ ನಿತ್ತಿದ ವಿದ್ಯಾರ್ಥಿ ಸಂಘಟನೆಯು ಅನ್ಯಾಯವನ್ನು ಖಂಡಿಸಿದ್ದಾರೆ. ಬಿಸಿಎಮ್ ಇಲಾಖೆಯ ಯಡವಟ್ಟಿನಿಂದ ವಿದ್ಯಾರ್ಥಿ ಜೀವನಕ್ಕೆ ಕೊಡಲಿ ಪೆಟ್ಟು ನೀಡಿದೆ. ವಿದ್ಯಾರ್ಥಿ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮುಂದಾಗಬೇಕು. ನಿರ್ಲಕ್ಷ್ಯ ವಹಿಸಿದರೆ ಉಪಲೋಕಾಯುಕ್ತರು ರಾಣೇಬೆನ್ನೂರ ನಗರಕ್ಕೆ ಬರುವ ದಿನವೇ ಇಲಾಖೆಯ ಎದುರ ವಿದ್ಯಾರ್ಥಿ ಹಾಗೂ ಪಾಲಕರು ಜೊತೆಗೆ ಧರಣಿ ನಡೆಸಲಾಗುವುದು ಎಂದು ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಆಗ್ರಹಿಸಿದ್ದಾರೆ.