ಬೆಂಗಳೂರು: ಕಳೆದ ಮೂರು ದಿನಗಳಿಂದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಿಲ್ಲಿಸಿದ್ದ ಭೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಇಂದು ವಿಲ್ಲಾಗಳು ಸೇರಿದಂತೆ 5 ಕಡೆಗಳಲ್ಲಿ ತೆರವು ಕಾರ್ಯ ನಡೆಸಿತು.
ಒತ್ತುವರಿ ತೆರವುಗೊಳಿಸಲು ಜೆಸಿಬಿಗಳನ್ನು ಬಳಸಲಾಗುತ್ತಿದ್ದು, ಪ್ರತಿಷ್ಠಿತ ವಿಪ್ರೋ, ಸಲಾರ್ ಪುರಿಯಾ ಸಂಸ್ಥೆಗಳಿಗೆ ಬಿಬಿಎಂಪಿ ಬಿಸಿ ಮುಟ್ಟಿಸಿದೆ. ಬೆಳ್ಳಂದೂರು ಕೆರೆಯ ಕೋಡಿಗೆ ಅಡ್ಡಲಾಗಿ ನಿರ್ಮಾಣ ಮಾಡಿರುವ ಸೇತುವೆ ತೆರವುಗೊಳಿಸಿತು. ಮಹಾದೇವಪುರ ವಲಯ, ದಾಸರಹಳ್ಳಿ ವಲಯ ಸೇರಿದಂತೆ ಹಲವು ಭಾಗಗಳಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ನಡೆಯಿತು.
ಪ್ರಮುಖವಾಗಿ ವಿಪ್ರೋ, ಸಲಾರ್ ಪುರಿಯಾ ಸಂಸ್ಥೆಯಿಂದ ಸಾವಳಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಯನ್ನು ಕಬಳಿಕೆ ಮಾಡಿರುವ ಆರೋಪವಿದೆ. ಕಂದಾಯ ಅಧಿಕಾರಿಗಳು ಸರ್ವೇ ಕಾರ್ಯ ನಡೆಸಿ ಗುರುತು ಮಾಡಿದ್ದರು. ಅದರಂತೆ ಇಂದು 10 ಅಡಿಯಷ್ಟು ಒತ್ತುವರಿ ಜಾಗವನ್ನು ತೆರವುಗೊಳಿಸಲಾಗಿದೆ ಎಂದು ಮಹಾದೇವಪುರ ವಲಯದ ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಬಿಬಿಎಂಪಿ ಸಹಾಯ ಎಂಜಿನಿಯರ್ ರಾಘವೇಂದ್ರ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಹಾಗೂ ಬಿಬಿಎಂಪಿಯ ಮಾರ್ಷಲ್‌ಗಳು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದರು.
ಮಾರತ್ತಹಳ್ಳಿಯ ಪೊಲೀಸ್ ಠಾಣೆ ಹಿಂದೆ ಇರುವ ಬೆಂಗಳೂರು ನೀರು ಸರಬರಾಜು ಮತ್ತು ಒಂಚರಂಡಿ ಮಂಡಳಿಯ ತ್ಯಾಜ್ಯ ನೀರು ಸಂಸ್ಕರಣಾ ಘಟಕ(ಎಸ್‌ಟಿಪಿ) ಸಮೀಪದ ವಿಶಾಲ ಸೇತುವೆಯನ್ನು ಕೆಡವಲಾಗುತ್ತಿದೆ. ಜತೆಗೆ ಇಲ್ಲಿನ ರಾಜಕಾಲುವೆ ಮೇಲಿರುವ ಮನೆಗಳನ್ನು ತೆರವು ಮಾಡಲಾಗಿದೆ.
ಕಸವನಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಈ ಮೊದಲೇ ಗುರುತಿಸಲಾಗಿದ್ದ ವಿಪ್ರೋ ಕಂಪನಿ, ಸಲಾರ್‌ಪುರಿಯಾ ಹಾಗೂ ಗ್ರೀನ್ ವುಡ್ ರೆಸಿಡೆನ್ಸಿ ಹಾಗೂ ಕಾಡುಗೋಡಿಯ ವಾರ್ಡ್ 83ರಲ್ಲಿ ವಿಜಯಲಕ್ಷ್ಮಿ ಕಾಲೋನಿಯಲ್ಲಿ ಆಕ್ರಮಿಸಿಕೊಂಡ ರಾಜಕಾಲುವೆ ಜಾಗವನ್ನು ತೆರವುಗೊಳಿಸಲಾಗಿದೆ.
ಮಹದೇವಪುರ ವಲಯದಲ್ಲಿ ರಸ್ತೆ ಪಕ್ಕ, ಸೇತುವೆಗಳನ್ನು ತೆರವು ಕಾರ್ಯ ಮಾಡಲಾಗುತ್ತಿದೆ. ಆದರೆ, ರಾಜಕಾಲುವೆ ಒತ್ತುವರಿ ಮಾಡಿಕೊಂಡ ದೊಡ್ಡ ದೊಡ್ಡ ವಿಲ್ಲಾಗಳ ಬಳಿ ಸುಳಿಯದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು, ಮನೆ ಮಾಲೀಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸ್ಥಳೀಯರ ಆಕ್ರೋಶ:
ಸ್ಟರ್ಲಿಂಗ್ ಹಿಂಭಾಗದಲ್ಲಿರುವ ಸಕ್ರಾ ಆಸ್ಪತ್ರೆ ರಸ್ತೆ ಭಾಗದಲ್ಲಿ ಆದ ಒತ್ತುವರಿಗಳು, ಪೂರ್ವ ಪಾರ್ಕ್ ರಿಡ್ಜ್ ಹಿಂಭಾಗದ ರಸ್ತೆ ಅಕ್ಕ ಪಕ್ಕದಲ್ಲಿ ಅನಧಿಕೃತವಾಗಿ ಶೆಡ್‌ಗಳು ನಿರ್ಮಿಸಲಾಗಿದೆ. ಇವುಗಳನ್ನು ತೆರವುಗೊಳಿಸಲು ಬಿಬಿಎಂಪಿ ಅಧಿಕಾರಿಗಳು ಮುಂದಾದ ವೇಳೆ ಸ್ಥಳೀಯರು, ಕಟ್ಟಡ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದರು. ಖಾಲಿ ಜಾಗದಲ್ಲಿ ತೆರವು ಮಾಡುವುದು ಅದ್ಯಾವ ನೀತಿ ಸರ್. ದೊಡ್ಡ ಬಿಲ್ಡಿಂಗ್ ಗಳನ್ನು ಬಿಟ್ಟು, ನಮ್ ಶೀಟ್ ಹಾಕಿರುವ ಶೆಡ್ಗಳನ್ನು ಒಡೆದು ಹಾಕುತ್ತೀರಿ. ಬಾಗ್ಮನೆ, ಪೂರ್ವ ಪಾರ್ಕ್ ರಿಡ್ಜ್ ಬಿಟ್ಟು ನಮ್ ಕಡೆ ಬರುವುದು, ನ್ಯಾಯವೇ ಸರ್ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.