ನಗರದಲ್ಲಿ ಸಭೆ-ಸಮಾರಂಭಗಳಿಗೆ ನಿರ್ದಿಷ್ಟ ನಿಯಮಗಳ ಜಾರಿಗೆ ಬಿಬಿಎಂಪಿ ಪ್ರಸ್ತಾವನೆ

ಬೆಂಗಳೂರು: ನಗರದಲ್ಲಿ ಪ್ರತಿನಿತ್ಯ ಸರಿಸುಮಾರು 150 ರಷ್ಟು ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಅವುಗಳಲ್ಲಿ ಕೆಲವೊಂದು ಮಾತ್ರ ಜಿನೋಮ್ ಸಿಕ್ವೇನ್ಸ್ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ನಗರದಲ್ಲಿ ಕೊರೊನಾ ರೂಪಾಂತರಿ ತಳಿ ಓಮೈಕ್ರಾನ್‌ ಮಾದರಿಯ ಸೋಂಕು ಕಾಣಿಸಿಕೊಂಡ ಎರಡು ಪ್ರಕರಣಗಳು ದೃಢಪಟ್ಟಿರುವುದರಿಂದ  ಕೆಲವು ಕಠಿಣ ನಿಯಮಗಳನ್ನು ಜಾರಿಗೆ ತರಲು ಬಿಬಿಎಂಪಿ ಸರ್ಕಾರಕ್ಕ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಿದೆ.

ನಗರದಲ್ಲಿ ಹೊರಾಂಗಣ ಮತ್ತು ಒಳಾಂಗಣದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಜನರ ಪ್ರಮಾಣವನ್ನು ಕಡಿತಗೊಳಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭೆ ಸಮಾರಂಭಗಳಿಗೆ ಸೇರುವ ಜನರ ಸಂಖ್ಯೆಯನ್ನು ಕಡಿತಗೊಳಿಸುವ ತಜ್ಞರ ಸಮಿತಿ ಶಿಫಾರಸು ಮಾಡಿದೆ. ಹೀಗಾಗಿ ಸರ್ಕಾರಕ್ಕೆ ಈ ಕುರಿತಂತೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ. ಓಮೈಕ್ರಾನ್ ಕಾಣಿಸಿಕೊಂಡಿರುವ ರಾಷ್ಟ್ರಗಳಿಂದ ಬರುವ ಪ್ರಯಾಣಿಕರ 10 ರಿಂದ 15 ಮಂದಿಯ ಮಾದರಿ ಸಂಗ್ರಹವನ್ನು ಜಿನೋಮ್ ಸಿಕ್ವೇನ್ಸ್‍ಗೆ ಕಳುಹಿಸಲಾಗುತ್ತಿದೆ ಎಂದು ಅವರು ವಿವರಣೆ ನೀಡಿದರು.

ಇದನ್ನು ಓದಿ: ಭಾರತಕ್ಕೂ ಪ್ರವೇಶಿಸಿದ ಓಮೈಕ್ರಾನ್‌: ಕರ್ನಾಟಕದ ಇಬ್ಬರಲ್ಲಿ ಪತ್ತೆ

ಕ್ರಿಸ್‍ಮಸ್ ಹಾಗೂ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಜನ ಗುಂಪುಗೂಡಿ ಸಂಭ್ರಮಾಚರಣೆ ನಡೆಸುವುದರಿಂದ ಸೋಂಕು ಉಲ್ಬಣಿಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಗುಂಪುಗೂಡಲು ಅವಕಾಶ ನೀಡದೆ ಮುಂಜಾಗ್ರತೆಯನ್ನು ವಹಿಸಬೇಕೆಂದು ಮನವಿ ಮಾಡಿಕೊಂಡರು.

ವಿದೇಶಗಳಿಂದ ಆಗಮಿಸುವ ಪ್ರಯಾಣಿಕರ ಕೈಗೆ ಮುದ್ರೆ ಹಾಕುವ ಯಾವುದೇ ಪ್ರಸ್ತಾವನೆ ಬಂದಿಲ್ಲ. ಆದರೆ ಅವರನ್ನು ಕೊರೊನಾ ತಪಾಸಣೆಗೆ ಒಳಪಡಿಸುವುದು, ಕ್ವಾರಂಟೈನ್ ಹಾಗೂ ಐಸೋಲೇಷನ್‍ಗೆ ಒಳಪಡಿಸುವುದಕ್ಕೆ ಆದ್ಯತೆಯ ಗಮನವನ್ನು ಹರಿಸಿದ್ದೇವೆ ಎಂದು ಹೇಳಿದರು.

ನಗರದಲ್ಲಿ ಓಮೈಕ್ರಾನ್ ಪ್ರಕರಣವು ದೃಢಪಟ್ಟಿರುವುದರಿಂದ ಸಾಕಷ್ಟು ಎಚ್ಚರಿಕೆ ವಹಿಸುವಂತೆ ಎಲ್ಲ ವಲಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ವಸತಿ ಸಮುಚ್ಚಯಗಳು, ಸ್ಲಂಗಳಿಗೆ ತೆರಳಿ ಕೊರೊನಾ ತಪಾಸಣೆ ನಡೆಸಿ ಯಾವುದೇ ಭಾಗದಲ್ಲಿ ಸೋಂಕಿನ ಗುಣಲಕ್ಷಣಗಳು ಕಂಡುಬಂದರೆ ತಕ್ಷಣವೇ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ರವಾನಿಸುವುದರ ಜತೆಗೆ ಸೋಂಕು ಉಲ್ಬಣಗೊಳ್ಳದಂತೆ ಎಚ್ಚರ ವಹಿಸುವಂತೆ ಸೂಚಿಸಿದ್ದೇನೆ ಎಂದರು.

Donate Janashakthi Media

Leave a Reply

Your email address will not be published. Required fields are marked *