ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳಿಲ್ಲ: ಇನ್ನೂ ಒಂದೂವರೆ ವರ್ಷ ಚುನಾವಣೆ ಇಲ್ಲ

ಬೆಂಗಳೂರು: ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದಲ್ಲಿ ರಚನೆ ಮಾಡಲಾಗಿರುವ ಹೊಸ ವಾರ್ಡ್‌ಗಳ ರಚನೆಗೆ ಪುನರ್ ವಿಂಗಡಣಾ ಆಯೋಗ ಆರು ತಿಂಗಳೊಳಗೆ ಸಭೆ ನಡೆಸಿ ವರದಿ ನೀಡಬೇಕಿತ್ತು. ಆದರೆ ಆಯೋಗವು ಇದುವರೆಗೂ ಒಂದೇ ಒಂದು ಸಭೆಯೇ ಸೇರಿಲ್ಲ. ಈ ಹಿನ್ನೆಲೆಯಲ್ಲಿ ಇನ್ನು ಒಂದೂವರೆ ವರ್ಷ ಬಿಬಿಎಂಪಿಗೆ ಚುನಾವಣೆ ನಡೆಯದಿರುವುದರಿಂದ ಜನಪ್ರತಿನಿಧಿಗಳಿಲ್ಲದೆ ಬಣಗೂಡುತ್ತಿದೆ.

ಬಿಬಿಎಂಪಿ ಅವಧಿ 2020 ಸೆಪ್ಟಂಬರ್‌ 10ಕ್ಕೆ ಪೂರ್ಣಗೊಂಡಿತು. ರಾಜ್ಯ ಸರಕಾರವು ಕಳೆದ 2020ರ ಸೆಪ್ಟಂಬರ್‌ ನಲ್ಲಿ ‘ಕರ್ನಾಟಕ ಪೌರಸಭೆಗಳ ಕಾಯ್ದೆ (ಮೂರನೇ ತಿದ್ದುಪಡಿ) ಮಸೂದೆ’ಯನ್ನು ವಿಧಾನಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯಿತು. ಆದರೆ ಬಿಬಿಎಂಪಿಯ 198 ವಾರ್ಡ್‍ಗಳನ್ನು 243 ವಾರ್ಡ್‍ಗಳನ್ನಾಗಿ ಪರಿವರ್ತಿಸಿ ವಾರ್ಡ್ ವಿಂಗಡಣೆ, ಹೊಸ ಪ್ರದೇಶಗಳ ಸೇರ್ಪಡೆ, ಗಡಿ ಗುರುತಿಸುವಿಕೆ ಕಾರ್ಯ ಪೂರ್ಣಗೊಳಿಸಲು ಕನಿಷ್ಠ ಒಂದು ವರ್ಷಗಳ ಕಾಲವಕಾಶ ಬೇಕಾಗುತ್ತದೆ. ಬಿಬಿಎಂಪಿ ಹೊರ ವಲಯದಲ್ಲಿರುವ ಕೆಲ ಗ್ರಾಮ ಪಂಚಾಯಿತಿ ಪ್ರದೇಶಗಳನ್ನು ಸೇರ್ಪಡೆ ಮಾಡಿಕೊಂಡು 243 ವಾರ್ಡ್ ರಚಿಸಲು ಸರ್ಕಾರ ನಿರ್ಧರಿಸಿತ್ತು.

ಇದನ್ನು ಓದಿ: ವಿಪಕ್ಷಗಳ ಗೈರಲ್ಲೆ ಬಿಬಿಎಂಪಿ ವಿಧೇಯಕ 2020 ಅಂಗೀಕಾರ

ಕರ್ನಾಟಕ ರಾಜ್ಯ ಚುನಾವಣಾ ಆಯೋಗ 198 ವಾರ್ಡ್‍ಗಳಿಗೆ ಚುನಾವಣೆ ನಡೆಸಲು ಒಮ್ಮೆ ತೀರ್ಮಾನಿಸಿ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿತ್ತು. ಕರ್ನಾಟಕ ಉಚ್ಚ ನ್ಯಾಯಾಲಯವೂ ಸಹ ಬಿಬಿಎಂಪಿಗೆ ಸಕಾಲಕ್ಕೆ ಚುನಾವಣೆ ನಡೆಸುವಂತೆ ತೀರ್ಪು ನೀಡಿತ್ತು. ಆದರೆ, ಬಿಬಿಎಂಪಿಯ ಅಭಿವೃದ್ಧಿ ದೃಷ್ಟಿಯಿಂದ ಸಕಾಲದಲ್ಲಿ ಚುನಾವಣೆಯನ್ನು ನಡೆಸಲು ಸಾಧ್ಯವಿಲ್ಲವೆಂದು ಮತ್ತಷ್ಟು ಕಾಲವಕಾಶ ನೀಡುವಂತೆ ಸರ್ಕಾರ ಸುಪ್ರೀಂ ಕೋರ್ಟ್ ಮೇಟ್ಟಿಲೇರಿತ್ತು.

ಇದರ ಮಧ್ಯೆ, ಬಿಬಿಎಂಪಿ ಮಾಜಿ ಸದಸ್ಯರಾದ ಎಂ.ಶಿವರಾಜು ಹಾಗೂ ಅಬ್ದುಲ್ ವಾಜೀದ್ ಅವರುಗಳು ಸುಪ್ರೀಂ ಕೋರ್ಟ್‌ನಲ್ಲಿ ಶೀಘ್ರ ಚುನಾವಣೆ ನಡೆಸಲು ಸರ್ಕಾರಕ್ಕೆ ಸೂಚಿಸುವಂತೆ ಅರ್ಜಿ ಸಲ್ಲಿಸಿದ್ದರು. ಬಿಬಿಎಂಪಿ ಚುನಾವಣೆ ವಿಚಾರ ಸುಪ್ರೀಂಕೋರ್ಟ್ ಅಂಗಳದಲ್ಲಿರುವುದರಿಂದ ಹಾಗೂ ಕ್ಷೇತ್ರ ವಿಂಗಡಣೆ ಬಗ್ಗೆ ಸಮಿತಿ ಇನ್ನು ವರದಿ ನೀಡಿಲ್ಲ. ಹೀಗಾಗಿ ಕನಿಷ್ಠ ಒಂದೂವರೆ ವರ್ಷಗಳ ಕಾಲ ಬಿಬಿಎಂಪಿಗೆ ಚುನಾವಣೆ ನಡೆಯುವುದು ಅನುಮಾನವಾಗಿದೆ.

ಹೊಸ ವಾರ್ಡ್‌ಗಳ ರಚನೆಗೆ ಪುನರ್ ವಿಂಗಡಣಾ ಆಯೋಗ ವಾರ್ಡ್‌ಗಳ ವಿಂಗಡಣೆ ಕಾರ್ಯ ಆರಂಭಿಸಿದರೂ ವರದಿ ನೀಡಲು ಆರು ತಿಂಗಳ ಸಮಯ ಬೇಕು. ಸರಕಾರ ಅಂದುಕೊಂಡಂತೆ ಎಲ್ಲಾ ಪ್ರಕ್ರಿಯೆಗಳನ್ನುಪೂರ್ಣಗೊಳಿಸಿ 243 ವಾರ್ಡ್‍ಗಳ ರಚನೆ ಕಾರ್ಯ ಅಂತಿಮಗೊಳಿಸಲು ಕನಿಷ್ಠ ಆರು ತಿಂಗಳು ಬೇಕಾಗಿವೆ. 243 ವಾರ್ಡ್‍ಗಳಿಗೆ ಚುನಾವಣಾ ಆಯೋಗ ಹೊಸ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಲು ಐದು ತಿಂಗಳ ಕಾಲಾವಕಾಶವಾದರೂ ಬೇಕಾಗಿದೆ. ಹೀಗಾಗಿ ಕನಿಷ್ಠ ಒಂದೂವರೆ ವರ್ಷ ಬಿಬಿಎಂಪಿಗೆ ಚುನಾವಣೆ ನಡೆಯುವುದು ಅನುಮಾನವಾಗಿದೆ.

ಇದನ್ನು ಓದಿ: ಹಿಂಬಾಗಿಲಿನಿಂದ ಅಧಿಕಾರ ಹಿಡಿಯುವ ಬಿಜೆಪಿಯ ಸಂಚು: ಸಿಪಿಐಎಂ ಆರೋಪ

ಆದರೆ, ಬಿಬಿಎಂಪಿಗೆ ಸೇರ್ಪಡೆಯಾಗಲಿವೆ ಎಂದು ಗುರುತಿಸಲ್ಪಟ್ಟಿರುವ ಕೆಲ ಪ್ರದೇಶಗಳಲ್ಲಿ ಈಗಾಗಲೇ ಗ್ರಾ.ಪಂ ಚುನಾವಣೆ ಪೂರ್ಣಗೊಂಡು ಸದಸ್ಯರು ಐದು ವರ್ಷಗಳ ಅವಧಿಗೆ ಆಯ್ಕೆಯಾಗಿದ್ದಾರೆ. ಒಂದು ವೇಳೆ ಬಿಬಿಎಂಪಿಗೆ ಸೇರ್ಪಡೆಗೊಳ್ಳುವ ಪ್ರದೇಶಗಳಿಂದ ಆಯ್ಕೆಯಾಗಿರುವ ಗ್ರಾ.ಪಂ ಸದಸ್ಯರು ಕೋರ್ಟ್ ಮೆಟ್ಟಿಲೇರಿದರೆ ಚುನಾವಣೆ ಮತ್ತಷ್ಟು ಕಾಲ ಮುಂದೂಡಿಕೆಯಾಗುವುದು ಖಚಿತ.

ಸರ್ಕಾರದ ಷಡ್ಯಂತ್ರ:

ಹೊಸ ವಾರ್ಡ್‍ಗಳ ರಚನೆ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ಸರಕಾರ ಬಿಬಿಎಂಪಿ ಚುನಾವಣೆಯನ್ನು ಮುಂದೂಡಲು ಷಡ್ಯಂತ್ರ ರೂಪಿಸುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದರ ಮತ್ತೆ ಸರಕಾರವು ಸುಪ್ರೀಂಕೋರ್ಟ್‌ನಲ್ಲಿ ಬಿಬಿಎಂಪಿ ಚುನಾವಣೆ ಬಗ್ಗೆ ಅಫಿಡವಿಟ್‌ ಸಲ್ಲಿಸಲು ವಿಳಂಬ ಮಾಡುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಬಿಬಿಎಂಪಿ ಅವಧಿ 2020 ಸೆಪ್ಟಂಬರ್‌ 10ಕ್ಕೆ ಪೂರ್ಣಗೊಂಡ ನಂತರ ಸರ್ಕಾರ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿತ್ತು. ಇದರ ಜತೆಗೆ ವಾರ್ಡ್ ಪುನರ್‍ವಿಂಗಡಣೆ ಮಾಡಿ ಆರು ತಿಂಗಳಲ್ಲಿ ವರದಿ ನೀಡುವಂತೆ 2021 ಜನವರಿ 29 ರಂದು ಮುಖ್ಯ ಆಯುಕ್ತರ ನೇತೃತ್ವದಲ್ಲಿ ಹೊಸ ವಾರ್ಡ್‌ಗಳ ರಚನೆಗೆ ಪುನರ್ ವಿಂಗಡಣಾ ಆಯೋಗ ರಚಿಸಿ ಸೂಚನೆ ನೀಡಿತ್ತು.

ಇದನ್ನು ಓದಿ: ಬಿಬಿಎಂಪಿ ಬಜೆಟ್‌ ಮಂಡನೆ : ಕೆರೆ ಅಭಿವೃದ್ಧಿ ಗುರಿ, ಆರೋಗ್ಯದ ನಿರ್ಲಕ್ಷ್ಯ

ಬಿಬಿಎಂಪಿಗೆ ಚುನಾವಣೆ ನಡೆಸಲು ಇಷ್ಟವಿಲ್ಲದ ಕಾರಣ ವಾರ್ಡ್ ಪುನರ್‍ವಿಂಗಡಣೆ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ಸರಕಾರ ಚುನಾವಣೆಯನ್ನು ಮುಂದೂಡುವ ಕಾರ್ಯದಲ್ಲಿ ನಿರತವಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿರುವ ಅಫಿಡವಿಟ್‍ನಲ್ಲಿ ನಮೂದಿಸಿದೆ ಎಂದು ತಿಳಿದುಬಂದಿದೆ.

ಒಟ್ಟಾರೆ, ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಅರ್ಜಿ, ಚುನಾವಣಾ ಆಯೋಗದ ಅಭಿಪ್ರಾಯ ಹಾಗೂ ಶೀಘ್ರ ಚುನಾವಣೆ ನಡೆಸುವಂತೆ ಕೆಲ ಬಿಬಿಎಂಪಿ ಮಾಜಿ ಸದಸ್ಯರು ಮಾಡಿಕೊಂಡಿರುವ ಅರ್ಜಿಗಳ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್ ನೀಡುವ ತೀರ್ಪಿನ ಆಧಾರದ ಮೇಲೆ ಬಿಬಿಎಂಪಿ ಚುನಾವಣಾ ಹಣೆಬರಹ ನಿರ್ಧಾರವಾಗಲಿದೆ.

Donate Janashakthi Media

Leave a Reply

Your email address will not be published. Required fields are marked *