ಆದೇಶ ಪಾಲಿಸಿ ಇಲ್ಲದಿದ್ದರೆ ಪರಿಣಾಮ ಎದುರಿಸಿ: ಬಿಬಿಎಂಪಿಗೆ ಹೈಕೋರ್ಟ್ ಎಚ್ಚರಿಕೆ

ಬೆಂಗಳೂರು: ಸಾಕಷ್ಟು ಸಮಯಾವಕಾಶ ನೀಡಿದ್ದರೂ ಯಾವುದೇ ಕೆಲಸವಾಗಿಲ್ಲ. ಎಲ್ಲದಕ್ಕೂ ಮಿತಿ ಇರುತ್ತದೆ. ಇನ್ನು ಸಹಿಸಲು ಸಾಧ್ಯವಿಲ್ಲ. ರಸ್ತೆ ನಿರ್ವಹಣೆಯ ಕೆಲಸವನ್ನು ಮಿಲಿಟರಿ ಏಜೆನ್ಸಿ ಅಥವಾ ಬೇರೆ ಯಾವುದಾದರೂ ಸಂಸ್ಥೆಗೆ ವಹಿಸುತ್ತೇವೆ. ಇದರೊಂದಿಗೆ ಪಾಲಿಕೆ ಮುಖ್ಯ ಆಯುಕ್ತರು, ಅಧಿಕಾರಿಗಳ ಅಮಾನತಿಗೆ ಸರ್ಕಾರಕ್ಕೆ ಆದೇಶಿಸುತ್ತೇವೆ ಎಂದು ಮುಖ್ಯ ಕರ್ನಾಟಕ ಕೋರ್ಟ್ ಎಚ್ಚರಿಕೆ ನೀಡಿದೆ.

ರಸ್ತೆ ಗುಂಡಿ ಮುಚ್ಚಲು ಕಾರ್ಯಾದೇಶ ನೀಡದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿರುದ್ಧ ಗರಂ ಆಗಿರುವ ಹೈಕೋರ್ಟ್, ನಮ್ಮ ತಾಳ್ಮೆಯನ್ನು ಪರೀಕ್ಷಿಸದಂತೆ ಎಚ್ಚರಿಕೆ ನೀಡಿದೆ. ಪಾಲಿಕೆಗೆ ಕೊನೆಯ ಅವಕಾಶವನ್ನು ನೀಡಲಾಗುತ್ತಿದ್ದು, ಕಡೆಗಣಿಸದಿರಿ ಎಂದು ಮುಖ್ಯ ನ್ಯಾಯಾಧೀಶ ರಿತುರಾಜ್ ಅವಸ್ತಿ ಮತ್ತು ನ್ಯಾ.ಸಚಿನ್ ಶಂಕರ್ ಮಗದುಮ್ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ ಎಚ್ಚರಿಸಿದೆ.

ಪೈಥಾನ್ ಯಂತ್ರ ಬಳಸಿ ನಗರದ ರಸ್ತೆಗುಂಡಿಗಳನ್ನು ಮುಚ್ಚುವ ಕಾಮಗಾರಿ ನಡೆಸಲು ಅಮೆರಿಕನ್ ರೋಡ್ ಟೆಕ್ನಾಲಜಿ ಸಲ್ಯೂಷನ್ಸ್ (ಎಆರ್‌ಟಿಎಸ್) ಸಂಸ್ಥೆಯೊಂದಿಗೆ ಈವರೆಗೂ ಒಪ್ಪಂದ ಮಾಡಿಕೊಳ್ಳದಿರುವ ಬಿಬಿಎಂಪಿ ಕ್ರಮವನ್ನು ಹೈಕೋರ್ಟ್ ತರಾಟೆ ತೆಗೆದುಕೊಂಡಿತು.

ಬಿಬಿಎಂಪಿ ಮುಖ್ಯ ಇಂಜಿನಿಯರ್ ಮತ್ತು ಅಧಿಕಾರಿಗಳು ಅಸಮರ್ಥರಿದ್ದಾರೆ ಎಂದಿರುವ ನ್ಯಾಯಪೀಠವು ಜೂನ್ 30ರಂದು ಮುಖ್ಯ ಆಯುಕ್ತರು ಹಾಗೂ ಮುಖ್ಯ ಇಂಜಿನಿಯರ್ ಅವರು ಕೋರ್ಟ್​ಗೆ ಖುದ್ದು ಹಾಜರಾಗಬೇಕು ಎಂದು ಸೂಚಿಸಿದೆ. ಇನ್ನು ಪಾಲಿಕೆಗೆ ಕೊನೆಯ ಅವಕಾಶ ನೀಡಿದ ಪೀಠ, ಯಾವುದೇ ಕಾರಣಕ್ಕೂ ಅಧಿಕಾರಿಗಳನ್ನು ಪಾಲಿಕೆ ಕಚೇರಿಯಲ್ಲಿ ಆರಾಮವಾಗಿ ಕೂರಲು ಬಿಡುವುದಿಲ್ಲ ಎಂದು ಹೇಳಿದೆ. ರಸ್ತೆ ಗುಂಡಿಯನ್ನು ಮುಚ್ಚಲು ಕಾರ್ಯಾದೇಶ ನೀಡಿದ ಪ್ರತಿಯನ್ನು ಹಾಗೂ ಸರ್ವೆ ವರದಿಯನ್ನು ಜೂನ್‌ 30ರಂದು ಕೋರ್ಟ್​ಗೆ ಸಲ್ಲಿಸುವಂತೆ ತಾಕೀತು ಮಾಡಿದೆ.

ನ್ಯಾಯಪೀಠ ಕಳೆದ ವಿಚಾರಣೆ ಸಂದರ್ಭದಲ್ಲಿ ಮಳೆಗಾಲ ಆರಂಭವಾಗಿದೆ ನಗರದ ರಸ್ತೆಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿ, ಸಮಸ್ಯೆ ಎದುರಾಗದಂತೆ ಕ್ರಮವಹಿಸಿ, ಮತ್ತೆ ಕೋರ್ಟ್ ಮುಂದೆ ಬರಬೇಡಿ ಎಂದು ಬಿಬಿಎಂಪಿ ಹಾಗೂ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಪಡೆದಿರುವ ಅಮೆರಿಕನ್ ರೋಡ್ ಟೆಕ್ನಾಲಜೀಸ್ ಸಂಸ್ಥೆ (ಎಆರ್‌ಟಿಸಿ)ಗೆ ತಾಕೀತು ಮಾಡಿತ್ತು.
ಅರ್ಜಿ ವಿಚಾರಣೆಗೆ ಬಂದಾಗ ಎಆರ್‌ಟಿಸಿ ಪರ ಹಿರಿಯ ವಕೀಲರು ವಾದ ಮಂಡಿಸಿ, ಪೈಥಾನ್ ಯಂತ್ರದಿಂದ ರಸ್ತೆ ಗುಂಡಿಗಳನ್ನು ಮುಚ್ಚಲು ಪ್ರತಿ ಚದರ ಮೀಟರ್‌ಗೆ 551 ರೂ. ಮೂಲ ದರಕ್ಕೆ ಒಪ್ಪಿಗೆ ಇದೆ ಎಂದು ತಿಳಿಸಿ ಅಫಿಡವಿಟ್ ಸಲ್ಲಿಸಿದರು. ಎಆರ್‌ಟಿಸಿ ನಮೂದಿಸಿರುವ ದರಕ್ಕೆ ಕಾಮಗಾರಿ ನೀಡಲು ಮುಖ್ಯ ಆಯುಕ್ತರು ಒಪ್ಪಿಕೊಂಡಿದ್ದಾರೆ ಎಂದು ಬಿಬಿಎಂಪಿ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.

ಬಿಬಿಎಂಪಿ ಮತ್ತು ಜಲ ಮಂಡಳಿ

ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಭೇಟಿ ವೇಳೆ ಕಳಪೆ ರಸ್ತೆ ಕಾಮಗಾರಿ ನಡೆಸಿದ ವಿಚಾರದಲ್ಲಿ ಬಿಬಿಎಂಪಿ ಮತ್ತು ಬೆಂಗಳೂರು ಜಲಮಂಡಳಿ ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿವೆ.  ರಸ್ತೆ ಗುಂಡಿ ವಿಚಾರದಲ್ಲಿ ನಮ್ಮ ಮೇಲೆ ಗೂಬೆ ಕೂರಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಜಲಮಂಡಳಿ ತಿರುಗೇಟು ನೀಡಿದೆ.

ರಸ್ತೆಗಳಲ್ಲಿ ಗುಂಡಿ ಬೀಳಲು ಜಲಮಂಡಳಿಯ ಪೈಪುಗಳೇ ಕಾರಣ ಎಂದು ಹೇಳುತ್ತಾರೆ. ಗುಂಡಿ ಬಿದ್ದ ಪ್ರದೇಶದಲ್ಲಿ ಯಾವುದೇ ನೀರು ಸೋರಿಕೆ ಆಗಿಲ್ಲ. ಸ್ಥಳದಲ್ಲಿ ಹಾದು ಹೋದ ಕೊಳವೆ ಮಾರ್ಗಗಳಿಂದ ನೀರು ಸೋರಿಕೆ ಆಗಿಲ್ಲ. ಮಳೆಬಂದಾಗ ಸ್ಥಳದಲ್ಲಿ ನೀರು ಬರುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ ಎಂದು ಬಿಬಿಎಂಪಿ ಆಯುಕ್ತರಿಗೆ ಜಲಮಂಡಳಿ ಅಧ್ಯಕ್ಷ ಜಯರಾಮ್ ಅವರು ಪತ್ರ ಬರೆದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *