- ಪ್ರಸ್ತುತ ಪಾಲಿಕೆ ವಾರ್ಡ್ ಮರುವಿಂಗಡಣೆ ಮಾಡುವುದಕ್ಕೆ ಸಮಿತಿ ರಚನೆ
- ಸಮಿತಿಯ ಸದಸ್ಯರಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಮತ್ತು ಬಿಡಿಎ ಆಯುಕ್ತ ಹಾಗೂ ಬಿಬಿಎಂಪಿಯ ವಿಶೇಷ ಆಯುಕ್ತರು
ಬೆಂಗಳೂರು: ಬಿಬಿಎಂಪಿ ವಾರ್ಡ್ಗಳ ಸಂಖ್ಯೆ 243ಕ್ಕೆ ಏರಿಕೆ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಬಿಬಿಎಂಪಿ ವಾರ್ಡ್ ಮರುವಿಂಗಡಣೆ ವರದಿ ಸಿದ್ಧಪಡಿಸಲಾಗಿದೆ. ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಮುದ್ರಣ ಮಾಡಬೇಕು. 2-3 ದಿನಗಳಲ್ಲಿ ಸಾರ್ವಜನಿಕವಾಗಿ ವರದಿ ಲಭ್ಯವಾಗಲಿದೆ ಎಂದು ಮುಖ್ಯ ಆಯುಕ್ತರು ತಿಳಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ತುಷಾರ್ ಗಿರಿನಾಥ್, ಬಿಬಿಎಂಪಿ ವಾರ್ಡ್’ಗಳ ಸಂಖ್ಯೆಯನ್ನು ಪ್ರಸ್ತುತ 198ರಿಂದ 243ಕ್ಕೆ ಹೆಚ್ಚಿಸಲಾಗಿದೆ. ವಾರ್ಡ್ ಗಳ ಸಂಖ್ಯೆ ಹೆಚ್ಚಿಸುವ ಹಾಗೂ ಮರುವಿಂಗಡಣೆ ಸಂಬಂಧ ಕರ್ನಾಟಕ ನಗರ ಪಾಲಿಕೆಗಳ (3ನೇ ತಿದ್ದುಪಡಿ) ಅಧಿನಿಯಮಕ್ಕೆ ರಾಜ್ಯಪಾಲರು ಇತ್ತೀಚೆಗೆ ಒಪ್ಪಿಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಯಂತೆ ಮರು ವಿಂಗಡಣೆಗೆ ಸಮಿತಿ ರಚಿಸಲಾಗಿದ್ದು, ಸಮಿತಿಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ, ಬಿಡಿಎ ಆಯುಕ್ತ ಹಾಗೂ ಬಿಬಿಎಂಪಿಯ ವಿಶೇಷ ಆಯುಕ್ತರು ಸಹ ಸದಸ್ಯರಾಗಿದ್ದಾರೆ.
ವಾರ್ಡ್ ಸಂಖ್ಯೆ ಹೆಚ್ಚಳ ಮಾಡುವಾಗ ವಿಧಾನಸಭಾ ಕ್ಷೇತ್ರದ ವಾರ್ಡ್’ಗಳನ್ನು ಅದೇ ಕ್ಷೇತ್ರದ ವ್ಯಾಪ್ತಿಯಲ್ಲಿ ಪುನರ್ ವಿಂಗಡಣೆ ಮಾಡಿ ವಾರ್ಡ್ ಸಂಖ್ಯೆ ಹೆಚ್ಚಳ ಮಾಡಲಾಗುತ್ತದೆ. ಯಾವುದೇ ಕಾರಣಕ್ಕೂ ಒಂದು ವಿಧಾನಸಬಾ ಕ್ಷೇತ್ರದ ವಾರ್ಡುಗಳನ್ನು ಮತ್ತೊಂದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಸೇರ್ಪಡೆ ಮಾಡುವಂತಿಲ್ಲ. ಈ ಬಗ್ಗೆ ಸರ್ಕಾರ ಸ್ಪಷ್ಟ ನಿರ್ದೇಶನ ನೀಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.