ಬೆಂಗಳೂರು | ಮತ್ತೆ ಬೀದಿಬದಿ ವ್ಯಾಪಾರಿಗಳ ಮೇಲೆ ದಾಳಿ ಮಾಡಿದ ಬಿಬಿಎಂಪಿ; ತಡರಾತ್ರಿ ಪ್ರತಿಭಟನೆ

ಬೆಂಗಳೂರು: ಜಯನಗರದ 27 ಎ ಕ್ರಾಸ್, 4 ನೇ ಬ್ಲಾಕ್‌ನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಬೀದಿಬದಿ ವ್ಯಾಪಾರಿಗಳನ್ನು ಬಲವಂತವಾಗಿ ತೆರವು ಕಾರ್ಯಾಚರಣೆ ನಡೆಸಿ ವ್ಯಾಪಾರಿಗಳ ಜೀವನೋಪಾಯಕ್ಕೆ ಶುಕ್ರವಾರರಂದು ಮತ್ತೊಮ್ಮೆ ತೊಂದರೆ ಮಾಡಿದೆ. ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ಮುಂದುವರಿಸಲು ಮನವಿ ಮಾಡಿದರೂ ಕೇಳದ ಬಿಬಿಎಂಪಿ ಅಧಿಕಾರಿಗಳು ಅವರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಹೀಗಾಗಿ ವ್ಯಾಪಾರಿಗಳು ರಾತ್ರಿಯವರೆಗೂ ಪ್ರತಿಭಟನೆ ನಡೆಸಿದ್ದಾರೆ. ಬಿಬಿಎಂಪಿಯ ನಡೆಯನ್ನು ಖಂಡಿಸಿರುವ ಬೀದಿ ಬದಿ ವ್ಯಾಪಾರಿಗಳ ಒಕ್ಕೂಟದ ನಾಯಕ, ವಕೀಲ ವಿನಯ್ ಶ್ರೀನಿವಾಸ ಅವರು, ಸರಕುಗಳನ್ನು ವಶಪಡಿಸಿಕೊಳ್ಳುವುದು ಮತ್ತು ತೆರವು ಕಾನೂನುಬಾಹಿರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕಾರ್ಯಾಚರಣೆಯು ಒತ್ತುವರಿ ತೆರವು ಅಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ. ಆದರೆ ಈ ಹಿಂದೆ ಬಿಬಿಎಂಪಿ ತಮಗೆ ನೀಡಿದ್ದ ಭರವಸೆಗಳನ್ನು ಪಾಲನೆ ಮಾಡದಿರುವ ಬಗ್ಗೆ ವ್ಯಾಪಾರಿಗಳು ನಿರಾಸೆ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿ ನಡೆಸಿದ ದಾಳಿಯಲ್ಲಿ 20 ವರ್ಷಗಳಿಂದ ಹಣ್ಣು ಮಾರಾಟ ಮಾಡುತ್ತಿದ್ದ ಮಂಜುಳಾ ಅವರ ಗಾಡಿ ಮತ್ತು ಸಾಮಾನುಗಳನ್ನು ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ. ಪರವಾನಗಿ ಪಡೆದ ಬಟ್ಟೆ ಮಾರಾಟಗಾರ ಅಬ್ದುಲ್ ಹಮೀದ್‌ ಅವರಿಗೆ ಬಿಬಿಎಂಪಿ ಮಾನ್ಯಮಾಡಿರುವ ಕಾರ್ಡ್ ಇದ್ದರೂ ಅಲ್ಲಿಂದ ತೆರಳುವಂತೆ ಕೇಳಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಚುನಾವಣಾ ಲಾಭಕ್ಕಾಗಿ ಬಿಜೆಪಿಯು ‘ಲಜ್ಜೆಗೆಟ್ಟ ರಾಜಕಾರಣ’ ಮಾಡುತ್ತಿದೆ – ಸೀತಾರಾಮ್ ಯೆಚೂರಿ ಆಕ್ರೋಶ

ಬೀದಿ ಬದಿ ವ್ಯಾಪಾರಿಗಳ ಒಕ್ಕೂಟದ ನಾಯಕ ವಿನಯ್ ಶ್ರೀನಿವಾಸ ಮಾತನಾಡಿ, ವ್ಯಾಪಾರಿಗಳು ಮಾನ್ಯವಾದ ಗುರುತಿನ ಚೀಟಿಗಳನ್ನು ಹೊಂದಿದ್ದು, ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಖಾಲಿ ಮಾಡುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. “ಚಾಲ್ತಿಯಲ್ಲಿರುವ ಗುರುತಿನ ಚೀಟಿ ಹೊಂದಿರುವ ವ್ಯಾಪಾರಿಗಳಿಗೆ ಬಿಬಿಎಂಪಿ ಮಾರ್ಷಲ್‌ಗಳು ಕಿರುಕುಳ ನೀಡುತ್ತಿದ್ದಾರೆ. ನಾವು ಬಿಬಿಎಂಪಿಗೆ ಹಲವು ಬಾರಿ ಭೇಟಿ ಮಾಡಿದ್ದೇವೆ, ಭರವಸೆ ನೀಡಿದರೂ ಯಾವುದೇ ಸಭೆಗಳು ನಡೆದಿಲ್ಲ” ಎಂದು ಅವರು ಹೇಳಿದ್ದಾರೆ.

2014 ರಲ್ಲಿ ಜಾರಿಯಾದ ಬೀದಿ ವ್ಯಾಪಾರಿಗಳ (ಜೀವನದ ರಕ್ಷಣೆ ಮತ್ತು ಬೀದಿ ಮಾರಾಟದ ನಿಯಂತ್ರಣ) ಕಾಯಿದೆಯು ಬೀದಿಬದಿ ವ್ಯಾಪಾರಿಗಳನ್ನು ನಡೆಯುತ್ತಿರುವ ಕಿರುಕುಳದಿಂದ ರಕ್ಷಿಸುವ ಮತ್ತು ಅವರ ಜೀವನೋಪಾಯವನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ಅದಾಗ್ಯೂ, ಬೆಂಗಳೂರಿನ ಅವಿಭಾಜ್ಯ ಅಂಗವಾಗಿರುವ ಬೀದಿಬದಿ ವ್ಯಾಪಾರಿಗಳು, ಸಾರ್ವಜನಿಕ ಸ್ಥಳಗಳನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಆರೋಪಿಸಿ ಪೊಲೀಸರು, ಸ್ಥಳೀಯ ಸಂಘಗಳು ಮತ್ತು ಪುರಸಭೆಯ ಅಧಿಕಾರಿಗಳಂತಹ ಜನರಿಂದ ನಿರಂತರ ಕಿರುಕುಳ ಅನುಭವಿಸುತ್ತಿದ್ದಾರೆ.

ಈ ಕಾಯಿದೆಯ ಅಡಿಯಲ್ಲಿ, ನಗರದ ಸ್ಥಳೀಯ ಸಂಸ್ಥೆಗಳು ಬೀದಿಬದಿ ವ್ಯಾಪಾರಿಗಳ ಸಮುದಾಯದಿಂದ 40% ಚುನಾಯಿತ ಪ್ರತಿನಿಧಿಗಳನ್ನು ಒಳಗೊಂಡಿರುವ ಪಟ್ಟಣ ಮಾರಾಟ ಸಮಿತಿ (TVC) ಅನ್ನು ರಚಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಸಮಿತಿಯು ಬೀದಿಬದಿ ವ್ಯಾಪಾರಿಗಳ ಕಲ್ಯಾಣಕ್ಕೆ ಸಂಬಂಧಿಸಿದಂತೆ ಮೇಲ್ವಿಚಾರಣೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ.

ಇದನ್ನೂ ಓದಿ: ಮತ್ತೆ ಕೇರಳದತ್ತ – ನಟ ಸುರೇಶ್ ಗೋಪಿ ಮಗಳ ಮದುವೆಯಲ್ಲಿ ಭಾಗವಹಿಸಲಿರುವ ಮೋದಿ!

ಬಿಬಿಎಂಪಿಯಂತಹ ಯೋಜನಾ ಅಧಿಕಾರಿಗಳು ನಗರದೊಳಗಿನ ಎಲ್ಲಾ ಬೀದಿಬದಿ ವ್ಯಾಪಾರಿಗಳನ್ನು ಗುರುತಿಸಲು ಪ್ರತಿ ಐದು ವರ್ಷಗಳಿಗೊಮ್ಮೆ ಸಮಗ್ರ ಸಮೀಕ್ಷೆಯನ್ನು ಕೈಗೊಳ್ಳಬೇಕು. ಸಮೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ ನಗರದೊಳಗೆ ಮಾರಾಟ ವಲಯಗಳನ್ನು ಗುರುತಿಸಬೇಕು. ಹೆಚ್ಚುವರಿಯಾಗಿ, ಸಮೀಕ್ಷೆಯ ಮೂಲಕ ಗುರುತಿಸಲಾದ ಎಲ್ಲಾ ವ್ಯಾಪಾರಿಗಳು ಪರವಾನಗಿಗಳನ್ನು ಸ್ವೀಕರಿಸಲು ಅರ್ಹರಾಗಿರುತ್ತಾರೆ. ಆದರೆ ಬಿಬಿಎಂಪಿ 2023ರ ಫೆಬ್ರವರಿಯಿಂದ ಈ ಸಮೀಕ್ಷೆಯನ್ನು ನಡೆಸಿಲ್ಲ.

2017 ರಲ್ಲಿ ಮೊದಲ ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಲಾಗಿದ್ದು, ಅಂದು ನೀಡಲಾಗಿದ್ದ ಹೆಚ್ಚಿನ ಪರವಾನಗಿಗಳ ಅವಧಿ ಮುಗಿದಿದೆ. ಹೀಗಾಗಿ ಹೊಸದಾಗಿ ಸಮೀಕ್ಷೆ ನಡೆಸದೆ ಬಿಬಿಎಂಪಿ ವ್ಯಾಪಾರಿಗಳನ್ನು ತೆರವುಗೊಳಿಸಲು ಸಾಧ್ಯವಿಲ್ಲ. ಅದಾಗ್ಯೂ ಬಿಬಿಎಂಪಿ ವ್ಯಾಪಾರಿಗಳಿಗೆ ತೊಂದರೆ ನೀಡುತ್ತಿದೆ ಎಂದು ವ್ಯಾಪಾರಿಗಳು ನೋವು ತೋಡಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿದ ವಿನಯ್ ಶ್ರೀನಿವಾಸ್ ಅವರು “2023ರ ಡಿಸೆಂಬರ್ 27 ರಂದು, ನಾವು ಬಿಬಿಎಂಪಿ ಮಾನ್ಯ ಮಾಡಿದ IDಗಳು ಮತ್ತು ID ಗಳಿಲ್ಲದವರ ಪಟ್ಟಿಗಳನ್ನು ಪುರಾವೆಗಳೊಂದಿಗೆ ಸಲ್ಲಿಸಿದ್ದೇವೆ. ಅಲ್ಲದೆ, ಸಂಕ್ರಾಂತಿ ಹಬ್ಬದ ವ್ಯಾಪಾರದಂದು ವ್ಯಾಪಾರಿಗಳಿಗೆ ತೊಂದರೆ ನೀಡದಂತೆ ಮಾರ್ಷಲ್‌ಗಳಿಗೆ ಸೂಚಿಸುವ ಬಗ್ಗೆ ನಾವು ಜನವರಿ 11 ರಂದು BBMPಗೆ ತೆರಳಿ ವಿನಂತಿಸಿದ್ದೇವೆ. ಅದಾಗ್ಯೂ, ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು ಬಿಬಿಎಂಪಿ ಹೇಳಿಕೊಂಡಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೇಂದ್ರ ಕಾಂಗ್ರೆಸ್ v/s ಯುಪಿ ಕಾಂಗ್ರೆಸ್ | ಮಕರ ಸಂಕ್ರಾಂತಿಯಂದು ರಾಮಮಂದಿರಕ್ಕೆ ತೆರಳಲಿರುವ ರಾಜ್ಯ ಘಟಕ!

ಬೀದಿ ವ್ಯಾಪಾರಿಗಳ ಒಕ್ಕೂಟವು ರಸ್ತೆ, ಫುಟ್‌ಪಾತ್ ಮತ್ತು ಪಾರ್ಕಿಂಗ್ ಪ್ರದೇಶಗಳನ್ನು ಅಳತೆ ಮಾಡಿದ್ದಾಗಿ ಶ್ರೀನಿವಾಸ್ ಅವರು ಹೇಳಿದ್ದಾರೆ. “ನಗರದ ಪ್ರತಿ ಖಾಲಿ ಜಾಗದಲ್ಲಿ ಪಾರ್ಕಿಂಗ್ ಮಾಡಲಾಗುತ್ತದೆ. ಇದನ್ನು ಕೂಡಾ ನಾವು ಬಿಬಿಎಂಪಿಗೆ ನಿರೂಪಿಸಿದ್ದೇವೆ. ಈ ಬಗ್ಗೆ ಅಳತೆ ಮಾಡುತ್ತೇವೆ ಎಂದು ಹೇಳುತ್ತಾರಾದರೂ, ಅದನ್ನು ಇನ್ನೂ ಮಾಡಿಲ್ಲ. ಬಿಬಿಎಂಪಿ ನೀಡಿದ ಗುರುತಿನ ಚೀಟಿಗಳ ಆಧಾರದ ಮೇಲೆ ನಾವು ಬೀದಿ ಬದಿ ವ್ಯಾಪಾರಿಗಳ ಕಾಯಿದೆಯ ಪ್ರಕಾರ ವ್ಯಾಪಾರ ಮಾಡುತ್ತಿದ್ದೆವು. ಆದರೆ ಮಾರ್ಷಲ್‌ಗಳು ತೆರವುಗೊಳಿಸಲು ಬಂದು ಗಾಡಿಗಳನ್ನು ಕೂಡಾ ವಶಪಡಿಸಿಕೊಂಡಿದ್ದಾರೆ” ಎಂದು ಹೇಳಿದ್ದಾರೆ.

ಜನವರಿ 12ರ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾದ ತೆರವು ಕಾರ್ಯಾಚರಣೆಯು ರಸ್ತೆಯಲ್ಲಿ ವ್ಯಾಪಾರಿಗಳು ಪ್ರತಿಭಟಿಸಿದ್ದರಿಂದ ತೀವ್ರ ಪ್ರತಿರೋಧ ಎದುರಿಸಿತು. ಅದಾಗ್ಯೂ,  ಬಿಬಿಎಂಪಿ ರಾತ್ರಿ 8 ಗಂಟೆ ಸುಮಾರಿಗೆ ರಸ್ತೆಯ ಇನ್ನೊಂದು ಬದಿಯಲ್ಲಿ ಗಾಡಿಗಳನ್ನು ವಶಪಡಿಸಿಕೊಳ್ಳುವ ಮೂಲಕ ತೆರವು ಕಾರ್ಯಾಚರಣೆ ಮತ್ತೆ ಪುನರಾರಂಭಿಸಿತು. ಘಟನಾ ಸ್ಥಳಕ್ಕೆ ಬಿಬಿಎಂಪಿ ದಕ್ಷಿಣ ವಲಯ ಜಂಟಿ ಆಯುಕ್ತ ಜಗದೀಶ್ ಕೆ ನಾಯ್ಕ್ ಭೇಟಿ ನೀಡಿದ್ದು, ವ್ಯಾಪಾರಿಗಳೊಂದಿಗೆ ಒಂದು ಗಂಟೆ ಚರ್ಚೆ ನಡೆಸಿದ ಅವರು ಏಳು ದಿನಗಳಲ್ಲಿ ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ಒಪ್ಪಿಗೆ ನೀಡಿದ್ದಾರೆ.

2023 ನವೆಂಬರ್ ವೇಳೆ ಕೂಡಾ ಇದೇ ರೀತಿಯ ತೆರವು ಕಾರ್ಯಾಚರಣೆಗಳು ನಡೆದಿತ್ತು. ಆ ವೇಳೆ BBMP ಜಯನಗರ 4 ನೇ ಬ್ಲಾಕ್‌ನ ಶಾಪಿಂಗ್ ಕಾಂಪ್ಲೆಕ್ಸ್ ಸುತ್ತಲೂ ಇದ್ದ ಸ್ಟಾಲ್‌ಗಳನ್ನು ದ್ವಂಸ ಮಾಡಿತ್ತು.

ವಿಡಿಯೊ ನೋಡಿ: ಬಹುತ್ವದ ಭಾರತದ ಉಳಿವಿಗಾಗಿ ಸಂವಿಧಾನವೇ ದಾರಿ – ಜಸ್ಟೀಸ್‌ ಎಚ್.ಎನ್. ನಾಗಮೋಹನ್ ದಾಸ್ Janashakthi Media

Donate Janashakthi Media

Leave a Reply

Your email address will not be published. Required fields are marked *