ಬೆಂಗಳೂರು: ಬಿಬಿಎಂಪಿಯಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಕರೆ ನೀಡಿದೆ.
ಹೇಳಿಕೆ ಬಿಡುಗಡೆ ಮಾಡಿರುವ ಸಿಪಿಐ(ಎಂ) ಬೆಂಗಳೂರು ಜಿಲ್ಲಾ ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಬಿ.ಎನ್.ಮಂಜುನಾಥ್ ಅವರು ʻʻಕಾಮಗಾರಿಗಳಲ್ಲಿ ಶೇಕಡ 40ರಷ್ಟು ಕಮೀಷನ್ ಪಡೆಯಲಾಗುತ್ತಿದೆ ಎಂದು ಗುತ್ತಿಗೆದಾರರು ಪ್ರಧಾನಿಗೆ ಪತ್ರೆ ಬರೆದಿರುವುದು ಭ್ರಷ್ಟತೆಯ ವಿರಾಟ್ ರೂಪವನ್ನು ತೆರೆದಿಟ್ಟಿದೆ. ಈ ಪರಿಯ ಭ್ರಷ್ಟಾಚಾರದಿಂದಾಗಿಯೇ ನಗರದ ಮೂಲಭೂತ ಸಮಸ್ಯೆಗಳು ಬಹುಕಾಲದಿಂದ ಬಗೆಹರಿಯುತ್ತಿಲ್ಲ. ಗುಂಡಿಬಿದ್ದ ರಸ್ತೆಗಳು, ಎಲ್ಲೆಂದರಲ್ಲಿ ಕಸ, ಪದೇಪದೇ ನೆರೆಗೆ ಸಿಲುಕುವುದು ಇತರೆ ಸಮಸ್ಯೆಗಳು ಜನರನ್ನು ಬಾಧಿಸುತ್ತಿವೆʼʼ ಎಂದು ತಿಳಿಸಿದ್ದಾರೆ.
ಬಿ.ಎಸ್.ಪಾಟೀಲ್ ವರದಿ ಅನ್ವಯ ಬಿಬಿಎಂಪಿ ಆಡಳಿತವನ್ನು ವಿಭಜಿಸಿ ಆಡಳಿಯವನ್ನು ವಿಕೇಂದ್ರೀಕರಣಗೊಳಿಸಬೇಕೆಂಬ ಜನರ ಒತ್ತಾಯವನ್ನು ಕಡೆಗಣಿಸಿ, ರಾಜಕೀಯ ಹಿತಾಸಕ್ತಿ ಹಾಗೂ ತಮ್ಮ ಭ್ರಷ್ಟಾಚಾರವನ್ನು ಅಡೆತಡೆಯಿಲ್ಲದೇ ಮುಂದುವರಿಸಲು ನಗರ ಯೋಜನೆ ತಜ್ಞರು ಕೊಟ್ಟಿರುವ ವೈಜ್ಞಾನಿಕ ವರದಿಗಳನ್ನು ಜಾರಿ ಮಾಡುತ್ತಿಲ್ಲ ಎಂದು ಸಿಪಿಐ(ಎಂ) ಆರೋಪಿಸಿದೆ.
ಕಟ್ಟಡ ನಿರ್ಮಾಣ ಸಾಮಾಗ್ರಿಗಳಾದ ಸಿಮೆಂಟ್, ಕಬ್ಬಿಣ, ಮರಳು ಸೇರಿದಂತೆ ಇತರೆ ವಸ್ತುಗಳ ಬೆಲೆಗಳು ಗಗನ ಮುಟ್ಟಿದ್ದು, ನಿರ್ಮಾಣ ವಲಯ ಕುಸಿತ ಕಂಡಿದೆ. ಬೆಲೆ ನಿಯಂತ್ರಿಸಲು ಕೇಂದ್ರ ಸರ್ಕಾರ ಮುಂದಾಗದೇ, ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಸಿಪಿಐ(ಎಂ) ಆರೋಪಿಸಿದೆ.
ತಂತ್ರಜ್ಞಾನ ಬೆಳೆದಂತೆ ಉದ್ಯೋಗದ ಸ್ವರೂಪ ಬದಲಾಗುತ್ತಿದ್ದು, ಕಾರ್ಮಿಕರ ಶೋಷಣೆ ಹೆಚ್ಚುತ್ತಿದೆ. ಆಪ್ ಆಧಾರಿತ ಉದ್ಯೋಗಗಳಲ್ಲಿ ಕೆಲಸದ ಭದ್ರತೆ ಇಲ್ಲವಾಗಿದ್ದು, ಗಿಗ್ ಕಾರ್ಮಿಕರ ಕೆಲಸದ ಸ್ವರೂಪ, ಉದ್ಯೋಗ ಭದ್ರತೆ ಹಾಗೂ ಕಾರ್ಮಿಕ ಕಾನೂನುಗಳು ಅನ್ವಯ ಆಗುವಂತೆ ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತರಬೇಕೆಂದು ಒತ್ತಾಯಿಸಿದೆ.
ನಗರದ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಬೇಕು. ಮೆಟ್ರೋ ಸೌಲಭ್ಯ ವಿಸ್ತರಿಸಬೇಕು ಹಾಗೂ ನಗರದ ಅಸಂಘಟಿತ ಕಾರ್ಮಿಕರಿಗೆ ಕಲ್ಯಾಣ ಯೋಜನೆಗಳನ್ನು ಜಾರಿ ಮಾಡಲು ಸಿಪಿಐ(ಎಂ) ಆಗ್ರಹಿಸಿದೆ.