ಕೂಡಲೇ ತೆರವು ಮಾಡಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕೆಂದು ಎಎಪಿ ಆಗ್ರಹ
ಬೆಂಗಳೂರು: ಸೋಮವಾರ, 26 ಆಗಸ್ಟ್, ಬೆಳಿಗ್ಗೆ ಲಕ್ಷಾಂತರ ರುಪಾಯಿ ಕಟ್ಟಡ ಬಾಡಿಗೆ ಪಾವತಿಸದೇ ಬಾಕಿ ಉಳಿಸಿಕೊಂಡ ನಗರದ 2 ಅಂಚೆ ಕಚೇರಿಗಳಿಗೆ ಬಿಬಿಎಂಪಿ ಬೀಗ ಹಾಕಿದೆ.
ಸೇಂಟ್ ಜಾನ್ಸ್ ರಸ್ತೆಯಲ್ಲಿ ಬಿಬಿಎಂಪಿ ಸ್ವತ್ತಿನ 1,665 ಚದರಡಿ ವಿಸ್ತೀರ್ಣದ ಮಳಿಗೆ ಯಲ್ಲಿರುವ ಅಂಚೆ ಕಚೇರಿ 2014ರ ಏಪ್ರಿಲ್‌ನಿಂದಲೂ ಹಳೆಯ ಬಾಡಿಗೆಯನ್ನೇ ಪಾವತಿಸುತ್ತಿದೆ. ಪರಿಷ್ಕೃತ ಬಾಡಿಗೆ ಪಾವತಿಸಲು ಹಲವು ಬಾರಿ ನೋಟಿಸ್ ನೀಡಿದ್ದರೂ ಸ್ಪಂದಿಸಿರಲಿಲ್ಲ. ಒಟ್ಟು 88.91 ಲಕ್ಷ ರೂ.ಬಾಡಿಗೆ ಬಾಕಿ ಇದೆ. ಈ ಕಾರಣ ಪೂರ್ವ ವಲಯ ಆಯುಕ್ತರ ಆದೇಶದಂತೆ ಪಾಲಿಕೆ ಸಿಬ್ಬಂದಿ ಮಳಿಗೆಗೆ ಬೀಗ ಹಾಕಿದರು.
ವಸಂತನಗರ ಮಾರುಕಟ್ಟೆಯ ನೆಲ ಅಂತಸ್ತಿನಲ್ಲಿ 214 ಚದರಡಿ ಯಲ್ಲಿರುವ ಅಂಚೆ ಕಚೇರಿಯು 2016ರ ಜನವರಿಯಿಂದ ಪರಿಷ್ಕೃತ ಬಾಡಿಗೆಯನ್ನು ಪಾವತಿಸಿರಲಿಲ್ಲ. 10.80 ಲಕ್ಷ ರೂ. ಬಾಕಿ ಇದೆ. ಹೀಗಾಗಿ, ಸೋಮವಾರ ಬೆಳಿಗ್ಗೆ ಈ ಮಳಿಗೆಗೂ ಪಾಲಿಕೆ ಸಿಬ್ಬಂದಿ ಬೀಗ ಹಾಕಿದ್ದಾರೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ನಗರದ ಸೇಂಟ್ ಜಾನ್ಸ್ ರಸ್ತೆ ಹಾಗೂ ವಸಂತನಗರದ ಅಂಚೆ ಕಚೇರಿಗಳಿಗೆ ಬಿಬಿಎಂಪಿ ಅಧಿಕಾರಿಗಳು ಬೀಗಮುದ್ರೆ ಹಾಕಿದ್ದು, ಕೂಡಲೇ ಅದನ್ನು ತೆರವು ಮಾಡಿ ಅಂಚೆ ಕಚೇರಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಆಮ್ ಆದ್ಮಿ ಪಕ್ಷ ಬುಧವಾರ ಆಗ್ರಹಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಎಎಪಿ ನಗರಾಧ್ಯಕ್ಷ ಡಾ. ಸತೀಶ್ ಕುಮಾರ್, ಬಿಬಿಎಂಪಿ ಕಟ್ಟಡದಲ್ಲಿರುವ ಅಂಚೆ ಕಚೇರಿಗಳು ಬಾಡಿಗೆ ಕಟ್ಟುತ್ತಿಲ್ಲ ಎನ್ನುವ ಕಾರಣ ನೀಡಿ ಅಧಿಕಾರಿಗಳು ಬಾಗಿಲು ಹಾಕಿಸುತ್ತಿರುವ ಕ್ರಮ ಖಂಡನೀಯ ಎಂದು ಕಿಡಿಕಾರಿದರು.
ಭಾರತೀಯ ಅಂಚೆ ಇಲಾಖೆ ಪ್ರಪಂಚದಲ್ಲೇ ಅತಿ ದೊಡ್ಡ ಸರ್ಕಾರಿ ಅಂಚೆ ಇಲಾಖೆ ಎನ್ನುವ ಹೆಗ್ಗಳಿಕೆ ಪಡೆದಿದೆ. ಇದು ಭಾರತದ ಪರಂಪರೆ ಹಾಗೂ ಇತಿಹಾಸದ ಭಾಗವಾಗಿದೆ. ಕಡಿಮೆ ವೆಚ್ಚದಲ್ಲಿ ಸಾರ್ವಜನಿಕರಿಗೆ ಅಂಚೆ ಸೇವೆ ಒದಗಿಸುತ್ತಿದೆ. ಇಂತಹ ಸೇವಾ ವಲಯದ ಕಚೇರಿಯನ್ನು ಬಾಡಿಗೆ ಕಟ್ಟಿಲ್ಲ ಎಂಬ ಕಾರಣಕ್ಕೆ ಬಿಬಿಎಂಪಿ ಅಧಿಕಾರಿಗಳು ಮುಚ್ಚಿಸಿರುವುದು ವಿಷಾದನೀಯ ಎಂದು ಹೇಳಿದರು.
ಅಂಚೆ ಕಚೇರಿಗಳ ಕಟ್ಟಡಗಳ ಮೇಲೆ ತೆರಿಗೆ ಹಾಕದೆ, ಶುಲ್ಕ ವಸೂಲಿ ಮಾಡದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬೇಕು. ಯಾರೋ ಉದ್ಯಮಿಗಳಿಗೆ, ಪ್ರಭಾವಿಗಳಿಗೆ, ರಾಜಕಾರಣಿಗಳಿಗೆ ಬೇಕಾದಷ್ಟು ಭೂಮಿ, ಕಟ್ಟಡಗಳನ್ನು ಧಾರೆಯೆರೆದು ಕೊಡುತ್ತಿರುವಾಗ ಜನಸಮಾನ್ಯರಿಗೆ ನೆರವಾಗುವ ಅಂಚೆ ಕಚೇರಿಗಳಿಂದ ಬಾಡಿಗೆ ತೆಗೆದುಕೊಳ್ಳದಿದ್ದರೆ ಸರ್ಕಾರಕ್ಕೆ ಅಂತಹ ದೊಡ್ಡ ನಷ್ಟವೇನೂ ಸಂಭವಿಸುವುದಿಲ್ಲ ಎಂದು ತಿಳಿಸಿದರು.
ಇದನ್ನೂ ನೋಡಿ: ‘ಪ್ರಜಾ ಕವಿ, ಪ್ರಜಾ ಗಾಯಕ ಗದ್ದರ್– ಪ್ರಥಮ ಪರಿನಿಬ್ಬಾಣ’ ಕಾರ್ಯಕ್ರಮ ಆಗಸ್ಟ್ 26 ರಂದು ಟೌನ್‌ಹಾಲ್‌ನಲ್ಲಿ ನಡೆಯಿತು.