ಬೆಂಗಳೂರು, ಜ9 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತ ವ್ಯವಸ್ಥೆಯನ್ನು ಬದಲಾವಣೆ ಮಾಡುವಂತಹ ಮಹತ್ವದ ಮಸೂದೆಗೆ ರಾಜ್ಯಪಾಲರು ಅಂಗೀಕಾರ ಹಾಕಿದ್ದು, ಜ.11 ರಿಂದ ಅಧಿಕೃತವಾಗಿ ಜಾರಿಗೆ ಬರಲಿವೆ.
ವಿಧಾನಸಭೆ ಮತ್ತು ವಿಧಾನಪರಿಷತ್‍ನ ಎರಡು ಅಧಿವೇಶನದಲ್ಲಿ ಸುದೀರ್ಘವಾಗಿ ಚರ್ಚೆಯಾಗಿ ಜಂಟಿ ಪರಿಶೀಲನಾ ಸಮಿತಿಯ ಪರಿಶೀಲನೆಗೆ ಒಳಪಟ್ಟು ಅಂತಿಮವಾಗಿ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ 2020ಕ್ಕೆ ರಾಜ್ಯಪಾಲರಾದ ವಜುಭಾಯಿ ವಾಲಾ ಸಹಿ ಹಾಕಿದ್ದಾರೆ.
ವಿಪಕ್ಷಗಳ ಗೈರಲ್ಲೆ ಬಿಬಿಎಂಪಿ ವಿಧೇಯಕ 2020 ಅಂಗೀಕಾರ
ನೂತನ ಕಾಯ್ದೆ ಜ.11 ರಿಂದ ಜಾರಿಗೆ ಬರಲಿದೆ ಎಂದು ನಗರಾಭಿವೃದ್ಧಿ ಇಲಾಖೆ ಅಧಿಕೃತ ಪ್ರಕಟಣೆ ತಿಳಿಸಿದೆ. ನೂತನ ಕಾಯ್ದೆ ಬೆಂಗಳೂರಿನ ದೂರಗಾಮಿ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪುಗೊಂಡಿದ್ದು, ಆಡಳಿತ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ತರಲಿದೆ ಎಂದು ಅದು ಹೇಳಿದೆ. ಬಿಬಿಎಂಪಿಗೆ ಇನ್ನು ಮುಂದೆ 8 ವಲಯಗಳಿಗೂ ಪ್ರತ್ಯೇಕ ಆಯುಕ್ತರನ್ನು ನೇಮಿಸಲಾಗುತ್ತದೆ. ಕೇಂದ್ರ ಕಚೇರಿಯಲ್ಲಿ ಈಗಿರುವ ಆಯುಕ್ತರು ಇನ್ನು ಮುಂದೆ ಮುಖ್ಯ ಆಯುಕ್ತರಾಗಿ ಕೆಲಸ ಮಾಡಲಿದ್ದಾರೆ.
ವಾರ್ಡ್‍ಗಳ ಸಂಖ್ಯೆಯನ್ನು 198ರಿಂದ 243ಕ್ಕೆ ಹೆಚ್ಚಿಸಲು ಇದೇ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಆಡಳಿತಾತ್ಮಕವಾಗಿ ಹಲವಾರು ಮಹತ್ವದ ಬದಲಾವಣೆಗಳನ್ನು ನಿರೀಕ್ಷಿಸಲಾಗುತ್ತಿದೆ. ಈ ಮಸೂದೆಗೆ ಕಾಂಗ್ರೆಸ್, ಜೆಡಿಎಸ್, ಸಿಪಿಐಎಮ್, ಆಮ್ ಆದ್ಮಿ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು.