ಬೆಂಗಳೂರಿನ ಬಿಬಿಎಂಪಿ ಆಟದ ಮೈದಾನದಲ್ಲಿ ಆಟವಾಡಲು ಹೋಗಿದ್ದ 10 ವರ್ಷದ ಬಾಲಕನ ಮೇಲೆ ಮೈದಾನದ ಬೃಹತ್ ಕಬ್ಬಿಣದ ಗೇಟ್ ಬಿದ್ದು, ಬಾಲಕ ಸಾವನ್ನಪ್ಪಿರುವ ಘಟನೆ ಮಲ್ಲೇಶ್ವರಂನಲ್ಲಿ ನಡೆದಿದೆ.
ಬೆಂಗಳೂರಿನ ಹೃದಯಭಾಗ ಮಲ್ಲೇಶ್ವರಂ ನ ಬಿಬಿಎಂಪಿ ಆಟದ ಮೈದಾನಕ್ಕೆ ಆಟವಾಡಲೆಂದು ಬಾಲಕ ನಿರಂಜನ್ ತೆರಳಿದ್ದು, ಮೈದಾನದ ಗೇಟ್ ಓಪನ್ ಮಾಡುವಾಗ, ತುಕ್ಕು ಹಿಡಿದು ಹಾಳಾಗಿದ್ದ ಗೇಟ್ ಬಾಲಕನ ಮೇಲೆ ಕಳಚಿ ಬಿದ್ದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಬಾಲಕನನ್ನ ಕೆಸಿ ಜನರಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಿಸದೇ ಬಾಲಕ ಸಾವನ್ನಪ್ಪಿದ್ದಾನೆ.
ನಿರಂಜನ್ ತಂದೆ ವಿಜಯಕುಮಾರ್ ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದು, ಮಲ್ಲೇಶ್ವರನ ಪೈಪ್ ಲೈನ್ನಲ್ಲಿ ಈ ಕುಟುಂಬ ವಾಸವಾಗಿತ್ತು. ಈ ಘಟನೆ ಬೆನ್ನಲ್ಲೇ ಬಿಬಿಎಂಪಿ ವಿರುದ್ಧ ಬೆಂಗಳೂರಿಗರು ಆಕ್ರೋಶ ಹೊರಹಾಕಿದ್ದು, ಬಿಬಿಎಂಪಿ ನಿರ್ಲಕ್ಷ್ಯದಿಂದಲೇ ಬಾಲಕ ನಿರಂಜನ್ ಸಾವನ್ನಪ್ಪಿರುವುದಾಗಿ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ. ಸದ್ಯ ಈ ಕುರಿತು ಮಲ್ಲೇಶ್ವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಿನೇಶ್ ಗುಂಡೂರಾವ್ ಭೇಟಿ: ಘಟನಾ ಸ್ಥಳಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಗೇಟ್ ಕುಸಿದು ಬೀಳಲು ಕಾರಣ ಏನೆಂದು ಬಿಬಿಎಂಪಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ಬಗ್ಗೆ ತನಿಖೆ ನಡೆಸಲು ಸೂಚಿಸಿದ್ದೇನೆ ಎಂದರು. ನಂತರ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಬಾಲಕ ನಿರಂಜನ್‌ನ ಪಾಲಕರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ”ಮೈದಾನಕ್ಕೆ ೪ ವರ್ಷದ ಹಿಂದೆ ಗೇಟ್ ಅಳವಡಿಸಲಾಗಿತ್ತು. ಗೇಟ್ ಹಾಳಾಗಿದ್ದ ಸಂಗತಿ ಈವರೆಗೆ ಗಮನಕ್ಕೆ ಬಂದಿರಲಿಲ್ಲ. ಗೇಟ್ ಹಾಳಾಗಿದ್ದ ಬಗ್ಗೆ ಯಾರೂ ದೂರು ಕೊಟ್ಟಿರಲಿಲ್ಲ. ಬಾಲಕನ ಸಾವಿನ ಘಟನೆಯಿಂದ ಬಹಳ ನೋವಾಗಿದೆ. ಈ ದುರಂತದ ಬಗ್ಗೆ ತನಿಖೆ ಮಾಡಿಸಿ, ತಪ್ಪಿತಸ್ಥ ಅಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇವೆ.’ ಎಂದು ಹೇಳಿದರು.