ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣಾ ಪ್ರಕ್ರಿಯೆಯನ್ನು ಎಂಟು ವಾರಗಳಲ್ಲಿ ಆರಂಭಿಸಿ ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ವಾರ್ಡ್ ಪುನರ್‌ವಿಂಗಡನೆ ಹಾಗೂ ಮೀಸಲಾತಿ ಕಾರಣದಿಂದ ಪದೇ ಪದೇ ಮುಂದೂಡಲ್ಪಡುತ್ತಿರುವ ಬಿಬಿಎಂಪಿ ಚುನಾವಣೆಗೆ ಕೊನೆಗೂ ದಿನಾಂಕ ನಿಗದಿ ಮಾಡುವ ಸಮಯ ಬಂದಿದೆ.
198 ವಾರ್ಡ್‌ಗಳನ್ನು ಹೊಂದಿರುವ ಬಿಬಿಎಂಪಿಯ ವಾರ್ಡ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದ ಪರಿಣಾಮ ಚುನಾವಣೆ ವಿಳಂಬವಾಗಿತ್ತು.ಈ ನಡುವೆ ಕರ್ನಾಟಕ ನಗರ ಪಾಲಿಕೆಯ ಮೂರನೇ ತಿದ್ದುಪಡಿ ಕಾಯಿದೆ (2020) ಅನುಸಾರ 243 ವಾರ್ಡ್‌ಗಳಿಗೆ ಬದಲಾಗಿ 2020ರ ಸೆ.23ರಂದು ಹೊರಡಿಸಿರುವ ಅಧಿಸೂಚನೆಯಂತೆ 198 ವಾರ್ಡ್‌ಗಳಿಗೆ ಆರು ವಾರಗಳ ಒಳಗಾಗಿ ಚುನಾವಣೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ 2020ರ ಡಿಸೆಂಬರ್ 4ರಂದು ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು.
ನಂತರ ರಾಜ್ಯ ವಿಧಾನಸಭೆಯು ಹೈಕೋರ್ಟ್ ಆದೇಶವನ್ನು ರದ್ದುಪಡಿಸಿ 243 ವಾರ್ಡ್‌ಗಳಿಗೆ ಚುನಾವಣೆ ನಡೆಸಬೇಕು ಎಂಬ ನಿರ್ಣಯ ಅಂಗೀಕರಿಸಿತ್ತು. ಅಲ್ಲದೇ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿಯನ್ನು ಸರ್ಕಾರ ಸಲ್ಲಿಸಿತ್ತು.
ಇದೀಗ ಸುಪ್ರೀಂ ಕೋರ್ಟ್ ರಾಜ್ಯ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದ್ದು, ಬಿಬಿಎಂಪಿ ಚುನಾವಣಾ ಪ್ರಕ್ರಿಯೆಯನ್ನು ಎಂಟು ವಾರದೊಳಗಾಗಿ ನಡೆಸುವಂತೆ ತಿಳಿಸಿದೆ. ಅಲ್ಲದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ವಾರ್ಡ್ ಪುನರ್ ವಿಂಗಡನೆ ಮತ್ತು ಮೀಸಲಾತಿಯನ್ನು ಕಾಲಮಿತಿಯೊಳಗೆ ನಿಗದಿಪಡಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಎಂಟು ವಾರದಲ್ಲಿ ಚುನಾವಣೆ ಪ್ರಕ್ರಿಯೆ ಮುಗಿಸಲು ಸೂಚಿಸಿದ ಬೆನ್ನಲ್ಲೇ, ಸುಪ್ರೀಂ ಕೋರ್ಟ್ ತೀರ್ಪುನ್ನು ಪಾಲಿಸಬೇಕು. ನಾವು ಚುನಾವಣೆಗೆ ಸಿದ್ದರಿದ್ದೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ತೀರ್ಪು ನಮ್ಮ ವಾದಕ್ಕೆ ಸಿಕ್ಕಿರುವ ಮನ್ನಣೆಯಾಗಿದೆ. ಚುನಾವಣೆ ನಡೆಸಲು ತಕ್ಷಣವೇ ಅಗತ್ಯ ಪ್ರಕ್ರಿಯೆಗಳನ್ನು ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.
ಬಿಬಿಎಂಪಿ ವಾರ್ಡ್‌ಗಳ ಪುನರ್‌ವಿಂಗಡಣೆ ಕಾರ್ಯ ಪೂರ್ಣಗೊಳ್ಳುತ್ತಾ ಬಂದಿದೆ. ಪುನರ್‌ವಿಂಗಡಣೆ ಪೂರ್ಣಗೊಂಡ ತಕ್ಷಣ ಅಧಿಸೂಚನೆ ಹೊರಡಿಸುತ್ತೇವೆ. ಒಬಿಸಿ ಮೀಸಲಾತಿ ನಿಗದಿ ಮಾಡುವುದಕ್ಕೆ ಸಂಬಂಧಿಸಿದಂತೆ ನ್ಯಾ.ಭಕ್ತವತ್ಸಲಂ ಸಮಿತಿಯೂ ಎಂಟು ವಾರಗಳೊಳಗೆ ವರದಿ ನೀಡಲಿದೆ. ಚುನಾವಣೆಗೆ ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ. ಸುಪ್ರೀಂಕೋರ್ಟ್ ಹೇಳಿದ ಮೇಲೆ ಅದನ್ನು ಪಾಲನೆ ಮಾಡುತ್ತೇವೆ. ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತುವ ಪ್ರಶ್ನೆಯೇ ಇಲ್ಲ ಎಂದು ಬೊಮ್ಮಾಯಿ ತಿಳಿಸಿದರು.