ಜನರ ಕಲ್ಯಾಣ ನಿರ್ಲಕ್ಷ್ಯ: ಸಿಪಿಐ(ಎಂ) ಖಂಡನೆ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2025-26 ಸಾಲಿನ ಬಜೆಟ್ ನ್ನು ಈ ವರ್ಷವು ಪಾಲಿಕೆ ಸದಸ್ಯರಿಲ್ಲದ ಪರಿಣಾಮ ಅಧಿಕಾರಗಳೆ ಮಂಡಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯದ ಆರ್ಥಿಕತೆಯನ್ನು ಖಾಸಗಿ ಬಂಡವಾಳಗಾರಿಗೆ ತೆರದಿಡುವ, ಬಂಡವಾಳದ ಸ್ನೇಹಿಯಾಗಿಸಲು ರೂಪಿಸಿದ ರಾಜ್ಯ ಬಜೆಟ್‌ಗೆ ಪೂರಕವಾಗಿ ಬಿಬಿಎಂಪಿ ಬಜೆಟ್ ನ್ನು ರೂಪಿಸಿ ಜನರ ಕಲ್ಯಾಣವನ್ನು ನಿರ್ಲಕ್ಷಿಸಲಾಗಿದೆ ಎಂದು ಸಿಪಿಐ(ಎಂ) ಬೆಂಗಳೂರು ಮತ್ತು ಉತ್ತರ ಜಿಲ್ಲಾ ಸಮಿತಿಗಳು ಖಂಡಿಸಿದೆ.
ಸಿಪಿಐಎಂ ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಬಿ.ಎನ್.ಮಂಜುನಾಥ್, ಉತ್ತರ ಜಿಲ್ಲಾ ಕಾರ್ಯದರ್ಶಿ ಪ್ರತಾಪಸಿಂಹ ಜಂಟಿ ಹೇಳಿಕೆ ನೀಡಿದ್ದು, ರೂ.19,930 ಕೋಟಿ ಗಾತ್ರದ ಬಿಬಿಎಂಪಿ ಬಜೆಟ್ ಮಂಡಿಸಲಾಗಿದ್ದು, 2025-26 ಸಾಲಿನಲ್ಲಿ ಆಸ್ತಿ ತೆರಿಗೆ & ಇತರೆ ಕಂದಾಯ ಸ್ವೀಕೃತಿ ರೂಪದಲ್ಲಿ ಸುಮಾರು 5716 ಕೋಟಿ ಆದಾಯ ನಿರೀಕ್ಷಿಸಿದ್ದು, ಉಳಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುಮಾನಗಳನ್ನು ಅವಲಂಬಿಸಿದೆ.
ಬ್ರ‍್ಯಾಂಡ್ ಬೆಂಗಳೂರು – ವೈಬ್ರಂಟ್ ಬೆಂಗಳೂರು ಹೆಸರಿನಲ್ಲಿ ನಗರದ ಸುರಂಗ ಮಾರ್ಗ, ಎಲಿವೇಟರ್ ಕಾರಿಡಾರ್, ಡಬ್ಬಲ್ ಡೆಕ್ಕರ್ ರಸ್ತೆ, ವೈಟ್ ಟ್ಯಾಪಿಂಗ್, ಸ್ಕೈ ಡೆಕ್ ನಿರ್ಮಾಣ, ಸಂಪರ್ಕ ಜಾಲ ರಸ್ತೆಗಾಗಿ ರೂ.73,600 ಕೋಟಿ ಗಾತ್ರದ ಬೃಹತ್ ಸಂಕೀರ್ಣ ಯೋಜನೆಗಳನ್ನು ಬಿಬಿಎಂಪಿ ಬಜೆಟ್ ನಲ್ಲಿ ಪ್ರಕಟಿಸಿ ಬೆಂಗಳೂರಿನ ಜನತೆಯನ್ನು ಸಾಲದ ಸುಳಿಗೆ ಸಿಲುಕಿಸಲು ಹೊರಟಿದೆ.
ಇದನ್ನೂ ಓದಿ: ಕಾಡ್ಗಿಚ್ಚು ಕಂಡುಬಂದರೆ ಈ ಅರಣ್ಯ ಸಹಾಯವಾಣಿಗೆ ಕೂಡಲೇ ಕರೆ ಮಾಡಿ
ಕೆರೆ, ಕಾಲುವೆ ಅಭಿವೃದ್ಧಿ, ಪರಿಸರ ಸಂರಕ್ಷಣೆ ಹಾಗೂ ನೇರ ವೇತನ ಪಾವತಿಯ 12692 ಪೌರ ಕಾರ್ಮಿಕರನ್ನು ಖಾಯಂಗೊಳಿಸುವ ಪ್ರಸ್ತಾಪಗಳು ಸ್ವಾಗತಾರ್ಹವಾಗಿದೆ. ಆದರೆ ಜನತೆಯ ಆರೋಗ್ಯ, ಶಿಕ್ಷಣ, ಇನ್ನಿತರ ಕಲ್ಯಾಣಕ್ಕೆ ಕೇವಲ ಶೇ.4 ರಷ್ಟು ಮಾತ್ರ ಹಣವನ್ನು ಮೀಸಲಿಡಲಾಗಿದೆ.
ಜನ ವಸತಿ ಪ್ರದೇಶಗಳಲ್ಲಿ ರಸ್ತೆ, ಒಳಚರಂಡಿ, ರಸ್ತೆಗುಂಡಿ ದುರಸ್ತಿ, ಸ್ಲಂಗಳ ಅಭಿವೃದ್ಧಿ, ವಸತಿ, ಹಕ್ಕುಪತ್ರದಂತಹ ನಾಗರೀಕರ ಮೂಲಭೂತ ಸೌಕರ್ಯಗಳನ್ನು ನಿರ್ಲಕ್ಷಿಸಿ, ತೋರಿಕೆ ಎಂಬಂತೆ ಕೆಲ ಘೋಷಣೆಗಳನ್ನು ಮಾಡಿದೆ. ಬಂಡವಾಳ ಪರ ಯೋಜನೆಗಳಿಗೆ ಬಿಬಿಎಂಪಿ ಬಜೆಟ್ ನ ಶೇ.65 ರಷ್ಟು ಹಣ ಮೀಸಲಿಟ್ಟು, ಜನತೆಯ ನಿಜವಾದ ಅಭಿವೃದ್ಧಿಯನ್ನು ನಿರ್ಲಕ್ಷಿಸಿದೆ.
ರಾಜಕಾಲುವೆ ಪ್ರದೇಶವನ್ನು ಬಳಸಿ ಸಂಪರ್ಕ ರಸ್ತೆ ಜಾಲ ನಿರ್ಮಾಣ ಮಾಡುವುದಾಗಿ ಪ್ರಕಸಿದ್ದು, ಕೆರೆ & ರಾಜಕಾಲುವೆ ಪ್ರದೇಶಗಳಿಗೆ ಹೊಂದಿಕೊಂಡಿರುವ ಸ್ಲಂಗಳನ್ನು ಸ್ಥಳಾಂತರಿಸಲಾಗುತ್ತದೆ ಎಂದು ಬಜೆಟ್ ನಲ್ಲಿ ತಿಳಿಸಲಾಗಿದೆ. ಇದರಿಂದ ಬಾಧಿತರಾದ ಸ್ಲಂ ಜನರ, ಸಾಮಾನ್ಯ ಜನರಿಗೆ ಪುನರ್ ವಸತಿ ಕಲ್ಪಿಸುವ ಕುರಿತು ಯಾವುದೇ ಸ್ಪಷ್ಟನೆ ನೀಡದಿರುವುದು ಜನ ವಿರೋಧಿ ನಡೆಯಾಗಿದೆ. ತೆರವು ಕಾರ್ಯಚರಣೆಯಿಂದ ಬಾಧಿತರಾದ ಸ್ಲಂ ಜನ, ಸಾಮಾನ್ಯ ಜನರಿಗೆ ಪುನರ್ ವಸತಿ, ಪರಿಹಾರ ನೀಡಬೇಕೆಂದು ಸಿಪಿಐ(ಎಂ) ಆಗ್ರಹಿಸುತ್ತದೆ.
ಬಿಬಿಎಂಪಿ ಬಜೆಟ್ ನಲ್ಲಿ ಆಸ್ತಿ ನಿರ್ವಹಣೆಯನ್ನು ಗುತ್ತಿಗೆಗೆ ನೀಡಲು ಹಾಗೂ ಘನತ್ಯಾಜ್ಯ ನಿರ್ವಹಣೆಯನ್ನು ಖಾಸಗಿ-ಸಾರ್ವಜನಿಕ ಸಹ ಭಾಗಿತ್ವಕ್ಕೆ ನೀಡುವ ಹಾಗೂ ಘನತ್ಯಾಜ್ಯ ಬಳಕೆದಾರರ ಶುಲ್ಕ ಆಸ್ತಿ ತೆರಿಗೆಯೊಂದಿಗೆ ಸಂಗ್ರಹ ಮಾಡುವಂತಹ ಜನ ವಿರೋಧಿ ಕ್ರಮಗಳನ್ನು ಪ್ರಕಟಿಸಿದೆ.
ರಾಜ್ಯ ಸರ್ಕಾರ ಬೆಂಗಳೂರನ್ನು ಜಾಗತೀಕ ಬಂಡವಾಳಗಾರರ ಕೇಂದ್ರವಾಗಿಸಲು ಘೋಷಿಸಿರುವ ಹಲವು ಯೋಜನೆಗಳ ಜಾರಿಗೆ ಪೂರಕವಾಗಿ ಬಿಬಿಎಂಪಿ ಬಜೆಟ್ ನ್ನು ರೂಪಿಸಿದ್ದು, ಇದು ಖಾಸಗಿ ಲೂಟಿಗೆ ಮತ್ತಷ್ಟು ಅವಕಾಶ, ಭ್ರಷ್ಟಾಚಾರಕ್ಕೆ ರಹದ್ದಾರಿ ಕಲ್ಪಿಸುವ ಬಜೆಟ್ ಆಗಲಿದೆ ಎಂದು ಸಿಪಿಐ(ಎಂ) ಬೆಂಗಳೂರು ಜಿಲ್ಲಾ ಸಮಿತಿ ಖಂಡಿಸಿದೆ.
ಇದನ್ನೂ ನೋಡಿ: ಮ್ಯಾನ್ಮಾರ್-ಥೈಲ್ಯಾಂಡ್ ಭೂಕಂಪದ ಭಯಾನಕ ವಿಡಿಯೋಗಳು Janashakthi Media