ಬೆಡ್ ದಂಧೆ ಹೇಗೆ ನಡೆಯುತ್ತದೆ? ನ್ಯಾಯಾಂಗ ತನಿಖೆಗೆ ಸಂಘಟನೆಗಳ ಆಗ್ರಹ
ಬೆಂಗಳೂರು: ಬೆಡ್‌ಗಾಗಿ ಕೋವಿಡ್ ರೋಗಿಗಳು ದಿನನಿತ್ಯ ಪರದಾಡುತ್ತಿದ್ದಾರೆ. ಬೆಡ್ ಸಿಗದೆ ಜನರು ಬೀದಿಯಲ್ಲಿ ನರಳಾಡಿ ಸಾಯುತ್ತಿರುವ ಸಂದರ್ಭದಲ್ಲೆ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ನಿರತರಾಗಿದ್ದು, ರೋಗಿಗಳಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಇದರಲ್ಲಿ ಸರ್ಕಾರಿ ಅಧಿಕಾರಿಗಳೂ ಶಾಮೀಲಾಗಿದ್ದಾರೆ’ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಸತೀಶ್ ರೆಡ್ಡಿ, ರವಿ ಸುಬ್ರಹ್ಮಣ್ಯ ಮತ್ತು ಉದಯ ಗರುಡಾಚಾರ್ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಬೆಂಗಳೂರಿನ ಆಸ್ಪತ್ರೆಗಳಲ್ಲಿ ಹಾಸಿಗೆ ಪಡೆದುಕೊಳ್ಳಲು ಜನ ಅಂಗಲಾಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಸಕರು, ಸಂಸದರ ಕಚೇರಿಗೆ ರಾತ್ರಿ 3 ಗಂಟೆಯವರೆಗೂ ಕರೆಗಳು ಬರುತ್ತಿವೆ. ಆಂಬುಲೆನ್ಸ್, ಹಾಸಿಗೆಯ ವ್ಯವಸ್ಥೆ ಮಾಡಿಕೊಡಿ ಎಂದು ಅವರೆಲ್ಲಾ ಪರಿಪರಿಯಾಗಿ ಬೇಡುತ್ತಿರುತ್ತಾರೆ. ಯಾವ ಆಸ್ಪತ್ರೆ, ವಾರ್ ರೂಂ ಗಳಿಗೆ ಕರೆ ಮಾಡಿದರೂ ಹಾಸಿಗೆ ಇಲ್ಲ ಎಂಬ ಉತ್ತರ ಬರುತ್ತದೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಂಡಾಗ ಹಾಸಿಗೆ ಲಭ್ಯತೆಯ ಮಾಹಿತಿ ಮುಚ್ಚಿಡುವ ಜಾಲವೊಂದು ಹುಟ್ಟಿಕೊಂಡಿರುವುದು ಬೆಳಕಿಗೆ ಬಂದಿದೆ’ ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.
ಇಬ್ಬರ ಬಂಧನ : ಈ ಬೆಡ್ ಬುಕಿಂಗ್ ದಂಧೆಗೆ ಸಂಬಂಧಪಟ್ಟಂತೆ ಇಬ್ಬರನ್ನು ಬಂಧಿಸಿರುವ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಈ ದಂಧೆಯಲ್ಲಿ ಪಾತ್ರವಹಿಸಿದ್ದಾರೆ ಎನ್ನಲಾದ ರೋಹಿತ್ ಮತ್ತು ನೇತ್ರಾ ಎಂಬುವರನ್ನು ಜಯನಗರ ಠಾಣೆಯ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ. ರೋಹಿತ್ & ನೇತ್ರಾರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಇವರ ಜೊತೆ ದಂಧೆಯಲ್ಲಿ ಭಾಗಿಯಾಗಿದ್ದವರ ಪತ್ತೆಗೆ ತೀವ್ರ ಶೋಧ ನಡೆಸಲಾಗುತ್ತಿದೆ. ಸೆಕ್ಷನ್ 420, 384 ಅಡಿ ಇವರಿಬ್ಬರನ್ನು ಬಂಧನ ಮಾಡಲಾಗಿದೆ.
ಮೂರು ಐಸಿಯು ಬೆಡ್ ಗಳನ್ನ ಮಾರಿದ್ದ ದಂಧೆ ಕೋರರು ಅರೆಸ್ಟ್ ಆಗಿದ್ದಾರೆ.ಇಬ್ಬರ ಅಕೌಂಟ್ ನಿಂದ ಒಂದು ಲಕ್ಷದ ಐದು ಸಾವಿರ ರೂ ಪತ್ತೆಯಾಗಿದೆ. ಪೇಷೆಂಟ್ ಗಳಿಂದ ಐವತ್ತು ಸಾವಿರಕ್ಕೆ ಡಿಮ್ಯಾಂಡ್ ಇಟ್ಟು ಡೀಲ್ ಕುದುರಿಸುತ್ತಿದ್ದ ದಂಧೆ ಕೋರರು ಬಲೆಗೆ ಬಿದ್ದಿದ್ದಾರೆ. ಬೆಡ್ ಸಿಕ್ಕರೆ ಸಾಕು ಅನ್ನೊನಿಟ್ಟಿನಲ್ಲಿ ಪೇಷೆಂಟ್ ಗಳು ಹಣ ನೀಡುತ್ತಿದ್ದರು ಎನ್ನುವ ಅಂಶ ಬೆಳಕಿಗೆ ಬಂದಿದೆ.
ಇದನ್ನು ಓದಿ: ಆಕ್ಸಿಜನ್‌ಗಾಗಿ ನಿಲ್ಲದ ಹಾಹಾಕಾರ – ಕರ್ನಾಟಕದಲ್ಲಿ ಆಕ್ಸಿಜನ್ ಉತ್ದಾದನೆ ಹೇಗಿದೆ?
ಬೆಡ್ ಡೀಲ್ ಹೇಗೆ ನಡೆಯುತ್ತಿತ್ತು ? : ಜನರು ತಮಗೆ ಕೊರೊನಾ ಸೋಂಕು ತಗಲುತ್ತಿದ್ದಂತೆ ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿ ಬೆಡ್ ಕೇಳುತ್ತಾರೆ. ಈ ವೇಳೆ ಅಧಿಕಾರಿಗಳು ಎ ಸಿಂಥೆಮೆಟಿಕ್ ಆಗಿದ್ರೆ ಮನೆಯಲ್ಲಿಯೇ ಐಸೋಲೇಟ್ ಆಗುವಂತೆ ತಿಳಿಸಿ, ಅವರಿಂದ ಹೆಸರು, ಬಿಯು ನಂಬರ್ ಪಡೆದುಕೊಂಡು ಆಸ್ಪತ್ರೆಯಲ್ಲಿ ಬೆಡ್ ಬ್ಲಾಕ್ ಮಾಡಿಕೊಳ್ಳುತ್ತಿದ್ದರು ಎನ್ನುವ ಅಂಶ ಈಗ ಹೊರ ಬಿದ್ದಿದೆ.
ಬೆಂಗಳೂರಿನ ನಿವಾಸಿಗೆ ಪಾಸಿಟಿವ್ ವರದಿ ಬರುತ್ತಿದ್ದಂತೆ, ಆಯಾ ಭಾಗದ ವಾರ್ ಸಿಬ್ಬಂದಿಗೆ ಸೋಂಕಿತನ ಹೆಸರು, ಬಿಯು ನಂಬರ್ ಮತ್ತು ವಿಳಾಸದ ಮಾಹಿತಿ ಹೋಗುತ್ತದೆ. ಸೋಂಕಿತನ ಮಾಹಿತಿ ಬರುತ್ತಿದ್ದಂತೆ ಕೆಲವರಿಗೆ ಫೋನ್ ಮಾಡಿ ಆರೋಗ್ಯದ ಮಾಹಿತಿ ಪಡೆದುಕೊಳ್ಳುತ್ತಾರೆ. ಸೋಂಕಿತ ಎ ಸಿಮ್ಟಮ್ಯಾಟಿಕ್ ಅಂತಾ ಗೊತ್ತಾಗುತ್ತಲೇ ಆತನನ್ನು ಹೋಂ ಐಸೋಲೇಷನ್ ಆಗುವಂತೆ ತಿಳಿಸಿ ಆತನ ಹೆಸರಲ್ಲಿ ಬೆಡ್ ಬುಕ್ ಮಾಡುತ್ತಾರೆ. ಕಾಯ್ದಿರಿಸಿದ ಬೆಡ್ ತಮ್ಮ ಏಜೆಂಟ್ ಗಳ ಮೂಲಕ ಸೇಲ್ ಮಾಡಲಾಗುತ್ತೆ. 12 ಗಂಟೆಯೊಳಗೆ ಸೋಂಕಿತ ಆಸ್ಪತ್ರೆಗೆ ದಾಖಲಾಗದಿದ್ರೆ ಅದನ್ನ ವೆಬ್‍ಸೈಟ್ ನಲ್ಲಿ ಖಾಲಿ ಅಂತ ತೋರಿಸಲಾಗುತ್ತೆ. ಆಗ ಮತ್ತೋರ್ವ ಎ ಸಿಮ್ಟಮ್ಯಾಟಿಕ್ ರೋಗಿಯ ಹೆಸರನ್ನ ಹಾಕಿ ದಂಧೆ ಮಾಡಲಾಗುತ್ತಿದೆ.
ವಾರ್ ರೂಮಿನಲ್ಲಿ ಕೆಲಸ ಮಾಡೋರು ಸರ್ಕಾರಿ ಅಧಿಕಾರಿಗಳಲ್ಲ. ಹಾಗಾಗಿ ಅಲ್ಲಿದ್ದವರು ಹೊರಗಿನ ತಮ್ಮ ಏಜೆಂಟ್ ಗಳ ಮೂಲಕ ಹಣ ಮಾಡುವ ದಂಧೆಗೆ ಮುಂದಾಗುತ್ತಿದ್ದಾರೆ. ಆದರೆ ಅವರು ಅಧಿಕಾರಿ ಇಲ್ಲವೆ ಆ ಭಾಗದ ಶಾಸಕರ, ಇಲ್ಲವೆ ಪ್ರಭಾವಿ ರಾಜಕಾರಣಿಗಳ ಸಹಕಾರ ಇಲ್ಲದೆ ಇಂತಹ ದೊಡ್ಡ ದೈರ್ಯ ಮಾಡಲು ಸಾಧ್ಯವಿಲ್ಲ. ಹಾಗಾದ್ರೆ ಬುಕ್ ಮಾಡೋ ದಂಧೆಯಲ್ಲಿ ಕೇವಲ ಅಧಿಕಾರಿಗಳೇ ಭಾಗಿಯಾಗಿದ್ರಾ? ಇದರಲ್ಲಿ ಜನಪ್ರತಿನಿಧಿಗಳು ಶಾಮೀಲಾಗಿದ್ದಾರಾ ಅನ್ನೋದು ತನಿಖೆಯಲ್ಲಿ ತಿಳಿದು ಬರಬೇಕಿದೆ.
ಇದನ್ನೂ ಓದಿ : ಬೆಡ್, ಆಕ್ಸಿಜನ್ ಸಿಗದೆ ಕೊರೊನಾ ವಾರಿಯರ್ ನಿಧನ
ಕಾಂಗ್ರೆಸ್ ಪ್ರತಿಕ್ರಿಯೆ : ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಸಂಸದ ತೇಜಸ್ವಿ ಅವರು ಸಿಎಂ ಯಡಿಯೂರಪ್ಪ ಹಾಗೂ ಸಚಿವರ ವಿರುದ್ಧ ಭ್ರಷ್ಟಾಚಾರ ಹಾಗೂ ಪರೋಕ್ಷ ಹತ್ಯೆ ಆರೋಪ ಮಾಡಿದ್ದಾರೆ. ಎಂತಹ ನಾಟಕ ಎಂದು ಹೇಳಿದೆ. ರಾಜ್ಯದಲ್ಲೂ ಕೇಂದ್ರದಲ್ಲೂ ಬಿಬಿಎಂಪಿಯಲ್ಲೂ ಬಹುತೇಕ ಬೆಂಗಳೂರು ಎಂಪಿಗಳೂ ಎಲ್ಲರೂ ಬಿಜೆಪಿಯವರೇ! ಒಬ್ಬರಲ್ಲ ಎಂದು ಮೂರು ಡಿಸಿಎಂಗಳು. ಅಧಿಕಾರವೆಲ್ಲ ತಮ್ಮ ಕೈಲಿದ್ದು ಸಹ ಬಿಜೆಪಿಯ ಎಂಪಿಗಳು, ಶಾಸಕರು ಪ್ರೆಸ್ ಮೀಟ್ ಮಾಡಿ ತಮ್ಮದೇ ಸರ್ಕಾರದ ವೈಫಲ್ಯತೆ, ಭ್ರಷ್ಟಾಚಾರವನ್ನು ಹೇಳುತ್ತಿದ್ದಾರೆ ಎಂದರೆ ಇದು ತೀರ ನಾಚಿಕೆಗೇಡು ಎಂದು ವಾಗ್ದಾಳಿ ನಡೆಸಿದೆ. ಪ್ರಕರಣದ ತನಿಖೆಯಾಗಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಬಿಬಿಎಂಪಿ ಬೆಡ್ ಬ್ಲಾಕಿಂಗ್ ನ್ಯಾಯಾಂಗ ತನಿಖೆಗೆ ಸಿಪಿಐ(ಎಂ) ಆಗ್ರಹ : ಕೋವಿಡ್ ಬೆಡ್ಗಳನ್ನು ಬ್ಲಾಕಿಂಗ್ ಮಾಡಿ ದುಡ್ಡಿದ್ದವರಿಗೆ ಮಾರಿರುವ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ್೯ವಾದಿ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಒತ್ತಾಯಿಸಿವೆ.
ರಾಜ್ಯ ಸಕಾ೯ರವು ಇಡಿ ಕೋವಿಡ್ ಸೋಂಕಿತರಿಗೆ ಬೆಡ್ ಒದಗಿಸುವಲ್ಲಿ, ಆಮ್ಲಜನಕ ನೀಡುವಲ್ಲಿ, ಐಸಿಯು, ವೆಂಟಿಲೇಟರ್,ರೆಮಿಡಿಸಿವಿರ್ ಒದಿಗುಸುವಲ್ಲಿ ನಿರಂತರವಾಗಿ ಎಡವುತ್ತಾ ಬಂದಿದೆ. ಮೇ ಒಂದರಿಂದ ಆರಂಭವಾಗ ಬೇಕಿದ್ದ 18 ವಷ೯ದ ಮೇಲಿನವರಿಗೂ ಲಸಿಕೀಕರಣವು ಲಸಿಕೆ ಕೊರತೆಯಿಂದ ಮುಂದೂಡಲ್ಪಟ್ಟಿದೆ. ಇದರ ಮುಂದುವರೆದ ಭಾಗವಾಗಿ ಇದೀಗ 4065 ಬೆಡ್ಗಳ ಬ್ಲಾಕಿಂಗ್ ದಂಧೆಯ ಹಗರಣ ಹೊರಬಿದ್ದಿದೆ. ಇದರ ಜೊತೆಯಲ್ಲೇ ಮನೆ ಆರೈಕೆಯಲ್ಲಿನ ರೋಗಿಗಳಿಗೆ ನೀಡಬೇಕಾದ ಮೆಡಿಕಲ್ ಕಿಟ್ಗಳನ್ನು ನೀಡದಿರುವ ವರದಿಗಳು ವ್ಯಾಪಕವಾಗಿವೆ. ಇಂತಹ ಹತ್ತಾರು ದೂರುಗಳಿವೆ ಆದಕಾರಣ ಒಟ್ಟಾರೆ ನ್ಯಾಯಾಂಗ ತನಿಖೆಗೆ ಸಕಾ೯ರ ಆದೇಶಿಸ ಬೇಕೆಂದು ಸಿಪಿಐ(ಎಂ) ಆಗ್ರಹಿಸಿದೆ.
ಸಾರ್ವಜನಿಕವಾಗಿ ಸತ್ಯ ಒಪ್ಪಿಕೊಳ್ಳಿ ಸಂಘಟನೆಗಳ ಆಗ್ರಹ : ಕೊರೊನಾದಿಂದ ತತ್ತರಿಸಿ ಆಸ್ಪತ್ರೆ ಯ ಬೆಡ್ ಗಳಿಗಾಗಿ ಜನ ಬೀದಿ ಬೀದಿ ಅಲೆಯುತ್ತಿದ್ದಾರೆ. ಉಳ್ಳವರಿಗೆ ಯಾವ ಸಮಸ್ಯೆಯೂ ಇಲ್ಲದೇ ಬೆಡ್ ಆಕ್ಸಿಜನ್ ಔಷಧಿ ಎಲ್ಲವೂ ಸಿಗುವಾಗ ಜನ ಸಾಮಾನ್ಯರು ಪರದಾಡಿ ಸಾಯುತ್ತಿದ್ದಾರೆ. ಈ ಹೊತ್ತಿನಲ್ಲಿ ಬಿ.ಬಿ.ಎಂ.ಪಿ ವಾರ್ ರೂಂ ಗಳು ಬೆಡ್ ಬ್ಲಾಕ್ ದಂಧೆಯಲ್ಲಿ ತೊಡಗಿವೆ. ಸುಮಾರು 4065 ಬೆಡ್ ಗಳನ್ನು ಅಕ್ರಮವಾಗಿ ಕಾಯ್ದಿರಿಸಲಾಗಿದೆ ಎಂಬ ಮಾಹಿತಿಯನ್ನು ಸ್ವತಃ ಬಿ.ಜೆ.ಪಿ.ಯ ಸಂಸದ ಶಾಸಕರೇ ಬಯಲಿಗೆಳೆದರೆಂಬ ಮಾಹಿತಿಗಳು ಹಲವು ಅನುಮಾನಗಳನ್ನು ಹುಟ್ಟಿಸುತ್ತಿವೆ ಎಂದು ಹೇಳಿರುವ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಇಂತಹ ದಂಧೆಕೋರತನವನ್ನು ಅತ್ಯುಗ್ರವಾಗಿ ಖಂಡಿಸಿದೆ.
ಸತ್ಯವನ್ನು ಬಯಲಿಗೆಳೆಯಲು ನ್ಯಾಯಾಂಗ ತನಿಖೆ ನಡೆಸಬೇಕು. ವಾರ್ ರೂಂ ಗಳನ್ನು ರಚಿಸಲು ಅಲ್ಲಿ ಸಿಬ್ಬಂದಿಯನ್ನು ನೇಮಿಸಲು ಅನುಸರಿಸಿದ ಮಾನದಂಡಗಳೇನು. ಹೀಗೆ ಬ್ಲಾಕ್ ಮಾಡಿದ ಆಸ್ಪತ್ರೆಗಳ ಪಾತ್ರವೇನು,ವಾರ್ ರೂಂ ಗಳ ಕೇಂದ್ರ ಮಾನಿಟರಿಂಗ್ ವ್ಯವಸ್ಥೆ ಗಳೇನಿವೆ ಇವೆಲ್ಲ ಮಾಹಿತಿ ಗಳು ಸಾರ್ವಜನಿಕರಿಗೆ ದೊರೆಯಬೇಕು ಎಂದು ಜನವಾದಿ ಮಹಿಳಾ ಸಂಘಟನೆ ಆಗ್ರಹಿಸಿದೆ.
ಕೊರೋನ ರೋಗಿಗಳಿಗೆ ಮೀಸಲಾದ ಆಸ್ಪತ್ರೆಗಳಲ್ಲಿ ನಡೆದಿರುವ ಬೆಡ್ ಬುಕ್ಕಿಂಗ್ ದಂಧೆಗೆ ರಾಜ್ಯದ ಬಿಜೆಪಿ ಸರಕಾರವೇ ನೇರ ಹೊಣೆ ಎಂದು ಡಿವೈಎಫ್‌ಐ ಆರೋಪಿಸಿದೆ. ರಾಜ, ಮಂತ್ರಿಗಳೇ ಕಳ್ಳರಾದ ಸಂದರ್ಭದಲ್ಲಿ ಗುಮಾಸ್ತರು, ಸುಂಕ ಸಂಗ್ರಹದ ನೌಕರರು ಒಂದಿಷ್ಟು ಜೇಬಿಗಿಸುವುದರಲ್ಲಿ ಅಚ್ಚರಿ ಏನಿದೆ ! ? ಕೊರೋನ ಮೊದಲ ಅಲೆ, ಲಾಕ್ ಡೌನ್ ಸಂದರ್ಭ ರಾಜ್ಯ ಸರಕಾರದ ಮಂತ್ರಿ ಮಂಡಲದ ಪ್ರಮುಖರು ನಡೆಸಿದ ಭ್ರಷ್ಟಾಚಾರ, ಕಮೀಷನ್ ದಂಧೆಯನ್ನು ಜನ ಇನ್ನೂ ಮರೆತಿಲ್ಲ. ಬೆಂಗಳೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ಸ್ಥಾಪಿಸಲಾಗಿದ್ದ ಹತ್ತು ಸಾವಿರ ಬೆಡ್ ಗಳ ತಾತ್ಕಾಲಿಕ ಕೋವಿಡ್ ಆಸ್ಪತ್ರೆ ಈಗ ಅಡ್ರಸ್ಸಿಗೇ ಇಲ್ಲವಲ್ಲ. ಅದರ ನಿರ್ಮಾಣ, ಖರೀದಿಗೆ ಉಪಯೋಗಿಸಿದ ನೂರಾರು ಕೋಟಿ ಹಣ ಸೇರಿದ್ದು ವಾರ್ ರೂಂ ನ ಸಿಬ್ಬಂದಿಗಳ ಜೇಬಿಗಾ, ಉಸ್ತುವಾರಿ ಹೊತ್ತಿದ್ದ ಸಚಿವರುಗಳ ಖಜಾನೆಗಾ ? ಈ ಬೆಡ್ ದಂಧೆಯಲ್ಲಿ ಯಾರಿದ್ದಾರೆ ಎಂಬ ಸತ್ಯವನ್ನು ಬಯಲಿಗೆಳೆಯಲು ನ್ಯಾಯಾಂಗ ತನಿಖೆಯ ಅಗತ್ಯವಿದೆ ಎಂದು ಡಿವೈಎಫ್‌ಐ ಒತ್ತಾಯಿಸಿದೆ.