ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಕುರಿತು ಬಿಬಿಸಿ ನಿರ್ಮಿಸಿರುವ ‘ಇಂಡಿಯಾ: ದಿ ಮೋದಿ ಕ್ವಶ್ಚನ್’ ಹೆಸರಿನ ವಿವಾದಿತ ಸಾಕ್ಷ್ಯಚಿತ್ರ ದೇಶದಲ್ಲಿ ಬಿರುಗಾಳಿ ಎಬ್ಬಿಸುತ್ತಿದೆ. ಮಂಗಳವಾರ ರಾತ್ರಿ ಬಿಬಿಸಿ ಸಾಕ್ಷ್ಯಚಿತ್ರ ವೀಕ್ಷಿಸುವ ವೇಳೆ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಕಲ್ಲು ತೂರಾಟದ ಆರೋಪಗಳು ಕೇಳಿಬಂದಿವೆ. ಇನ್ನು, ಡಾಕ್ಯುಮೆಂಟರಿ ವೀಕ್ಷಿಸಬಾರದು ಎಂದು ದಿಲ್ಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ವಿದ್ಯುತ್ ಕಡಿತ ಮಾಡಿದ್ದು, ಇಂಟರ್‌ನೆಟ್ ಕೂಡ ಸ್ಥಗಿತಗೊಳಿಸಲಾಗಿತ್ತು ಎನ್ನಲಾಗಿದೆ.
ಜೆಎನ್‌ಯು ವಿದ್ಯಾರ್ಥಿಗಳು ಮಂಗಳವಾರ ರಾತ್ರಿ 9 ಗಂಟೆಗೆ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ನಿಗದಿಪಡಿಸಿದ್ದರು. ಆದರೆ, ವಿವಿಯಲ್ಲಿ ವಿದ್ಯುತ್ ಮತ್ತು ಇಂಟರ್‌ನೆಟ್ ಸ್ಥಗಿತಗೊಂಡಿದ್ದರಿಂದ ಸಾಕ್ಷ್ಯ ಚಿತ್ರ ಪ್ರದರ್ಶನದವನ್ನು ವಿಫಲಗೊಳಿಸುವ ಪ್ರಯತ್ನಗಳು ನಡೆದವು. ವಿದ್ಯಾರ್ಥಿಗಳು ತಮ್ಮ ತಮ್ಮ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಸಾಕ್ಷ್ಯ ಚಿತ್ರವನ್ನು ವೀಕ್ಷಿಸಲು ಕ್ಯಾಂಪಸ್‌ನ ಕ್ಯಾಂಟೀನ್‌ಗೆ ತೆರಳಿದ್ದಾರೆ. ಈ ವೇಳೆ ಅವರ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ : ನಜೀಬ್ ಎಲ್ಲಿ? ಐದು ವರ್ಷ ಕಳೆದರು ಪತ್ತೆಯಾಗಲಿಲ್ಲ ನಜೀಬ್?!
ಸಾಕ್ಷ್ಯಚಿತ್ರ ಪ್ರದರ್ಶಿಸುತ್ತಿದ್ದಾಗ ವಿವಿ ಕ್ಯಾಂಪಸ್ ನಲ್ಲಿ ಕಲ್ಲು ತೂರಾಟ ಮಾಡಲಾಗಿದೆ. ಆಡಳಿತದಿಂದ ಮುಖ್ಯದ್ವಾರವನ್ನು ಮುಚ್ಚಲಾಗಿತ್ತು. ಜೆಎನ್ ಯು ವಿದ್ಯಾರ್ಥಿ ಯೂನಿಯನ್ ಪದಾಧಿಕಾರಿಗಳ ಮೇಲೆ ಕಲ್ಲು, ಇಟ್ಟಿಗೆ ತೂರಾಟ ನಡೆಸಲಾಗಿದೆ. ಸಾಕ್ಷ್ಯಚಿತ್ರ ವೀಕ್ಷಿಸುತ್ತಿದ್ದ ಜೆಎನ್ ಎಸ್ ಯು ಸದಸ್ಯರು ಮತ್ತು ವಿದ್ಯಾರ್ಥಿಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ನಮ್ಮ ಮೇಲೆ ಕಲ್ಲು ತೂರಾಟ ನಡೆಸಿದ ಈ ಇಬ್ಬರು ವಿದ್ಯಾರ್ಥಿಗಳು ಎಬಿವಿಪಿಗೆ ಸೇರಿದವರು. ಒಂದು ವೇಳೆ ಸಾಕ್ಷ್ಯಚಿತ್ರ ಪ್ರದರ್ಶನದಿಂದ ಎಬಿವಿಪಿಗೆ ತೊಂದರೆಯಾದಲ್ಲಿ ಅವರು ಸಮಾನಂತರ ಪ್ರದರ್ಶನ ಆಯೋಜಿಸಲಿ ಅಥವಾ ಇದರ ಬಗ್ಗೆ ಚರ್ಚೆ ನಡೆಸಲಿ ಎಂದು ಜೆಎನ್ ಯುಎಸ್ ಯು ಅಧ್ಯಕ್ಷ ಐಶೆ ಘೋಷ್ ಹೇಳಿದ್ದಾರೆ.
ಬಿಬಿಸಿ ಸಾಕ್ಷ್ಯಚಿತ್ರವನ್ನು ಎಸ್‌ಎಫ್‌ಐ ಸೇರಿದಂತೆ ವಿವಿಧ ಸಂಘಟನೆಗಳು ಮಂಗಳವಾರ ಕೇರಳದಾದ್ಯಂತ ಪ್ರದರ್ಶಿಸಿದವು. ಹೈದರಾಬಾದ್ ವಿಶ್ವವಿದ್ಯಾಲಯದ ಕೆಲ ವಿದ್ಯಾರ್ಥಿಗಳು ವಿವಿ ಕ್ಯಾಂಪಸ್‌ನಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸಿದ್ದಾರೆ. ಈ ನಡುವೆ ಕೋಲ್ಕತ್ತಾದ ಪ್ರೆಸಿಡೆನ್ಸಿ ವಿಶ್ವವಿದ್ಯಾನಿಲಯದ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಜನವರಿ 27 ರಂದು ಸಂಜೆ 4 ಗಂಟೆಗೆ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ ಸಾಕ್ಷ್ಯಚಿತ್ರ ಪ್ರದರ್ಶಿಸಲು ವಿಶ್ವವಿದ್ಯಾಲಯದ ಅಧಿಕಾರಿಗಳಿಂದ ಅನುಮತಿ ಕೇಳಿದೆ.
ಕೊಲ್ಕತ್ತಾ ಪ್ರೆಸಿಡೆನ್ಸಿ ವಿಶ್ವವಿದ್ಯಾನಿಲಯದ ಎಸ್‌ಎಫ್‌ಐ, ಬೃಹತ್ ಪರದೆಯಲ್ಲಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸುವ ಸಾಧ್ಯತೆಯಿರುವ ಹಿನ್ನೆಲೆ ಕ್ಯಾಂಪಸ್‌ನಲ್ಲಿ ಬ್ಯಾಡ್ಮಿಂಟನ್ ಕೋರ್ಟ್ ಅನ್ನು ಕಾಯ್ದಿರಿಸಲು ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಇಮೇಲ್ ಕಳುಹಿಸಿದೆ. ಆದರೆ, ವಿಶ್ವವಿದ್ಯಾಲಯದ ಅಧಿಕಾರಿಗಳು ಮನವಿಗೆ ಇನ್ನೂ ಸ್ಪಂದಿಸಿಲ್ಲ ಎಂದು ತಿಳಿದು ಬಂದಿದೆ.
2002ರಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನಡೆದಿದ್ದ ಗೋಧ್ರೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿದಂತಹ ಕೆಲವು ವಿಷಯಗಳ ತನಿಖೆಯ ವಿಷಯವಿದು ಎಂದು ಎರಡು ಕಂತಿನ ಸಾಕ್ಷ್ಯಚಿತ್ರದಲ್ಲಿ ಹೇಳಲಾಗಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ