ಬೆಂಗಳೂರು: ಬೆಳಗಾವಿಯಲ್ಲಿ ಮುಕ್ತಾಯವಾದ ವಿಧಾನಮಂಡಲದ ಅಧಿವೇಶನದಲ್ಲಿ ರಾಜ್ಯದ ಬಿಜೆಪಿ ಸರಕಾರ ವಸತಿ ಹೀನರಿಗೆ ಈಗಾಗಲೇ ವಸತಿ ಸೌಲಭ್ಯ ಒದಗಿಸುವುದಾಗಿ ಪ್ರಕಟಿಸಿದ್ದ 5,962 ಗ್ರಾಮ ಪಂಚಾಯತ್ಗಳ 1,19,240 ವಸತಿ ಸೌಲಭ್ಯಗಳನ್ನು ಹಿಂಪಡೆಯುವ ಘನ ಕಾರ್ಯ ಮಾಡಿದೆ. ಆ ಮೂಲಕ ಸರಕಾರ ಅವರ ಬೆನ್ನಿಗೆ ಚೂರಿ ಹಾಕಿದೆಯೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ರಾಜ್ಯ ಸಮಿತಿ ತೀವ್ರವಾಗಿ ಖಂಡಿಸುತ್ತದೆ.
ಹೇಲಿಕೆ ಬಿಡುಗಡೆ ಮಾಡಿರುವ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಅವರು ರಾಜ್ಯ ಸರಕಾರ ಈ ಕೂಡಲೇ ಸೌಲಭ್ಯ ರದ್ದು ಪಡಿಸಿರುವುದನ್ನು ವಾಪಾಸು ಪಡೆದು ತುರ್ತು ಕ್ರಮವಹಿಸಿ, ವಸತಿ ಸೌಲಭ್ಯ ಒದಗಿಸಬೇಕೆಂದು ಬಲವಾಗಿ ಒತ್ತಾಯಿಸಿದ್ದಾರೆ.
ಸದರಿ ಸೌಲಭ್ಯವನ್ನು ಒದಗಿಸುವುದಕ್ಕಾಗಿ ಕಳೆದ ಗ್ರಾಮ ಪಂಚಾಯತ್ ಚುನಾವಣೆಯ ಪೂರ್ವವೇ ರಾಜ್ಯ ಸರಕಾರ ಪ್ರಕಟಿಸಿತ್ತು. ಅದೇ ರೀತಿ, ಇತ್ತೀಚಿಗೆ ನಡೆದ ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸುವ ವಿಧಾನ ಪರಿಷತ್ ಚುನಾವಣೆಯ ಸಂದರ್ಭದಲ್ಲೂ ಹೇಳಲಾಗಿತ್ತು.
ಎರಡೂ ಚುನಾವಣೆಗಳ ಪೂರ್ವ ಜನತೆಗೆ ವಾಗ್ಧಾನ ನೀಡಿ, ಅಮಿಷ ಒಡ್ಡಿ, ರಾಜಕೀಯ ಲಾಭ ಪಡೆದುಕೊಂಡ ರಾಜ್ಯ ಸರಕಾರ, ಈಗ ಇಲ್ಲದ ನೆಪಗಳನ್ನು ಹೇಳಿ ವಿಧಾನಸಭಾ ಅಧಿವೇಶನದಲ್ಲಿ ಒಂದೆಡೆ ಜನತೆಗೆ ಬೇಕಿಲ್ಲದ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ವಿಧೇಯಕ ಮಂಡಿಸುವ ಗದ್ದಲವೆಬ್ಬಿಸಿ, ಜನತೆಯ ಗಮನವನ್ನು ಬೇರೆಡೆ ಸೆಳೆದು ಮತ್ತೊಂದೆಡೆ, ಬಡವರ ವಸತಿ ಸೌಲಭ್ಯ ರದ್ದುಪಡಿಸಿರುವುದಾಗಿ, ವಸತಿ ಖಾತೆ ಸಚಿವರ ಮೂಲಕ ಪ್ರಕಟಿಸಿರುವುದನ್ನು ಏನೆಂದು ಬಣ್ಣಿಸಬೇಕೆಂದು ಸಿಪಿಐ(ಎಂ) ಒತ್ತಾಯಿಸಿದೆ.
ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯವು ಅತಿವೃಷ್ಠಿ, ಪ್ರವಾಹ, ಕೋವಿಡ್-19, ಲಾಕ್ಡೌನ್ಗಳು, ಅಗತ್ಯ ವಸ್ತುಗಳ ವ್ಯಾಪಕ ಬೆಲೆ ಏರಿಕೆ, ನಿರುದ್ಯೋಗ ಮುಂತಾದ ಸಂಕಷ್ಠಗಳಿಂದಾಗಿ ರಾಜ್ಯದ ಬಡ ರೈತರು, ಕೂಲಿಕಾರರು, ಕಸುಬುದಾರರು, ಅಸಂಘಟಿತ ಕಾರ್ಮಿಕರು, ದಲಿತರು, ಅಲ್ಪ ಸಂಖ್ಯಾತರು, ಮಹಿಳೆಯರು ಸರಕಾರದಿಂದ ಅಗತ್ಯ ನೆರವು ದೊರೆಯದಾದಾಗ ಇರುವ ವಸತಿಗಳನ್ನು ಮಾರಾಟ ಮಾಡಿ ಬದುಕುಳಿಯಲು ಯತ್ನಿಸಿದ್ದಾರೆ. ಅದೇ ರೀತಿ, ಕುಟುಂಬಗಳು ವಿಭಜನೆಯಾಗಿ ವಸತಿಗಾಗಿ ಹಪಹಪಿಸುವವರ ಸಂಖ್ಯೆಯು ಬೆಳೆದಿದೆ. ಕೋಟ್ಯಾಂತರ ವಲಸೆ ದುಡಿಮೆಗಾರರೂ ವಸತಿ ಸೌಲಭ್ಯಗಳಿಲ್ಲದೇ ದುಬಾರಿ ಬಾಡಿಗೆ ಮನೆಗಳಿಂದ ನಲುಗಿ ಹೋಗಿದ್ದಾರೆ. ಈ ರೀತಿಗಳಲ್ಲಿ ವಸತಿ ಹೀನರಾದವರ ಮತ್ತು ಅಗುತ್ತಿರುವವರ ಸಂಖ್ಯೆ ದಿನೇ ದಿನೇ ಬೆಳೆಯುತ್ತಲಿದೆ.
ಈ ರೀತಿ, ಸಮಸ್ಯೆ ತೀವ್ರವಾಗಿ ಬೆಳೆಯುತ್ತಿರುವಾಗ, ಈ ವಸತಿ ರಹಿತ ಬಡವರಿಗಾಗಿ, ವಸತಿ ಯೋಜನೆಯನ್ನು ಹೆಚ್ಚಿನ ಸಾರ್ವಜನಿಕ ಬಂಡವಾಳ ಹೂಡಿಕೆಯ ಮೂಲಕ ಬಲಪಡಿಸಿ, ವಿಸ್ತರಿಸಿ ನೆರವಾಗಬೇಕಾದ್ದು ಸರಕಾರದ ಕರ್ತವ್ಯವಾಗಿದೆ. ಇಂತಹ ದುಸ್ಥಿತಿಯ ಸಂದರ್ಭದಲ್ಲಿ, ತಮ್ಮ ಸರಕಾರ ಈ ರೀತಿ, ವಸತಿ ಹೀನರನ್ನು, ಬಡವರನ್ನು ಹಿಂಸಿಸುವ ಕುಕೃತ್ಯಕ್ಕೆ ಈಡು ಮಾಡಿರುವುದು ಅಮಾನವೀಯ ಕ್ರೌರ್ಯವಾಗಿದೆ
ಮುಖ್ಯಮಂತ್ರಿಗಳು ತಕ್ಷಣವೇ ಮದ್ಯಪ್ರವೇಶಿಸಿ, ರಾಜ್ಯದ ಕೋಟ್ಯಾಂತರ ವಸತಿ ಹೀನರ ರಕ್ಷಣೆಗೆ ಸಾರ್ವಜನಿಕ ಬಂಡವಾಳ ಹೂಡಿಕೆಯನ್ನು ವ್ಯಾಪಕವಾಗಿ ಹೆಚ್ಚಿಸಿ ಎಲ್ಲರಿಗೂ ವಸತಿ ಒದಗಿಸಲು ವಸತಿ ಯೋಜನೆಯನ್ನು ಬಲಪಡಿಸಬೇಕು. ಈಗಾಗಲೇ ಪ್ರಕಟಿಸಲಾದ ಮತ್ತು ರದ್ದಾದ ವಸತಿ ಸೌಲಭ್ಯ ಜಾರಿಗೊಳಿಸಬೇಕೆಂದು ಸಿಪಿಐ(ಎಂ) ಆಗ್ರಹಿಸಿದೆ.