ಬಾಸುದೇಬ್ ಆಚಾರ್ಯ ನಿಧನ : ಸಿಐಟಿಯು ಸಂತಾಪ

ನವದೆಹಲಿ: ಹಿರಿಯ ಕಾರ್ಮಿಕ ನಾಯಕ, ಹಿರಿಯ ಸಂಸದ ಬಾಸುದೇಬ್ ಆಚಾರ್ಯ ನಿಧನಕ್ಕೆ ಸಿಐಟಿಯು ಕೇಂದ್ರ ಸಮಿತಿ ಸಂತಾಪ ಸೂಚಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಿಐಟಿಯು,ಬಾಸುದೇಬ್ ಆಚಾರ್ಯ ಅವರು ತಮ್ಮ ಸಕ್ರಿಯ ರಾಜಕೀಯ ಜೀವನದುದ್ದಕ್ಕೂ ದುಡಿಯುವ ಜನರ ಚಳವಳಿ ಹೇಗೆ ಪರಿಣಾಮಕಾರಿಯಾಗಿ ಮುನ್ನಡೆಯಬೇಕು, ಮತ್ತು ಅದನ್ನು ಸಂಸತ್ತಿನ ಹೊರಗೆ ಐಕ್ಯ ಹೋರಾಟಗಳ ಮೂಲಕ ಹಾಗೂ ಸಂಸದೀಯ ವೇದಿಕೆಗಳಲ್ಲಿ ಪರಿಣಾಮಕಾರಿ ಮಧ್ಯಪ್ರವೇಶಗಳ ಮೂಲಕ ಹೇಗೆ ಸಂಯೋಜಿಸಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ದುಡಿಯುವ ಜನರ ಎಲ್ಲಾ ಸಮಸ್ಯೆಗಳು ಮತ್ತು ಹೋರಾಟಗಳ ಸಂದರ್ಭಗಳಲ್ಲಿ ಸಂಸತ್ತಿನೊಳಗೆ ಅವರ ನೇರ ಮಧ್ಯಪ್ರವೇಶಗಳು ಎಂದೆಂದಿಗೂ ನೆನಪಿನಲ್ಲಿ ಉಳಿಯುತ್ತವೆ ಎಂದು ಸಿಐಟಿಯು ಶ್ರದ್ಧಾಂಜಲಿ ಅರ್ಪಿಸುತ್ತ ಹೇಳಿದೆ.

ಬಾಸುದೇಬ್ ಆಚಾರ್ಯ ನವೆಂಬರ್ 13 ರಂದು ಹೈದರಾಬಾದಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದ ನಂತರ ಅವರು ತಮ್ಮ 82ನೇ ವಯಸ್ಸಿನಲ್ಲಿ ನಿಧನರಾದರು. ಅವರ ನಿಧನಕ್ಕೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ತೀವ್ರ ದುಃಖ ವ್ಯಕ್ತಪಡಿಸಿದೆ. ಕಾಂ ಬಸುದೇಬ್ ಆಚಾರ್ಯ ಅವರು ದಶಕಗಳ ಕಾಲ ಸಿಐಟಿಯು ನ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದರು ಮತ್ತು ಕಳೆದ ಆರು ವರ್ಷಗಳಿಂದ ಸಿಐಟಿಯುನ ರಾಷ್ಟ್ರೀಯ ಕಾರ್ಯದರ್ಶಿ ಮಂಡಳಿಯ ಖಾಯಂ ಆಹ್ವಾನಿತರಾಗಿದ್ದರು.

ಬಾಸುದೇಬ್ ಆಚಾರ್ಯ ಅವರು ಸಕ್ರಿಯ ರಾಜಕೀಯ ಜೀವನದ ಆರಂಭದಿಂದಲೂ ಕಾರ್ಮಿಕ ವರ್ಗದ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಅವರು ಸಂಘಟಿತ ಮತ್ತು ಅಸಂಘಟಿತ ಎರಡೂ ವಲಯಗಳ ಕಾರ್ಮಿಕರ ಸಂಘಟನೆಯಲ್ಲಿ ಮುಂಚೂಣಿ ಪಾತ್ರವನ್ನು ನಿರ್ವಹಿಸಿದರು. ನಿಧನದ ವರೆಗೂ ಅವರು ಅಖಿಲ ಭಾರತ ಕಲ್ಲಿದ್ದಲು ಕಾರ್ಮಿಕರ ಒಕ್ಕೂಟದ ಅಧ್ಯಕ್ಷರಾಗಿದ್ದರು ಮತ್ತು ಹಲವಾರು ಮುಷ್ಕರ ಕಾರ್ಯಾಚರಣೆಗಳು ಸೇರಿದಂತೆ ಕಲ್ಲಿದ್ದಲು ಕಾರ್ಮಿಕರ ಅನೇಕ ಹೋರಾಟಗಳನ್ನು ಮುನ್ನಡೆಸಿದರು. ಕಲ್ಲಿದ್ದಲಿನ ಜೊತೆಗೆ, ಅವರು ರೈಲ್ವೆಯ ವಿವಿಧ ವಿಭಾಗಗಳಲ್ಲಿ, ಅಂದರೆ, ಲೊಕೊ ರನ್ನಿಂಗ್, ಮತ್ತು ರೈಲ್ವೆಯ ವಿವಿಧ ವೃತಿಗಳು/ಕೆಲಸಗಳ ಗುತ್ತಿಗೆ ಕಾರ್ಮಿಕರ ಚಳುವಳಿಗಳನ್ನು ಸಂಯೋಜಿಸುವಲ್ಲಿ ಸಕ್ರಿಯರಾಗಿದ್ದರು, ಮತ್ತು ತಾತ್ಕಾಲಿಕ/ಸಾಂದರ್ಭಿಕ/ಗುತ್ತಿಗೆ ಕಾರ್ಮಿಕರ ದೊಡ್ಡ ವಿಭಾಗಗಳನ್ನು ರೈಲ್ವೆ ನೌಕಕರರಾಗಿ ಕಾಯಂಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಅವರು ಎಫ್‌ಸಿಐ ಕಾರ್ಮಿಕರ ಆಂದೋಲನ ಮತ್ತು ಇತರ ಅನೇಕ ಚಟುವಟಿಕೆಗಳಲ್ಲಿಯೂ ಭಾಗಿಯಾಗಿದ್ದರು. ಅಖಿಲ ಭಾರತ ಎಲ್‌ಐಸಿ ಏಜೆಂಟರ ಒಕ್ಕೂಟದ ಹಿಂದಿನ ಸಮ್ಮೇಳನದವರೆಗೂ ಅದರ ಅಧ್ಯಕ್ಷರಾಗಿದ್ದರು.

1980 ರಿಂದ 2014 ರವರೆಗೆ ಪಶ್ಚಿಮ ಬಂಗಾಳದಿಂದ ಲೋಕಸಭೆಯ ಸದಸ್ಯರಾಗಿ ಒಂಬತ್ತು ಬಾರಿ ಚುನಾಯಿತರಾದ ಬಾಸುದೇಬ್ ಆಚಾರ್ಯ ತಮ್ಮ ಸುದೀರ್ಘ ಕಾರ್ಯಕಾಲದಲ್ಲಿ ಅನುಭವಿ ಸಂಸದರಾಗಿ ಸ್ಮರಣೀಯ ಪಾತ್ರವನ್ನು ವಹಿಸಿದ್ದಾರೆ, ಸಂಸತ್ತಿನ ಒಳಗೂ ಮತ್ತು ಹೊರಗೂ ಶ್ರಮಜೀವಿಗಳ ಹಿತಾಸಕ್ತಿಗಳನ್ನು ಪ್ರತಿಪಾದಿಸಿದ್ದಾರೆ. ರೈಲ್ವೆಯ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಅವರು ಕೇಂದ್ರದಲ್ಲಿ ಅಧಿಕಾರ ನಡೆಸಿದ ಸರ್ಕಾರಗಳು ರೈಲ್ವೆಯಲ್ಲಿ ತರಬಯಸಿದ ನವ ಉದಾರವಾದಿ ಖಾಸಗೀಕರಣ ಆಧಾರಿತ ಕ್ರಮಗಳನ್ನು ವಿರೋಧಿಸುವಲ್ಲಿ ಮತ್ತು ಅನೇಕ ಸಂದರ್ಭಗಳಲ್ಲಿ ನಿಲ್ಲಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದರು. ಶ್ರಮಜೀವಿ ಜನಗಳಿಗೆ ಅವರ ಸೇವೆಯ ಅತ್ಯಂತ ಸ್ಮರಣೀಯ ಅಂಶವೆಂದರೆ, ಯಾವುದೇ ತೊಂದರೆಗಳು/ಸಮಸ್ಯೆಗಳಿಗಾಗಿ ಅವರನ್ನು ಸಂಪರ್ಕಿಸುವ ಯಾವುದೇ ಕಾರ್ಮಿಕರಿಗೆ, ಅವರು ಯಾವುದೇ ರಾಜ್ಯದವರಾಗಲಿ, ಅಥವ ಯಾವುದೇ ಕಾರ್ಮಿಕ ಸಂಘಟನೆಗೆ ಸೇರಿರಲಿ, ಅವರ ಬಾಗಿಲು ಸದಾ ತೆರೆದಿರುತ್ತಿತ್ತು, ಅವರು ಎಲ್ಲ ಸಂದರ್ಭಗಳಲ್ಲೂ ಮಧ್ಯಪ್ರವೇಶಿಸಿ ಸಂಬಂಧಪಟ್ಟ ಕಾರ್ಮಿಕರಿಗೆ ಸ್ಪಂದಿಸುತ್ತಿದ್ದರು ಎಂದು ಸಿಐಟಿಯು ನೆನಪಿಸಿಕೊಂಡಿದೆ.

ಬಾಸುದೇಬ್ ಆಚಾರ್ಯ ಅವರು ತಮ್ಮ ಸಕ್ರಿಯ ರಾಜಕೀಯ ಜೀವನದುದ್ದಕ್ಕೂ ದುಡಿಯುವ ಜನರ ಚಳವಳಿ ಹೇಗೆ ಪರಿಣಾಮಕಾರಿಯಾಗಿ ಮುನ್ನಡೆಯಬೇಕು, ಉತ್ತೇಜನೆ ನೀಡಬೇಕು ಮತ್ತು ಅದನ್ನು ಸಂಸತ್ತಿನ ಹೊರಗೆ ಐಕ್ಯ ಹೋರಾಟಗಳ ಮೂಲಕ ಹಾಗೂ ಸಂಸದೀಯ ವೇದಿಕೆಗಳಲ್ಲಿ ಪರಿಣಾಮಕಾರಿ ಮಧ್ಯಪ್ರವೇಶಗಳ ಮೂಲಕ ಹೇಗೆ ಸಂಯೋಜಿಸಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ದುಡಿಯುವ ಜನರ ಎಲ್ಲಾ ಸಮಸ್ಯೆಗಳು ಮತ್ತು ಹೋರಾಟಗಳ ಸಂದರ್ಭಗಳಲ್ಲಿ ಸಂಸತ್ತಿನೊಳಗೆ ಅವರ ನೇರ ಮಧ್ಯಪ್ರವೇಶಗಳು ಎಂದೆಂದಿಗೂ ನೆನಪಿನಲ್ಲಿ ಉಳಿಯುತ್ತವೆ ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ತಪನ್‍ ಸೆನ್‍ ತಮ್ಮ ಶ್ರದ್ಧಾಂಜಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿವಿಧ ಕಾಯಿಲೆಗಳಿಂದಾಗಿ ಆರೋಗ್ಯವು ಕೆಡುತ್ತಿದ್ದರೂ ಲೆಕ್ಕಿಸದೆ ಅವರು, ಕಾರ್ಮಿಕ ವರ್ಗದ ಪ್ರಮುಖ ಹೋರಾಟಗಳಲ್ಲಿ, ರಾಷ್ಟ್ರೀಯ ಮಟ್ಟದಲ್ಲಿಯೂ ಮತ್ತು ಹಲವಾರು ವಲಯಗಳ ಮಟ್ಟದಲ್ಲಿಯೂ ತಮ್ಮ ದೈಹಿಕ ಉಪಸ್ಥಿತಿಯ ಮೂಲಕ ಮಧ್ಯಪ್ರವೇಶಿಸುತ್ತಿದ್ದರು. ಅವರು ಭಾಗವಹಿಸದಿದ್ದ ಸಿಐಟಿಯುನ ಸಂಘಟನಾ ಸಭೆಗಳು ಬಹಳ ವಿರಳ. ಅಖಿಲ ಭಾರತ ಕಲ್ಲಿದ್ದಲು ಕಾರ್ಮಿಕರ ಒಕ್ಕೂಟದ ಅಧ್ಯಕ್ಷರಾಗಿ, ಆಚಾರ್ಯ ಅವರು ದೇಶಾದ್ಯಂತ ವಿವಿಧ ಕಲ್ಲಿದ್ದಲು ಗಣಿಗಳಲ್ಲಿ ಓಡಾಡಿದ್ದಾರೆ . ನಿಧನದ ಒಂದು ತಿಂಗಳ ಮುಂಚೆಯಷ್ಟೇ, ಅವರು ಲೋಕೋ ಚಾಲಕ ಸಿಬ್ಬಂದಿಯ ಧರಣಿಯಲ್ಲಿ ಮತ್ತು ಪುರುಲಿಯಾದ ಆದ್ರ ಮತ್ತು ಪಕ್ಕದ ಪ್ರದೇಶದಲ್ಲಿ ಎಫ್‌ಸಿಐ ಗೋಡೌನ್ ಕಾರ್ಮಿಕರ ಮತಪ್ರದರ್ಶನದಲ್ಲಿ ಭಾಗವಹಿಸಿದ್ದರು. ಕೊನೆಯ ಉಸಿರು ಇರುವವರೆಗೂ, ಆಸ್ಪತ್ರೆಯಲ್ಲಿರಬೇಕಾದ ಅವಧಿಯನ್ನು ಹೊರತುಪಡಿಸಿ, ಬಸುದೇವ್ ಆಚಾರ್ಯ ದುಡಿಯುವ ಜನರ ಹೋರಾಟದ ಮುಂಚೂಣಿಯಲ್ಲಿ ಸಕ್ರಿಯವಾಗಿರುವಲ್ಲಿ ಎಂದೂ ವಿಫಲರಾಗಲಿಲ್ಲ ಎಂದು ತಪನ್‍ ಸೆನ್‍ ಹೇಳಿದ್ದಾರೆ.

ಅವರ ನಿಧನದೊಂದಿಗೆ, ಕಾರ್ಮಿಕ ವರ್ಗದ ಚಳವಳಿಯು ದುಡಿಯುವ ವರ್ಗದ ಸಿದ್ಧಾಂತಕ್ಕೆ ಮತ್ತು ಶೋಷಣೆಯ ವ್ಯವಸ್ಥೆಯನ್ನು ಬದಲಾಯಿಸುವ ಹೋರಾಟದಲ್ಲಿ ದುಡಿಯುವ ವರ್ಗದ ನಿರ್ಣಾಯಕ ಪಾತ್ರದ ಬಗ್ಗೆ ದೃಢವಾದ ಬದ್ಧತೆ ಹೊಂದಿದ್ದ ಒಬ್ಬ ಘನ ನೇತಾರನನ್ನು ಕಳೆದುಕೊಂಡಿದೆ, ಇದರಿಂದ ಉಂಟಾಗಿರುವ ತೆರವನ್ನು ತುಂಬುವು ಬಹಳ ಕಷ್ಟ ಎಂದಿರುವ ಸಿಐಟಿಯು “ಅಗಲಿದ ನಾಯಕನ ಕುಟುಂಬ ಸದಸ್ಯರಿಗೆ ಸಿಐಟಿಯು ತನ್ನ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತದೆ, ಜನತೆ ಮತ್ತು ಶ್ರಮಿಕ ವರ್ಗದ ಹಿತಸಾಧನೆಗೆ ಬಾಸುದೇಬ್ ಆಚಾರ್ಯ ಅವರ ಮಹಾನ್ ಕೊಡುಗೆಗೆ ಶ್ರದ್ಧಾಪೂರ್ಣ ಗೌರವ ನಮನವನ್ನು ಸಲ್ಲಿಸುತ್ತದೆ” ಎಂದು ಹೇಳಿದೆ.

 

Donate Janashakthi Media

Leave a Reply

Your email address will not be published. Required fields are marked *