ಬೆಂಗಳೂರು: ಪದವಿ, ಡಿಪ್ಲೊಮ, ಇಂಜಿನಿಯರಿಂಗ್ ಹಾಗೂ ವಿಶ್ವವಿದ್ಯಾಲಯಗಳ ಪರೀಕ್ಷೆಗಳು ಮುಗಿಯುವವರೆಗೂ ಎಲ್ಲ ವಿದ್ಯಾರ್ಥಿಗಳ ಬಸ್‌ಪಾಸ್ ಅವಧಿಯನ್ನು ಹೆಚ್ಚುವರಿ ಶುಲ್ಕ ಪಡೆಯದೇ ವಿಸ್ತರಣೆ ಮಾಡಬೇಕೆಂದು ಆಗ್ರಹಿಸಿದ ಅಖಿಲ ಭಾರತ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಜಷನ್(ಎಐಡಿಎಸ್‌ಓ) ವತಿಯಿಂದ ವಿದ್ಯಾರ್ಥಿಗಳು ಇಂದು(ಸೆಪ್ಟಂಬರ್ 03) ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಐಡಿಎಸ್‌ಒ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಮಹಾಂತೇಶ್, ಕೆ.ಎಸ್.ಆರ್.ಟಿ.ಸಿ.ಯು ಸೆಪ್ಟಂಬರ್ ತಿಂಗಳವರೆಗೆ ಬಸ್‌ಪಾಸ್ ಅವಧಿಯನ್ನು ವಿಸ್ತರಣೆ ಮಾಡಿರುವುದಾಗಿ ಸುತ್ತೋಲೆ ಹೊರಡಿಸಿದೆ. ಆದರೆ ಅದರೊಂದಿಗೆ, ವಿದ್ಯಾರ್ಥಿಗಳು ಆದಷ್ಟು ಬೇಗ ಹೊಸ ಪಾಸ್ ಅನ್ನು ಪಡೆಯಲೇಬೇಕು ಎಂದು ಸಹ ಹೇಳಿದೆ. ಇದರಿಂದ ಪರೀಕ್ಷೆಯ ಈ ಸಮಯದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಬೇಕೊ ಅಥವಾ ಪಾಸ್ ಪಡೆಯಲು ಓಡಾಡಬೇಕೊ ಎಂಬ ಪ್ರಶ್ನೆ ಬರುತ್ತದೆ. ಇನ್ನೊಂದೆಡೆ, ಬಿ.ಎಂ.ಟಿ.ಸಿ.ಯು ಪಾಸಿನ ಅವಧಿ ವಿಸ್ತರಣೆಯನ್ನು ಮಾಡಿಲ್ಲ. ಅದರಿಂದಾಗಿ ವಿದ್ಯಾರ್ಥಿಗಳು ಪ್ರಯಾಣ ಮುಂದುವರೆಸಲು ಹಣ ಪಾವತಿಸಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆ ಬಗೆಹರಿಸಲು ಕೂಡಲೇ ಸರ್ಕಾರ ಸಂಪೂರ್ಣ ಜವಾಬ್ದಾರಿ ವಹಿಸಬೇಕು ಎಂದು ತಿಳಿಸಿದರು.
ಪರೀಕ್ಷೆಗಳು ಮುಗಿಯುವ ತನಕ ಪಾಸ್ ಅವಧಿ ವಿಸ್ತರಿಸಬೇಕು ಮತ್ತು ಈಗಿರುವ ಪಾಸಿನೊಂದಿಗೆ ಪ್ರಯಾಣ ಮುಂದುವರೆಸಲು ಅನುವು ಮಾಡಿಕೊಡಬೇಕು. ಇದರೊಂದಿಗೆ, ಬಿ.ಎಂ.ಟಿ.ಸಿ. ಮತ್ತು ಇತರ ಜಿಲ್ಲಾ ಸಾರಿಗೆಗಳು ಕೂಡ, ಯಾವುದೇ ಹೆಚ್ಚುವರಿ ಶುಲ್ಕ ಪಡೆಯದೆ, ಪಾಸಿನ ಅವಧಿ ವಿಸ್ತರಣೆ ಕುರಿತು ತಕ್ಷಣವೇ ಸುತ್ತೋಲೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಎಐಡಿಎಸ್‌ಒ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಹಯ್ಯಾಳಪ್ಪ ಮಾತನಾಡಿ “ಈಗಾಗಲೇ ಆರ್ಥಿಕ ಕಷ್ಟದಲ್ಲಿ ಇರುವ ವಿದ್ಯಾರ್ಥಿಗಳ ಮೇಲೆ ಸರ್ಕಾರವು ಹೆಚ್ಚುವರಿ ಶುಲ್ಕದ ಹೊರೆಯನ್ನು ಹಾಕುತ್ತಿದೆ. ಹಲವು ಕಾರಣಗಳಿಂದ ನಿಗದಿತ ಅವಧಿಯಲ್ಲಿ ಮುಗಿಯಬೇಕಾಗಿದ್ದ ಪರೀಕ್ಷೆಗಳು ಮುಗಿಯದ ಪರಿಸ್ಥಿತಿ ಉಂಟಾಗಿದೆ. ಇದಕ್ಕಾಗಿ ವಿದ್ಯಾರ್ಥಿಗಳನ್ನು ಬಲಿಪಶು ಮಾಡುವುದು ಸರಿಯಲ್ಲ. ಹಾಗಾಗಿ, ಪದವಿ, ಡಿಪ್ಲೊಮ, ಇಂಜಿನಿಯರಿಂಗ್ ಹಾಗೂ ವಿವಿ ವಿದ್ಯಾರ್ಥಿಗಳ ಪರೀಕ್ಷೆಗಳು ಮುಗಿಯುವವರೆಗೂ ಎಲ್ಲ ವಿದ್ಯಾರ್ಥಿಗಳಿಗೂ ಬಸ್ ಪಾಸ್ ಅನ್ನು ವಿಸ್ತರಿಸಬೇಕು. ಚಾಲ್ತಿಯಲ್ಲಿರುವ ಪಾಸ್ ತೋರಿಸಿ, ಉಚಿತವಾಗಿ ಪ್ರಯಾಣಿಸಲು ಅನುವು ಮಾಡಿಕೊಡಬೇಕು” ಎಂದರು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಬಸ್‌ಪಾಸ್ ಅವಧಿ ವಿಸ್ತರಿಸಬೇಕು, ಯಾವುದೇ ಹೆಚ್ಚುವರಿ ಶುಲ್ಕವನ್ನು ಪಡೆಯಬಾರದು ಎಂಬ ಎಂಬ ಬೇಡಿಕೆಯೊಂದಿಗೆ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾ ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ರವಿಕಿರಣ್ ವಹಿಸಿದ್ದರು. ಪ್ರತಿಭಟನೆಯಲ್ಲಿ ರಾಜ್ಯ ಸಮಿತಿ ಸದಸ್ಯರುಗಳು, ಹಲವು ಕಾರ್ಯಕರ್ತರು ಹಾಗೂ ಬೆಂಬಲಿಗರು ಭಾಗವಹಿಸಿದ್ದರು.