ಹುಬ್ಬಳ್ಳಿ: ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಾದ ಉತ್ತರ ಕರ್ನಾಟಕ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಭೇಟಿ ನೀಡುತ್ತಿರುವ ಬಸವರಾಜ ಬೊಮ್ಮಾಯಿ ಅವರು ಇಂದು ಹುಬ್ಬಳ್ಳಿಗೆ ಭೇಟಿ ನೀಡಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಖ್ಯಮಂತ್ರಿ ಬೊಮ್ಮಾಯಿ ʻʻ ಮುಖ್ಯಮಂತ್ರಿ ಆದ ನಂತರ ಹುಬ್ಬಳ್ಳಿಗೆ ಬರುತ್ತೇನೆ ಅಂದುಕೊಂಡಿರಲಿಲ್ಲ, ಹುಬ್ಬಳ್ಳಿ ನನ್ನ ಹುಟ್ಟೂರು, ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವೆ ಎಂದು ಹೇಳಿದರು.
ಇದನ್ನು ಓದಿ: ಮಹತ್ವದ ಯೋಜನೆಗಳನ್ನು ಪ್ರಕಟಿಸಿದ ನೂತನ ಸಿಎಂ: ವಿವಿಧ ವರ್ಗಗಳಿಗೆ ಆದ್ಯತೆ
ಹುಬ್ಬಳ್ಳಿಯಲ್ಲಿ ನನಗೆ ದೊಡ್ಡ ಸ್ನೇಹಿತರ ಬಳಗವೇ ಇದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯೂ ಇದೇ ಊರಿನವರು. ಅವರೆಲ್ಲರ ಪ್ರೀತಿ, ಆಶೀರ್ವಾದಿಂದ ನಾನು ಮುಖ್ಯಮಂತ್ರಿಯಾಗಿರುವೆ. ಅಲ್ಲದೆ, ಪ್ರಧಾನಿ ಮೋದಿ, ಅಮಿತ್ ಶಾ, ಜೆ ಪಿ ನಡ್ಡಾ ಅವರ ತೀರ್ಮಾನದಂತೆ ನಾನು ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಪಡೆದುಕೊಂಡಿರುವೆನು. ಶುಕ್ರವಾರ ದೆಹಲಿಗೆ ಭೇಟಿ ನೀಡಿ ಅವರೊಂದಿಗೆ ಚರ್ಚೆ ನಡೆಸುವೆ. ಅವರ ಸಹಕಾರ, ವಿಶ್ವಾಸದಿಂದ ಅಧಿಕಾರ ನಡೆಸುತ್ತೇನೆ ಎಂದರು. ಮತ್ತೆ ೨-೩ ದಿನಗಳ ನಂತರ ಕೇಂದ್ರ ನಾಯಕರನ್ನು ಭೇಟಿ ಮಾಡಿ ಸಚಿವರ ಆಯ್ಕೆ ಬಗ್ಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದರು.
ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ನಮ್ಮ ನಾಯಕರಾದ ಜಗದೀಶ ಶೆಟ್ಟರ್ ಸೇರಿದಂತೆ ಶಾಸಕ ಮಿತ್ರರಿದ್ದಾರೆ. ಪಕ್ಷ ಮತ್ತು ಸಂಘ ಪರಿವಾರದ ಹಿರಿಯರಿದ್ದಾರೆ. ಅವರೆಲ್ಲರ ಜೊತೆ ಚರ್ಚಿಸಿ, ಅವರು ನೀಡುವ ಸಲಹೆ ಸೂಚನೆ ಮೇರೆಗೆ ಅವಳಿನಗರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಹುಬ್ಬಳ್ಳಿ ನವನಗರದಲ್ಲಿರುವ ತಮ್ಮ ತಂದೆ ದಿವಂಗತ ಎಸ್ ಆರ್ ಬೊಮ್ಮಾಯಿಯವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. “ತಂದೆ, ತಾಯಿಯವರ ಆಶೀರ್ವಾದ ಎಲ್ಲಕ್ಕೂ ಮಿಗಿಲು. ಅಧಿಕಾರ ಸ್ವೀಕರಿಸಿದ ನಂತರ ಅವರ ಸಮಾಧಿಗಳ ದರ್ಶನ ಪಡೆದಿರುವೆ” ಎಂದರು.
ನಂತರ ರಾಣಿ ಚೆನ್ನಮ್ಮ ವೃತ್ತಕ್ಕೆ ಆಗಮಿಸಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಶಾಸಕರಾದ ಅಮೃತ ದೇಸಾಯಿ, ಶಿವರಾಮ ಹೆಬ್ಬಾರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಇದ್ದರು.
ಮಹದಾಯಿ ಯೋಜನೆ ಬಗ್ಗೆ ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು ಯೋಜನೆಗೆ ಮೊದಲ ಪ್ರಾಶಸ್ತ್ಯ ಕೊಡುತ್ತೇನೆ. ಏನು ಮಾಡಬೇಕು ಎಂದು ನನಗೆ ಬಹಳ ಸ್ಪಷ್ಟತೆ ಇದೆ. ಗೆಜೆಟ್ ನೋಟಿಫಿಕೇಷನ್ ಸಿಕ್ಕ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದನ್ನು ಓದಿ: ಸಿಎಂ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ನಾನು ಸೇರಲ್ಲ – ಮಾಜಿ ಸಿಎಂ ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್ ಅವರ ವಿಚಾರದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿಗಳು ಅವರೊಂದಿಗೆ ಈ ಬಗ್ಗೆ ಚರ್ಚಿಸುತ್ತೇನೆ. ನಾವಿಬ್ಬರೂ ಆತ್ಮೀಯ ಸ್ನೇಹಿತರು ಮತ್ತು ನಾವು ಒಟ್ಟಿಗೆ ಬೆಳೆದವರು. ಬೇರೆ ಬೇರೆ ಪಕ್ಷದಲ್ಲಿದ್ದಾಗಿನಿಂದಲೂ ನಮ್ಮ ನಡುವೆ ಒಳ್ಳೆಯ ಸಂಬಂಧಗಳಿವೆ. ಇಬ್ಬರ ನಡುವೆ ಅಪಾರ ಅಭಿಮಾನ ಮತ್ತು ಪ್ರೀತಿ ವಿಶ್ವಾಸವಿದೆ. ಹಿರಿಯರ ಜತೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸುವೆ ಎಂದು ಹೇಳಿದರು.
ಕಾರವಾರಕ್ಕೆ ಭೇಟಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿಯಿಂದ ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಕ್ಕೆ ತೆರಳಲಿರುವ ಭೇಟಿ ನೀಡಲಾಗಲಿದ್ದಾರೆ. ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಜಿಲ್ಲೆಯಲ್ಲಿ 6 ಮಂದಿ ಮೃತಪಟ್ಟಿದ್ದು 15 ಮಂದಿ ಗಾಯಗೊಂಡಿದ್ದಾರೆ. ಅನೇಕ ಪ್ರದೇಶಗಳು ಹಾನಿಗೀಡಾಗಿವೆ.