ನಿತ್ಯಾನಂದಸ್ವಾಮಿ
ಯಡಿಯೂರಪ್ಪರವರ ನಂತರ ಬಸವರಾಜ ಬೊಮ್ಮಾಯಿರವರು ಮುಖ್ಯಮಂತ್ರಿ ಸ್ಥಾನವನ್ನು ವಹಿಸಿಕೊಂಡಾಗ ರಾಜ್ಯದ ಜನ ಅನೇಕ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಒಬ್ಬ ಸಮಾಜವಾದಿ (ರಾಯಿಸ್ಟ್) ತಂದೆಯ ಮಗನಾಗಿ ತಂದೆ ತೋರಿದ ದಾರಿಯಲ್ಲಿ ಸಾಗಿ ಜನರ ನಡುವಿನ ಆರ್ಥಿಕ ಅಂತರವನ್ನು ತಗ್ಗಿಸಿ ಜಾತಿಯ ಮತ್ತು ಮತೀಯ ಸಾಮರಸ್ಯಕ್ಕಾಗಿ ಶ್ರಮಿಸುತ್ತಾರೆ ಎಂಬ ವಿಶ್ವಾಸವನ್ನು ಮೂಡಿಸಿದ್ದರು. ಬಿಜೆಪಿಯಲ್ಲಿ ಇದ್ದಾರೆ ಎಂದು ಮಾತ್ರಕ್ಕೆ ಅವರು ಸಂಕುಚಿತ ಮತೀಯವಾದಿ ಆಗಲಾರರು ಎಂಬ ನಂಬಿಕೆಯನ್ನು ಹುಟ್ಟು ಹಾಕಿದ್ದರು. ಆದರೆ ಬಸವರಾಜ ಬೊಮ್ಮಾಯಿರವರು ರಾಜ್ಯದ ಜನರ ನಿರೀಕ್ಷೆಗಳನ್ನೆಲ್ಲ ಹುಸಿಗೊಳಿಸಿದ್ದಾರೆ. ಮುಖ್ಯಮಂತ್ರಿಯಾಗಿದ್ದುಕೊಂಡೇ ಮತೀಯವಾದದ ವಿಷಸರ್ಪವನ್ನು ಬಡಿದೆಬ್ಬಿಸಿದ್ದಾರೆ. ಅದರ ಮೂಲಕ ಅವರ ಗೌರವಾನ್ವಿತ ತಂದೆ ಎಸ್.ಆರ್.ಬೊಮ್ಮಾಯಿರವರಿಗೆ ದ್ರೋಹ ಮಾಡಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿರವರು ಇತ್ತೀಚೆಗೆ ಮಂಗಳೂರಿನಲ್ಲಿ ನೀಡಿದ ಹೇಳಿಕೆ ಮುಖ್ಯಮಂತ್ರಿರವರ ಮನಸ್ಸಿನಲ್ಲಿ ಇರುವುದನ್ನು ಬಯಲು ಮಾಡಿದೆ. ಅದನ್ನು ಇನ್ನು ಹೆಚ್ಚು ಕಾಲ ಮುಚ್ಚಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟವಾಗಿದೆ, ಅದು ಅಪಾಯಕಾರಿಯಾಗಿದೆ. ಮಂಗಳೂರು ನಮ್ಮ ಹೆಮ್ಮೆಯ ಕರಾವಳಿ ನಾಡು. ಇಲ್ಲಿ ಅನೇಕ ಮತಧರ್ಮಗಳ ಜನ ಶತಶತಮಾನಗಳಿಂದ ಪರಸ್ಪರ ಅನ್ಯೋನ್ಯವಾಗಿ ಬಾಳಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ಮತೀಯ ಸಾಮರಸ್ಯಕ್ಕೆ ಭಾರೀ ಧಕ್ಕೆಯಾಗತೊಡಗಿದೆ. ಕೋಮು ದ್ವೇಷಕ್ಕೆ ಇಲ್ಲಿ ಹಿಂದೆ ಇಲ್ಲದ ಕುಮ್ಮಕ್ಕು ಸಿಗತೊಡಗಿದೆ. ಸ್ವತಃ ಮುಖ್ಯಮಂತ್ರಿಯವರು ಇಂತಹ ಶಕ್ತಿಗಳನ್ನು ಬೆಂಬಲಿಸಿದರೆ ಇನ್ನುಳಿದವರಿಂದ ಇನ್ನೇನನ್ನು ನಿರೀಕ್ಷಿಸಬಹುದು.
ಅಂದು, ಹೆಚ್ಚುತ್ತಿರುವ ಅನೈತಿಕ ಪೊಲೀಸ್‌ಗಿರಿ ಘಟನೆಗಳ ಕುರಿತು ಅಲ್ಲಿನ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಪ್ರತಿಕ್ರಿಯೆ ನೀಡುತ್ತಿದ್ದಾಗ ಮುಖ್ಯಮಂತ್ರಿಗಳು ತಮ್ಮ ಅಭಿಪ್ರಾಯ ಯಾವ ಅಳಕು ಇಲ್ಲದೆ ಹೇಳಿದರು. “ಸಮಾಜದಲ್ಲಿ ಜನರ ಭಾವನೆಗಳಿಗೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕಾಗುತ್ತದೆ. ಪರಸ್ಪರ ಭಾವನೆಗಳಿಗೆ ಧಕ್ಕೆ ಉಂಟಾದಾಗ ಸಹಜವಾಗಿ ಕ್ರಿಯೆ ಪ್ರಕ್ರಿಯೆಗಳು ಇದ್ದೇ ಇರುತ್ತವೆ.” ಮುಖ್ಯಮಂತ್ರಿಗಳ ಈ ಮಾತುಗಳನ್ನು ಅರ್ಥಮಾಡಿಕೊಳ್ಳಲು ವಿವರಣೆ ಬೇಕಾಗಿಲ್ಲ.
ಮತೀಯ ಗೂಂಡಾಗಿರಿ ಆಗಾಗ ಸಂಭವಿಸುತ್ತಿರುತ್ತದೆ. ಎರಡು ವಿಭಿನ್ನ ಮತೀಯರ ನಡೆವೆ ಅದು ಹೆಡೆ ಎತ್ತುತ್ತಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಅದು ಹೆಚ್ಚುತ್ತಿದೆ. ಮುಖ್ಯವಾಗಿ ದೇಶದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿಂದ ಕೋಮುಗಲಭೆಗಳು ಹೆಚ್ಚುತ್ತಿವೆ. ಇದು ಸಹಜವಾಗಿದೆ ಎಂದು ಬಸವರಾಜ ಬೊಮ್ಮಾಯಿ ಅಭಿಪ್ರಾಯ. ಇಂತಹ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಮತೀಯ ಗೂಂಡಾಗಿರಿಯನ್ನು ಬೆಂಬಲಿಸಿದ್ದಾರೆ. ಅನೈತಿಕ ಪೊಲೀಸ್‌ಗಿರಿ ಸಹಜವಾದದ್ದು ಎನ್ನುವ ಅವರ ಹೇಳಿಕೆಯ ಮೂಲಕ ಮತೀಯ ಗಲಭೆಕೋರರಿಗೆ ನೇರವಾದ ಬೆಂಬಲ ಕೊಟ್ಟಂತೆ ಆಗಿದೆ.
ಆರ್‌ಎಸ್‌ಎಸ್ ಅನ್ನು ಮೆಚ್ಚಿಸಲು ಮುಖ್ಯಮಂತ್ರಿ ಈ ಹೇಳಿಕೆ ನೀಡಿರಬಹುದು. ಆದರೆ ರಾಜ್ಯದ ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಕೋಮು ಸಾಮರಸ್ಯವನ್ನು ಕಾಪಾಡಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸುವ ಬದಲು ಕೋಮುದ್ವೇಷವನ್ನು ಬಲಪಡಿಸಲು ಹೊರಟಿದ್ದಾರೆ. ಬೊಮ್ಮಾಯಿರವರ ಈ ಹೇಳಿಕೆ ನೈತಿಕತೆಯ ಹೆಸರಿನಲ್ಲಿ ಹಿಂಸೆಗೆ ಪ್ರಚೋದನೆ ನೀಡುವ ಹೇಳಿಕೆಯಾಗಿದೆ. ಇದು ಮುಖ್ಯಮಂತ್ರಿ ಎಸಗಿರುವ ಅಕ್ಷಮ್ಯ ಅಪರಾಧ. ಇಂತಹ ಮನಸ್ಸನ್ನು ಹೊಂದಿದವರು ಯಾರೂ ಸರ್ವಧರ್ಮಗಳ ಶಾಂತಿಯ ತೋಟವಾಗಿರುವ ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿರಲು ಸಾಧ್ಯವಿಲ್ಲ. ಬಸವರಾಜ ಬೊಮ್ಮಾಯಿ ತಮ್ಮ ತಪ್ಪನ್ನು ಒಪ್ಪಿಕೊಂಡು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಕೆಳಗಿಳಿಯಬೇಕು.
ಬಸವರಾಜ ಬೊಮ್ಮಾಯಿಯವರು ಬಸವಣ್ಣನವರ ನಾಡನ್ನು ದ್ವೇಷದ ನೆಲವಾಗಿ ಪರಿವರ್ತಿಸಲು ಹೊರಟಂತೆ ಕಾಣುತ್ತದೆ. ಮಂಗಳೂರು ಪ್ರದೇಶದಲ್ಲಿ ಹಿಂದುತ್ವವಾದಿ ಶಕ್ತಿಗಳ ಗುಂಡಾಗಿರಿ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಅವರು ಅನೈತಿಕ ಪೊಲೀಸ್ ಗಿರಿಯನ್ನು ಖಂಡಿಸುವಲ್ಲಿ ಮುಖ್ಯಮಂತ್ರಿ ವಿಫಲರಾಗಿದ್ದಾರೆ. ಸಂವಿಧಾನ ಪ್ರತಿಪಾದಿಸುವ ನೈತಿಕತೆಯನ್ನು ಎತ್ತಿ ಹಿಡಿಯುವ ತಮ್ಮ ಹೊಣೆಗಾರಿಕೆಯನ್ನು ಮರೆತ್ತಿದ್ದಾರೆ. ಸಂವಿಧಾನದ ಹೆಸರಿನಲ್ಲಿ ಪ್ರಮಾಣ ಮಾಡಿ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿರವರ ಅಕ್ಷಮ್ಯ ಅಪರಾಧ ಮಾಡಿದ್ದಾರೆ. ಬೊಮ್ಮಾಯಿರವರ ಈ ಬೇಜವಾಬ್ದಾರಿಯುತ ಹೇಳಿಕೆಯಿಂದಾಗಿ ಕರಾವಳಿಯಲ್ಲಿ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಕೋಮುವಾದಿ ಅರಾಜಕತೆ ಹೆಚ್ಚಾಗುವ ಅಪಾಯವಿದೆ.
ಒಂದು ನಿರ್ದಿಷ್ಟ ಕೋಮಿನವರನ್ನು ಗುರಿಯಾಗಿಸಿ ಮುಖ್ಯಮಂತ್ರಿಗಳು ಈ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ ಅನ್ನುವುದರಲ್ಲಿ ಸಂದೇಹವಿಲ್ಲ. ಸಮಾಜದಲ್ಲಿ ಹಲವು ರೀತಿಯ ಭಾವನೆಗಳಿರುತ್ತದೆ. ಯಾವ ಸಮುದಾಯದವರು ಇನ್ನೊಂದು ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಬಾರದು. ಆದರೆ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬ ಆರೋಪ ಹೊರಿಸಿ ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಮುಖ್ಯಮಂತ್ರಿಗಳು ಇದಕ್ಕೆ ವ್ಯತಿರಿಕ್ತವಾಗಿ ಹೇಳಿಕೆ ನೀಡಿ ಅನೈತಿಕ ಪೊಲೀಸ್‌ಗಿರಿಗೆ ಅವಕಾಶ ನೀಡಬಾರದು. ಬಸವರಾಜ ಬೊಮ್ಮಾಯಿರವರ ಹೇಳಿಕೆಯಿಂದ ಸ್ವಯಂ ಘೋಷಿತ ಸಮಾಜಘಾತಕರಿಗೆ ಬಲಬಂದಂತಾಗಿದೆ. ಸಮಾಜದಲ್ಲಿ ನೈತಿಕತೆಯನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿ. ಅದರಂತೆಯೇ ಅನೈತಿಕ ಪೊಲೀಸ್‌ಗಿರಿಯನ್ನು ತಡೆಗಟ್ಟುವುದೂ ಸಹ ಸರ್ಕಾರದ ಜವಾಬ್ದಾರಿ.
ನೈತಿಕತೆಯನ್ನು ಕಾಪಾಡುವ ಹೆಸರಿನಲ್ಲಿ ಮತೀಯ ಗುಂಡಾಗಿರಿಯನ್ನು ಬೆಂಬಲಿಸಲಾಗದು. ಯಾರೂ ಸ್ವಯಂ ಘೋಷಿತ ಪೊಲೀಸರಾಗಲು ಬರುವುದಿಲ್ಲ. ಬೊಮ್ಮಾಯಿರವರು ತಮ್ಮ ಹೇಳಿಕೆಯ ಮೂಲಕ ಸಮಾಜಕ್ಕೆ ಅಪಾಯಕಾರಿ ಸಂದೇಶವನ್ನು ನೀಡಿದ್ದಾರೆ. ಯಾರೋ ಕೆಲವು ಪುಂಡರು ನೈತಿಕತೆ ಎಂದು ಪ್ರತಿಪಾದಿಸುವ ವಿಚಾರಗಳು ಸಮಾಜದಲ್ಲಿ ಶಾಂತಿಯನ್ನು ಕದಡುವ ಪ್ರಯತ್ನ ಆಗಬಹುದು. ಎಲ್ಲಾ ವಿಧದ ಅನೈತಿಕತೆಯನ್ನು ತಡೆಗಟ್ಟಲು ನಮಗೆ ಕಾನೂನುಗಳಿವೆ, ನ್ಯಾಯಾಲಯವಿದೆ. ಶಿಕ್ಷಿಸಲು ಜೈಲುಗಳಿವೆ. ಈ ಕಾನೂನಾತ್ಮಕ ಜವಾಬ್ದಾರಿಯನ್ನು ಯಾರು ವಹಿಸಿಕೊಳ್ಳುವಂತಿಲ್ಲ.
ಪ್ರತಿಯೊಂದು ಕ್ರಿಯೆಗೆ ಪ್ರತಿಕ್ರಿಯೆ ಇರುತ್ತದೆ ಎಂಬುದು ಯಾರಿಗೆ ತಿಳಿದಿಲ್ಲ? ಆದರೆ ಬೊಮ್ಮಾಯಿ ಹೇಳಬಯಸುವುದೇನು? ಅಲ್ಪಸಂಖ್ಯಾತರ ಮೇಲೆ ಬಹುಸಂಖ್ಯಾತರಿಂದ ದಾಳಿ ನಡೆಯುತ್ತಿರುತ್ತದೆ. ಇದು ಬಹುಸಂಖ್ಯಾತರ ಸಹಜವಾದ ಪ್ರತಿಕ್ರಿಯೆ ಎಂಬುದು ಬೊಮ್ಮಾಯಿ ಹೇಳಿಕೆಯ ತಾತ್ಪರ್ಯ. ಹೀಗೆ ಹೇಳುವ ಮೂಲಕ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಬಹುಸಂಖ್ಯಾತರ ದಾಳಿ ದೌರ್ಜನ್ಯವನ್ನು ಮುಖ್ಯಮಂತ್ರಿಗಳು ಸಮರ್ಥಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಈ ಪ್ರವೃತ್ತಿಗೆ ತಕ್ಕ ಉತ್ತರ ನೀಡುವುದು ಸಾಧ್ಯವಾಗಬೇಕು.