ಗೃಹಲಕ್ಷ್ಮೀಗೆ ಶಾಸಕರ ವೇತನ ಬಿಟ್ಟುಕೊಟ್ಟ ಬಸವರಾಜ ರಾಯರೆಡ್ಡಿ

ಯಲಬುರ್ಗಾ : ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಕಾಂಗ್ರೆಸ್ ನ ಹಿರಿಯ ನಾಯಕ, ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿಯವರು ತಮ್ಮ ಶಾಸಕ ಸ್ಥಾನದ ವೇತನವನ್ನು ಬಿಟ್ಟುಕೊಟ್ಟು ಇತರರಿಗೆ ಮಾದರಿಯಾಗಿದ್ದಾರೆ. ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಗೆ ತಮ್ಮ ಪ್ರತಿ ತಿಂಗಳ ಶಾಸಕರ ವೇತನವನ್ನು ನೀಡುವಂತೆ ವಿಧಾನಸಭೆ ಕಾರ್ಯದರ್ಶಿಗೆ ಅವರು ಪತ್ರ ಬರೆದಿದ್ದಾರೆ.

ರಾಜ್ಯ ಸರ್ಕಾರ ಇಷ್ಟೊಂದು ದೊಡ್ಡ ಯೋಜನೆಯನ್ನು ಜಾರಿಗೆ ತಂದಿದೆ. ಆದ್ದರಿಂದ ಸರ್ಕಾರದೊಂದಿಗೆ ಕೈ ಜೋಡಿಸುವ ಪ್ರಯುಕ್ತ ತಮ್ಮ ಪ್ರತಿ ತಿಂಗಳ ಶಾಸಕರ ವೇತನವನ್ನು ಗೃಹಲಕ್ಷ್ಮೀ ಯೋಜನೆಗೆ ನೀಡಲು ನಿರ್ಧರಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಸವರಾಜ ರಾಯರೆಡ್ಡಿ ಅವರು, ಈ ಹಿಂದೆಯೂ ನಾನು ಶಾಸಕ ಸ್ಥಾನದ ವೇತನವನ್ನು ಪಡೆದಿಲ್ಲ. ಆಗಲೂ ಬೇರೆ ಯೋಜನೆಗೆ ಬಿಟ್ಟುಕೊಟ್ಟಿದ್ದೆ, ಈಗ ಗೃಹಲಕ್ಷ್ಮೀ ಯೋಜನೆಗೆ ನನ್ನ ವೇತನ ಬಿಟ್ಟುಕೊಡಲು ನಿರ್ಧರಿಸಿ ಪತ್ರ ಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ.

ಇನ್ನು, ಬರ ಅಥವಾ ಪ್ರವಾಹ ಪರಿಸ್ಥಿತಿ ಸೇರಿ ಕೆಲವು ಸಂದರ್ಭದಲ್ಲಿ ಶಾಸಕರು ಹಾಗೂ ಸಚಿವರು ತಮ್ಮ ಒಂದು ತಿಂಗಳ ವೇತನವನ್ನು ಸರ್ಕಾರಕ್ಕೆ ನೀಡಿರುವ ಉದಾಹರಣೆಗಳು ಹಲವು ಇವೆ. ಆದರೆ, ಶಾಸಕರ ಅವಧಿ ಇರುವ ತನಕ ತಮ್ಮ ಶಾಸಕ ಸ್ಥಾನದ ವೇತನವನ್ನು ಯೋಜನೆಯೊಂದಕ್ಕೆ ನೀಡುವಂತೆ ವಿಧಾನಸಭೆ ಕಾರ್ಯದರ್ಶಿಗೆ ಪತ್ರ ಬರೆದುಕೊಟ್ಟಿರುವುದು ಅಪರೂಪ ಎಂತಲೇ ಹೇಳಬಹುದು.

ಬಸವರಾಜ ರಾಯರೆಡ್ಡಿ ಈ ಹಿಂದೆ ಸಚಿವರಾಗಿದ್ದಾಗ ವೇತನ ಪಡೆದಿರಲಿಲ್ಲ ಎಂಬುದು ಸುಳ್ಳು, ಅವರು ವೇತನ ಪಡೆದಿದ್ದರು ಎಂದು ಬಿಜೆಪಿ ಟ್ರೋಲ್ ಮಾಡಿತ್ತು. ಆದರೆ ಕಾಂಗ್ರೆಸ್ ನ ಯಲಬುರ್ಗಾ ಘಟಕ ಅದಕ್ಕೆ ಅಧಿಕೃತ ಸಾಕ್ಷಿ ನೀಡುವ ಮೂಲಕ ಬಿಜೆಪಿ ನಾಯಕರ ಬಾಯಿ ಮುಚ್ಚಿಸಿದ್ದಾರೆ. ಒಟ್ಟಿನಲ್ಲಿ ಬಸವರಾಜ ರಾಯರೆಡ್ಡಿಯವರ ಕಾರ್ಯಕ್ಕೆ ರಾಜ್ಯವ್ಯಾಪಿ ಮೆಚ್ಚುಗೆ ವ್ಯಕ್ತವಾಗಿದೆ.

Donate Janashakthi Media

Leave a Reply

Your email address will not be published. Required fields are marked *