ಧಾರವಾಡ : ಧಾರವಾಡ ಗ್ರಾಮಾಂತರ ಠಾಣೆಯಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ಆರು ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಕರ್ನಾಟಕ ವಾಲ್ಮೀಕಿ ಮಹಾಸಭಾ ಧಾರವಾಡ ಜಿಲ್ಲಾ ಅಧ್ಯಕ್ಷ ಮೋಹನ ಗುಡಿಸಲಮನಿ ಅವರ ದೂರು ಆಧರಿಸಿ ಎಫ್ಐಆರ್ ದಾಖಲಿಸಲಾಗಿದೆ.ಮುಗದ ಗ್ರಾಮದ ಸರ್ವೋದಯ ಶಿಕ್ಷಣ ಸಂಸ್ಥೆಯನ್ನು ಬಸವರಾಜ ಹೊರಟ್ಟಿ ಅವರು ಕೈವಶ ಮಾಡಿಕೊಂಡಿದ್ದಾರೆಂದು ಆರೋಪಿಸಿ ದೂರು ದಾಖಲಿಸಲಾಗಿದೆ.
ಘಟನೆಯ ಹಿನ್ನಲೆ : ಮುಗದ ಗ್ರಾಮದಲ್ಲಿರುವ ಸರ್ವೋದಯ ಶಿಕ್ಷಣ ಟ್ರಸ್ಟ್ ಗೆ ಸೇರಿದ ಶಿಕ್ಷಣ ಸಂಸ್ಥೆಯಲ್ಲಿ ಬಸವರಾಜ ಹೊರಟ್ಟಿ ಅವರ ನಾಮಫಲಕ ತೆರವಿಗೆ ಸೂಚಿಸಿದ್ದು ವಿವಾದಕ್ಕೆ ಕಾರಣ ಎಂದು ಹೇಳಲಾಗಿದೆ. ನಾಮಫಲಕ ತೆಗೆಯಲು ಹೇಳಿದ್ದರಿಂದ ಗಲಾಟೆ ನಡೆದಿದ್ದು, ಈ ವೇಳೆ ವಾಲ್ಮೀಕಿ ಸಂಘದ ಪದಾಧಿಕಾರಿಗಳು ಬಂದಿದ್ದ ಕಾರಿನ ಮೇಲೆ ಹೊರಟ್ಟಿ ಬೆಂಬಲಿಗರು ಕಲ್ಲು ತೂರಾಟ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ರು.
ಈ ಘಟನೆ ಖಂಡಿಸಿ ವಾಲ್ಮೀಕಿ ಸಂಘದ ಧಾರವಾಡ ಜಿಲ್ಲಾ ಅಧ್ಯಕ್ಷ ಮೋಹನ್ ಗುಡಸಲಮನಿ ಎಂಬವರು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರಲ್ಲದೆ, ವೆಂಕಟೇಶ್ ಲಕ್ಸಾಣಿ, ಚೈತ್ರಾ ಮೇಟಿ, ನಿರ್ಮಲಾ ಚವ್ಹಾಣ್, ದೊಡ್ಡಪ್ಪ ಕೆಂಗಣ್ಣ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.