ಬೆಂಗಳೂರು : ಬಿಎಸ್ ಯಡಿಯೂರಪ್ಪ ರಾಜೀನಾಮೆಯಿಂದ ತೆರವಾದ ರಾಜ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಹಿರಿಯ ಸಚಿವ ಬಸವರಾಜ ಬೊಮ್ಮಾಯಿಯವರನ್ನು ಆಯ್ಕೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಮಂಗಳವಾರ ಧರ್ಮೇಂದ್ರ ಪ್ರಧಾನ್, ಕಿಶನ್ ರೆಡ್ಡಿ ಮತ್ತು ಅರುಣ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆಗೂ ಮುನ್ನವೇ ಬಸವರಾಜ ಬೊಮ್ಮಾಯಿ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದೆ. ಬಸವರಾಜ ಬೊಮ್ಮಾಯಿ ಅವರು ಇಂದೇ ರಾಜಭವನಕ್ಕೆ ಹೋಗಿ ಸರ್ಕಾರ ರಚನೆಗೆ ಹಕ್ಕುಮಂಡನೆ ಮಾಡಲಿದ್ದು, ನಾಳೆ ಮಧ್ಯಾಹ್ನ 3.20ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿವೆ.
ಜೆಡಿಎಸ್ ನಿಂದ ವಲಸೆ ಬಂದಿದ್ದ ಬಸವರಾಜ ಬೊಮ್ಮಾಯಿ, ಬಿಜೆಪಿ ಸರಕಾರದಲ್ಲಿ ಸಂಸದೀಯ ವ್ಯವಹಾರ ಮತ್ತು ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
ಮತ್ತೆ ಲಿಂಗಾಯತರಿಗೆ ಮಣೆ : ಅಚ್ಚರಿಯ ಬೆಳವಣಿಗೆಯಲ್ಲಿ ಹೊಸ ಮುಖ, ಯುವಕ ಸಿಎಂ ಆಗಲಿದ್ದಾರೆ ಎಂಬೆಲ್ಲ ಚರ್ಚೆಗಳು ಹುಸಿಯಾಗಿವೆ. ಲಿಂಗಾಯತ ಸಮುದಾಯಕ್ಕೆ ಸೇರಿದವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಹುತೇಕ ಮಾಧ್ಯಮಗಳು ವರದಿ ಮಾಡುತ್ತಿದ್ದವು. ಬೇರೆ ಸಮುದಾಯಕ್ಕೆ ಸೇರಿದ ಶಾಸಕರನ್ನು ಸಿಎಂ ಮಾಡಿದರೆ ರಾಜ್ಯದಲ್ಲಿ ಬಿಜೆಪಿಗೆ ಹಿನ್ನಡೆಯಾಗಬಹುದು ಎಂಬುದನ್ನು ಹೈಕಮಾಂಡ್ ಅರಿತಂತಿದೆ. ಹಾಗಾಗಿ ಲಿಂಗಾಯತ ಸಮುದಾಯಕ್ಕೆ ಮತ್ತೊಮ್ಮೆ ‘ಸಿಎಂ’ ಪಟ್ಟ ಒಲಿದಿದ್ದು, ಬಸವರಾಜ ಬೊಮ್ಮಾಯಿ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಯಾಗಿದ್ದಾರೆ.
ಬಸವರಾಜ ಬೊಮ್ಮಾಯಿ ರಾಜಕೀಯ ಜೀವನ :
61 ವರ್ಷದ ಬಸವರಾಜ ಬೊಮ್ಮಾಯಿ ಯವರು ಜನಿಸಿದ್ದು ಹುಬ್ಬಳ್ಳಿಯಲ್ಲಿ . ಸಾದರ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಇವರ ತಂದೆ ಎಸ್ ಆರ್ ಬೊಮ್ಮಾಯಿ 1988ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಮೆಕ್ಯಾನಿಕ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದಿರುವ ಬಸವರಾಜ ಬೊಮ್ಮಾಯಿ ಜೆಡಿಎಸ್ ಮೂಲಕ ರಾಜಕೀಯ ಜೀವನ ಆರಂಭಿಸಿದ್ದರು.
1998 ಮತ್ತು 2004ರಲ್ಲಿ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದ ಬೊಮ್ಮಾಯಿ 2008ರಲ್ಲಿ ಕಮಲ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಅದೇ ವರ್ಷ ಹಾವೇರಿ ಜಿಲ್ಲೆಯ ಶಿಗ್ಗಾಂವ್ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನಸಭೆ ಪ್ರವೇಶ ಪಡೆದಿದ್ದರು.
2008ರಿಂದ 2013ರವರೆಗೆ ಬಿ ಎಸ್ ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್ ಶೆಟ್ಟರ್ ನೇತೃತ್ವದ ಸರ್ಕಾರಗಳಲ್ಲಿ ನೀರಾವರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಬಸವರಾಜ ಬೊಮ್ಮಾಯಿ, ನಂತರ 2019ರ ಬಿಎನ್ ವೈ ಸರ್ಕಾರದಲ್ಲಿ ಗ್ರಹ ಸಚಿವರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.