ಬೆಳಗಾವಿ: ‘ಬಸನಗೌಡ ಪಾಟೀಲ ಯತ್ನಾಳ ಉಚ್ಚಾಟನೆ ವಿಚಾರವನ್ನು ಮರು ಪರಿಶೀಲನೆ ನಡೆಸುವಂತೆ ಹೈಕಮಾಂಡ್ಗೆ ಪತ್ರ ಬರೆಯುತ್ತೇವೆ. ಈ ಸಂಬಂಧ ಎಲ್ಲ ಭಿನ್ನಮತೀಯರು ಬೆಂಗಳೂರಿನಲ್ಲಿ ಶುಕ್ರವಾರ (28) ಸಭೆ ಸೇರಲು ನಿರ್ಧರಿಸಿದ್ದೇವೆ’ ಎಂದು ಇಂದು, ಗುರುವಾರ ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಉಚ್ಚಾಟನೆ
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಯತ್ನಾಳ ಮರಳಿ ಬಿಜೆಪಿಗೆ ಸೇರುತ್ತಾರೆಂಬ ವಿಶ್ವಾಸ ನನಗಿದೆ’. ‘ಯತ್ನಾಳ ವಿರುದ್ಧದ ಕ್ರಮ ನಿರೀಕ್ಷಿತ. ಜತೆಗೆ ನಮ್ಮ ವಿರೋಧಿ ಬಣಕ್ಕೂ ಎಚ್ಚರಿಕೆ ನೀಡಲಾಗಿದೆ’ ಎಂದರು. ಉಚ್ಚಾಟನೆ
‘ಈ ಹಿಂದೆ ಹೈಕಮಾಂಡ್ ಕ್ರಮದ ವಾಸನೆ ಬಡಿದಿತ್ತು. ಯತ್ನಾಳ ನಮ್ಮ ಪಕ್ಷದ ದೊಡ್ಡ ನಾಯಕ. ಹಾಗೆಂದ ಮಾತ್ರಕ್ಕೆ ಪಕ್ಷದ ನಿರ್ಧಾರ ಪ್ರಶ್ನಿಸುವ ದೊಡ್ಡ ವ್ಯಕ್ತಿ ನಾನಲ್ಲ. ನಾವೆಲ್ಲರೂ ಸೇರಿ ಚರ್ಚಿಸುತ್ತೇವೆ. ಯತ್ನಾಳ ಕ್ರಮದ ಬಗ್ಗೆ ಪುನರ್ ಪರಿಶೀಲನೆ ಮಾಡುವಂತೆ ಪತ್ರ ಬರೆದು ಹೈಕಮಾಂಡ್ಗೆ ಮನವಿ ಮಾಡಿಕೊಳ್ಳುತ್ತೇವೆ’ ಎಂದರು.
ಇದನ್ನೂ ಓದಿ: ಬೆಂಗಳೂರು| ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ ಮತ್ತೆ 4 ರೂ ಏರಿಕೆ
‘ಯತ್ನಾಳ ಅವರು ದೊಡ್ಡ ಸಮುದಾಯದ ನಾಯಕ. ಅವರ ಸಾಮರ್ಥ್ಯವನ್ನು ಬಿಜೆಪಿ ಬಳಸಿಕೊಳ್ಳಬೇಕಿತ್ತು’. ‘ನಾನು ಕೂಡ ವೇದಿಕೆ ಮೇಲೆ ಪಕ್ಷದ ನಾಯಕರ ವಿರುದ್ಧ ಮಾತನಾಡಿದ್ದೇನೆ. ಸೋಮಶೇಖರ ಅವರಿಗೂ ನೋಟಿಸ್ ನೀಡಿದ್ದಾರೆ. ಆದರೆ ಯತ್ನಾಳ ಅವರ ಮೇಲೆ ಹೆಚ್ಚು ಪ್ರೀತಿ ಇದೆ. ಆ ಕಾರಣಕ್ಕೆ ಉಚ್ಚಾಟಿಸಿದ್ದಾರೆ. ನಾವು ಇದನ್ನು ಪಕ್ಷದ ಪ್ರೀತಿ ಎಂದೇ ಭಾವಿಸುತ್ತೇವೆ’ ಎಂದರು.
‘ಏನೇ ಆಗಲಿ, ಯತ್ನಾಳ ಅವರೂ ಸೇರಿದಂತೆ ನಾನು ಮತ್ತು ನಮ್ಮ ತಂಡದವರೆಲ್ಲ ಬಿಜೆಪಿಯಲ್ಲೇ ಇರುತ್ತೇವೆ. ನಾವು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ಮುಂದಿನ ಸಲ ನಮ್ಮದೇ ಸರ್ಕಾರ ತರಲು ಏನು ಬೇಕೋ ಅದನ್ನು ಮಾಡುತ್ತೇವೆ’ ಎಂದೂ ಹೇಳಿದರು.
‘ಕೆಲವೊಮ್ಮೆ ಸೂರ್ಯ, ಚಂದ್ರನಿಗೂ ಗ್ರಹಣ ಹಿಡಿಯುತ್ತದೆ. ನಾವು ರಾಜಕಾರಣಿಗಳು. ನಮ್ಮಿಂದಲೂ ಕೆಲ ಸಮಸ್ಯೆ ಆಗುತ್ತವೆ. ಈಗ ನಾವೆಲ್ಲರೂ ಗಟ್ಟಿಯಾಗಿ ಯತ್ನಾಳ ಜೊತೆಗೆ ನಿಲ್ಲುತ್ತೇವೆ. ಯತ್ನಾಳ ಒಂಟಿ ಅಲ್ಲ’ ಎಂದರು.
‘ಕೇಂದ್ರದ ಟಾಪ್-10 ನಾಯಕರಲ್ಲಿ ಒಬ್ಬರೊಂದಿಗೆ ನಾನು ಮಾತಾಡಿದ್ದೇನೆ. ಬಿಜೆಪಿ ನಮಗೆ ತಂದೆ- ತಾಯಿ ಸಮಾನ ಎಂದು ಹೇಳಿದ್ದೇನೆ. ರಾಷ್ಟ್ರ ಮಟ್ಟದ ನಾಯಕರ ಮೇಲೆ ನಮಗೆ ವಿಶ್ವಾಸ ಇದೆ. ಪುನಃ ಯತ್ನಾಳ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುತ್ತಾರೆ’ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.
‘ಈ ವಿಚಾರದಲ್ಲಿ ವಿಜಯೇಂದ್ರ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ. ಈ ಹಿಂದೆ ಅವರ ಬಗ್ಗೆ ಆಡಿದ ಎಲ್ಲ ಮಾತಿಗೆ ನಾನು ಬದ್ಧನಿದ್ದೇನೆ’ ಎಂದೂ ರಮೇಶ ಪ್ರತಿಕ್ರಿಯಿಸಿದರು.
ಇದನ್ನೂ ನೋಡಿ: ದುಡಿಯುವ ಜನರಿಗೆ ದುಡ್ಡಿಲ್ಲ! ಆದರೆ ಶಾಸಕರ ವೇತನ ದುಪ್ಪಟ್ಟಾಯ್ತು!! ಅಂಥಾ ಕಷ್ಟ ಅವರಿಗೇನಿತ್ತು? Janashakthi Media