ಬರಹಗಾರರಿಗೆ ಕೊಲೆ ಬೆದರಿಕೆ ಪತ್ರ: ತನಿಖೆಗೆ ಎಸ್‌ಪಿ ಶ್ರೇಣಿಯ ಅಧಿಕಾರಿ ನೇಮಕ

ಬೆಂಗಳೂರು: ಬರಹಗಾರರು, ಸಾಹಿತಿಗಳು, ರಾಜಕಾರಣಿಗಳಿಗೆ ಕೊಲೆ ಬೆದರಿಕೆ ಪತ್ರಗಳ ಪದೇ ಪದೇ ಬರುತ್ತಿದ್ದು, ಇದರ ಬಗ್ಗೆ ಪೊಲೀಸ್‌ ಅಧೀಕ್ಷಕ (ಎಸ್‌ಪಿ) ಶ್ರೇಣಿಯ ಅಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಲು ಕರ್ನಾಟಕ ಪೊಲೀಸ್‌ ಇಲಾಖೆ ನೇಮಿಸಿದೆ.

ಏಪ್ರಿಲ್‌ ತಿಂಗಳ ಒಂದರಲ್ಲೇ ಏಳು ಬರಹಗಾರರಿಗೆ ಕನಿಷ್ಠ 19 ಕೊಲೆ ಬೆದರಿಕೆಗಳನ್ನು ಕಳುಹಿಸಲಾಗಿದೆ. ಕೊಲೆ ಬೆದರಿಕೆಗಳು ಬಂದರೂ ಸಹ ಎಫ್‌ಐಆರ್‌ ದಾಖಲಾಗಿಲ್ಲ, ಪೊಲೀಸರ ನಿಷ್ಕ್ರಿಯರಾಗಿದ್ದಾರೆ ಎಂದು ಲೇಖಕರು ಬೇಸರ ವ್ಯಕ್ತಪಡಿಸಿದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.

‘ಸಹಿಷ್ಣು ಹಿಂದೂ’ ಎಂದು ಸಹಿ ಇರುವಂತಹ ಕೊಲೆ ಬೆದರಿಕೆ ಪತ್ರಗಳು ಏಳು ಬರಹಗಾರರಿಗೆ 19 ಬಾರಿ ರವಾನಿಸಲಾಗಿದೆ. ಈ ಬರಹಗಾರರ ನಿಲುವುಗಳನ್ನು “ಹಿಂದೂ ವಿರೋಧಿ” ಎಂದು ಕರೆದಿದ್ದಾನೆ. ಸಾಹಿತಿ ಕುಂ.ವೀರಭದ್ರಪ್ಪ ಅವರಿಗೆ ಆರು ಪತ್ರ, ಚಿಂತಕ ಬಂಜಗೆರೆ ಜಯಪ್ರಕಾಶ್ ಅವರಿಗೆ ಐದು ಪತ್ರ ಬಂದಿವೆ.  ಹಿಜಾಬ್ ವಿವಾದದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಬಹಿರಂಗ ಪತ್ರ ಬರೆದ 61 ಬರಹಗಾರರನ್ನು ಪಟ್ಟಿ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಮತ್ತು ಬಿ.ಕೆ. ಹರಿಪ್ರಸಾದ್ ಅವರನ್ನೂ ಸಹ ಈ ಪಟ್ಟಿಯಲ್ಲಿ ಸೇರಿಸಲಾಗಿದೆ.

“ಒಬ್ಬನೇ ವ್ಯಕ್ತಿ ಎಲ್ಲಾ ಬರಹಗಾರರಿಗೆ ಈ ಬೆದರಿಕೆ ಪತ್ರಗಳನ್ನು ಬರೆಯುತ್ತಿರುವುದು ಸ್ಪಷ್ಟವಾಗಿದೆ. ಕೆಲವು ಲೋಪಗಳಾಗಿವೆ, ಆದರೂ ತನಿಖೆಗಳು ಈಗಾಗಲೇ ನಡೆಯುತ್ತಿವೆ. ಈಗ ತನಿಖೆಯನ್ನು ಹೆಚ್ಚು ಸಂಘಟಿತ ರೀತಿಯಲ್ಲಿ ಮಾಡಲಾಗುತ್ತದೆ ” ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ದಿ ಹಿಂದೂ’ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿಫಲರಾಗಿದ್ದಾರೆ. ರಾಜ್ಯ ಪೊಲೀಸರು ಎಫ್‌ಐಆರ್‌ಗಳನ್ನು ದಾಖಲಿಸುವಲ್ಲಿ ಎಡವಿದ್ದಾರೆ ಎಂದು ಆರೋಪಗಳು ಬಂದಿದ್ದವು.

ಜುಲೈ 2ರಂದು ತಮ್ಮ ನಿವಾಸಕ್ಕೆ ಕೊಲೆ ಬೆದರಿಕೆ ಪತ್ರ ಬಂದಿದ್ದ ಕುರಿತು ಡಾ. ವಸುಂಧರಾ ಭೂಪತಿ ಅವರು ಬಸವೇಶ್ವರನಗರ ಪೊಲೀಸರಿಗೆ ದೂರು ನೀಡಿದ್ದರು, ಆದರೆ ಪೊಲೀಸರು ಎಫ್‌ಐಆರ್ ದಾಖಲಿಸಲು ನಿರಾಕರಿಸಿದರು. ಪೊಲೀಸ್‌ ಇಲಾಖೆಯ ಬೇಜವಾಬ್ದಾರಿತನದ ವಿರುದ್ಧ ಆಕ್ರೋಶ ವ್ಯಕ್ತಗೊಂಡಿದೆ. ಇದೀಗ ಬುಧವಾರ(ಜುಲೈ 13) ದೂರಿನ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಂಡು ಬಸವೇಶ್ವರನಗರದಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಲೇಖಕಿ ವಸುಂಧರಾ ಭೂಪತಿ ಅವರು “ಬುಧವಾರ ಬೆಳಿಗ್ಗೆ, ನನ್ನ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದೆ ಎಂದು ಸಂದೇಶ ಬಂದಿದೆ. ಸ್ವಲ್ಪ ಸಮಯದ ನಂತರ, ಇಬ್ಬರು ಪೊಲೀಸರು ನನ್ನ ಮನೆಗೆ ಬಂದು ನನ್ನ ನಿವಾಸದಲ್ಲಿ ಪೊಲೀಸ್ ಬೀಟ್ ಪಾಯಿಂಟ್ ಹಾಕಿದರು. ಭದ್ರತೆಯ ಭರವಸೆ ನೀಡಿದರು” ಎಂದು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *