ದಾವಣಗೆರೆ: ದೇಶದಲ್ಲಿ ಈಗಲೂ 1.78 ಕೋಟಿ ಜನ ಮಲ ಹೊರುವ ಪದ್ಧತಿಯಲ್ಲಿದ್ದಾರೆ. ಎಂಟು ಕೋಟಿ ಜನ ಮಲವನ್ನು ವಾಹನದಲ್ಲಿ ಬೇರೆ ಕಡೆ ಸಾಗಿಸುತ್ತಾರೆ. ಪ್ರತಿ ಐದು ದಿನಕ್ಕೊಮ್ಮ ಪೌರ ಕಾರ್ಮಿಕ ಸಾವನ್ನಪ್ಪುತ್ತಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಅದು ಹೇಗೆ ‘ಸ್ವಚ್ಛ ಭಾರತ್’ ಮಾತಾಡುತ್ತಾರೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ)ಯಿಂದ ನಗರದಲ್ಲಿ ಶುಕ್ರವಾರ ನಡೆದ ರಾಜ್ಯಮಟ್ಟದ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಸಮಾವೇಶ ‘ದಾವಣಗೆರೆ ಚಲೋ’ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಕಳೆದ 45 ವರ್ಷಗಳಲ್ಲಿ ಕಂಡು ಅರಿಯದ ನಿರುದ್ಯೋಗ ದೇಶದಲ್ಲಿದೆ. ಕೊರೊನಾ ಸಂಕಷ್ಟದ ಕಾಲದಲ್ಲಿ 1.47 ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಆದರೆ ಈ ದೇಶದ ಉದ್ಯಮಿಗಳ ಆದಾಯ ಶೇ. 35 ರಷ್ಟು ಹೆಚ್ಚಾಗಿದೆ. ಕೊರೊನಾ ಕಾಲದಲ್ಲಿ ಸಹ ದುಡ್ಡು ಗಳಿಸಿದ್ದಾರೆ. ಅಂದರೆ ತಿಳಿದುಕೊಳ್ಳಿ ಇವರು ಏನು ಮಾಡಿರಬೇಕು. ಈಗ ನನಗೆ ಸಂಶಯ ಬರುತ್ತಿದೆ. ವಿಧಾನಸಭೆಯಲ್ಲಿ ಮಠವಿದೇಯೋ ಅಥವಾ ಮಠವಿದೇಯೇ ವಿಧಾನ ಸಭೆ ಇದೆಯೋ ಎಂದು ಬೇಸರ ವ್ಯಕ್ತಪಡಿಸಿದರು.
’70-80ರ ದಶಕದಲ್ಲಿ ದಲಿತಪರ ಸಂಘಟನೆ ಕಟ್ಟುವುದೇ ಮುಖ್ಯ ಗುರಿಯಾಗಿತ್ತು. ಆನಂತರ ದಲಿತ ಸಂಘಟನೆಗಳ ಹೋರಾಟದ ಜೊತೆಗೆ ಅಸ್ಮಿತೆಯ ಹುಡುಕಾಟ ಆರಂಭವಾಯಿತು. ಬದಲಾದ ಸನ್ನಿವೇಶವನ್ನು ಎದುರಿಸುವುದು ಹೇಗೆ ಎಂಬುದನ್ನು ಯೋಚಿಸದಿದ್ದರೆ ದಲಿತ ಪ್ರಜ್ಞೆ ಸೋಲುತ್ತದೆ’ ಎಂದು ವಿಶ್ಲೇಷಿಸಿದರು.
‘ಇಂದು ಜಾತಿ ಹಾಗೂ ವರ್ಣಗಳಲ್ಲಿ ಶ್ರೇಣೀಕರಣ ಶುರುವಾಗಿದೆ. ಜೊತೆಗೆ ಇವುಗಳ ಒಳಗಡೆಯೂ ಶ್ರೇಣೀಕರಣ ಶುರುವಾಗಿದೆ. ಇವು ಹೊಸ ಸವಾಲುಗಳನ್ನು ಸೃಷ್ಟಿಸಿವೆ. ಇಂತಹ ಹೊಸ ಸಂದರ್ಭವನ್ನು ಎದುರಿಸುವ ಬಗ್ಗೆ ದಲಿತ ಪ್ರಜ್ಞೆ ಯೋಚಿಸಬೇಕಿದೆ. ಆ ಯೋಚನೆಯ ಮೂಲಕ ದಲಿತ ಪ್ರಜ್ಞೆಯ ಮರು ನಿರೂಪಣೆಯಾಗಬೇಕಿದೆ’ ಎಂದು ಕರೆ ನೀಡಿದರು.
900 ವಿವಿಗಳು ಡಿಜಿಟಲ್ ವಿವಿಗಳನ್ನಾಗಿ ಮಾಡಲಾಗುತಿದೆ ಎಂದರೆ ಜನ ಸಾಮಾನ್ಯರು ದಲಿತರ ಮಕ್ಕಳಿಗೆ ಅಲ್ಲಿ ಶಿಕ್ಷಣ ಕೊಡುವುದಿಲ್ಲ ಎಂದು ಅರ್ಥ. ಹೊಸ ಶಿಕ್ಷಣ ನೀತಿಯಲ್ಲಿ ಶೇ.40 ರಷ್ಟು ಆನ್ ಲೈನ್‍ನಲ್ಲಿ ಅವಕಾಶ ಮಾಡಿಕೊಡಲಾಗುತ್ತಿದೆ ಎಂದರೆ ಬಡವರಿಂದ ಶಿಕ್ಷಣ ಕಿತ್ತುಕೊಳ್ಳಲಾಗುತಿದೆ ಎಂದು ಅರ್ಥ. ಇಂತಹ ಸನಿವೇಶದಲ್ಲಿ ನಾವಿದ್ದೇವೆ. ತಳ ಸಮುದಾಯಗಳು ಮೇಲೆ ಬರುವ ಸಂದರ್ಭದಲ್ಲಿ ಡಿಜಿಟಲ್ ಅನ್ನುವ ಕಾರಣಕ್ಕಾಗಿ ಬಡವರಿಂದ ಶಿಕ್ಷಣ ಕಿತ್ತುಕೊಳ್ಳಲಾಗುತ್ತಿದೆ. ಆಡಳಿತದಲ್ಲಿ ಡಿಜಿಟಲೀಕರಣ ಇರಲಿ. ಆದರೆ ಇದು ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ವಿರೋಧಿಯಾದುದು ಎಂಬುದನ್ನು ಎಲ್ಲಾ ಚಳುವಳಿಗಳು ಅರಿತು ಬೀದಿಗಿಳಿಯಬೇಕು ಎಂದರು.
ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ಹರಳಯ್ಯ ಸ್ವಾಮೀಜಿ, ಛಲವಾದಿ ಪೀಠದ ಬಸವ ನಾಗಿದೇವ ಸ್ವಾಮೀಜಿ, ಡಿಎಸ್‍ಎಸ್ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ,ಮುಂಡರಗಿ ನಾಗರಾಜ್, ಬಿ.ಎನ್.ಗಂಗಾಧರಪ್ಪ, ಹನುಮಂತಪ್ಪ ಕಾಕರಗಲ್, ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ ಸ್ವಾಗತಿಸಿದರು. ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಅನೇಕ ಮುಖಂಡರು ಭಾಗವಹಿಸಿದ್ದರು.