ಜಿ.ಎನ್. ನಾಗರಾಜ್
“ಊರ ಸೀಮೆಯ ದಾಟಿ
ಕಾಡ ಗಡಿಯನು ಸೇರಿ
ಕಾಡ ಸಂಪತ್ತು ತರಬನ್ನಿ.”
ಬನ್ನಿ ಹಬ್ಬವನ್ನು ಆದಿ ಮಾನವನ ಕಾಲದಿಂದ ಆಚರಿಸುತ್ತ ಬರಲಾಗುತ್ತಿದೆ. ಈಗಲೂ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಬನ್ನಿ ಹಬ್ಬವನ್ನು ಆಚರಿಸುವುದು ಪದ್ಧತಿ. ಮೈಸೂರಲ್ಲಿ ಆಚರಿಸಲಾಗುವ ಬನ್ನಿ ಹಬ್ಬ ದಸರಾ ,ವಿಜಯ ದಶಮಿ ಎಂದು ಹೆಸರು ತಳೆದಿದೆ. ಬನ್ನಿ ಪೂಜೆಗೆ ತೆರಳುವ ಮಹಾರಾಜರ ಜಂಬೂ ಸವಾರಿ ಬನ್ನಿ ಹಬ್ಬಕ್ಕಿಂತ ಪ್ರಮುಖವಾಗಿಬಿಟ್ಟಿದೆ.
ದಕ್ಷಿಣ ಕರ್ನಾಟಕದ ಹಳ್ಳಿಗಳಲ್ಲಿ ಊರಿನ ಜನವೆಲ್ಲ ಒಟ್ಟಾಗಿ ಊರಿನಾಚೆ ಒಂದು ಸಣ್ಣ ಗುಡ್ಡದ ಮೇಲೋ,ಅಥವಾ ಒಂದು ಎತ್ತರದ ದಿಬ್ಬದ ಮೇಲೋ ಇರುವ ಬನ್ನಿ ಮರವನ್ನು ಪೂಜಿಸಿ, ಅದಕ್ಕೆ ಸ್ವಲ್ಪ ದೂರದಲ್ಲಿ ನಿಂತು ಊರಿನ ಪ್ರಮುಖ ಒಂದು ಸರಳ ಬಿಲ್ಲಿನಿಂದ ಬನ್ನಿ ಮರದ ಬುಡಕ್ಕೆ ತಾಗುವಂತೆ ಮೂರು ಬಾಣ ಬಿಡುತ್ತಿದ್ದ ಪದ್ಧತಿ ವ್ಯಾಪಕವಾಗಿ ಪ್ರಚಲಿತವಾಗಿತ್ತು. ನಂತರ ಎಲ್ಲರಿಗೂ ಪ್ರಸಾದ ವಿತರಣೆಯಾಗಿ ಹಳ್ಳಿಗೆ ಹಿಂತಿರುಗುತ್ತಿದ್ದರು. ಇದನ್ನು ಹಲವಾರು ಹಳ್ಳಿಗಳಲ್ಲಿ ಕಣ್ಣಾರೆ ಕಂಡಿದ್ದೆ.
ಅಂತಹ ಒಂದು ಬನ್ನಿ ಪೂಜೆಯನ್ನು ನಾನೇ ಮಾಡುವ ಪ್ರಸಂಗವೂ ಒದಗಿತ್ತು. ನಾನು ಹೆಸರಘಟ್ಟದ ದೊಡ್ಡ ಪಶು ಸಂಗೋಪನಾ ಫಾರಂನಲ್ಲಿ ಅಧಿಕಾರಿಯಾಗಿದ್ದೆ. ಆ ಫಾರಂನೊಳಗೆ ನಾಲ್ಕಾರು ಹಳ್ಳಿಗಳ ಜಮೀನು ಸೇರಿಕೊಂಡಿತ್ತು. ಆದ್ದರಿಂದ ಆ ಫಾರಂನ ಮುಖ್ಯ ಅಧಿಕಾರಿಗಳಿಂದ ಫಾರಂ ಸುತ್ತಲಿನ ಹಳ್ಳಿಗಳ ಜನರು ಬನ್ನಿ ಪೂಜೆ ಮಾಡಿಸುತ್ತಿದ್ದರು. ಆಗ ಬನ್ನಿ ಪೂಜೆ ಮಾಡಿ ಬಾಣ ಬಿಟ್ಟು ಇಂತಹ ಆಚರಣೆಯಲ್ಲಿ ಭಾಗವಹಿಸಿದ್ದೇನೆ.
ಉತ್ತರ ಕರ್ನಾಟಕದಲ್ಲಿ– : ಕೆಲ ಕಾಲ ಹಿಂದಿನ ಧಾರವಾಡ ಜಿಲ್ಲೆಯ ಹಲವು ಊರುಗಳಲ್ಲಿ ಬನ್ನಿ ಹಬ್ಬದ ಆಚರಣೆಯನ್ನು ನೋಡಿದಾಗ ಮೇಲಿನದಕ್ಕಿಂತ ವಿಭಿನ್ನವಾಗಿ , ಆಶ್ಚರ್ಯ ಮತ್ತು ಸಂತೋಷಕ್ಕೆ ಕಾರಣವಾಗಿತ್ತು. ಅಲ್ಲಿ ಈ ಹಬ್ಬವನ್ನು ಬಹು ವ್ಯಾಪಕವಾಗಿ ,ಮತ್ತಷ್ಟು ಅರ್ಥ ಪೂರ್ಣವಾಗಿ ಆಚರಿಸುತ್ತಾರೆ. ದಕ್ಷಿಣ ಕರ್ನಾಟಕದಲ್ಲಿ ಬನ್ನಿ ಪೂಜೆ, ಬಾಣ ಬಿಡುವುದಕ್ಕೆ ಸೀಮಿತವಾದರೆ ಅಲ್ಲಿ ಬನ್ನಿ ಪೂಜೆಯ ನಂತರ ಪ್ರತಿಯೊಬ್ಬರೂ ಬನ್ನಿ ಸೊಪ್ಪನ್ನು ಬಿಡಿಸಿ ತಂದು ಹಿರಿಯರಿಗೆ, ತಮ್ಮ ಬಂಧು ಬಾಂಧವರಿಗೆ,ಗೆಳೆಯ ಗೆಳತಿಯರಿಗೆ ಅದನ್ನು ಕೊಡುವುದು , ಹಿರಿಯರಿಗೆ ಕಾಲಿಗೆ ಬಿದ್ದು ನಮಸ್ಕರಿಸುವುದು ರೂಢಿಯಲ್ಲಿದೆ. ಅವರು ಬನ್ನಿ ಸೊಪ್ಪಿಗೆ ಬಂಗಾರ ಎಂದೇ ಕರೆಯುತ್ತಾರೆ. ಬನ್ನಿ ಸೊಪ್ಪು ಕೊಟ್ಟು “ನಾವು ನೀವು ಬಂಗಾರದಂತೆ ಇರೋಣ ” ಎನ್ನುತ್ತಾರೆ. ಬಂಗಾರ ಕೊಟ್ಟು ಬಂಗಾರ ಪಡೆಯುವುದು ಎಂದು ಕರೆಯುತ್ತಾರೆ.
ಮುನಿಸಿಕೊಂಡಿದ್ದವರು, ಮನಸ್ಥಾಪ, ಜಗಳ ಮಾಡಿಕೊಂಡಿದ್ದವರಿಗೂ ಬನ್ನಿ ಕೊಟ್ಟು ಜಗಳ, ಮನಸ್ತಾಪಗಳಿಗೆ ಕೊನೆ ಹಾಡುತ್ತಾರೆ.
“ಬನ್ನಿ ಕುಣಿಯೋಣ ಬನ್ನಿ
ಹ್ಯಾಂವ ಮುರಿಯೋಣ ಬನ್ನಿ
ಜೀವ ಒಂದಾಗಿ ಇರ ಬನ್ನಿ “
( ಹ್ಯಾಂವ – ಮನಸ್ತಾಪ,ಜಗಳ )
ಈ ಸಾಲುಗಳು ಸುಂದರವಾಗಿ ಆ ಭಾವನೆಯನ್ನು ವ್ಯಕ್ತಪಡಿಸುತ್ತವೆ.
ಬನ್ನಿಯ ಪ್ರಾಮುಖ್ಯತೆ : ಬನ್ನಿಯ ಪೂಜೆ ಮಹಿಳೆಯರಿಗೆ ಬೇವಿನ ಕಟ್ಟೆಯ ಪೂಜೆ,ಅಶ್ವತ್ಥ ಮರದ ಪೂಜೆಯಂತೆ ಕಂಕಣ ಭಾಗ್ಯ,ಸಂತಾನ ಭಾಗ್ಯ ಲಭಿಸುವ ಪೂಜೆಯೆಂದೂ ಪರಿಗಣಿತವಾಗಿದೆ. ಏಕೆಂದರೆ ಬನ್ನಿ ಗಂಡಿನ ಪ್ರತೀಕ. ಬೆಂಕಿ ಹಚ್ಚಲು ಅಂದು ಲಭ್ಯವಿದ್ಧ ವಿಧಾನಗಳಲ್ಲಿ ಮರ ಮರ ಮಥನಿಸುವುದೇ ಮುಖ್ಯವಾಗಿತ್ತು. ( ಕಲ್ಲು ಹೆಚ್ಚಾಗಿ ಸಿಗುವ ಪ್ರದೇಶದಲ್ಲಿ ಬೆಣಚು ಕಲ್ಲನ್ನು ಒಂದಕ್ಕೊಂದು ತಾಡಿಸುವುದರಿಂದ ಬೆಂಕಿ ಪಡೆಯುತ್ತಿದ್ದರು )
ಹೀಗೆ ಮರ ಮರ ಮಥನಿಸುವಾಗ ಕೆಳಗೆ ಅಡ್ಡಲಾಗಿ ಒಂದು ಮರದ ಹಲಗೆ ಅಥವಾ ತುಂಡು. ಅದರಲ್ಲಿ ಒಂದು ಕುಳಿ. ಆ ಕುಳಿಯೊಳಕ್ಕೆ ಮತ್ತೊಂದು ಮರದ ಕೋಲನ್ನು ಲಂಬವಾಗಿ ತುರುಕಿ ಮೊಸರನ್ನು ಕಡೆಯುವಂತೆ ಕಡೆಯುವುದು. ಅಲ್ಲಿ ಶಾಖ ಹುಟ್ಟುವುದು ಬೆಂಕಿ ಪಡೆಯುವ ಮಾರ್ಗ. ಇದರಲ್ಲಿ ಕೆಳಗೆ ಹಾಸುತ್ತಿದ್ದ ಹಲಗೆ ಮತ್ತು ಲಂಬವಾಗಿ ಹಿಡಿದ ಕೋಲು ಬೇರೆ ಬೇರೆ ಮರದ್ದು.
ಈ ಕ್ರಿಯೆ ಲೈಂಗಿಕ ಕ್ರಿಯೆಯನ್ನು ಹೋಲುವುದರಿಂದ ಕೆಳಗಿನ ಹಲಗೆಯ ಮರವನ್ನು ಹೆಣ್ಣು ಮರ, ಲಂಬ ಕೋಲಿನ ಮರವನ್ನು ಗಂಡು ಮರ ಎಂದು ಭಾವಿಸುತ್ತಿದ್ದರು. ಬನ್ನಿ, ಅಶ್ವತ್ಥ ಮೊದಲಾದ ಮರಗಳು ಗಂಡು ಮರಗಳಾದರೆ ಸಾಮಾನ್ಯವಾಗಿ ಬೇವಿನಮರ ಹೆಣ್ಣು ಮರ.
ಇದೇ ಹಳ್ಳಿಗಳಲ್ಲಿ ಸಾಮಾನ್ಯವಾಗಿರುವ ಅಶ್ವತ್ಥ ಕಟ್ಟೆ ಅಥವಾ ಬೇವಿನ ಕಟ್ಟೆಗಳು, ಮಕ್ಕಳಿಲ್ಲದವರು ಅದನ್ನು ತಿಂಗಳುಗಟ್ಟಲೆ ಸುತ್ತುವುದರ ಹಿನ್ನೆಲೆ.
ಹಾಗೆ ಬನ್ನಿ ಕೂಡಾ ಗಂಡು ಮರ. ಜೊತೆಗೆ ಬೇವಿನಮರದಂತೆ ಇದು ಅನೇಕ ಕಾಯಿಲೆಗಳಿಗೆ ಮದ್ದನ್ನೀವ ಮರವೂ ಕೂಡಾ. ಈ ಮರವನ್ನು ಊರ ಗಡಿಯಲ್ಲಿ ದಿಬ್ಬದ ಮೇಲೆ ಕಾಪಾಡಿಕೊಂಡು ಅದನ್ನು ಪೂಜೆ ಮಾಡುವುದು ಊರ ಗಡಿಯನ್ನು ಎಲ್ಲರಿಗೂ, ಮುಖ್ಯವಾಗಿ ಮುಂದಿನ ತಲೆಮಾರಿಗೆ ಗುರುತು ಮಾಡುವ ಸಂಗತಿ ಕೂಡಾ.
ಅಂದು ಊರ ಸುತ್ತೆಲ್ಲ ಕಾಡೇ ಆವರಿಸಿರುವಾಗ ಊರ ಗಡಿ ಮುಗಿದರೆ ಕಾಡು ಆರಂಭ. ಆದ್ದರಿಂದ ಊರ ಗಡಿಗೆ ಹೋಗಿ ಕಾಡ ಸಂಪತ್ತನ್ನು ತರುವ ಪದ್ಧತಿ. ಊರೆಂದರೆ ಅವರ ಹೊಲ ಇದು,ಇವರ ಹೊಲ ಅದು ಎಂಬ ಬೇಧಗಳ ಮೊತ್ತ. ಮನಸ್ತಾಪ,ಜಗಳಗಳಿಗೆ ಇವೇ ಮುಖ್ಯ ಕಾರಣ. ಆದರೆ ಕಾಡು ಎಲ್ಲರ ಆಸ್ತಿ. ಅದನ್ನು ಎಲ್ಲರೂ ಉಪಯೋಗಿಸಬಹುದು.
ಹಿಂದೆ ಹೊಲಗಳಿಲ್ಲದ ಕಾಲದಲ್ಲಿ ,ಅಂದರೆ ಕಾಡಿನಲ್ಲಿ ಬುಡಕಟ್ಟುಗಳಾಗಿ ವಾಸಿಸುತ್ತಿದ್ದಾಗ ಎಲ್ಲವೂ ಎಲ್ಲರ ಆಸ್ತಿಯಾಗಿದ್ದ ಸಮಯದಲ್ಲಿನ ಒಟ್ಟು ಬದುಕಿನ ನೆನಪಾಗಿ ಬನ್ನಿಯ ಸೊಪ್ಪನ್ನು ಒಂದು ಹಂಚಿ ಜೀವ ಒಂದಾಗಿ ಬದುಕುವ ಆಶಯ. ಜೊತೆಗೆ ಬನ್ನಿ ಮರದಾಚೆ ಕಾಡಿನ ಮೃಗಗಳು-ಹುಲಿ, ಚಿರತೆ, ಕಿರುಬಗಳಿಗೆ ಆಹಾರವಾಗುವುದನ್ನು ತಪ್ಪಿಸಲು ಆಯುಧ ಪೂಜೆ ಮತ್ತು ಬನ್ನ ಮರದ ಬಳಿ ಬಾಣ ಪ್ರಯೋಗ. ಹಿಂದೆ ಆಯುಧಪೂಜೆಯ ದಿನ ಸ್ವಚ್ಛಗೊಳಿಸಿ, ಹರಿತಗೊಳಿಸಿದ ಆಯುಧಗಳನ್ನು ಹಿಡಿದು ದಶಮಿಯ ದಿನಬೇಟೆಗೂ ಹೋಗುತ್ತಿದ್ದರೇನೋ. ಈಗ ಸದ್ಯಕ್ಕೆ ಅದಕ್ಕೆ ಆಕರ ದೊರೆತಿಲ್ಲ.
ಮೈತ್ರಿ ಬೆಸೆಯುವ ಇಂತಹ ಜಾನಪದ ಆಚರಣೆ ರಾಜ ಮಹರಾಜರ ಕೈಗೆ ಸಿಕ್ಕಿ ವಿಜಯ ದಶಮಿಯಾಗಿದೆ.