ಶ್ರೀಸಾಮಾನ್ಯನ ಬ್ಯಾಂಕುಗಳೂ-ಸಿರಿವಂತರ ಹಿತಾಸಕ್ತಿಯೂ!

ಮಾರುಕಟ್ಟೆಯಲ್ಲಿ ಬ್ಯಾಂಕುಗಳು ಶ್ರೀಮಂತರನ್ನು ಪೋಷಿಸುವುದು ಬಂಡವಾಳಶಾಹಿ ಲಕ್ಷಣ
– ನಾ ದಿವಾಕರ

 

ಬ್ಯಾಂಕಿಂಗ್‌ ಎಂದರೆ ಕೇವಲ ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸುವ ಹಾಗೂ ಅವಶ್ಯಕತೆ ಇದ್ದವರಿಗೆ ಸಾಲ ನೀಡುವ ಒಂದು ವಾಣಿಜ್ಯ ಸಂಸ್ಥೆ ಎಂಬ ಪಾರಂಪರಿಕ ವ್ಯಾಖ್ಯಾನವು ನವ ಉದಾರವಾದದ ಮಾರುಕಟ್ಟೆ ವ್ಯವಸ್ಥೆಯಲ್ಲಿ ರೂಪಾಂತರಗೊಂಡಿದೆ. ನಾವೀನ್ಯತೆಯೇ ಪ್ರಧಾನ ಚಾಲಕ ಶಕ್ತಿಯಾಗಿರುವ ಬ್ಯಾಂಕಿಂಗ್‌ ಉದ್ದಿಮೆ ಇಂದು ಗ್ರಾಹಕರ ನಿತ್ಯ ಹಣಕಾಸು ಚಟುವಟಿಕೆಗಳನ್ನೂ ನಿರ್ವಹಿಸುವ, ನಿಭಾಯಿಸುವ ಹಾಗೂ ನಿಯಂತ್ರಿಸುವ ಜವಾಬ್ದಾರಿಯನ್ನು ಹೊತ್ತಿದೆ. ಸ್ವಾತಂತ್ರ್ಯಾನಂತರದ ಆರಂಭದ ದಿನಗಳಲ್ಲಿ ಕೇವಳ ಉಳ್ಳವರಿಗೆ ನಿಲುಕುವಂತಿದ್ದ ಬ್ಯಾಂಕಿಂಗ್‌ ಸೇವೆಗಳು ತಳಮಟ್ಟದ ಶ್ರೀಸಾಮಾನ್ಯನಿಗೂ ತಲುಪುವಂತಾಗಿದ್ದು 1969ರ ಬ್ಯಾಂಕ್‌ ರಾಷ್ಟ್ರೀಕರಣದ ನಂತರದಲ್ಲಿ. ಬ್ಯಾಂಕಿನಲ್ಲಿ ಒಂದು ಖಾತೆ ತೆರೆಯಲೂ ಪರದಾಡುತ್ತಿದ್ದ ಹಳ್ಳಿಗಾಡಿನ ಬಡಜನತೆಗೆ ಖಾತೆ ತೆರೆಯುವ ಹಕ್ಕು ನೀಡಿದ್ದು ಸಹ ರಾಷ್ಟ್ರೀಕರಣದ ಒಂದು ಕೊಡುಗೆ. ಶ್ರೀಸಾಮಾನ್ಯ

ಕೃಷಿ ಪ್ರಧಾನ ಭಾರತದಲ್ಲಿ ಕೃಷಿ ಉತ್ಪನ್ನವನ್ನು ಹೆಚ್ಚಿಸಲು ಕೈಗೊಂಡ ಹಸಿರು ಕ್ರಾಂತಿಯ ಉಪಕ್ರಮಗಳಿಗೆ  ಪೂರಕವಾಗಿ ಸಂಭವಿಸಿದ ಬ್ಯಾಂಕ್‌ ರಾಷ್ಟ್ರೀಕರಣ, ಹಳ್ಳಿಗಾಡಿನ ರೈತಾಪಿ ಸಮುದಾಯಕ್ಕೆ ಸುಲಭವಾದ ಹಣಕಾಸು ಸೌಲಭ್ಯಗಳನ್ನು ಒದಗಿಸುವ ಒಂದು ಮಾರ್ಗವನ್ನು ರೂಪಿಸಿದ್ದು ಈಗ ಇತಿಹಾಸ. ಹಿಂತಿರುಗಿ ನೋಡಿದಾಗ ಹಸಿರು ಕ್ರಾಂತಿಯ ಆಶಯಗಳು ಸಾಕಾರಗೊಂಡು, ಗ್ರಾಮೀಣ ಕೃಷಿ ಉತ್ಪನ್ನವನ್ನು ಹೆಚ್ಚಿಸುವ ಮೂಲಕ ಸ್ವತಂತ್ರ ಭಾರತವು ಆಹಾರ ಸ್ವಾವಲಂಬನೆಯನ್ನು ಸಾಧಿಸಲು ಸಾಧ್ಯವಾಗಿದ್ದು ವಾಸ್ತವ. ಆದಾಗ್ಯೂ ರಾಷ್ಟ್ರೀಕರಣದ ನಂತರದಲ್ಲೂ ಭಾರತದ ವಾಣಿಜ್ಯ ಬ್ಯಾಂಕುಗಳು ಉದ್ಯಮ ಸ್ನೇಹಿಯಾಗಿಯೇ ಉಳಿದಿದ್ದು ಸಹ ವಾಸ್ತವವೇ. ಸಾಲ ನೀಡುವುದಕ್ಕಾಗಿ ಗುರುತಿಸಲಾದ ಆದ್ಯತಾ ವಲಯದಲ್ಲಿ ಕೃಷಿಗೆ ಹೆಚ್ಚು ಒತ್ತು ನೀಡಲಾಯಿತಾದರೂ, ಸಾರ್ವಜನಿಕ ಬ್ಯಾಂಕುಗಳು ನೀಡಬೇಕಿದ್ದ 40 % ಆದ್ಯತಾ ವಲಯದ ಸಾಲಗಳ ಪೈಕಿ ಕೃಷಿ ಕ್ಷೇತ್ರಕ್ಕೆ ನಿಗದಿಪಡಿಸಿದ್ದು 17 % ಮಾತ್ರ. ಶ್ರೀಸಾಮಾನ್ಯ

ಔದ್ಯೋಗಿಕ-ಔದ್ಯಮಿಕ ವಲಯಕ್ಕೆ ಚಾಲಕ ಶಕ್ತಿಯಾಗಿ ಕಾರ್ಯನಿರ್ವಹಿಸಿದ ರಾಷ್ಟ್ರೀಕೃತ ಬ್ಯಾಂಕುಗಳು ಹಳ್ಳಿಗಾಡಿನ ವ್ಯವಸಾಯ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಸಾಲ ಸೌಲಭ್ಯಗಳನ್ನು ನೀಡುತ್ತಲೇ ಬಂದರೂ ಗ್ರಾಮೀಣ ಬದುಕಿನ ಸುಸ್ತಿರತೆಗೆ ಅಗತ್ಯವಾದ ತಳಪಾಯವನ್ನು ನಿರ್ಮಿಸಲು ಸಾಧ್ಯವಾಗಲಿಲ್ಲ ಎನ್ನುವುದು ಸತ್ಯ. ಏಕೆಂದರೆ ಬ್ಯಾಂಕ್‌ ಸೌಲಭ್ಯದೊಂದಿಗೆ ಕೃಷಿ ಫಸಲು ಪಡೆದ ರೈತರು ಅದರ ಸಂಗ್ರಹ, ಶೇಖರಣೆ ಹಾಗೂ ಮಾರಾಟಕ್ಕೆ ಮಾರುಕಟ್ಟೆಯನ್ನೇ ಅವಲಂಬಿಸಬೇಕಿತ್ತು. ಈ ಮಾರುಕಟ್ಟೆ ಔದ್ಯೋಗಿಕ-ಔದ್ಯಮಿಕ ವಲಯದ ಹಿಡಿತದಲ್ಲಿತ್ತು. ಇಂದಿಗೂ ಈ ಪರಿಸ್ಥಿತಿಯಲ್ಲಿ ವ್ಯತ್ಯಾಸವನ್ನೇನೂ ಕಾಣಲಾಗುವುದಿಲ್ಲ. ತಾನು ಬೆಳೆದ ಉತ್ಪನ್ನಗಳಿಗೆ ಸರ್ಕಾರದಿಂದ ನೀಡುವ ಮೂಲ ಬೆಂಬಲ ಬೆಲೆ ಇಲ್ಲದಿದ್ದರೆ ರೈತರು ಕಂಗಾಲಾಗುವ ಸನ್ನಿವೇಶ ಇಂದಿಗೂ ಇದೆ. ಶ್ರೀಸಾಮಾನ್ಯ

 

ನವ ಉದಾರವಾದದ ಪ್ರಭಾವ

1991ರ ನಂತರದ ಜಾಗತೀಕರಣ ಮತ್ತು ನವ ಉದಾರವಾದಿ ಆರ್ಥಿಕ ನೀತಿಗಳಿಗೆ ಅನುಗುಣವಾಗಿ ಬ್ಯಾಂಕಿಂಗ್‌ ಉದ್ದಿಮೆಯೂ ತನ್ನ ಮೂಲ ಸ್ವರೂಪವನ್ನು ಕಳಚಿಕೊಂಡು, ತಂತ್ರಜ್ಞಾನ ಆಧಾರಿತ ಉದ್ಯಮವಾಗಿ ರೂಪುಗೊಳ್ಳುತ್ತಿದೆ. 1969ರ ರಾಷ್ಟ್ರೀಕರಣದ ಸಂದರ್ಭದಲ್ಲಿದ್ದಂತೆಯೇ ಈಗಲೂ ಸಹ ಸಾರ್ವಜನಿಕ-ಖಾಸಗಿ ಬ್ಯಾಂಕುಗಳು ಔದ್ಯಮಿಕ ವಲಯಕ್ಕೆ ಮೂಲ ಹಾಗೂ ಚಾಲಕ ಬಂಡವಾಳವನ್ನು ಒದಗಿಸುವುದರಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುತ್ತವೆ. ಬೃಹತ್‌ ಉದ್ಯಮಗಳಿಗೆ, ಆಧುನಿಕ ತಂತ್ರಜ್ಞಾನದ ಸಾಫ್ಟ್‌ವೇರ್‌ ಉದ್ಯಮಗಳಿಗೆ ಹಾಗೂ ಮೂಲ ಸೌಕರ್ಯಗಳನ್ನು ನಿರ್ಮಿಸುವ ಕಂಪನಿಗಳಿಗೆ ಕೋಟ್ಯಂತರ ರೂಗಳ ಸಾಲ ಒದಗಿಸುವ ಮೂಲಕ ಬ್ಯಾಂಕುಗಳು ತಮ್ಮ ವಹಿವಾಟು ಹಾಗೂ ಲಾಂಭಾಂಶವನ್ನು ಹೆಚ್ಚಿಸಿಕೊಳ್ಳುತ್ತಿವೆ. ಗೃಹ ನಿರ್ಮಾಣ, ವಾಹನ ಖರೀದಿ ಮುಂತಾದ ವೈಯುಕ್ತಿಕ ಸಾಲ ಸೌಲಭ್ಯಗಳ ಮೂಲಕ ದೇಶದ ಮೂಲೆಮೂಲೆಗಳನ್ನೂ ತಲುಪಿರುವ ಬ್ಯಾಂಕಿಂಗ್‌ ಉದ್ದಿಮೆ, ಪ್ರವರ್ಧಮಾನಕ್ಕೆ ಬರುತ್ತಿರುವ ನಗರೀಕರಣಗೊಂಡ ಮಧ್ಯಮ ವರ್ಗಗಳಿಗೆ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿರುವುದೂ ವಾಸ್ತವ. ಶ್ರೀಸಾಮಾನ್ಯ

ಆದರೆ ಇದರ ಮತ್ತೊಂದು ಬದಿಯಲ್ಲಿ ದೇಶದ ಸಾರ್ವಜನಿಕ ಬ್ಯಾಂಕುಗಳು ನವ ಉದಾರವಾದಿ ಮಾರುಕಟ್ಟೆಯ ಔದ್ಯಮಿಕ ವಲಯವನ್ನು ಕೈಮೀರಿ ಪೋಷಿಸುತ್ತಿರುವುದನ್ನು ಗಮನಿಸಬೇಕಿದೆ. ಆಧುನಿಕ ಮಾರುಕಟ್ಟೆ ಆರ್ಥಿಕತೆಯಲ್ಲಿ ಬ್ಯಾಂಕುಗಳ ಲಾಭ ಗಳಿಕೆ ಹಾಗೂ ಷೇರು ಮಾರುಕಟ್ಟೆಯ ಸ್ಥಿತ್ಯಂತರಗಳೇ ಪ್ರಧಾನವಾಗುವುದರಿಂದ, ಸಾರ್ವಜನಿಕ ಬ್ಯಾಂಕುಗಳೂ ಸಹ ಹೆಚ್ಚಿನ ಲಾಭಾಂಶದತ್ತ ಗಮನ ನೀಡುತ್ತವೆ. ಹಾಗಾಗಿಯೇ ಬ್ಯಾಂಕಿಂಗ್‌ ವಹಿವಾಟುಗಳ ಸೇವಾ ಶುಲ್ಕಗಳೂ ಸಹ ಹೆಚ್ಚಾಗುತ್ತಲೇ ಇರುತ್ತವೆ. ಮತ್ತೊಂದೆಡೆ ಸಾಲದ ಸಕಾಲಿಕ ಮರುಪಾವತಿಯೂ ಲಾಭಾಂಶವನ್ನು ಪ್ರಭಾವಿಸುತ್ತವೆ. ತಳಮಟ್ಟದಲ್ಲಿ ಜನಸಾಮಾನ್ಯರ ಬಳಿ ಜೀವನಾವಶ್ಯಗಳನ್ನು ಪೂರೈಸುವಷ್ಟು ಹಣವೂ ಇಲ್ಲದಿರುವ ಈ ಕಾಲಘಟ್ಟದಲ್ಲಿ ಆರ್ಥಿಕತೆಯಲ್ಲಿ ಬೇಡಿಕೆಯನ್ನು ಹೆಚ್ಚಿಸುವ ಸಲುವಾಗಿ ವೈಯುಕ್ತಿಕ ಸಾಲಗಳನ್ನು ಒದಗಿಸುವ ಬ್ಯಾಂಕುಗಳು, ಈ ಸಾಲಗಳನ್ನು ಹಿಂಪಡೆಯಲೂ ಸಹ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತವೆ. ಶ್ರೀಸಾಮಾನ್ಯ

ಬ್ಯಾಂಕುಗಳ ಲಾಭಾಂಶ ಹೆಚ್ಚಳ ಹಾಗೂ ಮಾರುಕಟ್ಟೆ ಸುಸ್ತಿರತೆಯನ್ನು ಕಾಪಾಡಿಕೊಳ್ಳಲು ಸಾಲಗಳ ಮರುಪಾವತಿಯೂ ಮುಖ್ಯವಾಗುತ್ತದೆ. ಸಾಮಾನ್ಯವಾಗಿ ಸಾಲದ ಮೇಲಿನ ಬಡ್ಡಿಗೂ ಗ್ರಾಹಕರ ಠೇವಣಿಗೆ ನೀಡುವ ಬಡ್ಡಿಗೂ ಸರಾಸರಿ 2.5% ವ್ಯತ್ಯಾಸ ಇದ್ದೇ ಇರುತ್ತದೆ. ಕೃಷಿ ಮತ್ತು ಸಣ್ಣ ಉದ್ದಿಮೆಯ ಸಾಲಗಳಿಗೆ ಅಗ್ಗದ ಬಡ್ಡಿ ದರ ವಿಧಿಸಲಾಗುತ್ತದೆ, ವಾಹನ ಖರೀದಿ, ಗೃಹ ನಿರ್ಮಾಣ ಹಾಗೂ ವೈಯುಕ್ತಿಕ ಸಾಲಗಳ ಬಡ್ಡಿದರ ಹೆಚ್ಚಾಗಿರುತ್ತದೆ. ಈ ಬಡ್ಡಿದರದಲ್ಲಿನ ಅಂತರವೇ ಬ್ಯಾಂಕುಗಳ ಲಾಂಭಾಂಶವನ್ನು ನಿರ್ಧರಿಸುವ ಪ್ರಮುಖ ಮಾನದಂಡವಾಗಿರುತ್ತದೆ. ಹಾಗಾಗಿ ಬ್ಯಾಂಕುಗಳು ಸಾಲ ತೀರುವಳಿಗಾಗಿ ಕಠಿಣ ಕ್ರಮಗಳನ್ನು ಜರುಗಿಸುವುದು ಅನಿವಾರ್ಯವೂ ಆಗುತ್ತದೆ. ತಮ್ಮ ನಿತ್ಯ ಜೀವನಾವಶ್ಯ ವೆಚ್ಚಗಳಿಗೆ ಹೆಚ್ಚಿನ ಜನರು ಚಿನ್ನದ ಒಡವೆಗಳನ್ನು ಬ್ಯಾಂಕುಗಳಲ್ಲಿ ಅಡವಿಟ್ಟು ಸಾಲ ಪಡೆಯುವುದು ಕಳೆದ ಎರಡು ಮೂರು ದಶಕಗಳಲ್ಲಿ ಕಾಣಬಹುದಾದ ಮಹತ್ತರ ಬದಲಾವಣೆ. ಈ ಸಾಲದ ಮರುಪಾವತಿ ವಿಳಂಬವಾದ ಕೂಡಲೇ ಬ್ಯಾಂಕುಗಳು ಒಡವೆಗಳನ್ನು ಹರಾಜು ಹಾಕಲು ಮುಂದಾಗುತ್ತವೆ. ದಿನಪತ್ರಿಕೆಗಳಲ್ಲಿ ಪ್ರಕಟವಾಗುವ ಹರಾಜು ಪ್ರಕ್ರಿಯೆಯ ಜಾಹೀರಾತುಗಳನ್ನು ಗಮನಿಸಿದರೆ, ಸಾಲಗಾರರ ಪ್ರಮಾಣವನ್ನೂ ಗ್ರಹಿಸಬಹುದು. ಶ್ರೀಸಾಮಾನ್ಯ

 

ಇದನ್ನು ಓದಿ : ಬಿಲ್ಕಿಸ್ ಬಾನು ಪ್ರಕರಣ; 11 ಅಪರಾಧಿಗಳ ಬಿಡುಗಡೆಗೆ ಗುಜರಾತ್ ಸರ್ಕಾರ ನೀಡಿದ್ದ ಅನುಮತಿ ರದ್ದುಗೊಳಿಸಿದ ‘ಸುಪ್ರೀಂ’

 

ವಸೂಲಾಗದ ಸಾಲಗಳು

ಸಾಲಗಳನ್ನು ನಿಗದಿತ ಸಮಯದ ಒಳಗೆ ಹಿಂಪಡೆಯುವ ಸಲುವಾಗಿ ಬ್ಯಾಂಕುಗಳು ಕೈಗೊಳ್ಳುವ ಉಪಕ್ರಮಗಳ ಪೈಕಿ, ಸಾಲದಿಂದ ಖರೀದಿಸಿದ ವಸ್ತು-ಉಪಕರಣ-ವಾಹನ ಇತ್ಯಾದಿಗಳನ್ನು ವಶಪಡಿಸುವುದೂ ಒಂದು ವಿಧಾನ. ಸಾಲ ಮರುಪಾವತಿ ಮಾಡದಿರುವ ಗ್ರಾಹಕರು ಅಡಮಾನ ಇಟ್ಟ ಚಿನ್ನದ ಒಡವೆ ಅಥವಾ ಸ್ಥಿರಾಸ್ಥಿಯ ದಾಖಲೆಪತ್ರಗಳನ್ನೂ ಬ್ಯಾಂಕುಗಳು ವಶದಲ್ಲಿಟ್ಟುಕೊಳ್ಳುವ ಮೂಲಕ ಒತ್ತಡ ಹೇರುತ್ತವೆ. ಗೃಹಸಾಲಗಳ ಮರುಪಾವತಿಗೆ ಮನೆಗಳನ್ನು ಹರಾಜು ಹಾಕುವ ಹಕ್ಕನ್ನು ಸಹ SARFESHI ಕಾಯ್ದೆ ಬ್ಯಾಂಕುಗಳಿಗೆ ನೀಡುತ್ತವೆ. ಚಿನ್ನದ ಒಡವೆಯ ಮೇಲೆ ಸಾಲ ಪಡೆದಿರುವ ಗ್ರಾಹಕರ ಮತ್ತಾವುದೋ ಸಾಲ ಸುಸ್ತಿಯಾಗಿದ್ದರೆ, ಒಡವೆ ಸಾಲ ತೀರಿದ್ದರೂ ಅಡಮಾನ ಇಟ್ಟ ಚಿನ್ನವನ್ನು ಉಳಿಸಿಕೊಳ್ಳುವ ನಿಯಮವೂ ಬ್ಯಾಂಕುಗಳಲ್ಲಿ ಜಾರಿಯಲ್ಲಿದೆ. ಸಾಮಾನ್ಯವಾಗಿ ಗಮನಿಸಬಹುದಾದ ಒಂದು ವಾಸ್ತವ ಎಂದರೆ ಹಳ್ಳಿಗಾಡಿನ ರೈತರು-ಹಳ್ಳಿಯ ಜನರು ಸಾಲ ಮರುಪಾವತಿಯಲ್ಲಿ ಅತಿ ಹೆಚ್ಚು ಪ್ರಾಮಾಣಿಕರಾಗಿರುತ್ತಾರೆ. ಶ್ರೀಸಾಮಾನ್ಯ

ಮತ್ತೊಂದು ಬದಿಯಲ್ಲಿ ಔದ್ಯಮಿಕ ಸಾಲಗಳು ಅತಿ ಹೆಚ್ಚು ಸುಸ್ತಿಯಾಗಿರುವುದನ್ನೂ ಬ್ಯಾಂಕಿಂಗ್‌ ಇತಿಹಾಸದಲ್ಲಿ ಕಾಣಬಹುದು. ಆದರೆ ಕೆಳಸ್ತರದ ಜನರ ಮೇಲೆ ವಿಧಿಸುವಂತಹ ಷರತ್ತುಗಳಾಗಲೀ, ಅವರ ವಸ್ತು-ಉಪಕರಣಗಳ ಮೇಲೆ ವಿಧಿಸುವ ನಿರ್ಬಂಧಗಳಾಗಲೀ ಅಥವಾ ಮರು ಪಾವತಿ ಮಾಡಲು ಅವರ ಮೇಲೆ ಹೇರಲಾಗುವ ಒತ್ತಡವಾಗಲೀ, ಮೇಲ್‌ ಸ್ತರದ ಔದ್ಯಮಿಕ ವಲಯದ ಸುಸ್ತಿದಾರರ ಮೇಲೆ ಹೇರಲಾಗುವುದಿಲ್ಲ. ಇದು ಭಾರತದ ಬ್ಯಾಂಕಿಂಗ್‌ ವ್ಯವಸ್ಥೆಯ ಒಂದು ಚೋದ್ಯ. ಮರುಪಾವತಿ ಸಾಮರ್ಥ್ಯದ ಆಧಾರದ ಮೇಲೆ ಸಾಲ ನೀಡುವುದರಿಂದ, ಸಾಲ ಪಡೆಯುವ ವ್ಯಕ್ತಿ/ಉದ್ಯಮದ ಹಣಕಾಸು ಪರಿಸ್ಥಿತಿಯೂ ಸಹ ಮುಖ್ಯ ಮಾನದಂಡವಾಗಿ ಪರಿಣಮಿಸುತ್ತದೆ. ಆದರೆ ತಮ್ಮ ಔದ್ಯಮಿಕ ಪ್ರಗತಿಗೆ ಬ್ಯಾಂಕುಗಳನ್ನು ಆಶ್ರಯಿಸುವ ಬೃಹತ್‌ ಉದ್ದಿಮೆದಾರರು, ವಾಣಿಜ್ಯೋದ್ಯಮಿಗಳು, ರಿಯಲ್‌ ಎಸ್ಟೇಟ್‌ ಕುಳಗಳು ಭಾರತದ ಬ್ಯಾಂಕಿಂಗ್‌ ವ್ಯವಸ್ಥೆಯ ಅತಿ ದೊಡ್ಡ ಸುಸ್ತಿದಾರರಾಗಿರುವುದು ಬ್ಯಾಂಕುಗಳ ಹಾಗೂ ಮಾರುಕಟ್ಟೆಯ ಸೂಕ್ಷ್ಮ ಸಂಬಂಧಗಳನ್ನೂ ಸೂಚಿಸುತ್ತದೆ.

ಈ ಹಿನ್ನೆಲೆಯಲ್ಲೇ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿರುವ ಎನ್‌ಪಿಎ (ಮರುಪಾವತಿಯಾಗದ ಸುಸ್ತಿ ಸಾಲಗಳು) ಮತ್ತು ಈ ಬೃಹತ್‌ ಸಾಲಗಳ ರೈಟ್‌ ಆಫ್‌ ಪ್ರಕ್ರಿಯೆಯನ್ನು ಗಮನಿಸಬೇಕಿದೆ. ಮರುಪಾವತಿಯಾಗದ ಸಾಲಗಳನ್ನು ರೈಟ್‌ ಆಫ್‌ ಅಥವಾ ವಜಾ ಮಾಡುವುದು ಬ್ಯಾಂಕಿಂಗ್‌ ಉದ್ಯಮದ ಸಹಜ ಪ್ರಕ್ರಿಯೆ. ಸಾಲದ ಮರುಪಾವತಿ ಸಾಧ್ಯವೇ ಆಗದ ಸಂದರ್ಭದಲ್ಲಿ ಸಣ್ಣ ಸಾಲಗಳನ್ನೂ ರೈಟ್‌ ಆಫ್‌ ಮಾಡಲಾಗುತ್ತದೆ. ಎನ್‌ಪಿಎ ಗಳನ್ನು ರೈಟ್‌ ಆಫ್‌ ಮಾಡುವ ಮೂಲಕ ಬ್ಯಾಂಕುಗಳು ತಮ್ಮ ಬ್ಯಾಲನ್ಸ್‌ಷೀಟ್‌ಗಳಿಂದ ಆ ಮೊತ್ತಗಳನ್ನು ಹೊರತುಪಡಿಸಿ ಹೆಚ್ಚಿನ ಲಾಭವನ್ನು ತೋರಿಸಲು ಸಾಧ್ಯವಾಗುತ್ತದೆ. ಮೂಲತಃ ರೈಟ್‌ ಆಫ್‌ ಪ್ರಕ್ರಿಯೆ ಬ್ಯಾಂಕುಗಳ ವಾರ್ಷಿಕ ಲೆಕ್ಕಪತ್ರಗಳನ್ನು ಸ್ವಚ್ಚಗೊಳಿಸುವ ಒಂದು ಪ್ರವೃತ್ತಿಯೂ ಆಗಿದೆ. ಆದರೆ ರೈಟ್‌ ಆಫ್‌ ಮಾಡಿದ ನಂತರವೂ ಸಾಲವನ್ನು ಹಿಂಪಡೆಯುವ ಕಾನೂನಾತ್ಮಕ ಅಥವಾ ವ್ಯಕ್ತಿಗತ ನೆಲೆಯ ಕ್ರಮಗಳನ್ನು ಕೈಗೊಳ್ಳಲು ಬ್ಯಾಂಕುಗಳಿಗೆ ಅಧಿಕಾರ ಇರುತ್ತದೆ. ಆದರೆ ಮನ್ನಾ ಮಾಡಲಾದ ಸಾಲಗಳನ್ನು ಸಾಲಗಾರ ಗ್ರಾಹಕರು ಮರುಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ. ಕೃಷಿ ಸಾಲಗಳನ್ನು ಮನ್ನಾ ಮಾಡುವ ಹಲವು ಪ್ರಸಂಗಗಳನ್ನು ಗಮನಿಸಬಹುದು. ಶ್ರೀಸಾಮಾನ್ಯ

 

ಸಾರ್ವಜನಿಕ ಬ್ಯಾಂಕುಗಳ ಸ್ಥಿತಿ

ನವ ಉದಾರವಾದದ ಆರ್ಥಿಕ ನೀತಿಗಳಿಗನುಸಾಋವಾಗಿ ಸಾರ್ವಜನಿಕ ಬ್ಯಾಂಕುಗಳ ಸಂಖ್ಯೆಯನ್ನು 28 ರಿಂದ 12ಕ್ಕೆ ಇಳಿಸಿದ ನಂತರದಲ್ಲಿ ಭಾರತದ ಬ್ಯಾಂಕಿಂಗ್‌ ವ್ಯವಸ್ಥೆ ಅಂತಾರಾಷ್ಟ್ರೀಯ ಗುಣಮಟ್ಟವನ್ನು ಪಡೆದುಕೊಂಡಿದೆ, ಎಲ್ಲ ಬ್ಯಾಂಕುಗಳೂ ಲಾಭ ಗಳಿಕೆಯಲ್ಲಿ ಮುನ್ನಡೆಯುತ್ತಿವೆ ಎಂಬ ಸರ್ಕಾರದ ಹೆಗ್ಗಳಿಕೆಯ ನಡುವೆಯೇ ರೈಟ್‌ ಆಫ್‌ ಮಾಡಲಾದ ಎನ್‌ಪಿಎಗಳನ್ನು ಕುರಿತೂ ಸಹ ಆರ್ಥಿಕ ತಜ್ಞರು ಚರ್ಚೆ ನಡೆಸುತ್ತಿದ್ದಾರೆ. ಕೋಟ್ಯಂತರ ರೂ ಮೌಲ್ಯದ ಔದ್ಯಮಿಕ ಸಾಲಗಳನ್ನು ರೈಟ್‌ ಆಫ್‌ ಮಾಡುವ ಮೂಲಕ ಬ್ಯಾಂಕುಗಳು ತಮ್ಮ ಬ್ಯಾಲನ್ಸ್‌ಷೀಟ್‌ಗಳಲ್ಲಿ ಹೆಚ್ಚಿನ ಲಾಭಾಂಶವನ್ನು ಪ್ರಕಟಿಸುತ್ತಿವೆ ಎಂಬ ಆರೋಪಗಳ ನಡುವೆಯೇ, 2014-15ರ ಅವಧಿಯಲ್ಲಿ ಸಾರ್ವಜನಿಕ ಬ್ಯಾಂಕುಗಳು 10.42 ಲಕ್ಷ ಕೋಟಿ , ಖಾಸಗಿ ಬ್ಯಾಂಕುಗಳು 4.14 ಲಕ್ಷ ಕೋಟಿ ರೂಗಳ ಮರುಪಾವತಿಯಾಗದ ಸಾಲಗಳನ್ನು ರೈಟ್‌ ಆಫ್‌ ಮಾಡಿರುವುದಾಗಿ ಆರ್‌ಬಿಐ ವರದಿ ಮಾಡಿದೆ. ಇದರ ಪೈಕಿ 7.40 ಲಕ್ಷ ಕೋಟಿ ರೂಗಳು ಬೃಹತ್‌ ಕೈಗಾರಿಕೆಗಳ, ಸೇವಾ ವಲಯದ ಉದ್ಯಮಗಳ ಪಾಲಾಗಿವೆ. ಶ್ರೀಸಾಮಾನ್ಯ

ಆದರೆ ಸಾರ್ವಜನಿಕ ಬ್ಯಾಂಕುಗಳು ರೈಟ್‌ ಆಫ್‌ ಮಾಡಿರುವ 10.42 ಲಕ್ಷ ಕೋಟಿ ರೂ ಎನ್‌ಪಿಎಗಳ ಪೈಕಿ  ಇದೇ ಅವಧಿಯಲ್ಲಿ ಬ್ಯಾಂಕುಗಳು 1.61 ಲಕ್ಷ ಕೋಟಿ ರೂಗಳನ್ನು ಮಾತ್ರ ಮರಳಿ ಗಳಿಸಲು ಸಾಧ್ಯವಾಗಿದೆ. ಅಂದರೆ ರೈಟ್‌ ಆಫ್‌ ಆದ 15% ಸಾಲಗಳು ಮಾತ್ರ ಬ್ಯಾಂಕುಗಳಿಗೆ ವಾಪಸ್‌ ಬಂದಿವೆ . ಈ ಬೃಹತ್‌ ಮೊತ್ತ ಸಾಲಮನ್ನಾ ಅಲ್ಲ ಎಂದು ಸರ್ಕಾರ ಖಚಿತಪಡಿಸಿದ್ದರೂ, ಅದನ್ನು ಮರಳಿ ಪಡೆಯಲು ಇರುವ ವಿವಿಧ ಕಾನೂನಾತ್ಮಕ ವಿಧಾನಗಳ ಸಮರ್ಪಕ ಬಳಕೆ ಆಗುತ್ತಿಲ್ಲ ಎನ್ನುವುದು ವಾಸ್ತವ.  2014-15ರಲ್ಲಿ ರೈಟ್‌ ಆಫ್‌ ಆದ ಎನ್‌ಪಿಎ ಮೊತ್ತ 65 ಸಾವಿರ ಕೋಟಿ ರೂ ಇದ್ದುದು 2022-23ರ ವೇಳೆಗೆ 2.09 ಲಕ್ಷ ಕೋಟಿ ರೂಗಳಿಗೆ ತಲುಪಿದೆ. ಅಂದರೆ ವರ್ಷದಿಂದ ವರ್ಷಕ್ಕೆ ಬ್ಯಾಂಕುಗಳಿಂದ ಸಾಲ ಪಡೆದು ಮರುಪಾವತಿ ಮಾಡದೆ ವಂಚಿಸುವ ಉದ್ಯಮಿಗಳ ಪಟ್ಟಿ ಬೆಳೆಯುತ್ತಲೇ ಇದೆ ಎಂದರ್ಥ. ಶ್ರೀಸಾಮಾನ್ಯ

ಹೀಗೆ ಸಾಲ ಮರುಪಾವತಿಸದೆ ರಿಯಾಯಿತಿ ಪಡೆದ ಉದ್ಯಮಿಗಳ ಹೆಸರುಗಳನ್ನು ಬಹಿರಂಗಪಡಿಸಲು ಆರ್‌ಬಿಐ ಕಾಯ್ದೆಯೇ ಅಡ್ಡಿಯಾಗಿರುವುದರಿಂದ , ಈ ಸುಸ್ತಿದಾರರು ಯಾರು ಎಂದು ಸಾರ್ವಜನಿಕರಿಗೆ ತಿಳಿಯುವುದೇ ಇಲ್ಲ. ನೀರವ್‌ ಮೋದಿ (12,636 ಕೋಟಿ), ವಿಜಯ್‌ ಮಲ್ಯ (9,000 ಕೋಟಿ), ಜತಿನ್‌ ಮೆಹ್ತಾ ( 7,000 ಕೋಟಿ) , ಜಯಂತಿಲಾಲ್‌ ಸಂದೇಸರ ( 5,000 ಕೋಟಿ) ಇನ್ನೂ ಮುಂತಾದ 31 ಉದ್ಯಮಿಗಳ ಹೆಸರುಗಳನ್ನು ಈಗಾಗಲೇ ಬಹಿರಂಗಪಡಿಸಲಾಗಿದೆ. ಮಾರುಕಟ್ಟೆ ಪರಿಭಾಷೆಯಲ್ಲಿ ಈ ಉದ್ಯಮಿಗಳನ್ನು ಸುಸ್ತಿದಾರರು ಎಂದು ಗೌರವಯುತವಾಗಿ ಸಂಬೋಧಿಸಲಾಗುತ್ತದೆ. ಆದರೆ ಬೆಳೆ ಸಾಲ ಕಟ್ಟಲಾಗದೆ,  ಪ್ರಾಣ ಕಳೆದುಕೊಳ್ಳುವ ಸಣ್ಣ ರೈತ ಅಥವಾ ಅಂಗಡಿ ನಡೆಸಲಾಗದೆ ಸುಸ್ತಿದಾರನಾಗುವ ಸಣ್ಣ ಉದ್ಯಮಿಯಂತೆ ಈ ಬೃಹತ್‌ ಉದ್ದಿಮೆದಾರರು ಜಪ್ತಿ ಮುಂತಾದ ಉಪಕ್ರಮಗಳಿಗೆ ಒಳಗಾಗುವುದಿಲ್ಲ. ಈ ಕೆಳಸ್ತರದ ಸಾಲಗಾರರು ಮತ್ತೊಂದು ಕಡೆ ದುಬಾರಿ ಬಡ್ಡಿಯ ಸಾಲ ಪಡೆದಾದರೂ ತಮ್ಮ ಬ್ಯಾಂಕ್‌ ಸಾಲ ತೀರಿಸುತ್ತಾರೆ ಅಥವಾ ಚಿನ್ನದ ಒಡವೆಗಳನ್ನು ಅಡಮಾನ ಇಡುವುದು ಸರ್ವೇಸಾಮಾನ್ಯ ಸಂಗತಿ. ಯಾವುದೇ ಕಾರಣಕ್ಕೂ ಪರಾರಿಯಾಗುವುದಿಲ್ಲ ಎನ್ನುವುದು ಸುಡುವಾಸ್ತವ. ಶ್ರೀಸಾಮಾನ್ಯ

ಕಳೆದ ಹತ್ತು ವರ್ಷಗಳಲ್ಲಿ ಬ್ಯಾಂಕುಗಳ ಎನ್‌ಪಿಎ ಪ್ರಮಾಣ ಕುಸಿಯುತ್ತಿರುವುದನ್ನೇ ಮಹತ್ತರ ಸಾಧನೆ ಎಂದು ಸರ್ಕಾರ ಹಾಗೂ ಬ್ಯಾಂಕುಗಳೂ ಬಿಂಬಿಸುತ್ತಿವೆ. ಆದರೆ ಇದರ ಹಿಂದಿನ ಗುಟ್ಟು ಎನ್‌ಪಿಎಗಳ ರೈಟ್‌ ಆಫ್‌ ಪ್ರಕ್ರಿಯೆಯಲ್ಲಿದೆ. 2018-19ರಲ್ಲಿ 9.33 ಲಕ್ಷ ಕೋಟಿ ರೂ ಇದ್ದ  ಎನ್‌ಪಿಎ ಮೊತ್ತ 2022-23ರ ವೇಳೆಗೆ 5.71 ಲಕ್ಷ ಕೋಟಿ ರೂಗಳಿಗೆ ಇಳಿದಿದೆ. ಇದೇ ಅವಧಿಯಲ್ಲಿ ರೈಟ್‌ ಆಫ್‌ ಮಾಡಲಾಗಿರುವ ಸಾಲದ ಮೊತ್ತ 10.55 ಲಕ್ಷ ಕೋಟಿ ರೂಗಳ ಮರುಪಾವತಿಯಾಗದ ಸಾಲಗಳನ್ನು ರೈಟ್‌ ಆಫ್‌ ಮಾಡಲಾಗಿದೆ. ಈ ಎರಡೂ ಅಂಕಿಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಬ್ಯಾಂಕುಗಳಲ್ಲಿ ಮರುಪಾವತಿಯಾಗದ ಸಾಲದ ಪ್ರಮಾಣ ನಿರಂತರವಾಗಿ ಹೆಚ್ಚಾಗುತ್ತಿರುವುದು ನಿಚ್ಚಳವಾಗಿ ಕಾಣುತ್ತದೆ. ಸಾರ್ವಜನಿಕ ಬ್ಯಾಂಕುಗಳಿಂದಲೇ ರೈಟ್‌ ಆಫ್‌ ಆಗಿರುವ ಆದರೆ ಮರಳಿ ಹಿಂಪಡೆಯಾಗಲಾರದ 8.81 ಲಕ್ಷ ಕೋಟಿ ರೂಗಳ ಸಾಲದ ಹೊರೆ ಹೊರುವವರು ಯಾರು ? ಈ ಯಕ್ಷ ಪ್ರಶ್ನೆಯೊಂದಿಗೇ ನವ ಉದಾರವಾದಿ ಮಾರುಕಟ್ಟೆ ಆರ್ಥಿಕತೆಯ ಉದ್ಯಮ ಸ್ನೇಹಿ ಧೋರಣೆಯ ಬಗ್ಗೆ ಹಾಗೂ ರೂಪಾಂತರಗೊಂಡ ಬ್ಯಾಂಕಿಂಗ್‌ ವ್ಯವಸ್ಥೆಯ ಸಮಾಜಮುಖಿ ಧೋರಣೆಯ ಬಗ್ಗೆ ಗಂಭೀರ ಆಲೋಚನೆ ಮಾಡಬೇಕಿದೆ . ಶ್ರೀಸಾಮಾನ್ಯ

(ಅಂಕಿಅಂಶ ದತ್ತಾಂಶಗಳಿಗೆ ಆಧಾರ : ಆರ್‌ಬಿಐ ವಾರ್ಷಿಕ ವರದಿಗಳನ್ನಾಧರಿಸಿದ ಪ್ರಜಾವಾಣಿ ವರದಿ 22-12-2023 ಮತ್ತು ಹಿಂದೂ ಬ್ಯುಸಿನೆಸ್‌ ಲೈನ್‌ )

 

(ಆರ್‌ಬಿಐನ ರಾಜಿ ಇತ್ಯರ್ಥಗಳ ಹೊಸ ನಿಯಮ – ಮುಂದಿನ ಭಾಗದಲ್ಲಿ)

ಇದನ್ನು ನೋಡಿ : ಬಿಲ್ಕಿಸ್ ಬಾನು ಪ್ರಕರಣ : ಗುಜರಾತ್ ಸರಕಾರದ ಆದೇಶ ರದ್ದು ಮಾಡಿದ ಸುಪ್ರೀಂ ಕೋರ್ಟ್

Donate Janashakthi Media

Leave a Reply

Your email address will not be published. Required fields are marked *