ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಬ್ಯಾಂಕ್‌ ನೌಕರರ ಪ್ರತಿಭಟನೆ

ನವದೆಹಲಿ/ಬೆಂಗಳೂರು: ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್(ಯುಎಫ್ ಬಿಯು) ನಡಿ ಬ್ಯಾಂಕ್ ನೌಕರರು ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿರುವುದರಿಂದ ವ್ಯವಹಾರಗಳಿಗೆ ವ್ಯತ್ಯಯವುಂಟಾಗಿದೆ.

ಯುಎಫ್ ಬಿಯು ನಡಿ 9 ಒಕ್ಕೂಟಗಳು ಇದ್ದು ಇಂದು ಮತ್ತು ನಾಳೆ ಮುಷ್ಕರ ನಡೆಸುತ್ತಿದ್ದಾರೆ.  ಮುಷ್ಕರದಲ್ಲಿ ಸುಮಾರು 10 ಲಕ್ಷ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳು ಭಾಗವಹಿಸಿರುವ ವರದಿ ಲಭ್ಯವಾಗಿದೆ.

ಸರ್ಕಾರದ ಹೂಡಿಕೆ ಯೋಜನೆಯಡಿ ಎರಡು ಸಾರ್ವಜನಿಕ ವಲಯ ಬ್ಯಾಂಕುಗಳನ್ನು ಖಾಸಗೀಕರಣ ಗೊಳಿಸಲಾಗುವುದು ಎಂದು ಕಳೆದ ತಿಂಗಳು ಕೇಂದ್ರ ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಈ ಹೇಳಿಕೆಯನ್ನು ವಿರೋಧಿಸಿ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಮುಂದಾಗಿದ್ದಾರೆ.  ಸಂಘಟನೆಗಳ ಈ ನಿರ್ಧಾರದಿಂದ  ಸರ್ಕಾರದ ವಹಿವಾಟುಗಳಿಗೆ ವ್ಯತ್ಯಯವಾಗಲಿದೆ. ಹಣ ಪಾವತಿ ಮೇಲೆ ಸಮಸ್ಯೆ ಆಗುವುದರಿಂದ ಹಣದ ಮಾರುಕಟ್ಟೆ ಮತ್ತು ಷೇರು ಮಾರುಕಟ್ಟೆ ಮೇಲೆ ಸಹ ಮುಷ್ಕರ ಪರಿಣಾಮ ಬೀರಲಿದೆ.

ಬೆಂಗಳೂರು : ರಾಷ್ಟ್ರಿಕೃತ ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಬೆಂಗಳೂರಿನ  ಮೈಸೂರ್ ಬ್ಯಾಂಕ್ ಆವರಣ ದಲ್ಲಿ ಬ್ಯಾಂಕ್ ನೌಕರರ ಪ್ರದರ್ಶನ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ UFBU ನಾಯಕರು ಮಾತನಾಡಿ ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್ಗಳನ್ನು ಖಾಸಗಿ ಹಾಗೂ ವಿದೇಶಿ ಬಂಡವಾಳ ಕ್ಕೆ ಮಾರಾಟ ಮಾಡುವ ನಿರ್ಧಾರ ಖಂಡಿಸಿದರು.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

ಪ್ರತಿಭಟನೆಯನ್ನು ಉದ್ದೇಶಿಸಿ ಬಿಇಎಫ್‌ಐ ಜಂಟಿ  ಜಂಟಿ ಕಾರ್ಯದರ್ಶಿ ನಾಗರಾಜ್‌ ಶಾನುಭೋಗ್‌ ಮಾತನಾಡುತ್ತಾ,  ಯೂರೋಪಿಯನ್ ಮತ್ತು ಅಮೇರಿಕದ ಖಾಸಗೀ ಬ್ಯಾಂಕುಗಳು ತರಗಲೆಯಂತೆ ಕುಸಿಯುತ್ತಿದ್ದಾಗ, ಬೊಕ್ಕಸದಿಂದ ಅಪಾರ ಮೊತ್ತದ ಹಣ ನೀಡಿ ಸರ್ಕಾರಗಳೇ ಅವುಗಳನ್ನು ರಕ್ಷಿಸಿದ ಇತಿಹಾಸ ನಮ್ಮ ಮುಂದಿದೆ. ಅದಕ್ಕೂ ಹಿಂದೆ 1980 ರಲ್ಲಿ ಜಪಾನಿನ, 1990 ರಲ್ಲಿ ಕೊರಿಯಾದ ಮತ್ತು ಇತ್ತೀಚೆಗೆ 2017 ರಲ್ಲಿ ಇಟಲಿಯ ಖಾಸಗೀ ಬ್ಯಾಂಕುಗಳನ್ನು ಅದೇ ರೀತಿ ರಕ್ಷಿಸಲಾಗಿದೆ.  ಮಾಹಿತಿ ಹಕ್ಕುಗಳ ಕಾಯಿದೆಯಡಿ ಪಡೆಯಲಾದ ಮಾಹಿತಿ ಪ್ರಕಾರ 30.9.2019 ರ ವರೆಗೆ ಕೇವಲ 50 ಜನ ಸಾಲಗಾರರ ರೂ. 68,607 ಕೋಟಿಗಳಷ್ಟು ಸಾಲವನ್ನು ಮನ್ನಾ ಮಾಡಲಾಗಿದೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ. ಇದರಲ್ಲಿ ದೇಶ ಬಿಟ್ಟು ಪರಾರಿಯಾಗಿರುವ ವಿಜಯ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿಯಂತಹ ಮಹಾನುಭಾವರೂ ಇದ್ದಾರೆ. ಅಧಿಕೃತವಾಗಿ ಕೆಟ್ಟ ಸಾಲಗಳು ಎಂದು ಪರಿಗಣಿಸಲಾಗಿರುವ ರೂ.4,50,000 ಕೋಟಿಗಳ ಮೊತ್ತದ ಸಾಲ ಕೇವಲ 100 ಅತೀ ದೊಡ್ಡ ಸಾಲಗಾರರಿಗೆ ಸೇರಿದ್ದು ಎಂಬುದನ್ನು ರಿಸರ್ವ್ ಬ್ಯಾಂಕ್ ವರದಿಗಳು ಹೇಳುತ್ತವೆ. ಈ ದೊಡ್ಡ ಸಾಲಗಾರರ ಬಾಕಿ ವಸೂಲಿಗೆ ದಿಟ್ಟ ಪ್ರಯತ್ನ ಮಾಡುವುದರ ಬದಲಾಗಿ ಬ್ಯಾಂಕುಗಳನ್ನು ಇಂತಹವರಿಗೆ ಮಾರಾಟ ಮಾಡಿ ಸಾರ್ವಜನಿಕ ಆಸ್ತಿಗಳ ಲೂಟಿಗೆ ಅವಕಾಶ ನೀಡಲಾಗುತ್ತಿದೆ ಎಂದರು.

ಪ್ರತಿಭಟನೆಯಲ್ಲಿ AIBEA  ಜಯನಾಥ್,  AIBOC ಶ್ರೀನಿವಾಸ್,  Ncbe ರವಿ,  AIBOA ಸುರೇಶ BEFI ಶ್ರೀನಿವಾಸಬಾಬು, ಆಂದ್ರ ಬ್ಯಾಂಕ್‌ ಫೆಡರೇಷನ್‌ ನ ಎಂ. ಪದ್ಮನಾಭನ್‌ ಸೇರಿದಂತೆ ಅನೇಕರು ಮಾತನಾಡಿದರು.

ಇದನ್ನೂ ಓದಿ : ಬ್ಯಾಂಕ್ ಮುಷ್ಕರ- ಸಾಂಕೇತಿಕ ಹೋರಾಟದ ಪರ್ವ ಮುಗಿದಿದೆ

ಹೊಸಪೇಟೆ: ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಬ್ಯಾಂಕ್‌ ಯೂನಿಯನ್‌ಗಳ ಸಂಯುಕ್ತ ವೇದಿಕೆ ಅಡಿ ಬ್ಯಾಂಕ್‌ ನೌಕರರು ಸೋಮವಾರ ನಗರದಲ್ಲಿ ಮುಷ್ಕರ ನಡೆಸಿದರು. ನಗರದ ರೋಟರಿ ವೃತ್ತದಲ್ಲಿ ಸೇರಿದ ವಿವಿಧ ಬ್ಯಾಂಕುಗಳ ನೌಕರರು ಅಲ್ಲಿಂದ ಬಸ್‌ ನಿಲ್ದಾಣ ಎದುರಿನ ಎಸ್‌ಬಿಐ ಬ್ಯಾಂಕ್‌ ಶಾಖೆಗೆ ತೆರಳಿದರು. ಬ್ಯಾಂಕಿನ ಎದುರು ಮುಷ್ಕರ ನಡೆಸಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಬ್ಯಾಂಕುಗಳ ಸುಧಾರಣೆಯ ಹೆಸರಿನಲ್ಲಿ ಕೇಂದ್ರ ಸರ್ಕಾರವು ಖಾಸಗೀಕರಣಕ್ಕೆ ಮುಂದಾಗಿದೆ. ಖಾಸಗೀಕರಣ, ಆಸ್ತಿ ವಸೂಲಿ ಕಂಪನಿ ಸ್ಥಾಪನೆ, ಜೀವ ವಿಮಾ ನಿಗಮದಲ್ಲಿ ಬಂಡವಾಳ ಹಿಂತೆಗೆತ, ವಿಮಾ ಕ್ಷೇತ್ರದಲ್ಲಿ ಶೇ 74ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಲು ಮುಂದಾಗಿರುವುದು ಮಾರಕ ಕ್ರಮಗಳು. 1947ರಿಂದ 1969ರ ಅವಧಿಯಲ್ಲಿ ಒಟ್ಟು 550 ಖಾಸಗಿ ಬ್ಯಾಂಕುಗಳು ಬಾಗಿಲು ಮುಚ್ಚಿದ್ದವು. ಇತಿಹಾಸದಿಂದ ನಾವು ಪಾಠ ಕಲಿಯಬೇಕು. ಇಲ್ಲವಾದಲ್ಲಿ ಬಿಕ್ಕಟ್ಟಿಗೆ ಕಾರಣವಾಗಬಹುದು ಎಂದು ಎಚ್ಚರಿಸಿದರು.

ಉಡುಪಿ, ಮಂಗಳೂರು, ಬಳ್ಳಾರಿ, ಸೇರಿದಂತೆ ರಾಜ್ಯದ ವಿವಿಧಡೆ ಪ್ರತಿಭಟನೆಗಳು ನಡೆದ ವರದಿಯಾಗಿದೆ.

Donate Janashakthi Media

Leave a Reply

Your email address will not be published. Required fields are marked *