ಬೆಂಗಳೂರು: ಬ್ಯಾಂಕ್ ಮ್ಯಾನೇಜರ್ ವಿರುದ್ಧ ಗ್ರಾಹಕರ ಹೆಸರಿನಲ್ಲಿ ಸಾಲ ಪಡೆದು 3.11 ಕೋಟಿ ರೂ. ವಂಚಿಸಿದ ಆರೋಪದಡಿ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಯಾಂಕಿನ ಎಜಿಎಂ ಕಭೀಂದರ್ ಕುಮಾರ್ ಎಂಬವರು ಡಿ.12 ರಂದು ದೂರು ನೀಡಿದ್ದರು. ಮಲ್ಲೇಶ್ವರ 15ನೇ ಕ್ರಾಸ್‌ನಲ್ಲಿರುವ ಕೆನರಾ ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ಎನ್.ರಘು ಎಂಬವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ದೂರು ಆಧರಿಸಿ ಅಕ್ರಮ ನಡೆಸಿದ್ದ ಹಿರಿಯ ವ್ಯವಸ್ಥಾಪಕನ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ನವದೆಹಲಿ | ಡಿ. 31 ರಂದು ಮುಷ್ಕರಕ್ಕೆ ಕರೆ ನೀಡಿದ ಗಿಗ್ ಕೆಲಸಗಾರು
ಗ್ರಾಹಕರನ್ನು ನಂಬಿಸಿ ಅವರಿಂದ ಖಾಲಿ ಚೆಕ್ಗಳು ಮತ್ತು ಒಟಿಪಿಗಳನ್ನು ಪಡೆದು ಚಿನ್ನದ ಸಾಲ ಪಡೆದಿದ್ದಾರೆ. ಗ್ರಾಹಕರ 41 ಖಾತೆಗಳಿಂದ ಚಿನ್ನವನ್ನು ಇಡದೇ 3,11,54,000 ರೂ. ಸಾಲ ಪಡೆದು ವಂಚಿಸಿರುವುದು ಬೆಳಕಿಗೆ ಬಂದಿದೆ. ವಂಚನೆಗೊಳಗಾದ ವ್ಯಕ್ತಿಯೊಬ್ಬರು ಬ್ಯಾಂಕಿನ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಾಗ ವಿಷಯ ತಿಳಿಯಿತು ಎಂದು ದೂರುದಾರರು ಹೇಳಿದ್ದಾರೆ.
ಬ್ಯಾಂಕಿನ ಗ್ರಾಹಕರೊಬ್ಬರಿಗೆ ಕೆಲ ದಿನಗಳ ಹಿಂದೆ ಗೃಹ ಸಾಲ ಮಂಜೂರಾಗಿತ್ತು. ಅದೇ ವಿಶ್ವಾಸದ ಮೇಲೆ ಬ್ಯಾಂಕ್ ಮ್ಯಾನೇಜರ್ ರಘು ತಮ್ಮ ತಂದೆಗೆ ಹುಷಾರಿಲ್ಲ ಎಂದು ಹೇಳಿ 3 ಲಕ್ಷ ರೂಪಾಯಿ ಖಾಸಗಿ ಸಾಲ ಪಡೆದುಕೊಂಡಿದ್ದರು. ಅದರಲ್ಲಿ 1.30 ಲಕ್ಷ ರೂಪಾಯಿ ವಾಪಸ್ ನೀಡಿದ್ದರು. ಬಾಕಿ ಹಣ ಕೊಡುವುದಾಗಿ ಹೇಳಿ ಕಾಲಹರಣ ಮಾಡುತ್ತಿದ್ದರು. ಕೆಲವು ದಿನಗಳ ನಂತರ ಆರೋಪಿ ಎನ್.ರಘು ನನಗೆ ಹಣದ ಅವಶ್ಯಕತೆ ಇದೆ. ನನ್ನ ತಾಯಿಯ ಚಿನ್ನವನ್ನು ನಿಮ್ಮ ಖಾತೆಯಲ್ಲಿ ಇಟ್ಟು ಚಿನ್ನದ ಸಾಲ ಪಡೆದುಕೊಳ್ಳುತ್ತೇನೆ. ಆ ಸಾಲವನ್ನು ನಾನೇ ತೀರಿಸಿಕೊಳ್ಳುತ್ತೇನೆ. ಸಾಲ ಪಡೆಯಲು ಬ್ಯಾಂಕ್ ನಿಯಮಗಳ ಪ್ರಕಾರ ಖಾಲಿ ಚೆಕ್, ಮೊಬೈಲ್ ನಂಬರ್‌ಗೆ ಬರುವ ಒಟಿಪಿ ನೀಡುವಂತೆ ಮನವೊಲಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
