ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಬೆಂಗಳೂರು ನಗರದ ಸಬ್ ಅರ್ಬನ್ ರೈಲು ಯೋಜನೆಗೆ ಕೇಂದ್ರ ಸರ್ಕಾರವು ರೂ. 450 ಕೋಟಿ ಬಿಡುಗಡೆ ಮಾಡಿದೆ ಎಂದಿದ್ದಾರೆ. ಇದು ಅರ್ಧ ಸತ್ಯ ಮಾತ್ರ. ವಾಸ್ತವ ಬೇರೆ ಇದ್ದು ನಾಡಿಗೆ ಆಗುತ್ತಿರುವ ಅನ್ಯಾಯ ಮುಚ್ಚಿಟ್ಟಿರುವುದು ಯಡಿಯೂರಪ್ಪ ಅವರೇ ಹೊರತು ನಾನಲ್ಲ ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.
ಇದನ್ನೂ ಓದಿ:ಬಿಜೆಪಿ ಸಂಸದರು ರಾಜ್ಯ ಸರ್ಕಾರವನ್ನು ಟೀಕಿಸುವ ಬದಲು ಕೇಂದ್ರದೊಂದಿಗೆ ಮಾತನಾಡಿ| ಸಿಎಂ ಸಿದ್ದರಾಮಯ್ಯ
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, 2018-19ರ ಕೇಂದ್ರ ಬಜೆಟ್ ಭಾಷಣದಲ್ಲಿ ಅಂದಿನ ವಿತ್ತ ಸಚಿವರಾಗಿದ್ದ ಅರುಣ್ ಜೇಟ್ಲಿ ಅವರು ರೂ.17,000 ಕೋಟಿ ವೆಚ್ಚದಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆಯನ್ನು ಕೇಂದ್ರ ಸರ್ಕಾರವು ಯೋಜನೆ ರೂಪಿಸಲಿದೆ ಎಂದು ಹೇಳಿದ್ದರು. ಕೇಂದ್ರ ಸರ್ಕಾರದ ಈ ಘೋಷಣೆಯನ್ನು ಬಿಜೆಪಿ ತನ್ನ 2018ರ ಚುನಾವಣಾ ಪ್ರಣಾಳಿಕೆಯಲ್ಲಿ ಕೂಡ ಸೇರಿಸಿಕೊಂಡಿತ್ತು. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ, “ಕೇಂದ್ರ ಸರ್ಕಾರ ಘೋಷಿಸಿದ ರೂ.17,000 ಕೋಟಿ ಅನುದಾನ ಬಳಸಿಕೊಂಡು ಬೆಂಗಳೂರಿನ ಉಪನಗರ ರೈಲು ಜಾಲವನ್ನು ಪೂರ್ಣಗೊಳಿಸುತ್ತೇವೆ” ಎಂದು ಹೇಳಿತ್ತು. ಇದರರ್ಥ ಕೇಂದ್ರ ಸರ್ಕಾರವು ಸಬ್ ಅರ್ಬನ್ ರೈಲು ಯೋಜನೆಗೆ ಬಜೆಟ್ ನಲ್ಲಿ 17,000 ಕೋಟಿ ರೂ. ನಿಗದಿಪಡಿಸಿದೆ ಎಂದು ರಾಜ್ಯ ಬಿಜೆಪಿಯೇ ಒಪ್ಪಿಕೊಂಡಿತ್ತು. ಆದರೆ ಆ ಆರ್ಥಿಕ ವರ್ಷ ಬಿಡಿಗಾಸು ಹಣವನ್ನು ಕೂಡ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರಲಿಲ್ಲ ಎಂದಿದ್ದಾರೆ.