ಬೆಂಗಳೂರಿನ ಹೆಚ್ಚಿನ ವರ್ಗಗಳ ಜನರ ಜೀವನ ಮಟ್ಟ ಕುಸಿಯುತ್ತಿದ್ದು, ಅದು ಒಂದು ಬಿಕ್ಕಟ್ಟಿನ ಹಂತ ಮುಟ್ಟಿದೆ. ಬೆಂಗಳೂರಿನ ಜೀವನ ವೆಚ್ಚ ಏರಿಕೆಯ ನಾಲ್ಕು ಅತಿ ದೊಡ್ಡ ಭಾಗಗಳೆಂದರೆ – ಮನೆ ಬಾಡಿಗೆ, ಸಾರಿಗೆ ವೆಚ್ಚ, ದುಬಾರಿ ಶಾಲಾ-ಕಾಲೇಜು ಶಿಕ್ಷಣ ಮತ್ತು ಆರೋಗ್ಯ ವೆಚ್ಚಗಳು. ಇವುಗಳ ಜತೆಗೆ ಎಲ್ಲ ಜೀವನಾವಶ್ಯಕ ವಸ್ತುಗಳ ಬೆಲೆ ಮತ್ತು ಅವುಗಳ ಮೇಲಿನ ತೆರಿಗೆ ಏರಿಕೆ ನಗರದ ಹೆಚ್ಚಿನ ಜನವಿಭಾಗಗಳನ್ನು ಬಾಧಿಸುತ್ತಿವೆ. ಈ ಸನ್ನಿವೇಶದಲ್ಲಿ ಮಧ್ಯಮ ವರ್ಗದ ಉದ್ಯೋಗಿಗಳೂ ಬೆಂಗಳೂರಿನಲ್ಲಿ ಜೀವನ ಸಾಗಿಸಲು ಕಷ್ಟಪಡುವ ಹಂತ ತಲುಪಿವೆ. ಈ ಎಲ್ಲ ವೆಚ್ಚಗಳನ್ನು ಕಡಿಮೆ ಮಾಡುವ ಮಿತಿ ಹೇರುವ ಕ್ರಮಗಳನ್ನು ಕಂಡುಕೊಳ್ಳಬೇಕಾಗಿದೆ. ಈ ಕ್ರಮಗಳನ್ನು ಕೈಗೊಳ್ಳಲು ರಾಜ್ಯ/ಸ್ಥಳೀಯ ಸರಕಾರ ಮತ್ತು ಇತರ ಸಂಸ್ಥೆಗಳ ಮೇಲೆ ಒತ್ತಡ ಹೇರುವ ಅಭಿಯಾನ ಆರಂಭಿಸಬೇಕಾಗಿದೆ. ಈ ನಿಟ್ಟಿನಲ್ಲಿ ಆಗಸ್ಟ್ 20, 2023 ರಂದು ಬೆಂಗಳೂರಿನಲ್ಲಿ ‘ಜೀವನ ವೆಚ್ಚದ ಬಿಕ್ಕಟ್ಟು ಪರಿಹಾರಕ್ಕಾಗಿ ಹೋರಾಟ ಕಟ್ಟುವ’ “ಬೆಂಗಳೂರು ಜನತಾ ಸಮಾವೇಶ” ವನ್ನು ಆಯೋಜಿಸಲಾಗಿದೆ.
ದೇಶದ ಜನರ ಜೀವನ ವೆಚ್ಚವು ಸತತವಾಗಿ ಏರುತ್ತಿದೆ. ಜತೆಗೆ ಜನತೆಯ ಆದಾಯ ಅದೇ ದರದಲ್ಲಿ ಏರುತ್ತಿಲ್ಲ ಅಥವಾ ಕುಗ್ಗುತ್ತಿದೆ. ಬೆಂಗಳೂರು ದೇಶದಲ್ಲೇ ನಾಲ್ಕನೇ ಅತಿ ಹೆಚ್ಚು ಜೀವನ ವೆಚ್ಚವಿರುವ ನಗರ. ಇದರಿಂದಾಗಿ ನಗರದ ಹೆಚ್ಚಿನ ವರ್ಗಗಳ ಜನರ ಜೀವನ ಮಟ್ಟ ಕುಸಿಯುತ್ತಿದ್ದು, ಅದು ಒಂದು ಬಿಕ್ಕಟ್ಟಿನ ಹಂತ ಮುಟ್ಟಿದೆ.
ಬೆಂಗಳೂರಿನ ಜೀವನ ವೆಚ್ಚ ಏರಿಕೆಯ ನಾಲ್ಕು ಅತಿ ದೊಡ್ಡ ಭಾಗಗಳೆಂದರೆ – ಮನೆ ಬಾಡಿಗೆ, ಸಾರಿಗೆ ವೆಚ್ಚ, ದುಬಾರಿ ಶಾಲಾ-ಕಾಲೇಜು ಶಿಕ್ಷಣ ಮತ್ತು ಆರೋಗ್ಯ ವೆಚ್ಚಗಳು.
ಮನೆಗಳು, ಅಪಾರ್ಟ್‌ಮೆಂಟ್‌ಗಳು, ಪಿಜಿಗಳು ಮತ್ತು ಸಹ-ವಾಸಿಸುವ ಸ್ಥಳಗಳ ಬಾಡಿಗೆಯಲ್ಲಿ ವಿಪರೀತ ಏರಿಕೆಯಾಗಿದೆ. ರೆಂಟ್ ಕಂಟ್ರೋಲ್ ಆಕ್ಟ್ ಯಾವಾಗಲೋ ಹಲ್ಲು ಕಿತ್ತ ಹಾವಾಗಿದ್ದು, ಬಾಡಿಗೆಗೆ ಯಾವುದೇ ಇತಿಮಿತಿ ಇಲ್ಲದಾಗಿದೆ. ಸಾಲದ್ದಕ್ಕೆ ಬೆಂಗಳೂರಿನ ಅಡ್ವಾನ್ಸ್ 10 ತಿಂಗಳ ಬಾಡಿಗೆಯಷ್ಟು ಇದೆ. ಇದು ದೇಶದಲ್ಲೆ ಅತ್ಯಂತ ದುಬಾರಿ. ದೆಹಲಿ, ಕಲ್ಲತ್ತಾ ಸೇರಿದಂತೆ ಇತರ ಹೆಚ್ಚಿನ ಪ್ರಮುಖ ನಗರಗಳಲ್ಲಿ ಅಡ್ವಾನ್ಸ್ ಹೆಚ್ಚೆಂದರೆ 3 ತಿಂಗಳ ಬಾಡಿಗೆಯಷ್ಟಿರುತ್ತದೆ. ಮನೆಗಾಗಿ ತಿಂಗಳ ವೆಚ್ಚ ಕೆಳ ಮಧ್ಯಮ ವರ್ಗದಲ್ಲಿ ಅರ್ಧದಷ್ಟಿದ್ದರೆ ಮೇಲು ಮಧ್ಯಮ ವರ್ಗಗಳಲ್ಲೂ ಮೂರನೇ ಒಂದು ಭಾಗದಷ್ಟು ಇರುತ್ತದೆ. ನೀರು, ವಿದ್ಯುತ್ ವೆಚ್ಚವೂ ಇದಕ್ಕೆ ಸೇರಿಕೊಳ್ಳುತ್ತದೆ. ವಾರ್ಷಿಕವಾಗಿ ಬಾಡಿಗೆ ಏರಿಕೆ, ಮನೆಯೊಡೆಯರ ಕಿಕುಕುಳ ಮತ್ತು ವರ್ಗಾವಣೆ ಉದ್ಯೋಗ ಬದಲಾವಣೆಗಳಿಂದ ಮನೆ ಬದಲಾಯಿಸಬೇಕಾದ ತಾಪತ್ರಯಗಳು ಎಲ್ಲರನ್ನೂ ಬಹುವಾಗಿ ಕಾಡಿಸುತ್ತವೆ. ಭಾರೀ ಅಡ್ವಾನ್ಸ್ ನಿಂದಾಗಿ ನಗರಕ್ಕೆ ಮೊದಲ ಬಾರಿ ಬರುವ ಉದ್ಯೋಗಿಗಳಿಗೆ ಬಾಡಿಗೆ ಮನೆ ಕೈಗೆಟಕುವಂತಿಲ್ಲ. ಅವರು ಪಿ ಜಿ, ಸಹ-ವಾಸಿಸುವ ಸ್ಥಳ (ಕೋ-ಲಿವಿಂಗ್) ಗಳಿಗೆ ಶರಣು ಹೋಗಬೇಕಾಗುತ್ತದೆ. ಅದೂ ದುಬಾರಿಯಾಗುತ್ತಿದೆ. ಸ್ವಂತ ಮನೆ ಹೊಂದಿದವರಿಗೂ ತಿಂಗಳ ಸಾಲದ ಕಂತು, ಆಸ್ತಿ ತೆರಿಗೆ, ರಿಪೇರಿ ಮುಂತಾದ ವೆಚ್ಚಗಳು ಸೇರಿದರೆ ಆದಾಯದ ದೊಡ್ಡ ಭಾಗವನ್ನು ತಿಂದು ಹಾಕುತ್ತವೆ.
ಸಾರಿಗೆಯದ್ದು. ಬೆಂಗಳೂರಿನ ಇನ್ನೊಂದು ತೀವ್ರ ಸಮಸ್ಯೆ ಉದ್ಯೋಗದ ಸ್ಥಳಕ್ಕೆ, ಮಕ್ಕಳ ಶಾಲಾ ಕಾಲೇಜಿಗೆ ಸಾರಿಗೆಯ ವೆಚ್ಚವೂ ಗಮನಾರ್ಹವಾದದ್ದೇ. ಮಹಾನಗರಗಳಲ್ಲೆ ಬೆಂಗಳೂರು ಬಹುಶಃ ಅತ್ಯಂತ ಕೆಟ್ಟ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇರುವ ನಗರ. ಕೇಂದ್ರ ಪ್ರದೇಶದ ಕೆಲವು ಕಚೇರಿಗಳು ಬಿಟ್ಟರೆ, ಹೆಚ್ಚಿನ ಪ್ರದೇಶದಲ್ಲಿರುವ ಉದ್ಯೋಗ ಸ್ಥಳಗಳಿಗೆ ಉದ್ಯೋಗಿಗಳು ಸಾರ್ವಜನಿಕ ಸಾರಿಗೆ ಬಳಸಿ ಹೋಗುವುದು ಪ್ರಾಯೋಗಿಕವಾಗಿಲ್ಲ. ಹಾಗಾಗಿ ಸ್ವಂತ ವಾಹನ ಅಥವಾ ಅಟೋ/ಟ್ಯಾಕ್ಸಿ ಮೊರೆ ಹೋಗಬೇಕಾಗುತ್ತದೆ. ಸತತವಾಗಿ ಪೆಟ್ರೋಲ್/ಡಿಸೀಲ್ ಬೆಲೆಏರಿಕೆ, ವಾಹನ ಇನ್ಶೂರೆನ್ಸ್ ಏರಿಕೆ, ರಿಪೇರಿ ನಿರ್ವಹಣೆ ಬೆಲೆ ಏರಿಕೆ, ಉದ್ಯೋಗಿಗಳು ಪ್ರಯಾಣ ಮಾಡುವ ಸಮಯಗಳಲ್ಲೇ ಬೇಡಿಕೆಯ ಆಧಾರದ ಮೇಲೆ ಓಲಾ/ಉಬರ್ ಗಳ ದುಬಾರಿ ಡೈನಾಮಿಕ್ ಬೆಲೆ ಇತ್ಯಾದಿಗಳಿಂದಾಗಿ ಸಾರಿಗೆ ವೆಚ್ಚ ಸಹ ದೊಡ್ಡ ಹೊರೆಯಾಗಿದೆ. ಓಲಾ/ಉಬರ್ ಗಳ ಬೆಲೆಗಳಿಗೂ ಯಾವುದೇ ಕಾನೂನಿನ ಕಡಿವಾಣ ಇಲ್ಲ.
ಬಹುತೇಕ ಪಾಲಕರಿಲ್ಲದ ಸಣ್ಣ ಕುಟುಂಬಗಳಲ್ಲಿ ವಾಸಿಸುವ ಯುವ ದಂಪತಿಗಳಿಗೆ ಬೆಂಗಳೂರಿನ ಶಿಶುಪಾಲನಾ, ಶಾಲಾ ಶಿಕ್ಷಣ ವೆಚ್ಚ ಸಹ ಅತ್ಯಂತ ದುಬಾರಿಯಾಗಿದೆ. ನಗರದಲ್ಲಿ ಗುಣಮಟ್ಟದ ಸರಕಾರಿ ಶಾಲೆಗಳು, ಸಾಕಷ್ಟು ಇಲ್ಲದೆ ಇರುವುದರಿಂದ ಖಾಸಗಿ ಶಾಲಾ, ಶಾಲಾ ಪೂರ್ವ ಸಂಸ್ಥೆಗಳು ಫೀಸು, ಡೊನೇಶನ್ ಇತ್ಯಾದಿ ಹೆಸರಲ್ಲಿ ಪಾಲಕರ ಲೂಟಿಯಲ್ಲಿ ತೊಡಗಿವೆ. ಸರಕಾರವನ್ನೇ ನಿಯಂತ್ರಿಸುವ ಭಾರೀ ಶಿಕ್ಷಣ ಲಾಬಿಗಳ ಬಲದಿಂದಾಗಿ ಈ ಸಂಸ್ಥೆಗಳ ಮೇಲೂ ಯಾವುದೇ ಕಡಿವಾಣವಿಲ್ಲ.
ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಸರಕಾರಿ ಕ್ಲಿನಿಕ್, ಆಸ್ಪತ್ರೆಗಳ ವ್ಯವಸ್ಥೆ ಇಲ್ಲದೆ ಪೂರ್ತಿಯಾಗಿ ಖಾಸಗಿ ಕ್ಲಿನಿಕ್, ಆಸ್ಪತ್ರೆಗಳ ಮೇಲೆ ಅವಲಂಬಿಸಬೇಕಾದ ಪರಿಸ್ಥಿತಿ ಇರುವುದರಿಂದ ಅವುಗಳ ದುಬಾರಿ ಬೆಲೆಗಳ ಶೋಷಣೆಗೆ ಒಳಗಾಗಬೇಕಾಗಿದೆ. ಖಾಸಗಿ ಆಸ್ಪತ್ರೆಗಳ ಲಾಬಿ ಸಹ ಬಲವಾಗಿದ್ದು ಅವೂ ಯಾವುದೇ ನಿಬಂಧನೆಗಳಿಲ್ಲದೆ ಸ್ವಚ್ಛಂಧ ವರ್ತನೆಯಲ್ಲಿ ತೊಡಗಿವೆ. ಆಸ್ಪತ್ರೆಗೆ ಭರ್ತಿಯಾಗುವ ಸನ್ನಿವೇಶದ ವೆಚ್ಚವನ್ನು ಕೆಲವು ಕಂಪನಿಗಳ ಆರೋಗ್ಯ ವಿಮೆ ಮೂಲಕ ಭರ್ತಿ ಮಾಡುತ್ತವೆ. ಆದರೂ ಅದರಲ್ಲೂ ಮಿತಿಗಳು, ನಿರ್ಬಂಧಗಳಿದ್ದು ಸಾಕಷ್ಟು ಹಣ ಜೇಬಿನಿಂದ ಕೊಡಬೇಕಾಗುತ್ತದೆ. ಆಸ್ಪತ್ರೆಗೆ ಭರ್ತಿಯಾಗುವ ಸನ್ನಿವೇಶವಿಲ್ಲದ ರೋಗಗಳ ಚಿಕಿತ್ಸೆಯ ವೆಚ್ಚ ಪೂರ್ತಿಯಾಗಿ ಜೇಬಿನಿಂದ ಕೊಡಬೇಕಾಗುತ್ತದೆ.
ಇವುಗಳ ಜತೆಗೆ ಎಲ್ಲ ಜೀವನಾವಶ್ಯಕ ವಸ್ತುಗಳ ಬೆಲೆ ಮತ್ತು ಅವುಗಳ ಮೇಲಿನ ತೆರಿಗೆ ಏರಿಕೆ ನಗರದ ಹೆಚ್ಚಿನ ಜನವಿಭಾಗಗಳನ್ನು ಬಾಧಿಸುತ್ತಿವೆ. ಈ ಸನ್ನಿವೇಶದಲ್ಲಿ ಮಧ್ಯಮ ವರ್ಗದ ಉದ್ಯೋಗಿಗಳೂ ಬೆಂಗಳೂರಿನಲ್ಲಿ ಜೀವನ ಸಾಗಿಸಲು ಕಷ್ಟಪಡುವ ಹಂತ ತಲುಪಿವೆ.
ಈ ಎಲ್ಲ ವೆಚ್ಚಗಳನ್ನು ಕಡಿಮೆ ಮಾಡುವ ಮಿತಿ ಹೇರುವ ಕ್ರಮಗಳನ್ನು ಕಂಡುಕೊಳ್ಳಬೇಕಾಗಿದೆ. ಈ ಕ್ರಮಗಳನ್ನು ಕೈಗೊಳ್ಳಲು ರಾಜ್ಯ/ಸ್ಥಳೀಯ ಸರಕಾರ ಮತ್ತು ಇತರ ಸಂಸ್ಥೆಗಳ ಮೇಲೆ ಒತ್ತಡ ಹೇರುವ ಅಭಿಯಾನ ಆರಂಭಿಸಬೇಕಾಗಿದೆ.
ಈ ಬೆಳೆಯುತ್ತಿರುವ ಬಿಕ್ಕಟ್ಟಿಗೆ ಪ್ರತಿಕ್ರಿಯೆಯಾಗಿ, ಅದರ ಪರಿಹಾರಕ್ಕಾಗಿ ಹೋರಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಮಧ್ಯಪ್ರವೇಶ ಮಾಡಲು ನಗರದ ಪ್ರಮುಖ ಸಂಘಟಿತ ವಲಯಗಳಲ್ಲಿ ಒಂದಾದ ಐಟಿ ಕ್ಷೇತ್ರದ ಉದ್ಯೋಗಿಗಳ ನಡುವೆ ಕೆಲಸ ಮಾಡುತ್ತಿರುವ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಐಟಿ ರಂಗದ ಸ್ಥಳೀಯ ಸಮಿತಿಯು ನಿರ್ಧರಿಸಿದೆ. ಕಳೆದ ಕೆಲವು ತಿಂಗಳುಗಳಿಂದ ಈ ಸಮಸ್ಯೆಗಳ ಅಧ್ಯಯನ, ಸಮೀಕ್ಷೆ, ಸಹಿ ಸಂಗ್ರಹ, ಪ್ರಚಾರ ಅಭಿಯಾನಗಳನ್ನು ನಡೆಸಿದೆ. ನಗರದ ವಿವಿಧ ಭಾಗಗಳಲ್ಲಿ 50ಕ್ಕೂ ಹೆಚ್ಚು ಅಭಿಯಾನ ಸಮಿತಿಗಳನ್ನು ರಚಿಸಿದೆ, ಎಂದು ಐಟಿ ರಂಗದ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಸೂರಜ್ ನಿಡಿಯಂಗ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ‘ಜೀವನ ವೆಚ್ಚದ ಬಿಕ್ಕಟ್ಟು ಪರಿಹಾರಕ್ಕಾಗಿ ಹೋರಾಟ ಕಟ್ಟುವ’ “ಬೆಂಗಳೂರು ಜನತಾ ಸಮಾವೇಶ” ವನ್ನು ಆಯೋಜಿಸಲಾಗಿದೆ. ಮುಖ್ಯವಾಗಿ ಐಟಿ ಕ್ಷೇತ್ರದ ಸುಮಾರು ಒಂದು ಸಾವಿರ ಉದ್ಯೋಗಿಗಳು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. “ಬೆಂಗಳೂರು ಜನತಾ ಸಮಾವೇಶ”ವನ್ನು ಅಗಸ್ಟ್ 20 ರಂದು ಮಧ್ಯಾಹ್ನ 2.30ಕ್ಕೆ ಕಾವೇರಿ ಭವನದ ಎದುರು ಇರುವ ಶಿಕ್ಷಕರ ಸದನ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಸೂರಜ್ ನಿಡಿಯಂಗ ಜನಶಕ್ತಿ ಮೀಡಿಯ ಜತೆ ಮಾತನಾಡುತ್ತಾ ತಿಳಿಸಿದ್ದಾರೆ.
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು ಸಮಾವೇಶವನ್ನು ಉದ್ಘಾಟಿಸಲಿದ್ದು, ಸಿಪಿಐ(ಎಂ) ನಾಯಕರಾದ ಯು.ಬಸವರಾಜ್, ಮೀನಾಕ್ಷಿಸುಂದರಂ, ಕೆ.ಪ್ರಕಾಶ್ ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ಈ ನಾಲ್ಕು ಸಮಸ್ಯೆಗಳ ಪರಿಹಾರ ಕ್ರಮ ಕಂಡುಕೊಳ್ಳುವ ಪ್ರಕ್ರಿಯೆಗೆ ಮತ್ತು ಆ ಕ್ರಮಗಳನ್ನು ಕೈಗೊಳ್ಳಲು ಯೋಜನೆ ಹಾಕಿಕೊಳ್ಳಲಾಗುವುದು. ಇದರ ಜಾರಿಯತ್ತ ಅಭಿಯಾನ ಮುಂದುವರೆಸಲಾಗುವುದು ಎಂದೂ ಸೂರಜ್ ಹೇಳಿದ್ದಾರೆ.