ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ನಡೆದ ಅಪಘಾತಗಳ ಪೈಕಿ ಮೂರನೇ ಒಂದರಷ್ಟು ಪ್ರಕರಣಗಳಲ್ಲಿ ದ್ವಿಚಕ್ರ ವಾಹನಗಳು ಇವೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ತಿಳಿಸಿದೆ.
ಎಕ್ಸ್‌ಪ್ರೆಸ್ ಹೈವೇನಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ ನಿಷೇಧ ಹೇರಿರುವ ಬಗ್ಗೆ ಮಾಹಿತಿ ನೀಡುವ ವೇಳೆ ಸಚಿವಾಲಯ ಈ ಅಂಕಿ ಅಂಶಗಳನ್ನು ಉಲ್ಲೇಖಿಸಿದೆ. ಆಗಸ್ಟ್ 1ರಿಂದ ಎಕ್ಸ್‌ಪ್ರೆಸ್‌ವೇನಲ್ಲಿ ದ್ವಿಚಕ್ರ,ತ್ರಿಚಕ್ರ ವಾಹನ ಸೇರಿ ಮಂದಗತಿಯ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ:ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಮೊದಲ ದಿನ ₹68 ಸಾವಿರ ದಂಡ ವಸೂಲಿ:ಎಸ್‌ಪಿ ಕಾರ್ತಿಕ್ ರೆಡ್ಡಿ
ದ್ವಿಚಕ್ರ ವಾಹನಗಳು ಇದ್ದ ಅಪಘಾತಗಳು ಸಾವಿಗೆ ಅಥವಾ ಗಂಭೀರ ಗಾಯಗಳಿಗೆ ಕಾರಣವಾಗಿವೆ. ಶೇ 25ರಷ್ಟು ಅಪಘಾತಗಳು ವಾಹನಗಳು ಡಿಕ್ಕಿಯಾಗಿ ಸಂಭವಿಸಿವೆ. ಮಂದಗತಿಯಲ್ಲಿ ಚಲಿಸುವ ವಾಹನಗಳು ಬಲಬದಿಯಲ್ಲಿ ಚಲಿಸಿದ್ದರಿಂದ ಹಾಗೂ ಲೇನ್ ನಿಯಮ ಪಾಲಿಸದಿದ್ದರಿಂದ ಈ ಅಪಘಾತಗಳು ಉಂಟಾಗಿವೆ, ಒಟ್ಟಾರೆಯಾಗಿ ಶೇ 65-75ರಷ್ಟು ಅಪಘಾತಗಳು ಗಂಟೆಗೆ 160 ಕಿ.ಮೀ ವೇಗದವರೆಗೆ ಚಲಿಸುವ ದ್ವಿಚಕ್ರ ಹಾಗೂ ಕಾರುಗಳಿಂದ ಉಂಟಾಗಿದೆ. ಆದರೆ ಎಕ್ಸ್‌ಪ್ರೆಸ್‌ವೇಯ ವೇಗದ ಮಿತಿ 80-100 ಕಿ.ಮೀ ಎಂದು ಸಚಿವಾಲಯ ತಿಳಿಸಿದೆ.
ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳು ಎಕ್ಸ್‌ಪ್ರೆಸ್‌ವೇಯ ಎರಡೂ ಬದಿ ಇರುವ ಟೋಲ್ ರಹಿತ ಸರ್ವೀಸ್ ರಸ್ತೆಯನ್ನು ಬಳಸಬಹುದು ಎಂದು ಹೇಳಿರುವ ಸಚಿವಾಲಯವು,ಬಿಡದಿ,ರಾಮನಗರ,ಚನ್ನಪಟ್ಟಣ ಹಾಗೂ ಮಂಡ್ಯದಲ್ಲಿ ರೈಲ್ವೇ ಓವರ್ ಬ್ರಿಡ್ಜ್‌ನಿಂದಾಗಿ ಸರ್ವೀಸ್ ರಸ್ತೆ ಇಲ್ಲ ಎಂದು ಒಪ್ಪಿಕೊಂಡಿದೆ. ಅಲ್ಲದೆ ಮಂದಗತಿಯ ವಾಹನಗಳು ಹಳೆಯ ಬೆಂಗಳೂರು-ಮೈಸೂರು ರಸ್ತೆಯನ್ನು(ರಾಷ್ಟ್ರೀಯ ಹೆದ್ದಾರಿ 275) ಬಳಕೆ ಮಾಡಬಹುದು ಎಂದು ಸಲಹೆ ನೀಡಿದೆ.
ಅಲ್ಲದೆ ಬಾಕಿ ಇರುವ ಸರ್ವೀಸ್ ರಸ್ತೆಯ ನಿರ್ಮಾಣ ಶೀಘ್ರವೇ ಪ್ರಾರಂಭ ಮಾಡುವುದಾಗಿ ಹೇಳಿದೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ 275 ಅನ್ನು ಅಭಿವೃದ್ಧಿಪಡಿಸುವುದಾಗಿ ತಿಳಿಸಿದೆ.