ಬೆಂಗಳೂರು : ಕರ್ನಾಟಕದ ಹಾಲು ಉತ್ಪಾದಕರು ಹಾಗೂ ಹೈನುಗಾರರಿಗೆ ಬೆಂಬಲ ನೀಡಲು ಬೃಹತ್ ಬೆಂಗಳೂರು ಹೊಟೇಲ್ ಒಕ್ಕೂಟವು ಅಮುಲ್ ಉತ್ಪನ್ನಗಳಿಗೆ ಬಹಿಷ್ಕಾರ ಮಾಡಲು ಮುಂದಾಗಿದೆ. ತಾವು ಕೇವಲ ಕೆಎಂಎಫ್‌ನ ನಂದಿನಿ ಉತ್ಪನ್ನಗಳನ್ನು ಮಾತ್ರ ಖರೀದಿ ಮಾಡೋದಾಗಿ ಬೃಹತ್ ಬೆಂಗಳೂರು ಹೊಟೇಲ್ ಒಕ್ಕೂಟ ತಿಳಿಸಿದೆ.
ಗುಜರಾತ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಅಮುಲ್ ಸಂಸ್ಥೆಯು ಬೆಂಗಳೂರು ಮಾರುಕಟ್ಟೆಯಲ್ಲಿ ಹಾಲು ಹಾಗೂ ಮೊಸರಿನ ಉತ್ಪನ್ನಗಳನ್ನ ಮಾರಾಟ ಮಾಡಲು ನಿರ್ಧರಿಸಿದ ಬೆನ್ನಲ್ಲೇ, ಬೃಹತ್ ಬೆಂಗಳೂರು ಹೊಟೇಲ್ ಒಕ್ಕೂಟ ಈ ತೀರ್ಮಾನ ಕೈಗೊಂಡಿದೆ.ಈ ಕುರಿತಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬೃಹತ್ ಬೆಂಗಳೂರು ಹೊಟೇಲ್ ಒಕ್ಕೂಟದ ಅಧ್ಯಕ್ಷ ಪಿ. ಸಿ. ರಾವ್, ಬೆಂಗಳೂರಿನ ಹೊಟೇಲ್‌ಗಳು ಪ್ರತಿ ದಿನ 4 ಲಕ್ಷ ಲೀಟರ್ ಹಾಲನ್ನು ಖರೀದಿ ಮಾಡುತ್ತಿವೆ. ಇದಲ್ಲದೆ 40 ರಿಂದ 50 ಸಾವಿರ ಲೀಟರ್ ಮೊಸರು ಖರೀದಿ ಮಾಡುತ್ತಿದ್ದೇವೆ. ಕೆಎಂಎಫ್‌ಗೆ ಹಾಲು ಸರಬರಾಜು ಮಾಡುವಲ್ಲಿ ಸಾಕಷ್ಟು ರೈತ ಮಹಿಳೆಯರ ಶ್ರಮ ಇದೆ. ಹೀಗಾಗಿ, ಕೇವಲ ಹೊಟೇಲ್‌ಗಳು ಮಾತ್ರವಲ್ಲ, ಮನೆಗಳಲ್ಲೂ ನಂದಿನಿ ಉತ್ಪನ್ನಗಳನ್ನೇ ಬಳಕೆ ಮಾಡಬೇಕು. ಇದು ಕರ್ನಾಟಕದ ರೈತರಿಗೆ ಹಾಗೂ ರೈತ ಮಹಿಳೆಯರಿಗೆ ನಾವು ನೀಡುತ್ತಿರುವ ಬೆಂಬಲ ಎಂದು ರಾವ್ ಅವರು ಹೇಳಿದ್ದಾರೆ.
ನಂದಿನಿ ಸಂಸ್ಥೆಯು ಕರ್ನಾಟಕದ ಹೆಮ್ಮೆ. ಹೀಗಾಗಿ. ನಾವು ನಂದಿನಿ ಹಾಲನ್ನೇ ಖರೀದಿಸಬೇಕು, ನಮ್ಮ ಸಂಸ್ಥೆಯನ್ನೇ ಬೆಂಬಲಿಸಬೇಕು. ಹೊಟೇಲ್‌ಗಳಲ್ಲಿ ಸಿಗುವ ರುಚಿಕರ ಕಾಫಿ ಹಾಗೂ ತಿಂಡಿ ತಿನಿಸುಗಳಿಗೆ ನಂದಿನಿ ಹಾಲು ಅತ್ಯಗತ್ಯ. ಬೇರೆ ರಾಜ್ಯದ ಹಾಲು ಕರ್ನಾಟಕ ಪ್ರವೇಶ ಮಾಡುತ್ತಿದೆ ಎಂಬ ಸುದ್ದಿ ಲಭ್ಯವಾಗುತ್ತಿದೆ. ಹೀಗಾಗಿ, ನಂದಿನಿ ಹಾಲಿಗೆ ಬೆಂಬಲ ನೀಡಬೇಕಾದ್ದು ನಮ್ಮ ಕರ್ತವ್ಯ ಎಂದು ಬೃಹತ್ ಬೆಂಗಳೂರು ಹೊಟೇಲ್ ಒಕ್ಕೂಟ ತನ್ನ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.ಇದೇ ವೇಳೆ ತಾವು ಅಮುಲ್ ಸಂಸ್ಥೆಯನ್ನು ವಿರೋಧಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ ಪಿ. ಸಿ. ರಾವ್, ಅಮೂಲ್ ಕೂಡಾ ಭಾರತದ ಉತ್ಪನ್ನ. ದೇಶದಲ್ಲೇ ಅತ್ಯಂತ ದೊಡ್ಡ ಹಾಗೂ ಮೊಟ್ಟ ಮೊದಲ ಸ್ಥಾನದಲ್ಲಿ ನಿಲ್ಲುವ ಹಾಲು ಉತ್ಪಾದಕ ಸಂಸ್ಥೆ. ಹಾಗೆಂದ ಮಾತ್ರಕ್ಕೆ ಎರಡನೇ ಸ್ಥಾನದಲ್ಲಿ ಇರುವ ಕೆಎಂಎಫ್ ಸಂಸ್ಥೆಯನ್ನು ಕಡೆಗಣಿಸಲು ಸಾಧ್ಯವೇ ಎಂದು ರಾವ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರು ಮಾರುಕಟ್ಟೆಯಲ್ಲಿ ಅಮುಲ್ ವಿರುದ್ದ ನಂದಿನಿ ಉಳಿಸಲು #SaveNandini ಅಭಿಯಾನ
ಅಮುಲ್ ಹಾಲಿಗೆ ಪ್ರತಿ ಲೀಟರ್‌ಗೆ 54 ರೂ. ದರ ನಿಗದಿ ಮಾಡಲಾಗಿದೆ. ಆದ್ರೆ, ನಂದಿನಿ ಆರೆಂಜ್ ಹಾಲು 43 ರೂ.ಗೆ ಲಭ್ಯವಿದೆ. ಹೀಗಾಗಿ, ಬೃಹತ್ ಬೆಂಗಳೂರು ಹೊಟೇಲ್ ಒಕ್ಕೂಟವು ನಂದಿನಿಗೆ ಬೆಂಬಲ ನೀಡುತ್ತದೆ. ಪ್ರತಿ ಲೀಟರ್‌ಗೆ 11 ರೂ. ಉಳಿತಾಯ ಮಾಡಬಹುದು ಅನ್ನೋದಷ್ಟೇ ಅಲ್ಲ, ಕರ್ನಾಟಕದ ರೈತರಿಗೂ ಬೆಂಬಲ ಸಿಗುತ್ತದೆ ಅನ್ನೋ ಕಾರಣಕ್ಕೆ ನಾವು ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ರಾವ್ ಹೇಳಿದ್ದಾರೆ.
ಅಮುಲ್ ಹಾಗೂ ನಂದಿನಿ ವಿವಾದ ಆರಂಭವಾಗುವ ಮೊದಲಿನಿಂದಲೂ ನಾವು ನಂದಿನಿ ಉತ್ಪನ್ನಗಳನ್ನೇ ಖರೀದಿ ಮಾಡುತ್ತಿದ್ದೇವೆ. ಮುಂದೆಯೂ ನಂದಿನಿ ಉತ್ಪನ್ನಗಳನ್ನೇ ಖರೀದಿಸುತ್ತೇವೆ. ಈ ಮೂಲಕ ರೈತರು ಹಾಗೂ ಕೆಎಂಎಫ್‌ಗೆ ಬೆಂಬಲ ನೀಡುತ್ತೇವೆ ಎಂದು ರಾವ್ ಸ್ಪಷ್ಟಪಡಿಸಿದ್ದಾರೆ.