ʻಬಂಗಾಳದ ದಾದಾʼನನ್ನು ರಾಜಕೀಯಕ್ಕೆ ಎಳೆ ತರಲು ಪ್ರಯತ್ನಿಸಿ ವಿಫಲವಾಯಿತೆ ಬಿಜೆಪಿ?

ನವದೆಹಲಿ: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷರಾಗಿ ಬಂಗಾಳದ ದಾದಾ ಎಂದೇ ಖ್ಯಾತಿ ಹೊಂದಿರುವ ಸೌರವ್‌ ಗಂಗೂಲಿ ಎರಡನೇ ಅವಧಿಗೆ ಮುಂದುವರೆಯುವ ಎಲ್ಲಾ ಅವಕಾಶಗಳು ಇದ್ದರೂ ಸಹ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಇದೀಗ ಈ ವಿಚಾರ ಕ್ರೀಡಾ ಕ್ಷೇತ್ರದಿಂದ ರಾಜಕೀಯ ಕ್ಷೇತ್ರದೆಡೆಗೆ ಚರ್ಚೆ ಶುರವಾಗಿದೆ.

ಪಶ್ಚಿಮ ಬಂಗಾಳ ಆಡಳಿತರೂಢ ತೃಣಮೂಲಕ ಕಾಂಗ್ರೆಸ್‌(ಟಿಎಂಸಿ) ಪಕ್ಷದ ನಾಯಕರು ಇದೀಗ ಚರ್ಚೆಯನ್ನು ಹುಟ್ಟುಹಾಕಿದ್ದು, ಭಾರತೀಯ ಜನತಾ ಪಕ್ಷ(ಬಿಜೆಪಿ)ಕ್ಕೆ ಸೌರವ್‌ ಗಂಗೂಲಿ ಅವರನ್ನು ಸೇರ್ಪಡೆ ಮಾಡಿಕೊಳ್ಳಲು ಸಾಧ್ಯವಾಗದಿರುವುದರಿಂದಲೇ ಅವರಿಗೆ ಅಪಮಾನ ಮಾಡಿದೆ ಎನ್ನಲಾಗಿದೆ. ಅಲ್ಲದೆ, ಬಿಜೆಪಿ ಪಕ್ಷದ ಎಲ್ಲಾ ಪ್ರಯತ್ನಗಳು ವಿಫಲವಾಗಿರುವ ಬಗ್ಗೆ ವಿವರಿಸುತ್ತವೆ.

ಕ್ರಿಕೆಟ್‌ ಕ್ರೀಡಾ ಕ್ಷೇತ್ರದಲ್ಲಿ ಭಾರೀ ಯಶಸ್ಸು ಕಂಡು, ಭಾರತ ಕ್ರಿಕೆಟ್‌ ತಂಡದ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದ ಸೌರವ್‌ ಗಂಗೂಲಿ ಕ್ರಿಕೆಟ್‌ ಕ್ಷೇತ್ರದ ಅತ್ಯಂತ ಉನ್ನತ ಹುದ್ದೆಯಾದ ಬಿಸಿಸಿಐನ ಅಧ್ಯಕ್ಷರಾಗಿ 2019ರಲ್ಲಿ ಆಯ್ಕೆ ಇಲ್ಲಿಯವರೆಗೆ ಕಾರ್ಯನಿರ್ವಹಿಸಿದ್ದಾರೆ. ಎರಡನೇ ಅವಧಿಗೂ ಅವರು ಅಧ್ಯಕ್ಷರಾಗಿ ಮುಂದುವರೆಯುವ ಬಯಕೆ ಹೊಂದಿದ್ದರೂ ಸಹ ಅದು ಫಲನೀಡಿಲ್ಲ.

ಬಿಸಿಸಿಐ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವ ತೀವ್ರ ಬಯಕೆ ಹೊಂದಿದ್ದರೂ ಸಹ ಅವರಿಗೆ ಹಲವರ ಬೆಂಬಲವೇ ಸಿಗಲಿಲ್ಲ. ಇದಕ್ಕೆ ಮುಖ್ಯ ಕಾರಣ ಬಂಗಾಳದ ದಾದಾ ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿಯದಿದ್ದುದೇ ಎಂಬ ಮಾತುಗಳು ದಟ್ಟವಾಗಿ ಹರಿದಾಡುತ್ತಿದೆ.

ಅಕ್ಟೋಬರ್‌ 11ರಂದು ನಡೆದ ಬಿಸಿಸಿಐ ಸಭೆಯಲ್ಲೂ ಸೌರವ್‌ ಗಂಗೂಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಬಗ್ಗೆ ಮಾತನಾಡಿದರು. ಅಥವಾ ಇದು ಸಾಧ್ಯವಾದಪಕ್ಷದಲ್ಲಿ ಐಸಿಸಿ ಅಧ್ಯಕ್ಷರಾಗಲು ಬಯಸಿದ್ದರು. ಆದರೆ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಎರಡನೇ ಅವಧಿಗೆ ಆಯ್ಕೆ ಮಾಡುವ ಅವಕಾಶವಿಲ್ಲ ಎಂದು ಅವರಿಗೆ ತಿಳಿಸಲಾಯಿತು. ಸಭೆಯಲ್ಲಿ ಗಂಗೂಲಿ ಅವರಿಗೆ ಐಪಿಎಲ್ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವಂತೆ ಸಲಹೆ ನೀಡಲಾಯಿತು. ಆದರೆ, ಅವರು ಅದನ್ನು ನಿರಾಕರಿಸಿದ್ದಾರೆ.

ಕಳೆದ ವರ್ಷ 2021ರಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಬಿರುಸಿನಿಂದ ಪ್ರಚಾರ ನಡೆಸಿ ಅಧಿಕಾರ ಹಿಡಿಯಲು ಸಾಧ್ಯವಾಗದೇ ಮುಖಭಂಗ ಅನುಭವಿಸಿದರು. ಈ ಸಂದರ್ಭದಲ್ಲಿಯೇ ಪಶ್ಚಿಮ ಬಂಗಾಳದ ಜನರ ಪ್ರೀತಿ, ವಿಶ್ವಾಸ ಹೊಂದಿರುವ ಸೌರವ್ ಗಂಗೂಲಿಯವರನ್ನು ಬಿಜೆಪಿಗೆ ಕರೆತರಬೇಕೆಂಬ ಪ್ರಯತ್ನ ಬಿಜೆಪಿಯಲ್ಲಿ ಸಾಕಷ್ಟು ನಡೆದಿತ್ತು.

ಅಲ್ಲದೆ, ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲು ಕೂಡ ಸಾಕಷ್ಟು ಪ್ರಯತ್ನ ತೆರೆಮರೆಯಲ್ಲೇ ಬಿಜೆಪಿಯೊಳಗೆ ನಡೆದಿತ್ತು ಎನ್ನಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಎದುರಾಗುವ ಹಿನ್ನೆಲೆಯಲ್ಲಿಯೇ ಸೌರವ್‌ ಗಂಗೂಲಿ ಅವರನ್ನು 2019ರಲ್ಲಿ ಬಿಸಿಸಿಐ ಅಧ್ಯಕ್ಷರನ್ನಾಗಿ ನೇಮಿಸಿದ್ದರ ಹಿಂದೆ ಬಿಜೆಪಿ ಪಾತ್ರ ವಹಿಸಿತ್ತು ಎನ್ನಲಾಗಿದೆ.

ಕಳೆದ ವರ್ಷ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಮುಗಿದ ನಂತರವೂ ಕೊನೆಯ ಪ್ರಯತ್ನ ಎಂಬಂತೆ ಗೃಹ ಸಚಿವ ಅಮಿತ್ ಶಾ ಅವರು ಸೌರವ್ ಗಂಗೂಲಿ ಮನೆಗೆ ಭೇಟಿ ನೀಡಿ ಅವರ ಕುಟುಂಬದವರೊಂದಿಗೆ ಮಾತುಕತೆ ನಡೆಸಿದ್ದರು.‌ ಆ ಸಂದರ್ಭದಲ್ಲಿ ಸೌರವ್‌ ಗಂಗೂಲಿ ಬಿಜೆಪಿ ಪಕ್ಷ ಸೇರಲಿದ್ದಾರೆ ಎಂಬ ವದಂತಿಗಳು ದಡ್ಡವಾಗಿದ್ದವು.

ಆ ಸಂದರ್ಭದಲ್ಲಿ ಎದ್ದ ಊಹಾಪೋಹಗಳನ್ನು ಹಲ್ಲೆಗಳೆದ ಸೌರವ್‌ ಗಂಗೂಲಿ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಬಹಳ ಕಾಲದಿಂದ ತಾವು ಬಲ್ಲವರಾಗಿದ್ದು, ಔತಣಕ್ಕೆ ಆಹ್ವಾನಿಸುವುದರಲ್ಲಿ ಯಾವುದೇ ವಿಶೇಷ ಅರ್ಥ ಬೇಕಿಲ್ಲ ಎಂದು ತಿರುಗೇಟು ನೀಡಿದ್ದರು.

ಬಿಜೆಪಿ ಪಕ್ಷಕ್ಕೆ ಕರೆತರಲು ಮನವೊಲಿಕೆಗೆ ಅವರ ಕೊನೆಯ ಪ್ರಯತ್ನವಾಗಿತ್ತು. ಮುಂದಿನ ಚುನಾವಣೆಗಳಲ್ಲಿ ಬಿಜೆಪಿಗೆ ಬಹಿರಂಗವಾಗಿ ಬೆಂಬಲ ನೀಡಬೇಕು, ಪ್ರಚಾರ ಮಾಡಬೇಕೆಂಬ ಬೇಡಿಕೆಯನ್ನು ಇಡಲಾಗಿತ್ತು ಎನ್ನಲಾಗಿದೆ.

ಬಿಜೆಪಿ ಹೈಕಮಾಂಡ್ ತಾಳಕ್ಕೆ ದಾದಾ ಕುಣಿಯಲಿಲ್ಲ. ಪರಿಣಾಮ ಇಂದು ಬಿಸಿಸಿಐ ಅಧ್ಯಕ್ಷ ಪಟ್ಟ ಬೇರೆಯವರ ಪಾಲಾಗುತ್ತಿದೆ ಎನ್ನಲಾಗುತ್ತಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರ ಜಯ್ ಶಾಗೆ ಬಿಸಿಸಿಐಯಲ್ಲಿ ಎರಡನೇ ಅವಧಿಗೆ ಅವಕಾಶ ಸಿಕ್ಕಿರುವಾಗ ಸೌರವ್‌ ಗಂಗೂಲಿಗೆ ಏಕೆ ಕೊಡಲಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಕೂಡ ನಾಮಪತ್ರ ಸಲ್ಲಿಸಿದ್ದು, ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದರೆ ಸತತ ಎರಡನೇ ಅವಧಿಗೆ ಬಿಸಿಸಿಐ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ. ಜಯ್ ಶಾ ಹೊರತುಪಡಿಸಿ, ಸೌರವ್ ಗಂಗೂಲಿ ಬದಲಿಗೆ ಭಾರತೀಯ ಪ್ರತಿನಿಧಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಂಡಳಿಯಲ್ಲಿ ನಿರೀಕ್ಷಿಸಲಾಗಿದೆ.

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರೋಜರ್ ಬಿನ್ನಿ ನಾಮಪತ್ರ

1983ರ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾಗಿದ್ದ ರೋಜರ್ ಬಿನ್ನಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ರೋಜರ್ ಬಿನ್ನಿ ಈ ಉನ್ನತ ಹುದ್ದೆಗೆ ಅವಿರೋಧವಾಗಿ ಆಯ್ಕೆಯಾಗುವ ನಿರೀಕ್ಷೆಯಿದೆ. ಈ ಬಗ್ಗೆ ಮಾಹಿತಿ ನೀಡಿದ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಅಧ್ಯಕ್ಷ ಸ್ಥಾನಕ್ಕೆ ರೋಜರ್ ಬಿನ್ನಿ, ಉಪಾಧ್ಯಕ್ಷ ಸ್ಥಾನಕ್ಕೆ ನಾನು, ಜಯ್ ಶಾ ಕಾರ್ಯದರ್ಶಿ, ಆಶಿಶ್ ಶೆಲಾರ್ ಖಜಾಂಚಿ ಮತ್ತು ದೇವ್‌ಜಿತ್ ಸೈಕಿಯಾ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *