ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ಮತ್ತೆ ಮಳೆಯ ಆರ್ಭಟ ಹೆಚ್ಚಾಗಲಿದ್ದು, ಮುಂದಿನ ಮೂರು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ನಾಳೆಯಿಂದ ಬೆಂಗಳೂರು, ಕರಾವಳಿ, ದಕ್ಷಿಣ ಒಳನಾಡಿನ ಅನೇಕ ಕಡೆ, ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರು ಮಾತ್ರವಲ್ಲದೆ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು, ರಾಯಚೂರು, ಮಂಡ್ಯ, ರಾಮನಗರ, ಮೈಸೂರು, ತುಮಕೂರು, ವಿಜಯಪುರ ಹಾಗೂ ಇತರೆ ಜಿಲ್ಲೆಗಳಲ್ಲಿ ಇಂದಿನಿಂದ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.
ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಹಿನ್ನೆಲೆಯಲ್ಲಿ ಮುಂದಿನ 2-3 ದಿನಗಳ ಕಾಲ ನೈಋತ್ಯ, ಆಗ್ನೇಯ, ಪಶ್ಚಿಮ ಮತ್ತು ಮಧ್ಯ ಬಂಗಾಳಕೊಲ್ಲಿಯಲ್ಲಿ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಿದೆ.
ಅಲ್ಲದೆ, ಕಳೆದ 10 ದಿನಗಳಿಂದ ಆಗಸದಲ್ಲಿ ವಾತಾವರಣ ತಂಪಾಗಿದ್ದು, ಚಳಿಯ ಪ್ರಮಾಣವು ಹೆಚ್ಚಾಗಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಜಿಟಿಜಿಟಿ ಮಳೆಯಾಗುತ್ತಿದೆ. ಮಳೆಯಿಂದಾಗಿ ವಾತಾವರಣದಲ್ಲಿ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತಲೂ ಕಡಿಮೆಯಾಗಿದ್ದು, ಮುಂದಿನ ಕೆಲವು ದಿನಗಳು ಇದೇ ಪ್ರಮಾಣದಲ್ಲಿ ಏರಿಳಿತದಲ್ಲಿ ಇರಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಬೆಳಿಗ್ಗಿನಿಂದಲೇ ಮೋಡಕವಿದ ವಾತಾವರಣವಿದ್ದು, ಈಗಾಗಲೇ ಕೆಲವೆಡೆ ಜಿಟಿಜಿಟಿ ಮಳೆಯಾಗಿದೆ. ಸಂಜೆಯ ಬಳಿಕ ಮಳೆ ಸುರಿಯುವ ಸಾಧ್ಯತೆ ಇದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮಂಜು ಕೂಡ ಸುರಿಯುತ್ತಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಸೋಮವಾರದಂದು ಬೆಂಗಳೂರಿನಲ್ಲಿ ಕನಿಷ್ಠ 13.9 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು ಮತ್ತು ಗರಿಷ್ಠ ತಾಪಮಾನ 25.2ರಷ್ಟಿತ್ತು ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ದಶಕದ ಬಳಿಕ ನವೆಂಬರ್ ಮಾಸದಲ್ಲಿ ಕನಿಷ್ಠ ತಾಪಮಾನ ಈ ಬಾರಿ ಮತ್ತೆ ದಾಖಲಾಗಿದೆ. ಹೆಚ್‌ಎಎಲ್ ವಿಮಾನ ನಿಲ್ದಾಣ ಪ್ರದೇಶದಲ್ಲಿ ಅತ್ಯಂತ ಕನಿಷ್ಠ ತಾಪಮಾನ ಅಂದರೆ, 12.5 ಡಿಗ್ರಿ ಸೆಲ್ಸಿಯಸ್ ಹಾಗೂ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಮುಂದಿನ ಎರಡುಮೂರು ದಿನ ಮಳೆ ಸುರಿದರೆ ಚಳಿ ಹಾಗೂ ಮಂಜಿನ ಪ್ರಮಾಣ ಇನ್ನಷ್ಟು ತಗ್ಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಬೆಂಗಳೂರಿನ ಕನಿಷ್ಠ ತಾಪಮಾನ ಸಹಜ ಸ್ಥಿತಿಗೆ ಬರಲಿದ್ದು, ಗರಿಷ್ಠ ತಾಪಮಾನದಲ್ಲಿ ಬದಲಾವಣೆ ಆಗುವ ನಿರೀಕ್ಷೆ ಇದೆ.
ವಿವಿಧ ರಾಜ್ಯಗಳಲ್ಲಿಯೂ ಮಳೆ
ಮಳೆಯ ವಾತಾವರಣ ಕರ್ನಾಟಕ ಮಾತ್ರವಲ್ಲದೆ, ದೇಶದ ಇತರೆ ರಾಜ್ಯಗಳಲ್ಲಿಯೂ ಮಳೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಆಂಧ್ರಪ್ರದೇಶ ಮತ್ತು ಅಂಡಮಾನ್ ನಿಕೋಬಾರ್ ದ್ವೀಪ ಪ್ರದೇಶದಗಳಲ್ಲಿ ಚದುರಿದ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ತಮಿಳುನಾಡು, ಕೇರಳ, ತೆಲಂಗಾಣ ಮತ್ತು ಒಡಿಸ್ಸಾದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.
ವರದಿ: ಸಾಗರ್ ಕೂಡಗಿ